You are here
Home > Koppal News > ರೈತರ ಆದಾಯ ವೃದ್ಧಿಗೆ ಆಧುನಿಕ ಬೇಸಾಯ ಪದ್ಧತಿ ಸಹಕಾರಿ

ರೈತರ ಆದಾಯ ವೃದ್ಧಿಗೆ ಆಧುನಿಕ ಬೇಸಾಯ ಪದ್ಧತಿ ಸಹಕಾರಿ

 : ರೈತರು ಆಧುನಿಕ ಬೇಸಾಯ ಪದ್ಧತಿಯನ್ನು ಅಳವಡಿಸಿಕೊಂಡು ತೋಟಗಾರಿಕೆ ಬೆಳೆ ಬೆಳೆದಲ್ಲಿ ನಿಖರ ಮತ್ತು ಹೆಚ್ಚಿನ ಆದಾಯವನ್ನು ಪಡೆಯಲು ಸಾಧ್ಯ ಎಂದು ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ವಿಷಯ ತಜ್ಞ ಮೂರ್ತಿ ಅವರು ಹೇಳಿದರು.
  ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯ ವತಿಯಿಂದ ಕೊಪ್ಪಳ ತಾಲೂಕಿನ ಇರಕಲ್ಲಗಡ ಗ್ರಾಮದ ದೇವಪ್ಪ ಪಿನ್ನಿಯವರ ತೋಟದಲ್ಲಿ ರೈತರ ಕೃಷಿ ಪಾಠ ಶಾಲೆಯ ಅಂಗವಾಗಿ ಗುಲಾಬಿ ಸಸಿಗಳ ನಾಟಿ ಮಾಡುವ ಪ್ರಾತ್ಯಕ್ಷಿಕೆಯಲ್ಲಿ ಭಾಗವಹಿಸಿ ಅವರು ಮಾತನಾಡಿದರು.
  ತಳಿಗಳ ಆಯ್ಕೆಯಿಂದ ಹಿಡಿದು, ನಾಟಿ ಮಾಡುವ ವಿಧಾನ, ನೀರು ಹಾಗೂ ಪೋಷಕಾಂಶಗಳ ನಿರ್ವಹಣೆ, ಸಸ್ಯ ಸಂರಕ್ಷಣೆ ಅಲ್ಲದೇ ಕೋಯ್ಲು ಮತ್ತು ಕೊಯ್ಲೋತ್ತರ ವಿಧಾನಗಳಲ್ಲಿ ನವೀನತೆಯನ್ನು ಅಳವಡಿಸಿಕೊಂಡದ್ದೇ ಆದಲ್ಲಿ ನಿರಂತರ ಆದಾಯ ಹಾಗೂ ಪ್ರಗತಿ ಸಾಧಿಸಲು ಸಾಧ್ಯ ಎಂದು ತೋಟಗಾರಿಕೆ ಮಾಹಿತಿ ಮತ್ತು ಸಲಹಾ ಕೇಂದ್ರದ ವಿಷಯ ತಜ್ಞರಾದ ಮೂರ್ತಿ ಅವರು ಹೇಳಿದರು.
    ಸಂಸ್ಥೆಯ ಜಿಲ್ಲಾ ನಿರ್ದೇಶಕರಾದ ಶಿವರಾಯ ಪ್ರಭು ಮಾತನಾಡಿ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಸಂಸ್ಥೆ ಹೈದ್ರಬಾದ್ ಕರ್ನಾಟಕದ ಕೊಪ್ಪಳ ಜಿಲ್ಲೆಗೆ ರೂ.೧೦೦ ಕೋಟಿ ಬಿಡುಗಡೆ ಮಾಡುವ ಗುರಿ ಹೊಂದಿದ್ದು, ಕೃಷಿ ಮತ್ತು ಕೃಷಿಯೇತರ ಚಟುವಟಿಕೆ ಅಷ್ಟೇ ಅಲ್ಲದೇ ನಿರ್ಮಲ ಗ್ರಾಮ, ಶೌಚಾಲಯ ನಿರ್ಮಾಣ, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮುಂತಾದ ಹತ್ತಾರು ಚಟುವಟಿಕೆಗಳಿಗೆ ಸಂಸ್ಥೆಯಿಂದ ಸಹಾಯ ನೀಡಲಾಗುವುದರಿಂದ ಅದರ ಸದ್ಬಳಕೆ ಮಾಡಿಕೊಳ್ಳಿ ಎಂದು ಕರೆ ನೀಡಿದರು. 
  ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶೇಖರನಾಯಕ ವಹಿಸಿ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದಾಗಿ ರೈತರಲ್ಲಿ ಜಾಗೃತಿ ಮೂಡಲು ಸಾಧ್ಯ ಎಂದು ಹೇಳಿದರು. ಕೃಷಿ ಉತ್ಪನ್ನಗಳ ಮಾರುಕಟ್ಟೆ ಮಂಡಳಿ ಸದಸ್ಯರಾದ ಸುದೇಶಕುಮಾರ ಪಟ್ಟಣಶೆಟ್ಟಿ ಅವರು ಮಾತನಾಡಿ, ಸಂಸ್ಥೆಯು ಹಮ್ಮಿಕೊಂಡಿರುವ ಕಾರ್ಯಕ್ರಮಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸುತ್ತಾ ಇಂತಹ ತರಬೇತಿ ಕಾರ್ಯಕ್ರಮಗಳು ಕೃಷಿಯಲ್ಲಿ ಆಧುನಿಕ ಪದ್ಧತಿ ಅಳವಡಿಸಿಕೊಳ್ಳುವಲ್ಲಿ ಪ್ರಯೋಜನಕಾರಿಯಾಗಿದೆ ಎಂದು ಹೇಳಿದರು. ಗ್ರಾ.ಪಂ.ಸದಸ್ಯರಾದ ವಿರುಪಣ್ಣ, ಸಂಸ್ಥೆಯ ಯೋಜನಾ ಅಧಿಕಾರಿ ಧರಣೇಶ ಮೌಲ್ಯ ಅಲ್ಲದೇ ಒಕ್ಕೂಟದ ಅಧ್ಯಕ್ಷೆ ನಿರ್ಮಲಾ ಕಲ್ಮಠ, ಫರಿದಾ ಬೇಗಂ ಸೇರಿದಂತೆ ರೈತ ಮಹಿಳೆಯರು, ಪ್ರಗತಿಪರ ರೈತರು ಹಾಜರಿದ್ದರು. ಸಂಸ್ಥೆಯ ವಲಯ ಮೇಲ್ವಿಚಾರಕರಾದ ರಾಘವೇಂದ್ರ ಕಾರ್ಯಕ್ರಮ ನಿರೂಪಿಸಿದರು. ಕೊನೆಯಲ್ಲಿ ಸಂಸ್ಥೆಯ ಕೃಷಿ ಅಧಿಕಾರಿ ಅಂದಪ್ಪ ಸೂಡಿ ವಂದಿಸಿದರು. 

Leave a Reply

Top