ಡಾರ್ಲಿಂಗ್ ಚಿತ್ರ ವಿಮರ್ಶೆ

“ಧೂಳ್” ಮಗಾ!
      ಲೂಸ್ ಮಾದ ಯೋಗೀಶ್ ಈಚೆಗೆ ಯಾಕೋ ಕಾಮಿಡಿ ಟ್ರ್ಯಾಕ್ ಇರುವ ಕಥೆಗಳನ್ನ ಒಪ್ಪಿಕೊಳ್ಳುತ್ತಿದ್ದಾರೆ ಎನ್ನುವ ಮಾತಿಗೆ ಸಾಕ್ಷಿ ಎಂಬಂತಿದೆ ಈ ವಾರ ತೆರೆ ಕಂಡಿರುವ ಡಾರ್ಲಿಂಗ್. ಈ ಹಿಂದೆ ಇದೇ ಡೈರೆಕ್ಟರ್ ಸಂತು ಮಹಾರಾಜ್ ಲೂಸ್‌ನನ್ನ ಆಲೆಮಾರಿ ಮಾಡಿ ಕೈ ಸುಟ್ಟುಕೊಂಡಿದ್ದರು. ಈಗ ಆದೇ ಯೋಗಿಯನ್ನ ಹಿಡಿದು ಸೆಂಟಿಮೆಂಟ್ ಕಡಿಮೆ ಇರುವ ಕಾಮಿಡಿ, ಸ್ಟಂಟ್ಸ್, ಕಚಗುಳಿ ಇಡುವ ಡೈಲಾಗ್ಸ್, ಸಖತ್ ಹಾಡುಗಳಿರುವ ಮಿಕ್ಸ್ ಮಸಾಲಾ ಡಾರ್ಲಿಂಗ್ ಮಾಡಿದ್ದಾರೆ. ಇದು ಈ ಹಿಂದೆ ಬಂದಿದ್ದ ಯೋಗಿ ನಟಿಸಿದ್ದ ಸಿನಿಮಾ “ಧೂಳ್” ಅಪಡೇಟ್ ವರ್ಷನ್‌ನಂತೆ ಭಾಸವಾಗುತ್ತದೆ. 
       ಚಿತ್ರದಲ್ಲಿ ನಾಯಕಿ ಮುಕ್ತಾನೇ ಡಾರ್ಲಿಂಗ್; ಆನುಮಾನವೇ ಬೇಡ. ಅದರೆ ನೋಡುಗರಿಗೆ ಯೋಗಿನೇ ನಿಜವಾದ ಡಾರ್ಲಿಂಗ್ ಎನ್ನುವಷ್ಟರ ಮಟ್ಟಿಗೆ ಫೀಲ್ ಕೊಡುತ್ತಾರೆ. ಕಥೆ ಸಿಂಪಲ್. ಸತ್ಯನದು ಟ್ಯಾಟು ಹಾಕುವ ಕಾಯಕ. ಹುಡುಗೀರಿಗೆ ಸತ್ಯನಿಂದಲೇ ಟ್ಯಾಟೂ ಹಾಕಿಸಿಕೊಳ್ಳುವ ಖಯಾಲಿ. ಗೆಳತಿಯರ ಟ್ಯಾಟೂ ನೋಡಿದ ಪೂರ್ಣಿಗೂ  ತಾನು ಹಾಕಿಸಿಕೊಳ್ಳುವ ಬಯಕೆ. ಅಂಗಡಿಗ ಎಂಟ್ರಿ. ಪೂರ್ಣಿಯ ಸೌಂದರ್ಯಕ್ಕೆ ಸತ್ಯ ಢಮಾರ್. ಆಕೆಗೆ ಟ್ಯಾಟೂ ಹಾಕುವಾಗ ಗೊತ್ತಿಲ್ಲದಂತೆ ಬರೆದ ‘ಐ ಲವ್ ಯೂ’ ಅಕ್ಷರ ಆಕಸ್ಮಿಕವಾಗಿ ಪೂರ್ಣಿಯ ಅಣ್ಣ ಡಾನ್ ಭವಾನಿ ಕಣ್ಣಿಗೆ ಬಿದ್ದು ಸತ್ಯನನ್ನ ಖತಂ ಮಾಡಲು ಛೇಲಾಗಳನ್ನು ಕಳಿಸಿದಾಗ ಸತ್ಯನಿಂದ ಒದೆ. ಹುಡುಗಿ ಅಣ್ಣನ ಪ್ರಸಾದ ಇದು ಎಂದು ಗೊತ್ತಾಗುತ್ತಿದ್ದಂತೆ ಡೈರೆಕ್ಟಾಗಿ ಭವಾನಿ ಜೊತೆಗೆ ಲವ್ ಡೀಲ್.
      ಆದರೂ ಭವಾನಿ ಹುಡುಗರ ಕಾಟ ವಿಪರೀತ. ಅದನ್ನ ತಪ್ಪಿಸಲೆಂದು ಮತ್ತೊಬ್ಬ ಡಾನ್ ಲವ್ ಫೇಲ್ಯೂರ್ ಮ್ಯಾನ್ ಗುಬ್ಬಿಯ ಸಹಾಯ ಪಡೆಯುತ್ತಾನೆ. ಮೊದಲಿಗೆ ಹ್ಙುಂ ಎನ್ನುವ ಗುಬ್ಬಿ, ಪೂರ್ಣಿಯನ್ನು ಕಂಡಾಕ್ಷಣ ಚೇಂಜ್. ಆದರೂ ಭವಾನಿ ಹುಡುಗರನ್ನ ಗುಬ್ಬಿ ಹುಡುಗರು ಹಿಮ್ಮೆಟ್ಟಿಸುತ್ತಾರೆ. ರಾಜಕಾರಣಿಯೊಬ್ಬನ ಎರಡು ಕಿಡ್ನಿUಳಂತಿರುವ ಭವಾನಿ ಹಾಗೂ ಗುಬ್ಬಿ ನಡುವೆ  ಗ್ಯಾಂಗ್‌ವಾರ್‌ನಿಂದ ಕಂಗಾಲಾದ ರಾಜಕಾರಣಿ ಇಬ್ಬರನ್ನೂ ಸಂಧಾನಕ್ಕೆ ಕರೆಸಿದಾಗ, “ಬೇಕಾದ್ರೆ ನನ್ನ ತಂಗೀನ ಗುಬ್ಬಿಗೆ ಕೊಡ್ತಿನಿ. ಆದರೆ ಆ ಟ್ಯಾಟೂ ನನ್‌ಮಗನಿಗೆ ಕೊಡಲ್ಲ” ಎಂದು ಭವಾನಿ ಹೇಳುವ ಒಂದೇ ಡೈಲಾಗ್‌ಗೆ ಗ್ಯಾಂಗ್‌ವಾರ್ ಖಲ್ಲಾಸ್. ದೋಸ್ತಿ ಶುರು. 
       ಇಲ್ಲಿಂದ ಇಬ್ಬರೂ ಸೇರಿ ಸತ್ಯ ಮತ್ತು ಪೂರ್ಣಿಯನ್ನು ಅಗಲಿಸಲು ಮಾಡುವ ಪ್ರಯತ್ನಗಳೆಲ್ಲ ಉಲ್ಟಾ ಹೊಡೆದು ಕೊನೆಗೆ ಸತ್ಯನ್ನ ಎತ್ತಲು ತಮ್ಮಷ್ಟಕ್ಕೆ ತಾವೇ ಸುಪಾರಿ ತಗೊಂಡು, ಕೊನೆಗೆ ಅವರಿಗೆ ಸತ್ಯನಿಂದಲೇ ಗುಮ್ಮ. ಪ್ರೇಮಿಗಳಿಬ್ಬರೂ ಓಡಿಹೋಗುವಾಗ ಮತ್ತೊಂದು ಕಥೆ ತೆರೆದು ಕೊಳ್ಳುತ್ತದೆ. ಆದು ಸಿನಿಮಾ ಅರಂಭದ ಕಥೆ. ಅಚಾನಕ್ಕಾಗಿ ಅತ್ಯಾಚಾರಿಗಳ ಕೈಗೆ ಸಿಕ್ಕಿ ಬೀಳುವ ನಾಯಕ-ನಾಯಕಿ ಕೊನೆಗೂ ಒಂದಾಗುತ್ತಾರೆ ಎನ್ನುವುದು ಸಮಾಧಾನದ ಸಂಗತಿ.
      ಯಕೆಂದರೆ ಸಂತನ ಹಿಂದಿನ ಸಿನಿಮಾ ಅಲೆಮಾರಿಯಲ್ಲಿ ಕೊನೆಗೂ ನಾಯಕಿ ನಾಯಕ ಒಂದಾಗುವುದಿಲ್ಲ, ಹೀಗಾಗಿ ಇಲ್ಲೂ ಹಾಗೆ ಆಗುತ್ತಾ ಎನ್ನುವ ನಿರೀಕ್ಷೆಗಳೊಂದಿಗೆ ಸೀಟಿನ ತುದಿಯಲ್ಲಿ ಕುಳಿತಾಗ ಸಮಾಜ ಘಾತುಕ ಕೃತ್ಯಗಳಿಂದ, ಪಾತಕಿಗಳಿಂದ ಕ್ಲೀನಾಗಿರಬೇಕು, ಪ್ರೇಮಿಗಳು ಹೀಗೆ ಇರಬೇಕು ಎನ್ನುವ ಸಂದೇಶದೊಂದಿಗೆ ಡಾರ್ಲಿಂಗ್‌ಗೆ ದಿ ಎಂಡ್.
       ಮಂಜುಮಾಂಡವ್ಯ ಬರೆದ ಸಂಭಾಷಣೆ (ಆರಂಭದ ಡಬ್ಬಲ್ ಮೀನಿಂಗ್ ಹೊರತುಪಡಿಸಿ) ಹಾಗೂ ಆರ್ಜುನ್ ಜನ್ಯ ಸಂಗೀತ ಚಿತ್ರವನ್ನು ನಿರೀಕ್ಷೆ ಮೀರಿ ಓಡಿಸುವ ಗುಣ ಹೊಂದಿದೆ. ನಿರ್ದೇಶಕ ಸಂತು ಈ ಸಲ ಚೇಂಜ್ ಆಗಿದ್ದಾರೆ. ಚಿತ್ರ ಎಲ್ಲೂ ಬೋರ್ ಹೊಡೆಸದಂತೆ ಸ್ಕ್ರೀನ್ ಪ್ಲೇ ಮಾಡಿದ್ದಾರೆ. ಆದರೆ ಇಡೀ ಚಿತ್ರ ಯೋಗಿ ಆಭಿನಯದ ಹಿಂದಿನ ಚಿತ್ರ “ಧೂಳ್”ನ್ನು ನೆನಪಿಸುತ್ತೆ ಎನ್ನುವುದು ಒಂದು ಬೇಜಾರು. 
      ಚಿತ್ರದ ಅರಂಭ ಮತ್ತು ಅಂತ್ಯ ಗಂಭೀರತೆಯಿಂದ ಕೂಡಿದ್ದರೆ. ಉಳಿದ ಭಾಗದಲ್ಲಿ ಕಾಮಿಡಿಗೆ ಹೆಚ್ಚು ಒತ್ತು ಕೊಡಲಾಗಿದೆ. ಮಂಜುನಾಥ ನಾಯಕ್ ಛಾಯಾಗ್ರಹಣ ಪೂರಕವಾಗಿದೆ. ಚಿತ್ರದಲ್ಲಿನ ಎರಡು ಹಾಡುಗಳು ಲೂಸ್ ಯೋಗಿ ಆಭಿಮಾನಿಗಳನ್ನು ಹುಚ್ಚೆಬ್ಬಿಸುವಂತಿವೆ. ‘ನಾನು ನಿನ್ನ ರೂಂ ಒಳಗೆ ಹ್ಯಾಗ್ ಬಂದೆ ಅನ್ನೋದನ್ನ ಆಡಿಯನ್ಸೂ ಕೇಳಲ್ಲ. ಪೇಪರ್‌ನವ್ರು ಬರೆಯಲ್ಲ’, ‘ಮುಂದೆಯಿಂದ ಬಂದ್ರೆ ಟ್ಯಾಟೂ, ಹಿಂದೆಯಿಂದ ಬಂದ್ರೆ ಏಟು’, ‘ಭಗವಂತ ಎಣ್ಣೆ ಮಾಡಿರೋದೆ ಹೆಣ್‌ಹೈಕ್ಳ ಮಾಡಿರೋ ಮೋಸಾನಾ ಮರೆಯೋಕೆ’  ಎನ್ನುವ ಮಾತುಗಳು ಪ್ರೇಕ್ಷಕರ ಶಿಳ್ಳೆ ಗಿಟ್ಟಿಸುತ್ತವೆ. 
       ಹೊಸನಟಿಯಾದರೂ ಮುಕ್ತಾ, ಆಭಿನಯದಲ್ಲಿ ಹಳೇನಟಿಯರಿಗೂ ಸವಾಲು ಹಾಕುವಷ್ಟು ಎನರ್ಜಿ ತೋರಿದ್ದಾರೆ. ಕೊಳ್ಳೇಗಾಲದ ಮಾಂತ್ರಿಕ ಸಿಂಗಲ್‌ಹ್ಯಾಂಡ್ ಮಾರ್ತಾಂಡನಾಗಿ ರಮೇಶ್ ಪಂಡಿತ್, ಗುಬ್ಬಿಯಾಗಿ ಆದಿ ಲೋಕೇಶ್, ಭವಾನಿಯಾಗಿ ನೀನಾಸಂ ಅಶ್ವಥ್, ಸೂಪರ್ ಕಾಪ್ ಅಗಿ ಅವಿನಾಶ್, ರೇಪಿಸ್ಟ್ ಆಗಿ ಮಂಜು, ನಾಯಕನ ಗೆಳೆಯನಾಗಿ ಚಿಕ್ಕಣ್ಣ ಸೂಪರ್. ನಾಯಕ ಯೋಗಿ ಒಂದೊಳ್ಳೆ ಕಥೆಗೆ ಫ್ರಿ ಕಾಲ್‌ಶೀಟ್ ಕೊಟ್ಟದ್ದು ಖುಷಿಯ ವಿಚಾರ. ಲೋಕಲ್ ಲವ್ ಸ್ಟೋರಿಯನ್ನ ಕನ್ನಡದ ಪ್ರೇಕ್ಷಕರಿಗೆ ಕೊಟ್ಟ ನಿರ್ಮಾಪಕರು ಸೇಫ್ ಆಗುವ ಸಾಧ್ಯತೆ ಜಾಸ್ತಿ ಇದೆ.
       ಫ್ರೆಂಡ್ಸ್ ಎಲ್ಲ ಸೇರಿ ಒಂದು ಸಲ ಡಾರ್ಲಿಂಗ್ ನೋಡ್ಕೊಂಡು ಬನ್ನಿ. ಕೊಟ್ಟ ಹಣಕ್ಕೇನೂ ಮೋಸ ಇಲ್ಲ.
ಫಲಿತಾಂಶ : ೧೦೦ಕ್ಕೆ ೬೦
-ಚಿತ್ರಪ್ರಿಯ ಸಂಭ್ರಮ್.

Leave a Reply