ಮಾನವ ಹಕ್ಕುಗಳ ರಕ್ಷಣೆಗೆ ಮಾನವೀಯ ಮೌಲ್ಯಗಳು ಸಹಕಾರಿ- ಶ್ರೀಕಾಂತ ಬಬಲಾದಿ

ಮಾನವೀಯ ಮೌಲ್ಯಗಳ ವೃದ್ಧಿಯಿಂದ ಮಾನವ ಹಕ್ಕುಗಳ ಉಲ್ಲಂಘನೆ ಪ್ರಕರಣಗಳನ್ನು ತಡೆಗಟ್ಟಲು ಸಾಧ್ಯ ಎಂದು ಕೊಪ್ಪಳ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ದಾ ಬಬಲಾದಿ ಅವರು ಹೇಳಿದರು.
     ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತಿ ಇವರ ಸಹಯೋಗದಲ್ಲಿ ಜಿಲ್ಲಾ ಆಡಳಿತ ಭವನದ ಆಡಿಟೋರಿಯಂ ಹಾಲ್‍ನಲ್ಲಿ ಬುಧವಾರ ಏರ್ಪಡಿಸಲಾಗಿದ್ದ ವಿಶ್ವ ಮಾನವ ಹಕ್ಕುಗಳ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
     ಸಂವಿಧಾನದ ಮೂಲಭೂತ ತತ್ವಗಳನ್ನು ಆದರಿಸಿಯೇ ನಮ್ಮ ದೇಶದಲ್ಲಿ ಎಲ್ಲರಿಗೂ ಹಕ್ಕುಗಳು ಮತ್ತು ಕರ್ತವ್ಯಗಳನ್ನು ನಿಗದಿಪಡಿಸಲಾಗಿದೆ.  ಮಗುವಿನ ಹುಟ್ಟಿನಿಂದ ಮೊದಲುಗೊಳ್ಳುವ ಹಕ್ಕುಗಳು, ಮರಣ ಕಾಲದವರೆಗೆ ಜೀವನದುದ್ದಕ್ಕೂ ಆತನಿಗೆ ಹಕ್ಕುಗಳನ್ನು ನಮ್ಮ ಸಂವಿಧಾನ ದಯಪಾಲಿಸಿದೆ.  ಸಮಾನತೆ, ಸ್ವಾತಂತ್ರ್ಯತೆ ಹಾಗೂ ಸಹೋದರತ್ವ ಇವು ಮಾನವ ಹಕ್ಕುಗಳ ರಕ್ಷಣೆಯ ಮೂಲಾಧಾರವಾಗಿದೆ.  ಸಮಾಜದಲ್ಲಿ ಮನುಷ್ಯ ಘನತೆಯಿಂದ ಬದುಕು ಸಾಗಿಸಲು ಬೇಕಿರುವ ಮೂಲಭೂತ ಅವಶ್ಯಕತೆಗಳನ್ನು ಪಡೆಯುವುದು ಆತನ ಹಕ್ಕು.  ಯಾವುದೇ ಕಾರಣದಿಂದ ಇದಕ್ಕೆ ತೊಡಕಾದಲ್ಲಿ, ಅದು ಮಾನವ ಹಕ್ಕುಗಳ ಉಲ್ಲಂಘನೆಯಾದಂತೆ ಆಗುತ್ತದೆ.  ಆಡಳಿತಗಾರರಿಗೆ ಜನಸಾಮಾನ್ಯರ ಸಮಸ್ಯೆಗಳ ಅರಿವು ಇರಬೇಕಾಗುತ್ತದೆ.  ಇದರಿಂದ ಮಾನವ ಹಕ್ಕುಗಳ ರಕ್ಷಣೆಗೆ ಸಹಕಾರಿಯಾಗಿ, ಉಲ್ಲಂಘನೆ ಪ್ರಕರಣಗಳನ್ನು ನಿಯಂತ್ರಿಸಬಹುದಾಗಿದೆ ಎಂದು ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಧೀಶರಾದ ಶ್ರೀಕಾಂತ ದಾ ಬಬಲಾದಿ ಅವರು ಹೇಳಿದರು.
     ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಅವರು ಮಾತನಾಡಿ, 1948 ರಲ್ಲಿ ವಿಶ್ವಸಂಸ್ಥೆ ಮಾನವ ಹಕ್ಕುಗಳ ರಕ್ಷಣೆಗಾಗಿ ತೀವ್ರ ಸ್ಪಂದನೆ ನೀಡಿದ ಪರಿಣಾಮವಾಗಿ ಆಗಿನಿಂದಲೂ ಮಾನವ ಹಕ್ಕುಗಳ ರಕ್ಷಣಾ ದಿನವನ್ನು ಆಚರಿಸಲಾಗುತ್ತಿದೆ.  ಈ ಬಾರಿಯ ಮಾನವ ಹಕ್ಕುಗಳ ದಿನಾಚರಣೆಯನ್ನು ‘ಮಾನವ ಹಕ್ಕುಗಳು-365’ ಎಂಬ ಘೋಷವಾಕ್ಯದೊಂದಿಗೆ ಆಚರಿಸಲಾಗುತ್ತಿದೆ.  ಇದರ ವಿಶೇಷವೆಂದರೆ, ಮಾನವ ಹಕ್ಕುಗಳ ಬಗ್ಗೆ ಕೇವಲ ದಿನಾಚರಣೆಯಂದು ಚರ್ಚಿಸದೆ, ವರ್ಷದ 365 ದಿನಗಳೂ ಇದರ ಬಗ್ಗೆ ವಿಮರ್ಶೆ ನಡೆಯುವಂತಾಗಬೇಕು.  ಇಡೀ ವರ್ಷದುದ್ದಕ್ಕೂ ಇದರ ಮಹತ್ವದ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸುವಂತಾಗಬೇಕು ಎನ್ನುವುದು ಇದರ ಉದ್ದೇಶವಾಗಿದೆ.  ಜಿಲ್ಲೆಯಲ್ಲಿ ಮಾನವ ಹಕ್ಕುಗಳ ಉಲ್ಲಂಘನೆಯಾಗದ ರೀತಿಯಲ್ಲಿ ಜನೋಪಯೋಗಿ ಆಡಳಿತ ನಿರ್ವಹಿಸುವಂತೆ ಎಲ್ಲ ಅಧಿಕಾರಿಗಳು ಪ್ರತಿಜ್ಞೆ ಮಾಡಬೆಕು ಎಂದರು.
     ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಅವರು ಮಾತನಾಡಿ, ಭ್ರಷ್ಟಾಚಾರ ಎನ್ನುವುದು ಕೇವಲ ಅಪರಾಧವಲ್ಲ, ಅದು ಮಾನವ ಹಕ್ಕುಗಳ ಉಲ್ಲಂಘನೆ ಎಂಬುದಾಗಿ ನ್ಯಾಯಾಲಯದ ತೀರ್ಪೊಂದರಲ್ಲಿ ವ್ಯಾಖ್ಯಾನಿಸಲಾಗಿದ್ದು, ಮಾನವ ಹಕ್ಕುಗಳ ರಕ್ಷಣೆ ಕುರಿತು ಅಧಿಕಾರಿಗಳು ಎಚ್ಚರಿಕೆಯಿಂದ ಕಾರ್ಯ ನಿರ್ವಹಿಸಬೇಕು ಎಂದರು.
     ಲಾ ಅಕಾಡೆಮಿ ಸದಸ್ಯೆ ಸಂಧ್ಯಾ ಮಾದಿನೂರ ಅವರು ಕಾರ್ಯಕ್ರಮ ಕುರಿತು ಮಾತನಾಡಿದರು.  ಹಿರಿಯ ಸಿವಿಲ್ ನ್ಯಾಯಾಧೀಶರಾದ ಬಿ. ದಶರಥ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಉದಪುಡಿ, ಡಿವೈಎಸ್‍ಪಿ ರಾಜೀವ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಡಿಡಿಪಿಐ ಶ್ಯಾಮಸುಂದರ್, ಡಿಡಿಪಿಯು ಸಿದ್ದಾರ್ಥ, ವಕೀಲರುಗಳಾದ ಸರ್ವಮಂಗಳ ಚಿಕ್ಕನಗೌಡರ್, ಹನುಮಂತರಾವ್, ಶರಣಪ್ಪ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. 

Please follow and like us:

Leave a Reply