ಶೌಚಾಲಯ ಬಳಕೆ ಜಾಗೃತಿಗೆ ಹೆಚ್ಚಿನ ಒತ್ತು ನೀಡಿ- ಸಂಗಣ್ಣ ಕರಡಿ.

                             
     ಕೊಪ್ಪಳ ಜೂ. ೨೫ – ಕೇಂದ್ರ ಹಾಗೂ ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿ ಪರಿಶೀಲನೆ ಸಂಬಂಧ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಸ್ವಚ್ಛ ಭಾರತ ಯೋಜನೆಯಡಿ ಕೊಪ್ಪಳ ಜಿಲ್ಲೆಯಲ್ಲಿ ಕಳೆದ ೨೦೧೩-೧೪ ನೇ ಸಾಲಿನಲ್ಲಿ ೫೪೦೫೧ ಹಾಗೂ ೨೦೧೪-೧೫ ನೇ ಸಾಲಿನಲ್ಲಿ ೪೮೦೩೧ ಶೌಚಾಲಯಗಳನ್ನು ನಿರ್ಮಾಣ ಮಾಡುವ ಮೂಲಕ ಜಿಲ್ಲೆ ಇಡೀ ರಾಜ್ಯದಲ್ಲಿ ಉತ್ತಮ ಸಾಧನೆ ತೋರಿರುವುದು ಸ್ವಾಗತಾರ್ಹವಾಗಿದೆ.  ಆದರೆ ಈಗಾಗಲೆ ನಿರ್ಮಾಣ ಮಾಡಿರುವ ಶೌಚಾಲಯಗಳನ್ನು ಸಮರ್ಪಕವಾಗಿ ಬಳಕೆ ಮಾಡುತ್ತಿಲ್ಲ ಎಂಬ ಮಾತು ವ್ಯಾಪಕವಾಗಿ ಕೇಳಿ ಬರುತ್ತಿದೆ.  ಶೌಚಾಲಯಗಳ ನಿರ್ಮಾಣದ ನಂತರವೂ ಈ ರೀತಿಯ ಪರಿಸ್ಥಿತಿ ಉದ್ಭವವಾದಲ್ಲಿ, ಇಡೀ ಯೋಜನೆಯ ಉದ್ದೇಶ ವಿಫಲವಾಗುವ ಸಾಧ್ಯತೆ ಇದೆ.  ಶೌಚಾಲಯಗಳ ಸಮರ್ಪಕ ಬಳಕೆಯ ಬಗ್ಗೆ ಗ್ರಾಮೀಣ ಪ್ರದೇಶಗಳಲ್ಲಿ ವ್ಯಾಪಕ ಜನಜಾಗೃತಿ ಮೂಡಿಸುವಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ಸಂಸದ ಸಂಗಣ್ಣ ಕರಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಬೆಳೆ ಹಾನಿ ವರದಿ ಸಮರ್ಪಕವಾಗಿಲ್ಲ : ಕಳೆದೆರಡು ತಿಂಗಳಲ್ಲಿ ಜಿಲ್ಲೆಯಲ್ಲಿ ಸುರಿದ ಅಕಾಲಿಕ ಆಲಿಕಲ್ಲು ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದಲ್ಲಿ ತೋಟಗಾರಿಕೆ ಬೆಳೆ ಹಾನಿ ಸಂಭವಿಸಿದ್ದು, ಅಧಿಕಾರಿಗಳು ಕೇವಲ ೬೯೮ ಹೆ. ತೋಟಗಾರಿಕೆ ಬೆಳೆ ಹಾನಿಯಾಗಿದೆ ಎಂದು ವರದಿ ನೀಡಿದ್ದಾರೆ.  ಅದರಲ್ಲೂ ಮಾವು, ಬಾಳೆ, ಪಪ್ಪಾಯ ಮುಂತಾದ ಬೆಳೆಗಳಿಗೆ ಹೆಚ್ಚಿನ ನಷ್ಟವಾಗಿದ್ದು, ಬೆಳೆ ಹಾನಿ ಕುರಿತು ತೋಟಗಾರಿಕೆ ಅಧಿಕಾರಿಗಳು ಸಮರ್ಪಕವಾಗಿ ಸಮೀಕ್ಷೆ ನಡೆಸದೆ, ವರದಿ ಸಲ್ಲಿಸಿದ ಪರಿಣಾಮ, ನಷ್ಟ ಅನುಭವಿಸಿದ ರೈತರಿಗೆ ಅನ್ಯಾಯವಾಗಿದೆ.  ಈ ಕುರಿತು ಜಿಲ್ಲಾಧಿಕಾರಿಗಳು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸದರು ತಿಳಿಸಿದರು.
ಬಿತ್ತನೆ ಬೀಜ ಬಗ್ಗೆ ಎಚ್ಚರವಹಿಸಿ : ಜಿಲ್ಲೆಯಲ್ಲಿ ಮುಂಗಾರು ಮಳೆ ಪ್ರಾರಂಭವಾಗಿದ್ದು, ರೈತರು ಉತ್ತಮ ಗುಣಮಟ್ಟದ ಬಿತ್ತನೆ ಬೀಜಕ್ಕಾಗಿ ರೈತ ಸಂಪರ್ಕ ಕೇಂದ್ರಗಳಿಗೆ ತೆರಳಿ, ಬೀಜ ಖರೀದಿಸುತ್ತಿದ್ದಾರೆ.  ಆದರೆ ಯಲಬುರ್ಗಾ ತಾಲೂಕು ಹಿರೇಮ್ಯಾಗೇರಿಯಲ್ಲಿ ರೈತರು ರೈತ ಸಂಪರ್ಕ ಕೇಂದ್ರದ ಮೂಲಕ ಖರೀದಿಸಿದ ಬಿತ್ತನೆ ಬೀಜ, ಕಳಪೆ ಗುಣಮಟ್ಟದ್ದಾಗಿದೆ ಎಂದು ದೂರು ಸಲ್ಲಿಸಿದ್ದು, ಕೃಷಿ ಇಲಾಖೆ ಅಧಿಕಾರಿಗಳು ಕೂಡಲೆ ಈ ಬಗ್ಗೆ ಪರಿಶೀಲಿಸಿ, ಅಗತ್ಯ ಕ್ರಮ ಜರುಗಿಸಬೇಕು.  ಒಂದು ವೇಳೆ ಬಿತ್ತನೆ ಬೀಜ ಕಳಪೆ ಗುಣಮಟ್ಟದ್ದಾಗಿದ್ದಲ್ಲಿ, ಕೂಡಲೆ ಅದನ್ನು ಹಿಂಪಡೆದು, ರೈತರಿಗೆ ಆಗುವ ನಷ್ಟವನ್ನು ತಪ್ಪಿಸಲು ಮುಂಜಾಗ್ರತಾ ಕ್ರಮ ವಹಿಸಬೇಕು ಎಂದರು.  ಇದಕ್ಕೆ ಉತ್ತರಿಸಿದ ಜಂಟಿ ಕೃಷಿ ನಿರ್ದೇಶಕ ವೀರೇಶ್ ಹುನಗುಂದ ಅವರು, ಬಿತ್ತನೆ ಬೀಜದ ಗುಣಮಟ್ಟ ಪರಿಶೀಲಿಸಿ, ಅಗತ್ಯ ಕ್ರಮ ಕೈಗೊಳ್ಳುವುದು ಎಂದರು.
ಅಪೌಷ್ಠಿಕತೆ ನಿವಾರಣೆ : ಜಿಲ್ಲೆಯಲ್ಲಿ ಅಂಗನವಾಡಿ ಕೇಂದ್ರಗಳಲ್ಲಿ ಪೂರೈಕೆ ಮಾಡಲಾಗುತ್ತಿರುವ ಪೂರಕ ಪೌಷ್ಠಿಕ ಆಹಾರದ ಗುಣಮಟ್ಟದ ಬಗ್ಗೆ ಪರಿಶೀಲಿಸಿ, ವರದಿ ಸಲ್ಲಿಸುವಂತೆ ಈ ಹಿಂದೆ ತಿಳಿಸಲಾಗಿತ್ತು.  ಆದರೆ ಇದುವರೆಗೂ ವರದಿಯನ್ನು ಸಲ್ಲಿಸಿಲ್ಲ.  ಮಕ್ಕಳಲ್ಲಿನ ಅಪೌಷ್ಠಿಕತೆ ನಿವಾರಣೆಗೆ ಕೈಗೊಂಡ ಕ್ರಮದ ಬಗ್ಗೆ ವಿವರಣೆ ನೀಡುವಂತೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕರಿಗೆ ಸಂಸದರು ಸೂಚಿಸಿದರು.  ಇದಕ್ಕೆ ಉತ್ತರಿಸಿದ ಉಪನಿರ್ದೇಶಕಿ ವಸಂತಪ್ರೇಮಾ ಅವರು, ಪೂರಕ ಪೌಷ್ಠಿಕ ಆಹಾರ ಗುಣಮಟ್ಟದ ಬಗ್ಗೆ ಈಗಾಗಲೆ ಕಲಬುರ್ಗಿ ಆಹಾರ ಪ್ರಯೋಗಾಲಯದಿಂದ, ಗುಣಮಟ್ಟ ತೃಪ್ತಿಕರ ಎಂದು ವರದಿ ಬಂದಿದೆ.  ಜಿಲ್ಲೆಯಲ್ಲಿ ೩೧೯೭ ತೀವ್ರ ಅಪೌಷ್ಠಿಕ ಮಕ್ಕಳು ಎಂದು ಗುರುತಿಸಲಾಗಿತ್ತು.  ಇದೀಗ ೯೨೦ ಮಕ್ಕಳ ಆರೋಗ್ಯ ಸುಧಾರಣೆಗೊಂಡಿದ್ದು, ಇನ್ನುಳಿದ ೨೨೭೭ ಮಕ್ಕಳ ಆರೋಗ್ಯ ಸುಧಾರಣೆಗೆ ಕ್ರಮ ಕೈಗೊಳ್ಳಲಾಗಿದೆ ಎಂದರು.
     ಸಭೆಯಲ್ಲಿ ಜಿಲ್ಲಾ ಪಂಚಾಯತಿ ಅಧ್ಯಕ್ಷ ಅಮರೇಶ್ ಕುಳಗಿ, ಜಿಲ್ಲಾಧಿಕಾರಿ ಆರ್.ಆರ್. ಜನ್ನು, ಅಪರ ಜಿಲ್ಲಾಧಿಕಾರಿ ಡಾ. ಸುರೇಶ್ ಇಟ್ನಾಳ್, ಉಪವಿಭಾಗಾಧಿಕಾರಿ ಪಿ.ಎಸ್. ಮಂಜುನಾಥ್, ಜಾಗೃತ ಸಮಿತಿ ಸದಸ್ಯರುಗಳಾದ ಮನೊಹರ್, ಶೋಭಾ, ವಿಜಯಕುಮಾರ್, ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.


ಸ್ವಚ್ಛ ಭಾರತ ಯೋಜನೆಯಡಿ ಶೌಚಾಲಯ ನಿರ್ಮಾಣ ಕಾರ್ಯಕ್ರಮದಲ್ಲಿ ಕೊಪ್ಪಳ ಜಿಲ್ಲೆ ಉತ್ತಮ ಸಾಧನೆ ತೋರಿರುವುದು ಶ್ಲಾಘನೀಯವಾಗಿದೆ.  ಆದರೆ ಶೌಚಾಲಯ ಬಳಕೆ ನಿರೀಕ್ಷಿತ ಮಟ್ಟದಲ್ಲಿ ಆಗುತ್ತಿಲ್ಲ ಎನ್ನುವ ಮಾತು ವ್ಯಾಪಕವಾಗಿ ಕೇಳಿಬರುತ್ತಿದೆ.  ಗ್ರ್ರಾಮೀಣರಲ್ಲಿ ಶೌಚಾಲಯ ಬಳಕೆ ಕುರಿತು ಹೆಚ್ಚಿನ ಜಾಗೃತಿ ಮೂಡಿಸಲು ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವಂತೆ ಕೊಪ್ಪಳ ಸಂಸದ ಸಂಗಣ್ಣ ಕರಡಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

Please follow and like us:
error