You are here
Home > Koppal News > ಈಶ್ವರಪ್ಪ-ಶ್ರೀರಾಮುಲು ಮಧ್ಯೆ ಜಂಗೀ ಕುಸ್ತಿ – ಡಬ್ಬಲ್‌ಗೇಮ್ ಬೇಡ: ಈಶ್ವರಪ್ಪ

ಈಶ್ವರಪ್ಪ-ಶ್ರೀರಾಮುಲು ಮಧ್ಯೆ ಜಂಗೀ ಕುಸ್ತಿ – ಡಬ್ಬಲ್‌ಗೇಮ್ ಬೇಡ: ಈಶ್ವರಪ್ಪ

ರಾಜೀನಾಮೆ ನೀಡಿದರೆ ಸರಕಾರ ಪತನ: ಶ್ರೀರಾಮುಲು
ಬಳ್ಳಾರಿ, ನ.21: ಬಳ್ಳಾರಿ ಗ್ರಾಮಾಂತರ ಚುನಾವಣಾ ಪ್ರಚಾರದ ಭರಾಟೆ ತಾರಕಕ್ಕೇರಿರುವ ಮಧ್ಯೆ ಬಿಜೆಪಿ ರಾಜ್ಯಾಧ್ಯಕ್ಷ ಕೆ.ಎಸ್.ಈಶ್ವರಪ್ಪ ಹಾಗೂ ಬಿಜೆಪಿಗೆ ಸಡ್ಡು ಹೊಡೆದು ಪಕ್ಷೇತರರಾಗಿ ಕಣಕ್ಕಿಳಿದಿರುವ ಬಿ. ಶ್ರೀರಾಮುಲು ಮಧ್ಯೆ ಜಂಗೀ ಕುಸ್ತಿ ಆರಂಭವಾಗಿದೆ. ಪಕ್ಷೇತರನಾಗಿ ಸ್ಪರ್ಧೆಗಿಳಿದಂದಿನಿಂದ ಶ್ರೀರಾಮುಲು ವಿರುದ್ಧ ಹೇಳಿಕೆ ನೀಡುತ್ತಿರುವ ಈಶ್ವರಪ್ಪ, ಮತ್ತೆ ಮತ್ತೆ ಅವರನ್ನು ಕೆಣಕುತ್ತಿದ್ದು, ಇದೀಗ ಮತ್ತೆ ಇವರಿಬ್ಬರ ಮಧ್ಯದ ಕಾಳಗ ಬೀದಿಗೆ ಬಂದಿದೆ.  ಕಳೆದ ಮೂರು ದಿನಗಳಿಂದ ಬಳ್ಳಾರಿಯಲ್ಲಿ ತಮ್ಮ ಅಭ್ಯರ್ಥಿ ಗಾದಿ ಲಿಂಗಪ್ಪ ಪರ ಪ್ರಚಾರದಲ್ಲಿ ತೊಡಗಿಕೊಂಡಿರುವ ಈಶ್ವರಪ್ಪ ಇಂದು ಪ್ರಚಾರದ ವೇಳೆ ಶ್ರೀರಾಮುಲು ಬೆಂಬಿಲಿಗ ಬಿಜೆಪಿ ಶಾಸಕರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶ್ರೀರಾಮುಲುರೊಂದಿಗಿರುವ ಬಿಜೆಪಿಯಿಂದ ಆರಿಸಿ ಬಂದ ಶಾಸಕರು ಡಬ್ಬಲ್‌ಗೇಮ್ ಆಡುತ್ತಿದ್ದಾರೆ. ಅವರು ಇನ್ನಾದರೂ ತಮ್ಮ ನಿರ್ಧಾರವನ್ನು ಸ್ಪಷ್ಟಪಡಿಸಲಿ ಎಂದು ಸವಾಲು ಹಾಕಿದ್ದಾರೆ. ಬಿಜೆಪಿಯಿಂದ ಗೆದ್ದು ಬಂದ ಶಾಸಕರು ಪಕ್ಷೇತರರಾಗಿ ಸ್ಪರ್ಧಿಸುತ್ತಿರುವ ಶ್ರೀರಾಮುಲು ಪರ ಪ್ರಚಾರದಲ್ಲಿ ತೊಡಗಿಕೊಂಡಿರುವುದು ಸರಿಯಲ್ಲ. ಒಂದಾ ಶ್ರೀರಾಮುಲು ಜೊತೆಗಿರಬೇಕು, ಇಲ್ಲವೇ ಬಿಜೆಪಿಯೊಂದಿಗಿರಬೇಕು. ಅದು ಬಿಟ್ಟು ಎರಡು ಕಡೆ ತಾವಿದ್ದೇವೆ ಎಂಬಂತೆ ಬಿಂಬಿಸುವುದು ಸರಿಯಲ್ಲ. ಬಿಜೆಪಿಗೆ ರಾಜೀನಾಮೆ ನೀಡಿ ಶ್ರೀರಾಮುಲುರೊಂದಿಗೆ ಅವರು ಹೋಗಲಿ, ಅದಕ್ಕೆ ನಮ್ಮ ಅಭ್ಯಂತರವಿಲ್ಲ. ಆದರೆ ಬಿಜೆಪಿಯನ್ನು ಬೆಂಬಲಿಸಬೇಕಾದವರು ಪಕ್ಷೇತರನಾಗಿ ನಿಂತವರಿಗೆ ಬೆಂಬಲಿಸಿ, ಪ್ರಚಾರ ಕಾರ್ಯದಲ್ಲಿ ತೊಡಗಿಸಿಕೊಳ್ಳುವುದು ಸರಿಯಲ್ಲ ಎಂದರು. ಕಾಂಗ್ರೆಸ್, ಜೆಡಿಎಸ್ ಅಥವಾ ಶ್ರೀರಾಮುಲುರಿಂದ ಸರಕಾರ ಉರುಳಿಸಲು ಸಾಧ್ಯವಿಲ್ಲ. ಸರಕಾರ 5 ವರ್ಷ ಪೂರ್ಣಗೊಳಿಸುವುದು ಖಚಿತ ಎಂದು ಈಶ್ವರಪ್ಪ ತಿಳಿಸಿದರು.
ಈಶ್ವರಪ್ಪ ಹೇಳಿಳಕೆಗೆ ಇನ್ನೊಂದೆಡೆ ಬಳ್ಳಾರಿಯಲ್ಲಿ ಪ್ರತಿಕ್ರಿಯಿಸಿರುವ ಪಕ್ಷೇತರ ಅಭ್ಯರ್ಥಿ ಶ್ರೀರಾಮುಲು, ‘ನನ್ನ ಬೆಂಬಲಿಗ ಶಾಸಕರು ಬಿಜೆಪಿಗೆ ರಾಜೀನಾಮೆ ನೀಡಿದರೆ ಸರಕಾರ ಪತನವಾಗಲಿದೆ’ ಎಂದಿದ್ದಾರೆ. ತಮ್ಮ ಬೆಂಬಲಿಗ ಶಾಸಕರನ್ನು ಬ್ಯಾಕ್‌ಮೇಲ್ ಮಾಡುವ ತಂತ್ರ. ತನ್ನ ಬೆಂಬಲಿಗರು ಬಿಜೆಪಿಗೆ ರಾಜೀನಾಮೆ ನೀಡಿದರೆ ಸರಕಾರ ಉಳಿಯುತ್ತದೆಯೇ ಎಂದು ಪ್ರಶ್ನಿಸಿದ ಶ್ರೀರಾಮುಲು, ಸರಕಾರ ಪತನವಾದರೆ ಅದರ ಹೊಣೆಯನ್ನು ನನ್ನ ಹೆಗಲಿಗೆ ಹಾಕಲಾಗುತ್ತದೆ. ಅಂತಹ ಆರೋಪ ಹೊರಲು ನಾನು ಸಿದ್ಧನಿಲ್ಲ ಎಂದು ಪ್ರತಿಕ್ರಿಯಿಸಿದ್ದಾರೆ

Leave a Reply

Top