ಉತ್ತರಾಖಂಡ್ ಪ್ರವಾಹ ಸಂತ್ರಸ್ಥರ ಪರಿಹಾರ ನಿಧಿಗೆ ೦೨ ತಿಂಗಳ ಗೌರವಧನ ನೀಡಲು ಸಮ್ಮತಿ

 ಉತ್ತರಾಖಂಡ್ ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಜಲಪ್ರಳಯದಲ್ಲಿ ಸಂತ್ರಸ್ಥರಾದವರಿಗೆ ಪರಿಹಾರ ಕಲ್ಪಿಸಲು ನೆರವಾಗುವ ನಿಟ್ಟಿನಲ್ಲಿ, ಜಿಲ್ಲಾ ಪಂಚಾಯತಿ ಸದಸ್ಯರುಗಳ ಎರಡು ತಿಂಗಳ ಗೌರವಧನವನ್ನು ವಿಪತ್ತು ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಲು ಜಿಲ್ಲಾ ಪಂಚಾಯತಿಯ ಸರ್ವ ಸದಸ್ಯರು ಒಮ್ಮತದ ನಿರ್ಣಯ ಕೈಗೊಂಡರು.
  ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಸೋಮವಾರ ಜರುಗಿದ ಜಿ.ಪಂ. ಸಾಮಾನ್ಯ ಸಭೆಯಲ್ಲಿ ಈ ವಿಷಯ ಪ್ರಸ್ತಾಪಿಸಿದ ಜಿ.ಪಂ. ಸದಸ್ಯೆ ವಿಜಯಲಕ್ಷ್ಮಿ ರಾಮಕೃಷ್ಣ ಅವರು, ಉತ್ತಾರಖಂಡ್ ರಾಜ್ಯದಲ್ಲಿ ಇತ್ತೀಚೆಗೆ ಸಂಭವಿಸಿದ ಭೀಕರ ಪ್ರವಾಹದಲ್ಲಿ ಕರ್ನಾಟಕ ರಾಜ್ಯವೂ ಸೇರಿದಂತೆ ಅನೇಕ ಜನ ಸಂತ್ರಸ್ಥರಾಗಿದ್ದಾರೆ.  ಇವರಿಗೆ ಪರಿಹಾರ ಕಲ್ಪಿಸಲು ನೆರವಾಗುವ ನಿಟ್ಟಿನಲ್ಲಿ ಜಿಲ್ಲಾ ಪಂಚಾಯತಿ ಸದಸ್ಯರ ಒಂದು ತಿಂಗಳ ಗೌರವಧನವನ್ನು ವಿಪತ್ತು ಪರಿಹಾರ ನಿಧಿಗೆ ದೇಣಿಗೆಯಾಗಿ ಅರ್ಪಿಸಲು ಸಿದ್ಧರಿರುವುದಾಗಿ ತಿಳಿಸಿ, ಉಳಿದ ಸದಸ್ಯರ ಬೆಂಬಲವನ್ನು ಕೋರಿದರು.  ಇದಕ್ಕೆ ಪ್ರತಿಕ್ರಿಯಿಸಿದ ಜಿ.ಪಂ. ಸರ್ವ ಸದಸ್ಯರು, ಒಂದು ತಿಂಗಳ ಬದಲಾಗಿ ಎರಡು ತಿಂಗಳ ಗೌರವ ಧನವನ್ನು ಪರಿಹಾರ ನಿಧಿಗೆ ದೇಣಿಗೆಯಾಗಿ ನೀಡಲು ಸರ್ವಾನುಮತದಿಂದ ಸಮ್ಮತಿಸಿದರು.  ಜಿ.ಪಂ. ಅಧ್ಯಕ್ಷ ಟಿ. ಜನಾರ್ಧನ ಹುಲಿಗಿ ಅವರು ಸರ್ವ ಸದಸ್ಯರ ಮನವಿಗೆ ಸ್ಪಂದಿಸಿ, ಪರಿಹಾರ ನಿಧಿಗೆ ಜಿ.ಪಂ. ಸದಸ್ಯರುಗಳ ಎರಡು ತಿಂಗಳ ಗೌರವಧನ ನೀಡಲಾಗುವುದು ಎಂದು ಘೋಷಿಸಿದರು.
  ಸಭೆಯಲ್ಲಿ ಜಿಲ್ಲಾ ಪಂಚಾಯತ್ ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಿ.ಕೆ. ರವಿ, ಜಿ.ಪಂ. ಸದಸ್ಯರು ಹಾಗೂ ವಿವಿಧ ಸ್ಥಾಯಿ ಸಮಿತಿ ಅಧ್ಯಕ್ಷರುಗಳಾದ ಅಮರೇಶ್ ಕುಳಗಿ ಮತ್ತು ವಿನಯಕುಮಾರ್ ಮೇಲಿನಮನಿ ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ಸಭೆಯಲ್ಲಿ ಜಿ.ಪಂ. ಸದಸ್ಯರು, ತಾಲೂಕು ಪಂಚಾಯತಿ ಅಧ್ಯಕ್ಷರುಗಳು, ವಿವಿಧ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳು, ಭಾಗವಹಿಸಿದ್ದರು.
Please follow and like us:
error