ಜಿಲ್ಲೆಯ ಹೆಚ್‌ಐವಿ ಬಾಧಿತ ಮಕ್ಕಳ ರಕ್ಷಣೆಗೆ ಕ್ರಮ- ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ

ಕೊಪ್ಪಳ ಡಿ.  : ಜಿಲ್ಲೆಯಲ್ಲಿರುವ ಹೆಚ್‌ಐವಿ ಸೋಂಕಿತ ಅಥವಾ ಬಾಧಿತ ಮಕ್ಕಳ ರಕ್ಷಣೆಗೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದ್ದಾರೆ.
  ಹೆಚ್‌ಐವಿ/ಏಡ್ಸ್ ಸೋಂಕಿತ ಅಥವಾ ಬಾಧಿತ ಮಕ್ಕಳ ಹಿತಾಸಕ್ತಿ ರಕ್ಷಣೆಗಾಗಿ ಹಾಗೂ ವಿಶೇಷ ಕಾಳಜಿಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮನ್ವಯ ಸಮಿತಿ ರಚನೆ ಕುರಿತಂತೆ ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
  ಜಿಲ್ಲೆಯಲ್ಲಿ ಯುನಿಸೆಫ್ ಬೆಂಬಲದಿಂದ ಮಕ್ಕಳ ರಕ್ಷಣಾ ಯೋಜನೆ ಹಾಗೂ ಸಮಗ್ರ ಹೆಚ್‌ಐವಿ/ಏಡ್ಸ್ ಕಾರ್ಯಕ್ರಮಗಳು ಕಳೆದ ಒಂದೂವರೆ ವರ್ಷದಿಂದ ನಡೆಯುತ್ತಿದೆ.  ಜಿಲ್ಲೆಯಲ್ಲಿ ಆರು ವರ್ಷದೊಳಗಿನ ಸುಮಾರು ೧೮೦ ಹೆಚ್‌ಐವಿ/ಏಡ್ಸ್  ಬಾಧಿತ ಮಕ್ಕಳಿದ್ದು, ಇವರ ಹಿತರಕ್ಷಣೆಗಾಗಿ ಅಂದರೆ ಶಿಕ್ಷಣ, ಆರೋಗ್ಯ ರಕ್ಷಣೆಯಂತಹ ಅಗತ್ಯ ವ್ಯವಸ್ಥೆಗಾಗಿ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ.  ಅಂತಹ ಮಕ್ಕಳಿಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದ ನೀಡಲಾಗುವ ಪೌಷ್ಠಿಕ ಆಹಾರ ಪೂರೈಕೆಯಾಗಬೇಕು. ಸಮಾಜ ಮತ್ತು ಪಾಲಕರಿಂದ ದೂರ ಉಳಿದಿರುವ ಮಕ್ಕಳ ಸಮಗ್ರ ರಕ್ಷಣೆಗಾಗಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ರೂಪಿಸಿದ್ದು, ಮಕ್ಕಳ ಆರೈಕೆ ಹಾಗೂ ಚಿಕಿತ್ಸೆಗಾಗಿ ಮಕ್ಕಳ ಹೆಸರಿನಲ್ಲಿ ಆಧಾರ್ ಕಾರ್ಡ್ ಮಾಡಿಸಿ, ಈ ಮೂಲಕ ಯೋಜನೆಯ ಲಾಭ ಅವರಿಗೆ ತಲುಪುವಂತಾಗಬೇಕು ಎಂದು ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದರಲ್ಲದೆ  ಹೆಚ್‌ಐವಿ/ಏಡ್ಸ್ ಬಾಧಿತ ಮಕ್ಕಳನ್ನು ಅಂಗನವಾಡಿ ಕೇಂದ್ರಗಳಿಗೆ ಬರುವಂತಾಲು ಪಾಲಕರು, ಪೋಷಕರು, ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.
ಜಿಲ್ಲೆಯಲ್ಲಿ ಒಟ್ಟು ಹೆಚ್‌ಐವಿ/ಏಡ್ಸ್ ಸೋಂಕಿತರ ಸಂಖ್ಯೆ ೬೧೬೫ ಆಗಿದ್ದು, ಈ ಪೈಕಿ ಪುರುಷರು- ೨೬೫೫, ಮಹಿಳೆ- ೨೯೭೧.  ಹೆಚ್‌ಐವಿ/ಏಡ್ಸ್ ಬಾಧಿತ ೧೮ ವರ್ಷದೊಳಗಿನ ೫೨೯ ಮಕ್ಕಳಿದ್ದು, ಈ ಪೈಕಿ ಬಾಲಕರು- ೩೦೮, ಬಾಲಕಿಯರು- ೨೨೧.  ಜಿಲ್ಲೆಯಲ್ಲಿ ಹೆಚ್‌ಐವಿ/ಏಡ್ಸ್ ಸೋಂಕಿತರ ಪೈಕಿ ಎಆರ್‌ಟಿ ಚಿಕಿತ್ಸೆಯಲ್ಲಿದ್ದ ೩೬೦೮ ಜನರ ಪೈಕಿ ೨೪೫೮ ಜನ ಸೂಕ್ತವಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.  ೭೭೧ ಜನ ರೋಗಿಗಳು ಈಗಾಗಲೆ ಮೃತಪಟ್ಟಿದ್ದು ೭೦ ಜನರು ಚಿಕಿತ್ಸೆಯನ್ನು ಅರ್ಧಕ್ಕೆ ನಿಲ್ಲಿಸಿದ್ದಾರೆ.   ಹೆಚ್‌ಐವಿ/ಏಡ್ಸ್ ಸೋಂಕಿತರ ಚಿಕಿತ್ಸೆಗಾಗಿ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಂಡಿದ್ದು, ಅತ್ಯಂತ ದುಬಾರಿ ಔಷಧಿಯನ್ನು ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಒದಗಿಸಲಾಗುತ್ತಿದೆ.  ಅಲ್ಲದೆ ಹಲವು ಸ್ವಯಂ ಸೇವಾ ಸಂಸ್ಥೆಗಳ ಮೂಲಕವೂ ಔಷಧಿ ವಿತರಣೆಗೆ ಕ್ರಮ ಕೈಗೊಂಡಿದೆ ಎಂದು ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ತಿಳಿಸಿದರು.
  ಇದೇ ಸಂದರ್ಭದಲ್ಲಿ ಹೆಚ್‌ಐವಿ/ಏಡ್ಸ್ ಸೋಂಕಿತ ಅಥವಾ ಬಾಧಿತ ಮಕ್ಕಳ ಹಿತಾಸಕ್ತಿ ರಕ್ಷಣೆಗಾಗಿ ಹಾಗೂ ವಿಶೇಷ ಕಾಳಜಿಗಾಗಿ ಜಿಲ್ಲಾ ಮತ್ತು ತಾಲೂಕು ಮಟ್ಟದ ಸಮನ್ವಯ ಸಮಿತಿ ರಚನೆಗೆ ಜಿಲ್ಲಾಧಿಕಾರಿಗಳು ಅನುಮೋದನೆ ನೀಡಿದರು.  ಬೆಂಗಳೂರಿನ ಪಿಎಸ್‌ಐ ಸಂಸ್ಥೆಯ ಸಂಚಾಲಕ ಜೀವನ್ ಅವರು ಹೆಚ್‌ಐವಿ/ಏಡ್ಸ್ ಸೋಂಕಿತ, ಬಾಧಿತ ಮಕ್ಕಳ ರಕ್ಷಣೆಗಾಗಿ ಕೈಗೊಳ್ಳಬೇಕಾಗಿರುವ ಕ್ರಮಗಳ ಕುರಿತು ಮಾಹಿತಿ ನೀಡಿದರು.  
  ಸಭೆಯಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಮಸಿಯಪ್ಪ, ಬೆಂಗಳೂರಿನ ಪಿಎಸ್‌ಐ ಸಂಸ್ಥೆಯ ಧರ್ಮಪ್ರಸಾದ್, ಕರುಣಾ ಟ್ರಸ್ಟ್‌ನ ಡಾ. ನಟರಾಜ್ ಸೇರಿದಂತೆ ಆಶಾಜ್ಯೋತಿ, ಸಂರಕ್ಷಾ, ನವಜ್ಯೋತಿ ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಧಿಗಳು ಸಭೆಯಲ್ಲಿ ಭಾಗವಹಿಸಿದ್ದರು.
Please follow and like us:
error