fbpx

ವಿದ್ಯಾರ್ಥಿಗಳು ಕ್ರೀಡಾ, ಸಾಂಸ್ಕೃತಿಕ ಚಟುವಟಿಕೆಗೂ ಹೆಚ್ಚು ಗಮನ ನೀಡಬೇಕು

 ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳ ಮೂಲಕ ದೈಹಿಕ, ಮಾನಸಿಕ ಆರೋಗ್ಯವನ್ನು ಹೆಚ್ಚಿಸಿಕೊಂಡು ಬಲಿಷ್ಟ ದೇಶದ ನಿರ್ಮಾಣಕ್ಕೆ ಕೊಡುಗೆ ನೀಡಬೇಕು ಎಂದು ಗುಲ್ಬರ್ಗಾ ವಿಶ್ವವಿದ್ಯಾಲಯದ ಮಾಜಿ ಸೆನೆಟ್ ಸದಸ್ಯ, ಪತ್ರಕರ್ತ ಸಿ ಮಂಜುನಾಥ್ ತಿಳಿಸಿದರು.
                              ಶನಿವಾರ ಸಂಜೆ ರಾಘವ ಕಲಾ ಮಂದಿರದಲ್ಲಿ ಆಯೋಜಿಸಿದ್ದ ಸ್ಥಳೀಯ ೧೭ ನೇ ವಾರ್ಡ್ ಶೇಕ್ಷಾವಲಿ ದರ್ಗಾದ ಬಳಿ ಇರುವ ವಂದನಾ ಪ್ರಾಥಮಿಕ ಶಾಲೆಯ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು.

ಜೀವನದಲ್ಲಿ ಗುರಿ ಸಾಧಿಸಲು ಛಲ, ಪ್ರಾಮಾಣಿಕ ಶ್ರಮ, ಶ್ರದ್ಧೆ ಅಗತ್ಯ. ಪಾಲಕರು  ಬಾಲ್ಯದಲ್ಲಿಯೇ ಮಕ್ಕಳಿಗೆ ಈ ಎಲ್ಲಾ ಗುಣಗಳನ್ನು ಅಳವಡಿಸಿಕೊಳ್ಳಲು ಪೂರಕ ವಾತಾವರಣ ಕಲ್ಪಿಸಬೇಕು ಎಂದು ಸಲಹೆ ನೀಡಿದರು.

ಶ್ರೀ ವಿವೇಕಾನಂದ ಯುವಕ ಸಂಘದ ಅಧ್ಯಕ್ಷ, ರಾಜ್ಯ ಯುವ ಪ್ರಶಸ್ತಿ ಪುರಸ್ಕೃತ ಪಿ ಗಾದೆಪ್ಪ ಅವರು ಮಾತನಾಡಿ, ವಿನಯ, ದೇಶಭಕ್ತಿ ಮತ್ತು ಹಿರಿಯರ ಮೇಲೆ ಗೌರವ ಈ ಮೂರು ಗುಣಗಳು ವಿದ್ಯಾರ್ಥಿಗಳ ಯಶಸ್ಸಿಗೆ ಕಾರಣವಾಗುತ್ತವೆ. ಮಕ್ಕಳು ಬಾಲ್ಯದಲ್ಲಿ ಈ ಗುಣಗಳನ್ನು ಅಳವಡಿಸಿಕೊಳ್ಳಲು ಶಿಕ್ಷಕರು, ಪೋಷಕರು ಹೆಚ್ಚಿನ ಗಮನ ಹರಿಸಬೇಕು ಎಂದು ಹೇಳಿದರು.
ಯುವ ಜನತೆ  ಟಿ ವಿ, ಸಿನಿಮಾ, ಕಂಪ್ಯೂಟರ್ ನೋಡುತ್ತಾ ಕಾಲಹರಣ ಮಾಡದೆ ಸಾಹಿತ್ಯಿಕ, ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿದ ಮಹಾನಗರ ಪಾಲಿಕೆ ಸದಸ್ಯ ಬಿ ಕೆ ಕೆರಗೋಡಪ್ಪ ಅವರು ಮಾತನಾಡಿ ವಿದ್ಯಾದಾನವೂ ಶ್ರೇಷ್ಠದಾನವಾಗಿದ್ದು ಈ ನಿಟ್ಟಿನಲ್ಲಿ ವಂದನಾ ಶಾಲೆ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡುತ್ತಿರುವುದು ಸಂತೋಷದ ಸಂಗತಿ. ಶೈಕ್ಷಣಿಕವಾಗಿ ಮತ್ತಷ್ಟು ಪ್ರಗತಿ ಹೊಂದಿ ಶೀಘ್ರ ಕಾಲೇಜು ಶಿಕ್ಷಣ ನೀಡುವ ಮಟ್ಟಕ್ಕೆ ಬೆಳೆಯಲಿ ಎಂದು ಹಾರೈಸಿದರು.
ಕರವೇ ಜಿಲ್ಲಾಧ್ಯಕ್ಷ ಕೆ ಎಂ ಬಸವರಾಜಸ್ವಾಮಿ, ಬ್ರಿಲಿಯಂಟ್ ಶಾಲೆಯ ಕಾರ್ಯದರ್ಶಿ ಬಿ ಎನ್ ಬಸವರೆಡ್ಡಿ ಅವರು ಮಾತನಾಡಿದರು.  
                     ಕಾರ್ಯಕ್ರಮದಲ್ಲಿ ಶ್ರೀಧರ ಗಡ್ಡೆ ಶ್ರೀ ಸಂಗಮೇಶ್ವರ ಪ್ರಾಥಮಿಕ ಶಾಲೆಯ ಅಧ್ಯಕ್ಷ ಹನುಮಂತಪ್ಪ ಮತ್ತಿತರರು ಉಪಸ್ಥಿತರಿದ್ದರು. ಶಾಲಾ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ಮಕ್ಕಳಿಗೆ ಗಣ್ಯರು ಬಹುಮಾನ ವಿತರಿಸಿದರು. ವಂದನಾ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಕೆ ಬಿ ಈಶ್ವರ್ ಸ್ವಾಗತಿಸಿದರು. ಮೇಡಂ ಕ್ಯೂರಿ ಅಕಾಡೆಮಿಯ ಅಧ್ಯಕ್ಷ ಎಸ್ ಮಂಜುನಾಥ್  ನಿರೂಪಿಸಿದರು. ಶಿಕ್ಷಕ ಮಹೇಶ್ ವಂದಿಸಿದರು. ಶಾಲೆಯ ಮಕ್ಕಳಿಂದ ಜರುಗಿದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದ ನೂರಾರು ಸಭಿಕರ ಮನರಂಜಿಸಿದವು.
Please follow and like us:
error

Leave a Reply

error: Content is protected !!