ಯಡ್ಡಿ ಕುತ್ತಿಗೆಗೆ ಭದ್ರಾ ಗುತ್ತಿಗೆ : ಲೋಕಾಯುಕ್ತದಿಂದ ಎಫ್‌ಐಆರ್

ಬೆಂಗಳೂರು, ಆ.10: ಭದ್ರಾ ಮೇಲ್ದಂಡೆಯ ಎರಡನೆ ಹಂತದ ಯೋಜನೆಯ ಕಾಮಗಾರಿಯ ಗುತ್ತಿಗೆ ನೀಡುವಲ್ಲಿ ಭ್ರಷ್ಟಾಚಾರ ನಡೆಸಿರುವ ಆರೋಪದಲ್ಲಿ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ವಿರುದ್ಧ ಲೋಕಾಯುಕ್ತ ಪೊಲೀಸರು ಬುಧವಾರ ಎಫ್‌ಐಆರ್ ದಾಖಲಿಸಿದ್ದಾರೆ. ಪ್ರಕರಣದ ಸಂಬಂಧ ಯಡಿಯೂರಪ್ಪನವರ ವಿಚಾರಣೆಗೆ ಅನುಮತಿ ನೀಡಿದ್ದ ಲೋಕಾಯುಕ್ತ ವಿಶೇಷ ನ್ಯಾಯಾಲಯ, ಈ ಪ್ರಕರಣದ ವಿಚಾರಣೆ ನಡೆಸಿ ಸೆಪ್ಟಂಬರ್ 3ರೊಳಗೆ ತನಿಖಾ ವರದಿ ಸಲ್ಲಿಸುವಂತೆ ಲೋಕಾಯುಕ್ತ ಎಸ್‌ಪಿಗೆ ಆ.8ರಂದು ಆದೇಶಿಸಿತ್ತು. ಈ ಹಿನ್ನೆಲೆಯಲ್ಲಿ ಲೋಕಾಯುಕ್ತ ಪೊಲೀಸರು ‘ಭ್ರಷ್ಟಾಚಾರ ನಿಯಂತ್ರಣ ಕಾಯ್ದೆಯ ಸೆಕ್ಷನ್ 156ಬಿ’ಯನ್ವಯ ಮಾಜಿ ಮುಖ್ಯಮಂತ್ರಿಯ ವಿರುದ್ಧ ಐಫ್‌ಐಆರ್ ದಾಖಲಿಸಿದ್ದಾರೆ.
ಪ್ರಕರಣದ ಹಿನ್ನೆಲೆ: ಭದ್ರಾ ಮೇಲ್ದಂಡೆ ಎರಡನೆ ಹಂತದ ಯೋಜನೆಯ ಕಾಮಗಾರಿ ಗುತ್ತಿಗೆ ನೀಡುವಲ್ಲಿ ಯಡಿಯೂರಪ್ಪ ಅವ್ಯವಹಾರ ನಡೆಸಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ್‌ನ ಜೆಡಿಎಸ್ ಸದಸ್ಯ ವೈ.ಎಸ್.ವಿ.ದತ್ತ, ಜುಲೈ 27ರಂದು ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಿದ್ದರು. ಭದ್ರಾ ಮೇಲ್ದಂಡೆ ಯೋಜನೆಯ 2ನೆ ಹಂತದ ಕಾಮಗಾರಿಗೆ 2006ರಲ್ಲಿ 550 ಕೋಟಿ ರೂ.ಮೊತ್ತದ ಅಂದಾಜು ಪಟ್ಟಿ ಸಿದ್ಧಪಡಿಸಲಾಗಿತ್ತು. 2008ರಲ್ಲಿ ನೀರಾವರಿ ನಿಗಮದ ಅಧ್ಯಕ್ಷ ಮತ್ತು ಮುಖ್ಯಮಂತ್ರಿಯಾಗಿದ್ದ ಬಿ.ಎಸ್.ಯಡಿಯೂರಪ್ಪ, ಕಾಮಗಾರಿಯ ಗುತ್ತಿಗೆಗೆ ಆಸಕ್ತಿ ವ್ಯಕ್ತಪಡಿಸುವ ಸಂಸ್ಥೆಗಳಿಂದ ಅರ್ಜಿ ಆಹ್ವಾನಿಸಲು ಆದೇಶಿಸಿದ್ದರು. 14 ಕಂಪೆನಿಗಳು ಅರ್ಜಿ ಸಲ್ಲಿಸಿದ್ದವು. ಅವುಗಳ ಪೈಕಿ ಐದು ಕಂಪೆನಿಗಳು ಮಾತ್ರ ಅರ್ಹತೆ ಪಡೆದ ಸಂಸ್ಥೆಗಳ ಪಟ್ಟಿಯಲ್ಲಿ ಸ್ಥಾನ ಪಡೆದವು. ಅದರಲ್ಲಿ ಆರ್.ಎನ್.ಶೆಟ್ಟಿ ಮತ್ತು ಜ್ಯೋತಿ ಲಿಮಿಟೆಡ್ ಪಾಲುದಾರಿಕೆ ಕಂಪೆನಿ ಮತ್ತು ಕಿರ್ಲೋಸ್ಕರ್ ಬ್ರದರ್ ಶೇಖರ್ ಪಾಲುದಾರಿಕೆ ಕಂಪೆನಿಗಳು ಮಾತ್ರ ಟೆಂಡರ್ ಅರ್ಜಿ ಸಲ್ಲಿಸಿದ್ದವು.
‘ಕಿರ್ಲೋಸ್ಕರ್ ಬ್ರದರ್ ಕಂಪೆನಿ’ ರೂ 1,025 ಕೋಟಿ ರೂ.ಬಿಡ್ ಸಲ್ಲಿಸಿತ್ತಲ್ಲದೆ, 1,006 ಕೋಟಿ ರೂ.ಗೂ ಕಾಮಗಾರಿ ಕೈಗೊಳ್ಳಲು ಸಿದ್ಧ ಎಂದು ತಿಳಿಸಿತ್ತು. ಆದರೆ, 1,033 ಕೋಟಿ ರೂ. ಬಿಡ್ ನಮೂದಿಸಿದ್ದ ಆರ್.ಎನ್.ಶೆಟ್ಟಿ ಮತ್ತು ಜ್ಯೋತಿ ಲಿಮಿಟೆಡ್ ಪಾಲುದಾರಿಕೆ ಕಂಪೆನಿಗೆ ಯಡಿಯೂರಪ್ಪ ನಿಯಮ ಉಲ್ಲಂಘಿಸಿ ಗುತ್ತಿಗೆ ನೀಡಿದ್ದಾರೆ. ಈ ಋಣ ತೀರಿಸಲು ಆರ್.ಎನ್.ಶೆಟ್ಟಿ ಸಮೂಹದ ಮುರ್ಡೇಶ್ವರ ಕಂಪೆನಿಯು 13 ಕೋಟಿ ರೂ.ಗಳನ್ನು ಯಡಿಯೂರಪ್ಪರ ಇಬ್ಬರು ಪುತ್ರರು ಮತ್ತು ಅಳಿಯ ಪಾಲುದಾರರಾಗಿರುವ ದವಳಗಿರಿ ಡೆವಲಪರ್ಸ್ ಮತ್ತು ಸಹ್ಯಾದ್ರಿ ಹೆಲ್ತ್‌ಕೇರ್ ಲಿಮಿಟೆಡ್ ಕಂಪೆನಿಗಳಿಗೆ ಕಿಕ್‌ಬ್ಯಾಕ್ ನೀಡಿದೆ. ವಿದ್ಯುತ್ ಗುತ್ತಿಗೆಯಲ್ಲಿ ಭಾರೀ ಅವ್ಯವಹಾರ ಎಸಗಿದ ಹಿನ್ನೆಲೆಯಲ್ಲಿ ಈ ಕಂಪೆನಿಯನ್ನು 2012ರವರೆಗೆ ಕಪ್ಪು ಪಟ್ಟಿಗೆ ಸೇರಿಸಿ ಹಿಮಾಚಲ ಪ್ರದೇಶ ಸರಕಾರ ಆದೇಶಿಸಿದೆ. ಆದರೂ ಇದೇ ಸಂಸ್ಥೆಗೆ ಟೆಂಡರ್ ನೀಡಲಾಗಿದೆ ಎಂದು ದತ್ತ ದೂರಿನಲ್ಲಿ ಆರೋಪಿಸಿದ್ದರು. ಈ ಹಿನ್ನೆಲೆಯಲ್ಲಿ ದತ್ತಾ, ಅಪರಾಧ ದಂಡ ಪ್ರಕ್ರಿಯಾ ಸಂಹಿತೆ (ಸಿಆರ್‌ಪಿಸಿ) ಕಲಂ 156(3)ರ ಅಡಿಯಲ್ಲಿ ಈ ಪ್ರಕರಣದ ತನಿಖೆಯನ್ನು ಲೋಕಾಯುಕ್ತ ಪೊಲೀಸರಿಗೆ ಒಪ್ಪಿಸುವಂತೆ ಅರ್ಜಿಯಲ್ಲಿ ಕೋರಿದ್ದರು. ಈ ಮನವಿಯನ್ನು ವಿಶೇಷ ನ್ಯಾಯಾಲಯ ಮಾನ್ಯ ಮಾಡಿತ್ತು
Please follow and like us:
error

Related posts

Leave a Comment