ಆತ್ಮಹತ್ಯೆ (ಹರಾಕಿರಿ) ಮಾಡಿಕೊಂಡ ಜೆಡಿಎಸ್

– ಸನತ್‌ಕುಮಾರ ಬೆಳಗಲಿ

ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರದ ಉಪಚುನಾವಣೆಯಲ್ಲಿ ಜನತೆ ನೀಡಿದ ಸಂದೇಶವೇನು ಎಂಬುದು ಈಗಾಗಲೇ ಸ್ಪಷ್ಟವಾಗಿದೆ. ಜನರನ್ನು ಕಾಲಕಸವಾಗಿ ಕಂಡು ಜಾತಿ ಮತ್ತು ಹಣ ಬಲದಿಂದ ಗೆಲುವನ್ನು ಖರೀದಿಸಬಹುದು ಎಂದು ಹೊರಟವರಿಗೆ ಮತದಾರರು ಮರೆಯ ಲಾಗದ ಪೆಟ್ಟು ನೀಡಿದ್ದಾರೆ. ಜೆಡಿಎಸ್- ಬಿಜೆಪಿ ಅನೈತಿಕ ಮೈತ್ರಿ ಪ್ರಯೋಗ ಅಲ್ಲಿ ವಿಫಲಗೊಂಡಿದೆ. ಜೆಡಿಎಸ್ ಹರಾಕಿರಿ (ಆತ್ಮಹತ್ಯೆ) ಮಾಡಿಕೊಂಡಿದೆ. ಇಂಥ ನಿರ್ಲಜ್ಜ ನೀತಿಗೆಟ್ಟ ರಾಜಕಾರಣಕ್ಕೆ ಅವಕಾಶ ನೀಡುವುದಿಲ್ಲ ಎಂದು ಜನ ಹೇಳಿದ್ದಾರೆ. ಜಾತ್ಯತೀತ ಸಿದ್ಧಾಂತದ ಬಗ್ಗೆ ಹಗುರಾಗಿ ಮಾತಾಡಿದ್ದ ಕುಮಾರಸ್ವಾಮಿ ಇಂಗು ತಿಂದ ಮಂಗನಂತಾಗಿದ್ದಾರೆ. ಇದು ಕಾಂಗ್ರೆಸ್ ಗೆಲುವು ಎನ್ನುವುದಕ್ಕಿಂತ ಕೋಮುವಾದಿ- ಜಾತಿವಾದಿ ಕೂಟದ ಸೋಲು ಎಂದು ವ್ಯಾಖ್ಯಾನಿಸುವುದೇ ಹೆಚ್ಚು ಸೂಕ್ತವಾಗುತ್ತದೆ.
ಈ ಚುನಾವಣೆಯಲ್ಲಿ ಗಂಭೀರ ಆರ್ಥಿಕ, ಸಾಮಾಜಿಕ ಪ್ರಶ್ನೆಗಳು ಚರ್ಚೆಗೆ ಬರಲೇ ಇಲ್ಲ. ಬರೀ ‘‘ತಿಥಿಯೂಟ’’, ‘‘ಪ್ರಣಾಳ ಶಿಶು’’, ಒಕ್ಕಲಿಗ ಅಧಿಕಾರಿಗಳ ವರ್ಗಾವಣೆ ಇಂಥ ಕೀಳುಮಟ್ಟದ ಬೈಗುಳಗಳ ಸುರಿಮಳೆ ನಡೆಯಿತು. ಜಾತ್ಯತೀತ ಎಂದು ಕರೆದುಕೊಳ್ಳುವ ತನ್ನ ಪಕ್ಷವನ್ನು ಒಂದು ಜಾತಿಯೊಂದಿಗೆ ಗಂಟು ಹಾಕಿ ಲಾಭ ಮಾಡಿ ಕೊಳ್ಳಲು ಹೊರಟ ಕುಮಾರಸ್ವಾಮಿ ಕೋಮು ವಾದಿ ಬಿಜೆಪಿಯೊಂದಿಗೆ ಅನೈತಿಕ ಸಂಬಂಧ ಬೆಳೆಸಿದರು. ಈ ಜಾತಿವಾದಿ- ಕೋಮು ವಾದಿ ಕೂಟವನ್ನು ಜನತೆ ತಿರಸ್ಕರಿಸಿ ತಿಪ್ಪೆಗೆಸೆದರು.
ಹಾಗೆ ನೋಡಿದರೆ ಈ ಚುನಾವಣೆಯೇ ಅಗತ್ಯವಿರಲಿಲ್ಲ. ಈಗ ಗೆದ್ದವರ ಅವಧಿಯೂ ಕೇವಲ ಎಂಟು ತಿಂಗಳು ಮಾತ್ರ. ಮುಂದಿನ ವರ್ಷ ಲೋಕಸಭೆಗೆ ಸಾರ್ವತ್ರಿಕ ಚುನಾವಣೆ ನಡೆಯಲಿದೆ. ಆ ತನಕ ಈ ಕ್ಷೇತ್ರಗಳಿಂದ ಗೆದ್ದಿದ್ದ ಕುಮಾರಸ್ವಾಮಿ ಮತ್ತು ಚೆಲುವರಾಯ ಸ್ವಾಮಿ ಸಂಸದರಾಗಿ ಇರಬಹುದಿತ್ತು. ಆದರೆ ವಿಧಾನಸಭೆ ಚುನಾವಣೆ ಬಂದಾಗ ಕುಮಾರಸ್ವಾಮಿಗೆ ಮತ್ತೆ ತಾನು ರಾಜ್ಯದ ಮುಖ್ಯಮಂತ್ರಿಯಾಗ ಬೇಕೆಂಬ ಆಸೆ ಚಿಗುರೊಡೆಯಿತು.
ತನ್ನ ನಾಯಕ ಮುಖ್ಯಮಂತ್ರಿಯಾದರೆ ತಾನೇಕೆ ಕ್ಯಾಬಿನೆಟ್ ಮಂತ್ರಿಯಾಗಬಾರದೆಂದು ಚೆಲುವರಾಯಸ್ವಾಮಿಯೂ ಕುಮಾರಸ್ವಾಮಿ ಜೊತೆ ಲೋಕಸಭಾ ಸ್ಥಾನಕ್ಕೆ ರಾಜೀನಾಮೆ ನೀಡಿ ವಿಧಾನಸಭೆಗೆ ಆರಿಸಿ ಬಂದರು. ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅರವತ್ತರಿಂದ ಎಪ್ಪತ್ತು ಸ್ಥಾನ ಗೆಲ್ಲುತ್ತದೆ. ಬಾಕಿ ಉಳಿದ ಐವತ್ತು ಸ್ಥಾನಗಳಲ್ಲಿ ಬಿಜೆಪಿ ಜಯಶಾಲಿಯಾಗುತ್ತದೆ ಎಂದು ಲೆಕ್ಕ ಹಾಕಿದ್ದ ಕುಮಾರಸ್ವಾಮಿ ಬಿಜೆಪಿ ನಾಯಕರೊಂದಿಗೆ ಗುಟ್ಟಾದ ಅನೈತಿಕ ಸಂಬಂಧಕ್ಕೆ ಆಗಲೆ ನಾಂದಿ ಹಾಡಿದರು.
ಆದರೆ ಜನರೇನೂ ಮೂರ್ಖರಲ್ಲ. ಇವರ ಕಪಟ ಲೆಕ್ಕಾಚಾರ ಜನರಿಗೆ ಗೊತ್ತಾಯಿತು. ಅದರಲ್ಲೂ ಜೆಡಿಎಸ್‌ನ ಓಟ್ ಬ್ಯಾಂಕ್ ಎಂದೇ ಕರೆಯಲ್ಪಡುತ್ತಿದ್ದ ಅಲ್ಪಸಂಖ್ಯಾತರು ಹಾಗೂ ದಲಿತ ಹಿಂದುಳಿದ ಸಮುದಾಯದ ಕೆಲ ಪಂಗಡಗಳು ಈ ಕುತಂತ್ರದ ಅಪಾಯಕಂಡು ಎಚ್ಚರಗೊಂಡು ಇವೆರಡು ಪಕ್ಷಗಳನ್ನು ಮೂಲೆಗೆಸೆದರು.ಮುಖ್ಯಮಂತ್ರಿಯಾಗಬೇಕೆಂಬ ತನ್ನ ಕನಸು ಭಗ್ನಗೊಂಡ ನಂತರ ಮಾನಸಿಕ ಸ್ಥಿಮಿತವನ್ನೇ ಕಳೆದುಕೊಂಡ ಕುಮಾರಸ್ವಾಮಿ ಏನೇನೊ ಮಾತಾಡ ತೊಡಗಿದರು. ತನ್ನಜಾಗದಲ್ಲಿ ಸಿದ್ದರಾಮಯ್ಯ ಕುಳಿತದ್ದನ್ನು ಕಂಡು ಹೊಟ್ಟೆಯುರಿದು ಕೊಂಡ ಅವರು ನಿತ್ಯವೂ ಕೆಂಡಕಾರ ತೊಡಗಿದರು.
ಆದರೆ ಸಮಾಜವಾದಿ ಹಿನ್ನೆಲೆಯ ಸಚ್ಛಾರಿತ್ರದ ಸಿದ್ದರಾಮಯ್ಯ ಅವರ ಬಗ್ಗೆ ಟೀಕಿಸಲು ವಿಷಯಗಳೇ ಸಿಗಲಿಲ್ಲ. ಅಧಿಕಾರಕ್ಕೆ ಬಂದು ಬರೀ ನೂರು ದಿನಗಳಾದ್ದರಿಂದ ಅಂಥ ಲೋಪಗಳೂ ಕಂಡು ಬರಲಿಲ್ಲ. ವಿಧಾನಸಭೆಯಲ್ಲಿ ಸರಕಾರದ ಭೂತ ಬಿಡಿಸುವುದಾಗಿ ಹೇಳಿದ ಕುಮಾರಸ್ವಾಮಿ ವೈಯಕ್ತಿಕ ತೇಜೋವಧೆಗೆ ಇಳಿದರು. ಇದಕ್ಕೆ ಸಿದ್ದರಾಮಯ್ಯನವರೂ ಚುಚ್ಚು ಮಾತುಗಳ ಮೂಲಕ ಪ್ರಚೋದನೆ ನೀಡಿದರು.
ನನಗೆ ಯಾವುದೇ ಸಿದ್ಧಾಂತದಲ್ಲಿ ನಂಬಿಕೆ ಇಲ್ಲ. ಸಿದ್ಧಾಂತಗಳಿಂದ ದೇಶದ ಅಭಿವೃದ್ಧಿ ಆಗುವುದಿಲ್ಲ ಎಂದು ಹೇಳಿ ಈ ಹಿಂದೆ ಬಿಜೆಪಿ ಜೊತೆಗೆ ಕೈಜೋಡಿಸಿ ಮುಖ್ಯಮಂತ್ರಿ ಯಾಗಿದ್ದ ಕುಮಾರಸ್ವಾಮಿ ಮತ್ತೆ ಸಂಘಪರಿವಾರದ ಜೊತೆ ಕೈಜೋಡಿಸಲು ಮುಂದಾದರು. ‘‘ನಾವೆಲ್ಲ ಜೊತೆಗೂಡಿದ್ದರೆ ಇವರೆಲ್ಲ ಅಧಿಕಾರಕ್ಕೆ ಬರುತ್ತಿರಲಿಲ್ಲ’’ ಎಂದು ವಿಧಾನಸಭಾ ಕಲಾಪದಲ್ಲೆ ನುಡಿದ ಕುಮಾರಸ್ವಾಮಿ ‘ಜಾತ್ಯತೀತತೆ’ ಎಂಬುದು ರಾಜಕಾರಣಿಗಳು ತಮ್ಮ ಅನುಕೂಲಕ್ಕೆ ಮಾಡಿಕೊಂಡ ಸಿದ್ಧಾಂತ ಎಂದರು. ಇದೇ ಮಾತನ್ನು ಆರೆಸ್ಸೆಸ್ ನಾಯಕರು ಆಗಾಗ ಹೇಳುತ್ತಿರುತ್ತಾರೆ. ಬಹುಶಃ ಕುಮಾರಸ್ವಾಮಿ ಕೇಶವಕೃಪದಲ್ಲಿ ಹೇಳಿಕೊಟ್ಟ ಮಾತನ್ನೇ ಸದನದಲ್ಲಿ ಹೇಳಿದರು.
ಆದರೆ ಆರೆಸ್ಸೆಸ್‌ನ ರಾಜಕೀಯ ವೇದಿಕೆ ಆಗಿರುವ ಬಿಜೆಪಿ ಜೊತೆಗೆ ಮೈತ್ರಿ ಮಾಡಿ ಕೊಳ್ಳುವ ಅಪಾಯದ ಬಗ್ಗೆ ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ದೇವೇಗೌಡರಿಗೆ ಅರಿವಿತ್ತು. ಅಂತಲೇ ಬಿಜೆಪಿ ಬೆಂಬಲದಿಂದ ಕುಮಾರಸ್ವಾಮಿ ಮುಖ್ಯಮಂತ್ರಿ ಆದಾಗ ‘‘ಇದು ನನ್ನ ಐದು ದಶಕಗಳ ರಾಜಕೀಯ ಜೀವನದಲ್ಲಿ ಕರಾಳ ದಿನ’’ ಎಂದಿದ್ದರು. ಗೌಡರ ಈ ಮಾತು ಬರೀ ನಾಟಕ ಎಂದು ಸಿದ್ದರಾಮಯ್ಯ ಆಗಲೇ ಹೇಳಿದ್ದರು.
ಈ ಬಾರಿಯೂ ಹಾಗೆಯೇ ಆಯಿತು. ಒಂದೆಡೆ ಕುಮಾರಸ್ವಾಮಿ ಬಿಜೆಪಿ ನಾಯಕರೊಂದಿಗೆ ಅಂತಃಪುರದಲ್ಲಿ ಸಲ್ಲಾಪ ನಡೆಸಿದ್ದರೆ ‘ನನಗೆ ಗೊತ್ತಿಲ್ಲ ನನ್ನ ಮಗ ಅಂಥವನಲ್ಲ’ ಎಂದು ಹೇಳುತ್ತಲೆ ಬಂದ ಗೌಡರು ಅಪಹಾಸ್ಯಕ್ಕೆ ಈಡಾದರು. ಹೀಗೆ ತಂದೆ-ಮಗ ವಿಭಿನ್ನ ನಿಲುವು ತಾಳಿದರು.ಮಗ ಬಿಜೆಪಿ ಜೊತೆ ಅನೈತಿಕ ಕೂಡಿಕೆ ನಡೆಸಿದ್ದರೆ ತಂದೆ ದೇವೇಗೌಡರು ಮಾತ್ರ ಎಡಪಕ್ಷಗಳು ಮಾತ್ರ ನಮ್ಮ ಮಿತ್ರ ಪಕ್ಷಗಳು ಎಂದು ಹೇಳಿಕೊಂಡರು.
ಚುನಾವಣೆ ಸಂದರ್ಭ ದಲ್ಲೇ ಕೇರಳದ ರಾಜಧಾನಿ ತಿರುವನಂತಪುರ ದಲ್ಲಿ ನಡೆದ ಕಮ್ಯುನಿಸ್ಟ್ ಪಕ್ಷದ ರ್ಯಾಲಿಯಲ್ಲೂ ಭಾಗವಹಿಸಿ ‘ಲಾಲ್ ಜೆಂಡಾ ಜಿಂದಾಬಾದ್’ ಎಂದು ಕೂಗಿ ಬಂದರು. ಆದರೆ ಇಂಥ ಎಷ್ಟೋ ಜನರನ್ನು ನೋಡಿದ ಕಮ್ಯುನಿಸ್ಟರು ಗೌಡರ ಬಲೆಗೆ ಬೀಳಲಿಲ್ಲ. ಈ ಸಂದರ್ಭದಲ್ಲೇ ಹಾಸನಕ್ಕೆ ಬಂದಿದ್ದ ಸಿಪಿಎಂ ನಾಯಕ ಸೀತಾರಾಮ ಯೆಚೂರಿ ದೇವೇಗೌಡ- ಮುಲಾಯಂ ಸಿಂಗ್‌ರನ್ನು ನಂಬಿ ನಾವು ರಾಜಕಾರಣ ಮಾಡುವುದಿಲ್ಲ’ ಎಂದು ಹೇಳಿ ಬಿಟ್ಟರು. ಈ ಚುನಾವಣೆಯಲ್ಲಿ ತಟಸ್ಥ ನಿಲುವು ತಾಳಿದ ಎಡಪಕ್ಷಗಳು ಕಾಂಗ್ರೆಸ್ ಗೆಲುವಿಗೆ ಹಸಿರು ನಿಶಾನೆ ತೋರಿಸಿದವು.
ಇನ್ನೊಂದೆಡೆ ಬಿಜೆಪಿ ಜೊತೆ ಗುಟ್ಟುಗುಟ್ಟಾಗಿ ಅನೈತಿಕ ಸಂಬಂಧ ಬೆಳೆಸಿದ ಜೆಡಿಎಸ್ ವಿರುದ್ಧ ಮುಸ್ಲಿಂ ಅಲ್ಪಸಂಖ್ಯಾತರು ತಿರುಗಿ ಬಿದ್ದರು. ಬೆಂಗಳೂರು ಗ್ರಾಮಾಂತರ ಮತ್ತು ಮಂಡ್ಯ ಕ್ಷೇತ್ರಗಳಲ್ಲಿ ಶೇ.30ರಷ್ಟಿರುವ ಅಲ್ಪಸಂಖ್ಯಾತರು ಈ ಅಪವಿತ್ರ ಮೈತ್ರಿಯನ್ನು ಸೋಲಿಸಲು ಪಣ ತೊಟ್ಟರು. ಇವರೊಂದಿಗೆ ಹಿಂದುಳಿದ ದಲಿತ ಸಮುದಾಯದ ಮತಗಳು ಒಟ್ಟುಗೂಡಿ ದವು. ಒಕ್ಕಲಿಗರು, ಲಿಂಗಾಯತರು ಸೇರಿ ಮೇಲ್ಜಾತಿಯ ಮತಗಳೂ ಹಸ್ತದ ಗುರುತಿಗೆ ಹರಿದು ಬಂದವು. ಇದೆಲ್ಲದರ ಒಟ್ಟು ಲಾಭ ಕಾಂಗ್ರೆಸ್ಸಿಗೆ ಆಯಿತು.
ದೇಶದ ಇತರ ಭಾಗಗಳಂತೆ ಕರ್ನಾಟಕದಲ್ಲೂ ಕಾಂಗ್ರೆಸ್ ಮತ್ತು ಬಿಜೆಪಿಗಳೆರಡನ್ನು ಇಷ್ಟಪಡದ ತೃತೀಯ ಪರ್ಯಾಯವನ್ನು ಬಯಸುವ ಮತದಾರರು ದೊಡ್ಡ ಸಂಖ್ಯೆಯಲ್ಲಿದ್ದಾರೆ. ಅಂಥವರು ಹಿಂದೆ ಜನತಾ ಪರಿವಾರ ವನ್ನ್ನೂ ಚುನಾಯಿಸುತ್ತಿದ್ದರು. ಈಗ ಜೆಡಿಎಸ್ ನಲ್ಲಿ ಅಂಥ ಪರ್ಯಾಯ ಕಂಡಿದ್ದರು. ಆದರೆ ಕುಮಾರಸ್ವಾಮಿ ಸಂಘ ಪರಿವಾರಕ್ಕೆ ಸರಂಡರ್ ಆಗಿ ಮೂರನೆ ಪರ್ಯಾಯದ ಅವಕಾಶವನ್ನು ಹಾಳು ಮಾಡಿದರು. ತಾನೂ ಹಾಳಾಗಿ ಹೋದರು.
ಬಿಜೆಪಿಯೊಂದಿಗೆ ಕೈಜೋಡಿಸಿ ನಾವು ಕೈಸುಟ್ಟುಕೊಂಡೆವು ಎಂದು ಹಿರಿಯ ಸೋಷಲಿಸ್ಟ್ ನಾಯಕ ಮಧುಲಿಮೆಯ ಮೂವತ್ತು ವರ್ಷಗಳ ಹಿಂದೆಯೇ ಹೇಳಿದ್ದರು. ಯಾವುದೋ ಕಾಲದ ಕಾಂಗ್ರೆಸ್ ವಿರೋಧಿ ಸಿದ್ಧಾಂತ ನಂಬಿ ತಮ್ಮ ಪಕ್ಷವನ್ನು ಜನಸಂಘದ ಜೊತೆ ಜನತಾ ಪಕ್ಷದಲ್ಲಿ ವಿಲೀನಗೊಳಿಸಿದ್ದ ಸೋಷಲಿಸ್ಟರು ತಮ್ಮ ರಾಜಕೀಯ ಅಸ್ತಿತ್ವವನ್ನು ಕಳೆದುಕೊಂಡರು. ಪ್ರತ್ಯೇಕವಾಗಿ ತನ್ನ ಅಸ್ತಿತ್ವ ಉಳಿಸಿಕೊಂಡು 1977ರಲ್ಲಿ ಜನತಾ ಸರಕಾರ ವನ್ನೇ ನಿಯಂತ್ರಿಸಿದ ಆರೆಸ್ಸೆಸ್ ಮುಂದೆ ಬಿಜೆಪಿ ಎಂಬ ಹೆಸರಿನಲ್ಲಿ ಹೊಸ ಪಕ್ಷ ಕಟ್ಟಿ ಕೇಂದ್ರದ ಅಧಿಕಾರ ಸೂತ್ರ ಹಿಡಿಯಿತು.
ಆ ಸನ್ನಿವೇಶದಲ್ಲಿ ಮಧುಲಿಮೆ ಈ ಮಾತನ್ನು ಆಡಿದ್ದರು.ಸಂಘಪರಿವಾರದ ಅಂದರೆ ಬಿಜೆಪಿ ಜೊತೆಗೆ ಕೈಗೂಡಿಸಿದ ಯಾವ ಪಕ್ಷವೂ ತನ್ನ ಅಸ್ತಿತ್ವ ಉಳಿಸಿಕೊಂಡಿಲ್ಲ. ಕರ್ನಾಟಕದಲ್ಲೆ ಒಂದು ರಾಜಕೀಯ ಶಕ್ತಿಯಾಗಿದ್ದ ಬಂಗಾರಪ್ಪ ಬಿಜೆಪಿ ಜೊತೆ ಸೇರಿ ಕೊನೆಗೆ ತಮ್ಮ ನೆಲೆಯನ್ನೇ ಕಳೆದುಕೊಂಡು ಪಶ್ಚಾತ್ತಾಪದ ಸಂಕಟದಲ್ಲೇ ಕೊನೆಯುಸಿರೆಳೆದರು. ಇದು ಒಂದು ಉದಾಹರಣೆ ಮಾತ್ರ. ಎಲ್.ಜಿ.ಹಾವನೂರು, ಬಾಬಾಗೌಡ ಪಾಟೀಲ ಹೀಗೆ ಅನೇಕರನ್ನು ಬಳಸಿಕೊಂಡು ಉಂಡೊಗೆದ ಎಲೆಗಳಂತೆ ಬಿಸಾಡಿದ ವಿದ್ರೋಹದ ಪರಂಪರೆ ಸಂಘಪರಿವಾರದ್ದು. ಇಂಥ ವಂಚನೆಯ ಬಲೆಯಲ್ಲಿ ಈ ಜೆಡಿಎಸ್ ಈಗ ಸಿಕ್ಕು ವಿಲಿವಿಲಿ ಒದ್ದಾಡುತ್ತಿದೆ.
ಕಾಂಗ್ರೆಸ್ ವಿರೋಧದ ಹೆಸರಿನಲ್ಲಿ ಆರೆಸ್ಸೆಸ್ ಜೊತೆಗೆ ಸೇರುವುದನ್ನು ಹಿರಿಯ ಸೋಷಲಿಸ್ಟ್ ನಾಯಕರಾಗಿದ್ದ ಶಾಂತವೇರಿ ಗೋಪಾಲಗೌಡರು ಮತ್ತು ನೀಲಗಂಗಯ್ಯ ಪೂಜಾರ್ ಕಟುವಾಗಿ ವಿರೋಧಿಸುತ್ತಿದ್ದರು. ಆದರೆ ಜಾರ್ಜ್ ಫೆರ್ನಾಂಡಿಸ್‌ರಂಥವರು ರಾತ್ರಿ ಕಂಡ ಬಾವಿಯಲ್ಲಿ ಹಗಲಲ್ಲೆ ಹೋಗಿ ಬಿದ್ದರು. ಇದೆಲ್ಲ ಗೊತ್ತಿದ್ದೇ ದೇವೇಗೌಡರು ಬಿಜೆಪಿ ಜೊತೆಗೆ ಸೇರಲು ಹಿಂದೇಟು ಹಾಕಿದರು. ಆದರೆ ಪುತ್ರ ವ್ಯಾಮೋಹದಿಂದಾಗಿ ಅವರೂ ಅದೇ ಹಾಳು ಬಾವಿಗೆ ಬಿದ್ದರು. ಇದೆಲ್ಲದರ ಒಟ್ಟು ಪರಿಣಾಮ ಅಂದರೆ ಲೋಹಿಯಾ ಕಾಲದ ಸೋಷಲಿಸ್ಟ್ ಪಾರ್ಟಿ ಅಸ್ತಿತ್ವ ಕಳೆದುಕೊಂಡಂತೆ ದೇವೇಗೌಡರ ಜಾತ್ಯತೀತ ಜನತಾದಳವೂ ಈಗ ತಾನಾಗಿ ತನ್ನ ಕಾಲ ಮೇಲೆ ಕಲ್ಲು ಹಾಕಿಕೊಂಡಿದೆ.
ಈ ಹಿಂದೆ ಜ್ಯೋತಿ ಬಸು ಪ್ರಧಾನಿಯಾಗಲು ನಿರಾಕರಿಸಿದಾಗ ದೇವೇಗೌಡರನ್ನು ಪ್ರಧಾನಿಯನ್ನಾಗಿ ಮಾಡಿದ್ದು ಕಮ್ಯುನಿಸ್ಟರು. ಈಗ ಕಮ್ಯುನಿಸ್ಟರು ಗೌಡರಿಂದ ದೂರವಾಗಿದ್ದಾರೆ. ಜೆಡಿಎಸ್ ರಾಜ್ಯದಲ್ಲಿ ಇಷ್ಟೊಂದು ಬಲಶಾಲಿಯಾಗಲು ಕಾರಣ ಅಲ್ಪಸಂಖ್ಯಾತರು. ಈಗ ಆ ಸಮುದಾಯವೂ ದೂರವಾಗಿದೆ. ತಮ್ಮ ವ್ಯಕ್ತಿತ್ವದಿಂದ ಪಕ್ಷಕ್ಕೆ ಒಂದು ಘನತೆ ತಂದು ಕೊಟ್ಟಿದ್ದ ವಿಧಾನಸಭೆ ಮಾಜಿ ಸ್ಪೀಕರ್ ಕೆ.ಆರ್.ಪೇಟೆ ಕೃಷ್ಣ, ನಾರಾಯಣ ಸ್ವಾಮಿ, ಮುದ್ದು ಹನುಮೇಗೌಡರಂಥವರು ಗೌಡರ ನಂಟು ಕಡಿದುಕೊಂಡಿದ್ದಾರೆ.
ಹೀಗೆ ಸಂಘಪರಿವಾರ ಅತ್ಯಂತ ವ್ಯವಸ್ಥಿತವಾಗಿ ಜೆಡಿಎಸ್‌ನ್ನು ದುರ್ಬಲಗೊಳಿಸಿ ರಾಜ್ಯದಲ್ಲಿ ಮೂರನೆಯ ರಂಗವೊಂದು ಅಸ್ತಿತ್ವಕ್ಕೆ ಬರುವುದನ್ನು ತಡೆಯುವಲ್ಲಿ ಯಶಸ್ವಿಯಾಗಿದೆ. ಈಗ ಕಾಂಗ್ರೆಸ್ ಎದುರಾಗಿ ತಾನು ಮಾತ್ರ ಉಳಿಯಬೇಕೆಂಬ ಬಿಜೆಪಿ ತಂತ್ರ ಫಲಿಸಿದೆ.ಈ ಸನ್ನಿವೇಶದಲ್ಲಿ ಮೋದಿಯನ್ನು ಮುಂದಿಟ್ಟುಕೊಂಡು ದೇಶದ ಅಧಿಕಾರಸೂತ್ರ ಹಿಡಿಯಲು ಸಂಘಪರಿವಾರ ಷಡ್ಯಂತ್ರ ರೂಪಿಸಿದೆ. ಈ ಷಡ್ಯಂತ್ರವನ್ನು ವಿಫಲಗೊಳಿಸುವುದು ಸೌಹಾರ್ದತೆ ಬಯಸುವ ಎಲ್ಲರ ಜವಾಬ್ದಾರಿಯಾಗಿದೆ.ಈ ಫ್ಯಾಸಿಸ್ಟ್ ಶಕ್ತಿಯನ್ನು ಸೋಲಿಸುವುದೇ ಪ್ರಗತಿಪರರ ಮೊದಲ ಆದ್ಯತೆಯಾಗಬೇಕಾಗಿದೆ. ಇಂಥ ಸಂದರ್ಭದಲ್ಲಿ ಜೆಡಿಎಸ್‌ನಂಥ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕಾಗಿದೆ.  varthabharati

Leave a Reply