೧೮ನೇ ಕವಿಸಮಯದಲ್ಲೊಂದು ಪ್ರಯೋಗ : ಮೆಚ್ಚುಗೆಗೆ ಪಾತ್ರವಾದ ಅಶುಕವಿತೆ ರಚನೆ

ಕೊಪ್ಪಳ : ಕವಿಸಮೂಹ ಕನ್ನಡನೆಟ್.ಕಾಂ ನಗರದ ಪ್ರವಾಸಿ ಮಂದಿರದಲ್ಲಿ ಹಮ್ಮಿಕೊಂಡಿದ್ದ ಕವಿಸಮಯದಲ್ಲಿ ಹೊಸದೊಂದು ಪ್ರಯೋಗ ಮಾಡಲಾಯಿತು. ಸ್ಥಳದಲ್ಲಿಯೇ ಕವನ ರಚನೆ ಮಾಡುವಂತಹ ಅಶುಕವಿತೆ ರಚನೆ ಕಾರ್‍ಯಕ್ರಮ. ವಿವಿದ ವಿಷಯಗಳ ಬಗ್ಗೆ ಚೀಟಿಯಲ್ಲಿ ಬರೆದು ನಂತರ ಆಯಾ ಕವಿಗಳಿಗೆ ಹಂಚಲಾಯಿತು. ಚೀಟಿಯಲ್ಲಿ ಬಂದಂತಹ ವಿಷಯದ ಬಗ್ಗೆ ಕವನ ರಚಿಸಲು ಕವಿಗಳಿಗೆ ಸೂಚಿಸಲಾಯಿತು. ಸುಮಾರು ೨೦ ನಿಮಿಷ ಸಮಯಾವಕಾಶ ನೀಡಲಾಗಿತ್ತು. ಅತ್ಯುತ್ತಮ ಎನ್ನಬಹುದಾದಂತಹ ಕವನಗಳ ರಚನೆಯಾಯಿತು. ಈ ಪ್ರಯೋಗ ಎಲ್ಲ ಕವಿಗಳಿಗೂ ಖುಷಿ ನೀಡುವುದರ ಜೊತೆ ರಚಿತವಾದ ಕವನಗಳನ್ನು ವಿಮರ್ಶಕರಾಗಿದ್ದ ವಿ.ಬಿ.ರಡ್ಡೇರ್ ಬಹಳ ಮೆಚ್ಚಿಕೊಂಡು ವಿಮರ್ಶೆ ಮಾಡಿದರು.
ಸಾಹಿತ್ಯ ಯಾವತ್ತೂ ಜೀವನ ಪ್ರೀತಿ ಬೆಳೆಸುತ್ತದೆ, ಕವನದಲ್ಲಿ ಎಷ್ಟೇ ರೋಷ, ಆವೇಶ , ನಿರಾಸೆ ಇದ್ದರೂ ಕೊನೆಯಲ್ಲಿ ಬದುಕಿನ ಬಗ್ಗೆ ಆಶಾಭಾವನೆ ಬಿತ್ತುವುದು ಕವಿತೆಯ ಜೀವನ ಪ್ರೀತಿಗೆ ಉದಾಹರಣೆ. ಹಲವಾರು ವಿಷಯಗಳ ಬಗ್ಗೆ ಕವನ ರಚಿಸಿದ ಕವಿಗಳು ತಮಗೆ ಕೊಟ್ಟಂತಹ ವಿಷಯದ ಬಗ್ಗೆ ಸಮರ್ಥವಾಗಿ ಕವನ ರಚಿಸಿದ್ದಾರೆ. ಕೆಲವು ಕವನಗಳಲ್ಲಿ ವಾಚ್ಯ ಎನಿಸುವಂತಹ ರಚನೆ ಇದ್ದರೂ ಸಹ ಸ್ಥಳದಲ್ಲಿಯೇ ಕವನ ರಚಿಸುವುದು ನಿಜಕ್ಕೂ ಪ್ರಶಂಸನೀಯ ಎಂದು ಕವನಗಳ ಕುರಿತು ಮಾತನಾಡಿದ ಸಾಹಿತಿ ವಿ.ಬಿ.ರಡ್ಡೇರ್ ಹೇಳಿದರು. ಕವಿಸಮಯದಲ್ಲಿ ಈ ರೀತಿಯ ಹೊಸ ಹೊಸ ಪ್ರಯೋಗಗಳು ನಡೆಯುತ್ತಿರಲಿ ಇದರಿಂದ ಬರೆಯುವವರಿಗೆ ಹೊಸ ಸ್ಪೂರ್ತಿ ಸಿಗುವಂತಾಗಲಿ ಎಂದು ಆಶಿಸಿದರು.
ಅಶುಕವಿತೆಯಲ್ಲಿ ಈ ಕೆಳಗಿನ ಕವಿಗಳು ಕವನ ವಾಚನ ಮಾಡಿದರು. ವೀರಣ್ಣ ಹುರಕಡ್ಲಿ- ಹುಟ್ಟು,ಸಾವು, ಜಿ.ಎಸ್.ಬಾರಕೇರ- ರಾಜಕೀಯ, ಗಂಗಾಧರ ಖಾನಾಪೂರ- ಜಿಲ್ಲಾ ಸಮಸ್ಯೆ,ನನ್ನದಲ್ಲ ತಪ್ಪು, ಎ.ಪಿ.ಅಂಗಡಿ- ಪ್ರೇಮ, ಮಹೇಶ ಬಳ್ಳಾರಿ – ನಗರ ಸಮಸ್ಯೆ, ಅಲಿ ನವಾಜ್ – ಸಮಕಾಲೀನ ಸಮಸ್ಯೆ, ಶಿವಪ್ರಸಾದ ಹಾದಿಮನಿ- ಬಡತನದ ಬದುಕು, ಶ್ರೀನಿವಾಸ ಚಿತ್ರಗಾರ- ಗರಿಕೆ ನಿಸರ್ಗ, ಮೆಹಮುದಮಿಯ- ಹಸಿರು ನಿಸರ್ಗ, ರಂಗನಾಥ- ದಲಿತರು, ಡಾ.ಮಹಾಂತೇಶ ಮಲ್ಲನಗೌಡರ- ಅಸ್ಪೃಶ್ಯರು, ಲಕ್ಷ್ಮೀ -ದೇಶಾಭಿಮಾನ, ಶಾಂತಾದೇವಿ ಹಿರೇಮಠ- ನೆನಪು, ಪುಷ್ಪಲತಾ ಏಳುಬಾವಿ- ಬಂಡಾಯ, ಸಿರಾಜ್ ಬಿಸರಳ್ಳಿ- ನಾಡು ನುಡಿ, ಹನುಮಪ್ಪ ಬಾರಕೇರ-ಸ್ತ್ರೀ, ಬಿ.ಸಿ.ಪಾಟೀಲ- ಎತ್ತಿಕೊಳ್ಳಿರಿ ಹೂವ ಎಂಬ ಕವಿತೆಗಳನ್ನು ವಾಚಿಸಿದರು.
ಕವಿಸಮೂಹದ ಸಿರಾಜ್ ಬಿಸರಳ್ಳಿ ಕಾರ್‍ಯಕ್ರಮ ನಡೆಸಿಕೊಟ್ಟರು. ಮುಂದಿನ ವಾರ ಎ.ಪಿ.ಅಂಗಡಿಯವರ ಮಗ್ಗಿಮಾಮನ ಹಾಡುಗಳು ಕುರಿತು ಸಂವಾದ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿದೆ. ಕವಿಸಮಯದಲ್ಲಿ ಹಿರಿಯ ಪತ್ರಕರ್ತ ಬಸವರಾಜ ಶೀಲವಂತರ ಮತ್ತಿತರರು ಉಪಸ್ಥಿತರಿದ್ದರು.
Please follow and like us:
error