ಗ್ರಾಮ ಸಡಕ್ ಯೋಜನೆ : ಗುಣಮಟ್ಟ ಕಾಯ್ದುಕೊಳ್ಳಲು ಸಂಸದ ಶಿವರಾಮಗೌಡ ಸೂಚನೆ

ಕೊಪ್ಪಳ ಮೇ. L ಜಿಲ್ಲೆಯಲ್ಲಿ ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಕೈಗೊಳ್ಳಲಾಗುತ್ತಿರುವ ಗ್ರಾಮೀಣ ರಸ್ತೆ ಡಾಂಬರೀಕರಣ ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸಂಸದ ಶಿವರಾಮಗೌಡ ಅವರು ಸಂಬಂಧಪಟ್ಟ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಜಿಲ್ಲಾ ಮಟ್ಟದ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಪ್ರಧಾನಮಂತ್ರಿ ಗ್ರಾಮ ಸಡಕ್ ಯೋಜನೆಯಡಿ ಜಿಲ್ಲೆಯಲ್ಲಿ ಕೈಗೊಳ್ಳಲಾತ್ತಿರುವ ಗ್ರಾಮೀಣ ರಸ್ತೆಗಳ ಡಾಂಬರೀಕರಣ ಕಾಮಗಾರಿ ಕಳಪೆ ಗುಣಮಟ್ಟ ಹೊಂದಿದೆ ಎಂಬ ದೂರುಗಳು ಕೇಳಿಬರುತ್ತಿವೆ. ಒಂದು ವೇಳೆ ಕಾಮಗಾರಿ ಕಳಪೆಯಾಗಿರುವುದು ಕಂಡುಬಂದಲ್ಲಿ, ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲು ಶಿಫಾರಸು ಮಾಡಲಾಗುವುದು. ಯಾವುದೇ ಕಾರಣಕ್ಕೂ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳುವಂತಿಲ್ಲ. ಗ್ರಾಮೀಣ ಜನರಿಗೆ ಉತ್ತಮ ರಸ್ತೆ ಸೌಲಭ್ಯ ದೊರೆಯಬೇಕೆನ್ನುವುದು ಸರ್ಕಾರದ ಆಶಯವಾಗಿದೆ ಎಂದರು.
ಜಿಲ್ಲೆಯ ಅನೇಕ ಶಾಲೆಗಳ ಕಟ್ಟಡಗಳು ಭಾಗಶಃ ಬಿದ್ದಿರುವುದು, ಸೋರುತ್ತಿರುವುದು, ಶಿಥಿಲಾವಸ್ಥೆ ಹೊಂದಿರುವುದನ್ನು ಗಮನಿಸಿಕೊಂಡು ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಆದ್ಯತೆ ಮೇರೆಗೆ ಇಂತಹ ಶಾಲಾ ಕಟ್ಟಡಗಳನ್ನು ದುರಸ್ಥಿಗೊಳಿಸಬೇಕು. ಮಕ್ಕಳಿಗೆ ಯಾವುದೇ ಹಾನಿಯಾಗದಂತೆ ಕಟ್ಟಡಗಳು ಸುಸಜ್ಜಿತವಾಗಿರಬೇಕು. ಸರ್ವ ಶಿಕ್ಷಣ ಅಭಿಯಾನ ಯೋಜನೆಯಡಿ ಕಳೆದ ಎರಡು ವರ್ಷಗಳಲ್ಲಿ ಬಂದ ಅನುದಾನ, ಖರ್ಜಾದ ಅನುದಾನದ ವಿವರ ಸಾರ್ವಜನಿಕರಿಗೆ ದೊರೆಯುವಂತಾಗಬೇಕು ಎಂದು ಸರ್ವ ಶಿಕ್ಷಣ ಅಭಿಯಾನ ಯೋಜನೆಯ ಉಪಸಮನ್ವಯಾಧಿಕಾರಿಗಳಿಗೆ ಸೂಚನೆ ನೀಡಿದರು.
ಸಂಪೂರ್ಣ ಸ್ವಚ್ಛತಾ ಆಂದೋಲನ ಯೋಜನೆಯಡಿ ಜಿಲ್ಲೆಯ ಎಲ್ಲ ಶಾಲೆಗಳು, ಅಂಗನವಾಡಿ ಕೇಂದ್ರಗಳಲ್ಲಿ ಕಡ್ಡಾಯವಾಗಿ ಶೌಚಾಲಯ ನಿರ್ಮಿಸಬೇಕಾಗಿದೆ. ಅಲ್ಲದೆ ವಯಕ್ತಿಕ ಶೌಚಾಲಯದ ಕಡೆಗೂ ಇಲಾಖೆ ಗಮನವನ್ನು ಕೇಂದ್ರೀಕರಿಸಿ, ಎಲ್ಲ ಗ್ರಾಮ ಪಂಚಾಯತಿಗಳೂ ನಿರ್ಮಲ ಗ್ರಾಮ ಪುರಸ್ಕಾರಕ್ಕೆ ಆಯ್ಕೆಯಾಗುವ ರೀತಿಯಲ್ಲಿ ಜನರನ್ನು ಮನವೊಲಿಸಿ, ಯೋಜನೆಯ ಯಶಸ್ವಿಗೆ ಶ್ರಮಿಸುವಂತೆ ಅಧಿಕಾರಿಗಳಿಗೆ ತಿಳಿಸಿದರು.
ಗ್ರಾಮೀಣ ಭಾಗಗಳಲ್ಲಿ ವೈದ್ಯರ ಕೊರತೆಯಿಂದ ಸಾರ್ವಜನಿಕರು ತೊಂದರೆ ಅನುಭವಿಸುವಂತಾಗಿದ್ದು, ಜಿಲ್ಲೆಯಲ್ಲಿ ಖಾಲಿ ಇರುವ ವೈದ್ಯರ ಹುದ್ದೆಗಳನ್ನು ಭರ್ತಿ ಮಾಡಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳಿಗೆ ಸಂಸದ ಶಿವರಾಮಗೌಡ ಅವರು ಸೂಚನೆ ನೀಡಿದರು.
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಸಿ.ಬಿ. ಬಸವರಾಜ್ ಅವರು ಮಾತನಾಡಿ, ಜಿಲ್ಲೆಯಲ್ಲಿ ೧೭ ಸಾಮಾನ್ಯ ಕರ್ತವ್ಯ ನಿರತ ವೈದ್ಯರ ಕೊರತೆ ಇದೆ. ಎಂಬಿಬಿಎಸ್ ಪಾಸ್ ಆಗಿರುವ ಯಾವುದೇ ವೈದ್ಯರು ನೇರವಾಗಿ ಆರೋಗ್ಯ ಇಲಾಖೆಗೆ ಸಂಪರ್ಕಿಸಿದಲ್ಲಿ, ಅಂತಹ ವೈದ್ಯರಿಗೆ ತಕ್ಷಣವೇ ನೇಮಕಾತಿ ಆದೇಶ ನೀಡಿ, ನೇಮಕ ಮಾಡಿಕೊಳ್ಳಲಾಗುವುದು ಎಂದು ವಿವರಿಸಿದರು.
ಸಭೆಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಜಿಲ್ಲೆಯ ಯಲಬುರ್ಗಾ ತಾಲೂಕಿನಲ್ಲಿ ದೊಡ್ಡ ಹಳ್ಳಗಳು ಹರಿಯುತ್ತಿದ್ದು, ಇಂತಹ ಹಳ್ಳಗಳ ನೀರನ್ನು ಬಳಸಿಕೊಂಡು ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಎಲ್ಲೆಲ್ಲಿ ಹಾಗೂ ಎಷ್ಟು ಚೆಕ್ ಡ್ಯಾಂ ನಿರ್ಮಿಸುವುದು ಸೂಕ್ತ ಎಂಬುದರ ಬಗ್ಗೆ ಸರ್ವೆ ನಡೆಸಿ, ಒಂದು ವಾರದೊಳಗೆ ವರದಿ ಸಲ್ಲಿಸುವಂತೆ ಜಿಲ್ಲಾ ಜಲಾನಯನ ಅಭಿವೃದ್ಧಿ ಅಧಿಕಾರಿಗಳಿಗೆ ತಿಳಿಸಿದರು.
ಸಭೆಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಚ್. ಮೂರ್ತಿ, ಜಿಲ್ಲಾ ಜಾಗೃತ ಮತ್ತು ಉಸ್ತುವಾರಿ ಸಮಿತಿ ಸದಸ್ಯರುಗಳಾದ ಸುನಂದಾ, ಮೇರಿ ಮ್ಯಾಥ್ಯೂ ಸೇರಿದಂತೆ ಜಿಲ್ಲಾ ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಭಾಗವಹಿಸಿದ್ದರು.

Please follow and like us:
error