ಈ ಘೋರ ವೌನದ ನಡುವೆ ಭರವಸೆಯ ದನಿ

img7 ಕೇಂದ್ರದಲ್ಲಿ ಸಂಘಪರಿವಾರದ ನರೇಂದ್ರ ಮೋದಿ ಅಧಿಕಾರಕ್ಕೆ ಬಂದ ನಂತರ ಪ್ರಗತಿಪರ ವಲಯಗಳಲ್ಲಿ ಅಸಹನೀಯವಾದ ಘೋರ ವೌನವೊಂದು ಕವಿದಿದೆ. ಈ ವೌನವನ್ನೇ ಅಸಹಾಯಕತೆ ಅಂದುಕೊಂಡು ನಮೋ- ಗೋಡ್ಸೆ ಗ್ಯಾಂಗಿನ ಅಬ್ಬರ ತೀವ್ರಗೊಂಡಿದೆ. ಹಿರಿಯರಾದ ಸಾಹಿತಿ ಡಾ.ಯು.ಆರ್. ಅನಂತಮೂರ್ತಿ ಮತ್ತು ಡಾ.ಎಂ.ಎಂ. ಕಲಬುರ್ಗಿಯವರನ್ನು ನ್ಯಾಯಾಲಯದ ಕಟಕಟೆಗೆ ತಂದು ನಿಲ್ಲಿಸುವ ಯತ್ನ ನಡೆದಿದೆ. ಇವರ ಕಿರಿಕಿರಿಗೆ ಖ್ಯಾತ ಕಲಾವಿದ ಎಂ.ಎಫ್.ಹುಸೈನ್ ದೇಶವನ್ನೇ ತೊರೆದು ಹೋದರು. ಇಂಥ ಸನ್ನಿವೇಶದಲ್ಲಿ ಈ ಕರಾಳ ವೌನವನ್ನು ಭೇದಿಸುವ ಯತ್ನವೊಂದು ಕಳೆದ ವಾರ ಮೈಸೂರಿನಲ್ಲಿ ನಡೆಯಿತು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಇಂಥ ಅವಕಾಶವೊಂದನ್ನು ಕಲ್ಪಿಸಿತ್ತು.

 ಈ ಅಸಹನೀಯ ವೌನದ ತಿಂಗಳ ನಂತರ ಮೈಸೂರಿನಲ್ಲಿ ನಡೆದ ಅಧ್ಯಯನ ಶಿಬಿರದ ಹತ್ತು ಗೋಷ್ಠಿಗಳಿಗೆ ನಾನು ಸಾಕ್ಷಿ ಯಾಗಿದ್ದೆ. ಎರಡರಲ್ಲಿ ಪಾಲ್ಗೊಂಡಿದ್ದೆ. ಡಾ.ಸಿದ್ದಲಿಂಗಯ್ಯ, ಇಂದಿರಾ ಕೃಷ್ಣಪ್ಪ, ಜನಾರ್ದನ (ಜನ್ನಿ), ಡಾ.ಎಸ್. ತುಕಾರಾಮ್, ಟಿ.ಎನ್.ಪ್ರಕಾಶ್ ಕಮ್ಮರಡಿ, ಪ್ರೊ.ಕೆ.ಎಸ್.ಭಗವಾನ್, ಅನುಸೂಯಾ ಕಾಂಬಳೆ, ಡಾ.ಮುಝಾಫರ್ ಅಸ್ಸಾದಿ, ಡಾ.ಕಾಳೆಗೌಡ ನಾಗವಾರ್, ಡಾ.ಹಿ.ಶಿ.ರಾಮಚಂದ್ರೇಗೌಡ, ಜಿ.ಕೆ.ಗೋವಿಂದ ರಾವ್ ಹೀಗೆ ನಾಡಿನ ಚಿಂತಕರೆಲ್ಲ ಸಂಪನ್ಮೂಲ ವ್ಯಕ್ತಿಗಳಾಗಿ ಬಂದು ಮಾತಾಡಿದರು.
ಹಳೆಯ ಕಡತಗಳ ನಾಶಕ್ಕೆ ಮೋದಿ ಆದೇಶ;ಭಾರತದ ಇತಿಹಾಸದ ತುಣುಕುಗಳು ಶಾಶ್ವತವಾಗಿ ಮರೆಯಾಗಲಿವೆಯೇ?ಸಾಹಿತಿಗಳು, ಚಿಂತಕರು ಮಾತ್ರವಲ್ಲ ಸಚಿವರಾದ ಎಚ್.ಸಿ.ಮಹಾದೇವಪ್ಪ, ಸತೀಶ್ ಜಾರಕಿಹೊಳಿ, ಸಂಸದ ಧ್ರುವನಾರಾಯಣ ಕೂಡ ಶಿಬಿರದಲ್ಲಿ ಪಾಲ್ಗೊಂಡು ಮಾತಾಡಿದರು. ದೇವನೂರು ಮಹಾದೇವ ಕೂಡ ಕೊನೆಯ ದಿನ ಬಂದು ಹೋದರು. ಶಿಬಿರದಲ್ಲಿ ಮಾತಾಡಿದ ಎಲ್ಲರೂ ಒಂದಿಲ್ಲೊಂದು ರೀತಿಯಲ್ಲಿ ನರೇಂದ್ರ ಮೋದಿ ಕೈಯಲ್ಲಿ ಸಿಲುಕಿದ ಭಾರತದ ಬಗ್ಗೆ ಆತಂಕದಿಂದಲೇ ತಮ್ಮ ಅನಿಸಿಕೆ ವ್ಯಕ್ತಪಡಿಸಿ ದರು. ಲಕ್ಷ್ಮೀನಾರಾಯಣ ನಾಗವಾರರಂತೂ ಪ್ರತೀ ಗೋಷ್ಠಿಯ ಆರಂಭದಲ್ಲೂ ಮೋದಿ ಅಪಾಯದ ಬಗ್ಗೆ ಎಚ್ಚರಿಸುತ್ತಿದ್ದರು.
ದಲಿತ, ಪ್ರಗತಿಪರ ಸಂಘಟನೆಗಳ ಒಡಕು ಕೋಮುವಾದಿ ಶಕ್ತಿಗಳ ಗೆಲುವಿಗೆ ಕಾರಣ. ನಾವು ಈಗ ಒಂದಾಗಬೇಕು ಎಂಬ ಕಳಕಳಿ ಶಿಬಿರದಲ್ಲಿ ಪಾಲ್ಗೊಂಡ ಎಲ್ಲರಲ್ಲೂ ಕಂಡು ಬಂತು. ದೇವನೂರು ಮಹಾದೇವ, ಸಿದ್ದಲಿಂಗಯ್ಯ, ಪ್ರೊ.ಕೃಷ್ಣಪ್ಪ ಕಟ್ಟಿದ ದಲಿತ ಸಂಘರ್ಷ ಸಮಿತಿ ಮುಖ್ಯವಾಗಿ ಮೂರು ಬಣಗಳಾಗಿ ಒಡೆದಿದೆ. ಈ ಬಣಗಳೆಲ್ಲ ಒಂದುಗೂಡಬೇಕಿದೆ. ದೇವನೂರುರಂಥವರು ಮುಂದೆ ನಿಂತು ಈ ಬಣಗಳನ್ನು ಒಂದುಗೂಡಿಸಬೇಕಿದೆ ಎಂದು ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಲಕ್ಷ್ಮೀನಾರಾಯಣ ನಾಗವಾರ ಹೇಳಿದರು.
‘‘ದೇವನೂರು ಮಹಾದೇವ ಒಂದು ಗುಂಪಿಗೆ ಸೀಮಿತರಾಗದೆ ದಲಿತ ಚಳವಳಿಯನ್ನು ಒಗ್ಗೂಡಿಸಲು ಸಕ್ರಿಯವಾಗಿ ತೊಡಗಿಕೊಂಡರೆ ಹೆಗಲಿಗೆ ಹೆಗಲು ಕೊಡಲು ಸಿದ್ಧ’’ ಎಂದು ಕವಿ ಸಿದ್ದಲಿಂಗಯ್ಯ ಹೇಳಿದರು. ‘‘ದಲಿತ ಸಂಘಟನೆಗಳು ಕೇವಲ ದಲಿತರ ದನಿಯಾಗಬಾರದು. ಎಲ್ಲ ಜಾತಿಗಳ ಬಡವರ ದನಿಯಾಗಬೇಕಾಗಿದೆ. ದಲಿತೇತರಲ್ಲೂ ಶೋಷಣೆ, ಅಸಮಾನತೆ ಇದೆ. ಅವರ ನೋವಿಗೆ ಸ್ಪಂದಿಸಬೇಕಾಗಿದೆ’’ ಎಂದು ಸಿದ್ದಲಿಂಗಯ್ಯ ಹೇಳಿದರು.
ಸಿದ್ದಲಿಂಗಯ್ಯ ಮಾತನಾಡಲು ನಿಂತರೆ ನಗುವಿನ ಹೊನಲು ಹರಿಯದೇ ಇರುವು ದಿಲ್ಲ. ತಮ್ಮ ಭಾಷಣದಲ್ಲಿ ಅವರು ನಾಯಿ, ಹಸುವಿನ ಕತೆಯೊಂದನ್ನು ಹೇಳಿದರು. ತಮಿಳುನಾಡಿನಲ್ಲಿ ದಲಿತರು ಗಂಡು ನಾಯಿಗಳನ್ನು ಸಾಕುವ ಹಾಗಿಲ್ಲ ಎನ್ನುವ ಕಟ್ಟುಪಾಡು ಈ ಹಿಂದೆ ಇತ್ತು. ಗಂಡು ನಾಯಿ ಇತರರ ಹೆಣ್ಣು ನಾಯಿಯೊಂದಿಗೆ ಮಿಲನವಾಗಿ ಮರಿ ಹುಟ್ಟಿದರೆ ಅದು ಅಸ್ಪಶ್ಯವಾಗುತ್ತದೆ ಎಂಬುದು ಸವರ್ಣೀಯರ ಜಾತಿಗ್ರಸ್ಥ ಮನಸ್ಸು ಯೋಚಿಸಿತ್ತು ಎಂದರು.
ಅದೇ ರೀತಿ ಹಸುವೊಂದನ್ನು ತಂದ ದಲಿತ ಯುವಕನೊಬ್ಬನಿಗೆ ಅರ್ಚಕನೊಬ್ಬ ಸಿಕ್ಕು ದೇವರ ಹೆಸರಿನಲ್ಲಿ ಆತನ ತಲೆ ಕೆಡಿಸಿದ. ಹಸುವಿನ ಮುಂಭಾಗ ನಿನ್ನದು, ಹಿಂಭಾಗ ನನ್ನದು ಎನ್ನುವುದು ಅರ್ಚಕನ ಸಲಹೆ ಯಾಗಿತ್ತು. ದಲಿತ ಯುವಕ ಅದನ್ನು ಒಪ್ಪಿಕೊಂಡ. ಮುಂಭಾಗದ ಹಕ್ಕು ಹೊಂದಿದ ದಲಿತ ಯುವಕ ನಿತ್ಯವೂ ಹಸುವಿಗೆ ಆಹಾರ ನೀಡುತ್ತಿದ್ದ. ಆದರೆ ಹಾಲು ಪಡೆಯುವ ಹಕ್ಕು ಮಾತ್ರ ಹಿಂಭಾಗದ ಒಡೆತನ ಹೊಂದಿದ ಅರ್ಚಕನದು. ಹೀಗಿರುವಾಗ ಪ್ರಜ್ಞಾವಂತ ನೊಬ್ಬ ಹಳ್ಳಿಯ ದಲಿತ ಯುವಕನ ಬಳಿ ಬಂದು ಮುಂಭಾಗಕ್ಕೆ ಹೊಡೆಯುವಂತೆ ಸಲಹೆಕೊಟ್ಟ. ಅದರಂತೆ ದಲಿತ ಯುವಕ ಹಸುವಿನ ಮುಂಭಾಗಕ್ಕೆ ಹೊಡೆದಾಗ ಹಾಲು ಹಿಂಡಬೇಕಾದ ಹಸು ಅರ್ಚಕನ ಮುಖಕ್ಕೆ ಒಡೆಯಿತು’ ಎಂದು ಸಿದ್ದಲಿಂಗಯ್ಯ ಹೇಳಿ ಎಲ್ಲರನ್ನು ನಗಿಸಿದರು. ಕೊನೆಗೆ ಇಡಿ ಹಸುವನ್ನೇ ದಲಿತ ಯುವಕನಿಗೆ ಅರ್ಚಕ ಬಿಟ್ಟು ಕೊಟ್ಟನಂತೆ. ಇದು ತಮಾಷೆಯಾಗಿದ್ದರೂ ಭಾರತೀಯ ಸಾಮಾಜಿಕ ವ್ಯವಸ್ಥೆಯ ವಿರೂಪಕ್ಕೆ ಉದಾಹರಣೆಯಾಗಿದೆ.
ಈ ಅಧ್ಯಯನ ಶಿಬಿರದಲ್ಲಿ ಸಚಿವ ಸತೀಶ್ ಜಾರಕಿಹೊಳಿ ಮಾತು ಕೇಳಿ ಅಚ್ಚರಿಗೊಂಡೆ. ಮೂಢನಂಬಿಕೆ, ಕಂದಾಚಾರಗಳನ್ನು ಕೈಬಿಡಬೇಕೆಂದು ಕರೆ ನೀಡಿದ ಜಾರಕಿಹೊಳಿ, ಟಿವಿಗಳಲ್ಲಿ ಮುಂಜಾನೆ ಪ್ರಸಾರವಾಗುವ ‘ಜ್ಯೋತಿಷ್ಯ, ವಾಸ್ತು ಕಾರ್ಯಕ್ರಮ ನೋಡ ಬೇಡಿ. ಅಂಬೇಡ್ಕರ ಹೆಸರು ಹೇಳುವ ನೀವು (ದಲಿತ ಅಧಿಕಾರಿಗಳು) ನಿಮ್ಮ ಮನೆ ಗೃಹ ಪ್ರವೇಶ ಮಾಡುವಾಗ ಸತ್ಯನಾರಾಯಣ ಪೂಜೆಯನ್ನು ಏಕೆ ಮಾಡಿಸುತ್ತೀರಿ? ಪುರೋಹಿತ ರಿಗೆ ಯಾಕೆ ದಕ್ಷಿಣೆ ನೀಡುತ್ತೀರಿ’’ ಎಂದು ಪ್ರಶ್ನಿಸಿದರು. ನಮ್ಮ ಉತ್ತರ ಕರ್ನಾಟಕದ ನನ್ನ ಪಕ್ಕದ ಗೋಕಾಕ ತಾಲೂಕಿನ ಸತೀಶ್ ಜಾರಕಿಹೊಳಿ ಅವರ ಮಾತು ಕೇಳುವ ಮುನ್ನ ಅವರ ಬಗ್ಗೆ ನನ್ನ ಅಭಿಪ್ರಾಯ ಬೇರೆ ಆಗಿತ್ತು. ಆದರೆ ಡಿಎಸ್‌ಎಸ್ ಶಿಬಿರದಲ್ಲಿ ಅವರ ಮಾತುಗಳನ್ನು ಕೇಳಿದಾಗ ನನಗೆ ಎಪ್ಪತ್ತರ ದಶಕದ ಬಸವಲಿಂಗಪ್ಪನವರ ನೆನಪಾಯಿತು. ರಾಜಕೀಯದಲ್ಲಿ ಇಂಥವರು ಬೆಳೆದು ಬಂದರೆ ಪುರೋಹಿತಶಾಹಿ, ಕೋಮು ವಾದಿ ಶಕ್ತಿಗಳನ್ನು ಹಿಮ್ಮೆಟ್ಟಿಸಬಹುದು.
 ಮೂರು ದಿನಗಳ ಈ ಶಿಬಿರದಲ್ಲಿ ಅನೇಕ ಹಳೆ ಮುಖಗಳ ಜೊತೆ ಮೂವತ್ತರೊಳಗಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು. ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಿಂದ 300 ಕಾರ್ಯಕರ್ತರು ಬಂದಿದ್ದರು. ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಸಂಚಾಲಕ ಲಕ್ಷ್ಮೀ ನಾರಾಯಣ ನಾಗವಾರ ಪ್ರತಿವರ್ಷ ಇಂಥ ಶಿಬಿರಗಳನ್ನು ಅತ್ಯಂತ ವ್ಯವಸ್ಥಿವಾಗಿ ಏರ್ಪಡಿಸುತ್ತಾರೆ. ನಾನು ಈ ಹಿಂದೆ ಬಾಗಲಕೋಟೆ ಬಳಿ ಚಿಕ್ಕಸಂಗಮ ಶಿಬಿರದಲ್ಲೂ ಪಾಲ್ಗೊಂಡಿದ್ದೆ.
ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿಯ ಸಂಚಾಲಕ ಲಕ್ಷ್ಮೀನಾರಾಯಣ ನಾಗವಾರ ಯಾವುದೇ ಕಾರ್ಯಕ್ರಮ ಮಾಡಿದರೂ ಅಚ್ಚುಕಟ್ಟಾಗಿ ಮಾಡುತ್ತಾರೆ. ಪ್ರತಿ ವರ್ಷ ತಮ್ಮ ಕಾರ್ಯಕರ್ತರಿಗಾಗಿ ಅವರು ನಡೆಸುವ ಅಧ್ಯಯನ ಶಿಬಿರ ಉಳಿದವರಿಗೆ ಮಾದರಿಯಾಗಿದೆ. ಈ ಶಿಬಿರದಲ್ಲಿ ಪಾಲ್ಗೊಂಡ ಕಾರ್ಯಕರ್ತರ ಶಿಸ್ತು, ಆಸಕ್ತಿ, ಕುತೂಹಲಗಳು ಸಾಮಾಜಿಕ ಬದಲಾವಣೆಯಲ್ಲಿ ನಂಬಿಕೆ ಇರಿಸಿದವರಲ್ಲಿ ಹೆಮ್ಮೆಯನ್ನುಂಟು ಮಾಡುತ್ತವೆ. ಶಿಬಿರ ನಡೆದ ಮೂರು ದಿನ ಕಾರ್ಯಕರ್ತರು ಮುಂಜಾನೆ 9ಕ್ಕೆ ಸಭಾಂಗಣಕ್ಕೆ ಬಂದರೆ ಮುಗಿಯಿತು. ಮಧ್ಯಾಹ್ನ ಊಟಕ್ಕೆ ಅಷ್ಟು ಗಮನ ಕೊಡುವುದಿಲ್ಲ. ಶಿಬಿರ ಮುಗಿಯುವುದು ರಾತ್ರಿ 11 ಗಂಟೆಗೆ. ನಂತರ ಊಟ, ನಿದ್ರೆ.
ಪ್ರಗತಿಪರ ಸಂಘಟನೆಗಳು ಇಂಥ ಶಿಬಿರ ಗಳನ್ನು ನಡೆಸಿ ಫ್ಯಾಸಿಸ್ಟ್ ಕೋಮುವಾದಿ ಶಕ್ತಿಗಳ ಸವಾಲಿಗೆ ಜವಾಬು ನೀಡಬೇಕಾಗಿದೆ. ಯುವಕರೇ ಈ ದೇಶದ ಭವಿಷ್ಯ, ಅವರೇ ಈ ದೇಶವನ್ನು ಮುನ್ನಡೆಸಬೇಕಾಗಿದೆ. ಎಲ್ಲ ಪ್ರಗತಿಪರ ಸಂಘಟನೆಗಳು ಈ ದಿಕ್ಕಿನತ್ತ ಯೋಚಿಸ ಬೇಕಾಗಿದೆ.

Please follow and like us:

Related posts

Leave a Comment