ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ : ಸಾರ್ವಜನಿಕರಲ್ಲಿ ಅರಿವು ಅಗತ್ಯ

 ದೇಶದಲ್ಲಿ ಸಂಭವಿಸುತ್ತಿರುವ ಶಿಶು ಮರಣಗಳ ಪೈಕಿ ಶೇ. ೧೧ ರಷ್ಟು ಮಕ್ಕಳು ಡಯೇರಿಯಾ ಅಂದರೆ ಅತಿಸಾರ ಭೇದಿ ಪ್ರಕರಣಗಳಿಂದ ಸಾವನ್ನಪ್ಪುತ್ತಿವೆ ಎಂದರೆ ಈ ’ಅತಿಸಾರ ಭೇದಿ’ ಸಮಸ್ಯೆಯ ತೀವ್ರತೆ ಎಷ್ಟು ಎಂಬುದನ್ನು ಅರಿತುಕೊಳ್ಳಬಹುದಾಗಿದೆ.  ಇದನ್ನು ಗಂಭೀರವಾಗಿ ಪರಿಗಣಿಸಿರುವ ಆರೋಗ್ಯ ಇಲಾಖೆ ಅತಿಸಾರ ಭೇದಿ ನಿಯಂತ್ರಣಕ್ಕಾಗಿ ಹಾಗೂ ಇದರ ನಿರ್ವಹಣೆ ಮಾಡುವುದು ಹೇಗೆ ಎಂಬುದರ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸಲು ರಾಜ್ಯಾದ್ಯಂತ ಜುಲೈ ೨೮ ರಿಂದ ಆಗಸ್ಟ್ ೦೮ ರವರೆಗೆ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕವನ್ನು ಆಚರಿಸುತ್ತಿದೆ.
  ಮಕ್ಕಳ ಮರಣ ಸಂಖ್ಯೆಯನ್ನು ಕಡಿಮೆ ಮಾಡುವುದು ರಾಷ್ಟ್ರೀಯ ಆರೋಗ್ಯ ಅಭಿಯಾನ ಹಾಗೂ ಶತಮಾನ ಅಭಿವೃದಧಿಯ ಗುರಿಯಾಗಿದೆ.  ಭಾರತ ಸರ್ಕಾರ ಸೂಚಿಸಿರುವಂತೆ ’ಮಕ್ಕಳ ಅತಿಸಾರ ಭೇದಿಯಿಂದ ಶೂನ್ಯ ಸಾವು’ ಎಂಬ ಘೋಷವಾಕ್ಯದೊಂದಿಗೆ ರಾಜ್ಯದಲ್ಲೂ ಅತಿಸಾರ ಭೇದಿ ತೀವ್ರತರ ನಿಯಂತ್ರಣ ಪಾಕ್ಷಿಕ ಆಚರಿಸಲಾಗುತ್ತಿದೆ.  ೦೫ ವರ್ಷದೊಳಗಿನ ಮಕ್ಕಳ ಸಾವಿಗೆ ಅತಿಸಾರ ಭೇದಿ ರೋಗ ಪ್ರಮುಖ ಕಾರಣವಾಗಿದ್ದು, ಮಕ್ಕಳ ಸಾವಿನ ಸಂಖ್ಯೆಗೆ ಇದೇ ಶೇ. ೧೧ ರಷ್ಟು ಕೊಡುಗೆ ನೀಡುತ್ತಿದೆ.  ಬೇಸಿಗೆ ಮತ್ತು ಪೂರ್ವ ಮುಂಗಾರಿನ ತಿಂಗಳುಗಳಲ್ಲಿ ಮಕ್ಕಳಲ್ಲಿ ಭೇದಿ ರೋಗ ಅಧಿಕವಾಗಿ ಕಂಡುಬರುತ್ತದೆ.  ಅದರಲ್ಲೂ ಅಪೌಷ್ಠಿಕತೆ ಇರುವ ಮತ್ತು ೨ ವರ್ಷದೊಳಗಿನ ಮಕ್ಕಳಲ್ಲಿ ಅತಿಸಾರ ಭೇದಿ ರೋಗ ಪದೇ ಪದೇ ಬರುವ ಸಾಧ್ಯತೆಗಳು ಹೆಚ್ಚು.  ಭೇದಿ ಪ್ರಕರಣ ಪುನರಾವರ್ತನೆಯಾದಾಗ, ಆರೋಗ್ಯವಂತ ಮಕ್ಕಳಲ್ಲೂ ಸಹ ತೂಕ ಕ್ಷೀಣಿಸಿ, ಅಪೌಷ್ಠಿಕತೆ ಉಂಟಾಗುತ್ತದೆ.  ಹೀಗಾಗಿ ಭೇದಿಗೆ ಮತ್ತು ಅಪೌಷ್ಠಿಕತೆಗೆ ನಿಕಟ ಸಂಬಂಧವಿದ್ದು, ವಯಸ್ಸಿಗನುಗುಣವಾದ ಶಿಶು ಮತ್ತು ಎಳೆ ಮಕ್ಕಳ ಆಹಾರ ಪದ್ಧತಿಗಳನ್ನು ಅನುಸರಿಸಿ ಅಪೌಷ್ಠಿಕತೆಯನ್ನು ನಿವಾರಿಸುವುದು ಸೂಕ್ತ ಮಾರ್ಗೋಪಾಯವಾಗಿದೆ. 
ಆಂದೋಲನ : ರಾಜ್ಯಾದ್ಯಂತ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಆಂದೋಲನವನ್ನು ಹಮ್ಮಿಕೊಳ್ಳಲಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಓಆರ್‌ಎಸ್-ಜಿಂಕ್ ಕಾರ್ನರ್ ಸ್ಥಾಪಿಸುವುದು, ಆಶಾ ಕಾರ್ಯಕರ್ತೆಯರಿಂದ ಗ್ರಾಮೀಣ ಪ್ರದೇಶಗಳಲ್ಲಿ ೫ ವರ್ಷದೊಳಗಿನ ಮಕ್ಕಳು ಇರುವ ಪ್ರತಿಯೊಂದು ಮನೆಗೆ ಓಆರ್‌ಎಸ್ ಪೊಟ್ಟಣಗಳನ್ನು ಹಂಚುವುದು, ಅಪೌಷ್ಠಿಕ ಮಕ್ಕಳನ್ನು ಗುರುತಿಸುವುದು.  ಶಿಶು ಮತ್ತು ಎಳೆ ಮಕ್ಕಳ ಆಹಾರ ಪದ್ಧತಿಗಳನ್ನು ಪ್ರಚಾರಗೊಳಿಸುವುದು, ವಯಸ್ಸಿಗನುಗುಣವಾಗಿ ಎದೆ ಹಾಲುಣಿಸುವಿಕೆ ಮತ್ತು ಎಳೆ ಮಕ್ಕಳ ಆಹಾರ ಪದ್ಧತಿ ಬಗ್ಗೆ ಪಾಲಕರೊಂದಿಗೆ ಸಮಾಲೋಚನೆ, ಓಆರ್‌ಎಸ್ ದ್ರಾವಣ ತಯಾರಿಸುವ ಹಾಗೂ ಉಪಯೋಗಿಸುವ ವಿಧಾನ ತಿಳಿಯಪಡಿಸುವುದು.  ಮಗುವಿಗೆ ಭೇದಿಯಾದಾಗ ಆಶಾ ಕಾರ್ಯಕರ್ತೆಯಿಂದ ಜಿಂಕ್ ಸಿರಪ್ ಪಡೆಯಲು ತಿಳಿಸುವುದು, ತಾಯಿ ಮಗು ರಕ್ಷಣೆ/ ತಾಯಿ ಕಾರ್ಡ್‌ನಲ್ಲಿ ಮಗು ಕೆಂಪು ಪಟ್ಟಿಯಲ್ಲಿದ್ದರೆ, ಪೌಷ್ಠಿಕ ಪುನರ್ವಸತಿ ಕೇಂದ್ರಕ್ಕೆ ಕಳುಹಿಸುವುದು.  ಕೈತೊಳೆಯುವ ವಿಧಾನದ ಪ್ರಾತ್ಯಕ್ಷಿಕೆಯನ್ನು ಶಾಲೆಗಳಲ್ಲಿ ಹಮ್ಮಿಕೊಳ್ಳುವುದು ಮುಂತಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ಆರೋಗ್ಯ ಇಲಾಖೆ ಮುಂದಾಗಿದೆ.
ತಡೆಗಟ್ಟುವುದು ಹೇಗೆ : ಮಕ್ಕಳಿಗೆ ಅತಿಸಾರ ಭೇದಿ ಉಂಟಾದಾಗ, ಸರ್ಕಾರಿ ಆಸ್ಪತ್ರೆಗಳಲ್ಲಿ ದೊರಕುವ ಓಆರ್‌ಎಸ್ ಮತ್ತು ಜಿಂಕ್ ಸಿರಪ್ ಅಥವಾ ಮಾತ್ರೆಯನ್ನು ಶಿಶುವಿಗೆ ನಿಯಮಿತವಾಗಿ ನೀಡಬೇಕು.  ಇದರಿಂದ ಶಿಶು ಮರಣವನ್ನು ತಪ್ಪಿಸಬಹುದಾಗಿದೆ.  ಶುದ್ಧ ಕುಡಿಯುವ ನೀರು, ಪರಿಸರ ನೈರ್ಮಲ್ಯ, ಎದೆ ಹಾಲುಣುಸುವುದನ್ನು ಮುಂದುವರಿಸುವುದು, ಸೂಕ್ತ ಆಹಾರ ಸೇವನೆ ಮತ್ತು ಸ್ವಚ್ಛವಾಗಿ ಕೈ ತೊಳೆದುಕೊಳ್ಳುವ ಮೂಲಕ ಸೋಂಕು ಹರಡುವಿಕೆ ಹಾಗೂ ಭೇದಿಯನ್ನು ತಡೆಗಟ್ಟಬಹುದಾಗಿದೆ.  ಭೇದಿಯ ಸಂದರ್ಭದಲ್ಲಿ ಮಗುವಿಗೆ ಓಆರ್‌ಎಸ್ ಮತ್ತು ಹೆಚ್ಚಿನ ದ್ರವ ಪದಾರ್ಥ ನೀಡಬೇಕು.  ೧೪ ದಿವಸಗಳ ಕಾಲವೂ ಜಿಂಕ್ ಸಿರಪ್ ನೀಡಬೇಕು, ಇದು ಮಗುವಿನ ಬೇಗ ಚೇತರಿಕೆಗೆ ಸಹಾಯಕಾರಿ ಅಲ್ಲದೆ ಮಗುವನ್ನು ಭೇದಿ ಮತ್ತು ನ್ಯುಮೋನಿಯಾದಿಂದ ರಕ್ಷಿಸುತ್ತದೆ.  ಮಗುವಿನ ಆಹಾರ ತಯಾರಿಸುವ ಮುಂಚೆ, ಉಣಿಸುವ ಮೊದಲು, ಮಗು ಮಲವಿಸರ್ಜಿಸಿದ ನಂತರ ಕೈಗೊಳನ್ನು ಸ್ವಚ್ಛವಾಗಿ ತೊಳೆದುಕೊಳ್ಳಬೇಕು.  ಮಗು ಓಆರ್‌ಎಸ್ ಮತ್ತು ಜಿಂಕ್ ಸಿರಪ್‌ನ ಚಿಕಿತ್ಸೆಗೆ ಸ್ಪಂದಿಸದಿದ್ದರೆ, ಕೂಡಲೆ ಆರೋಗ್ಯ ಕೇಂದ್ರಕ್ಕೆ ಕರೆದುಕೊಂಡು ಹೋಗುವುದು ಉತ್ತಮ. 
  ಅತಿಸಾರ ಭೇದಿಯಿಂದ ಮಕ್ಕಳು ತೊಂದರೆಗೀಡಾಗುವುದನ್ನು ತಪ್ಪಿಸಲು ಆರೋಗ್ಯ ಇಲಾಖೆ ಹಮ್ಮಿಕೊಂಡಿರುವ ಈ ಆಂದೋಲನಕ್ಕೆ ಸಾರ್ವಜನಿಕರು ಸಹ ಇಲಾಖೆಯೊಂದಿಗೆ ಸಹಕರಿಸಿ, ವೈದ್ಯರ ಸಲಹೆ, ಸೂಚನೆಗಳನ್ನು ಪಾಲಿಸಿದ್ದೇ ಆದಲ್ಲಿ, ಆರೋಗ್ಯಪೂರ್ಣ ಮಕ್ಕಳನ್ನು ಹೊಂದಲು ಸಾಧ್ಯ ಎನ್ನುತ್ತಾರೆ ಕೊಪ್ಪಳ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು.
 
                                                                       – ತುಕಾರಾಂರಾವ್ ಬಿ.ವಿ.
                                                                   ಜಿಲ್ಲಾ ವಾರ್ತಾಧಿಕಾರಿ, ಕೊಪ್ಪಳ ಕೊಪ್ಪಳ
Please follow and like us:
error

Related posts

Leave a Comment