ಹಿರೇಸಿಂದೋಗಿಯಲ್ಲಿ ವಿಜ್ಞಾನ ವಸತಿ ಕಾಲೇಜು ಕಟ್ಟಡಕ್ಕೆ ೫. ೧೨ ಕೋಟಿ ಬಿಡುಗಡೆ- ಸಂಗಣ್ಣ ಕರಡಿ

ಕೊಪ್ಪಳ ಜ.   ಕೊಪ್ಪಳ ತಾಲೂಕು ಹಿರೇಸಿಂದೋಗಿಯಲ್ಲಿ ಮೊರಾರ್ಜಿ ದೇಸಾಯಿ ಪದವಿಪೂರ್ವ ವಸತಿ ಸಹಿತ ವಿಜ್ಞಾನ ಕಾಲೇಜು ಕಟ್ಟಡಕ್ಕೆ ಸರ್ಕಾರ ೫. ೧೨ ಕೋಟಿ ರೂ. ಅನುದಾನ ಬಿಡುಗಡೆ ಮಾಡಿದ್ದು, ಶೀಘ್ರದಲ್ಲೆ ಕಾಮಗಾರಿ ಪ್ರಾರಂಭಗೊಳ್ಳಲಿದೆ ಎಂದು ಕೊಪ್ಪಳ ಶಾಸಕ ಸಂಗಣ್ಣ ಕರಡಿ   ತಿಳಿಸಿದ್ದಾರೆ.
  ಶೈಕ್ಷಣಿಕವಾಗಿ ಹಿಂದುಳಿದಿರುವ ಕೊಪ್ಪಳ ಜಿಲ್ಲೆಯಲ್ಲಿ ಅದರಲ್ಲೂ ಪ್ರಮುಖವಾಗಿ ಗ್ರಾಮೀಣ ಪ್ರದೇಶಗಳ ವಿದ್ಯಾರ್ಥಿಗಳು ವಿಜ್ಞಾನ ವಿಷಯದ ವ್ಯಾಸಂಗಕ್ಕೆ ಪರಿತಪಿಸುವ ಸಂಗತಿ ಈ ಭಾಗದಲ್ಲಿ ಸಾಮಾನ್ಯ.  ಇದನ್ನು ನಿವಾರಿಸುವ ನಿಟ್ಟಿನಲ್ಲಿ ಸರ್ಕಾರ ಇದೀಗ ಕೊಪ್ಪಳ ತಾಲೂಕಿನ ಹಿರೇಸಿಂದೋಗಿಯಲ್ಲಿ ಮೊರರ್ಜಿ ದೇಸಾಯಿ  ವಸತಿ ಸಹಿತ ಪದವಿಪೂರ್ವ ವಿಜ್ಞಾನ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಮುಂದಾಗಿದ್ದು, ಇದಕ್ಕೆ ಅಗತ್ಯವಿರುವ ೫. ೧೨ ಕೋಟಿ ರೂ. ಅನುದಾನವನ್ನು ಬಿಡುಗಡೆ ಮಾಡಿದೆ.  ಈಗಾಗಲೆ ವಸತಿ ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ೯. ೧೮ ಎಕರೆ ಜಮೀನನ್ನು ಖರೀದಿಸಲಾಗಿದ್ದು, ಪ್ರತಿ ಎಕರೆಗೆ ೬ ಲಕ್ಷ ರೂ.ಗಳಂತೆ ಒಟ್ಟು ೫೫. ೦೮ ಲಕ್ಷ ರೂ.ಗಳ ವೆಚ್ಚ ಮಾಡಲಾಗಿದೆ. ಈ ವಿಜ್ಞಾನ ವಸತಿ ಕಾಲೇಜಿನಲ್ಲಿ ಪ್ರಥಮ ಪಿ.ಯುಸಿ. ಹಾಗೂ ದ್ವಿತೀಯ ಪಿಯುಸಿ ಶಾಲೆಗಳಿಗೆ ತಲಾ ೮೦ ವಿದ್ಯಾರ್ಥಿ/ವಿದ್ಯಾರ್ಥಿನಿಯರ ವ್ಯಾಸಂಗಕ್ಕೆ ಅವಕಾಶವಿದೆ. ಕಾಲೇಜು ಕಟ್ಟಡವು ಪಾಠ ಬೋಧನೆ ಶಾಲಾ ಕೊಠಡಿಗಳುಳ್ಳ ನೆಲಮಹಡಿ ಜೊತೆಗೆ ಮೊದಲನೆ ಮಹಡಿ ಕಟ್ಟಡವಾಗಲಿದ್ದು, ಅಲ್ಲದೆ ಬಾಲಕರು ಹಾಗೂ ಬಾಲಕಿಯರಿಗೆ ಪ್ರತ್ಯೇಕ ವಾಸ್ತವ್ಯ ಕೊಠಡಿಗಳು, ಅಡುಗೆ ಕೋಣೆ, ಊಟದ ಹಾಲ್ ಸೌಲಭ್ಯ ಒಳಗೊಂಡಿರುತ್ತದೆ.  ಜೊತೆಗೆ ಈ ವಸತಿ ಕಾಲೇಜಿಗೆ ಅಗತ್ಯವಿರುವ ಎಲ್ಲ ಮೂಲಭೂತ ಸೌಕರ್ಯವನ್ನು ಒದಗಿಸುವಂತೆ ಸರ್ಕಾರ ಆದೇಶದಲ್ಲಿ ತಿಳಿಸಿದೆ.  ಕಟ್ಟಡ ಕಾಮಗಾರಿಯ ಗುತ್ತಿಗೆಯನ್ನು ಬೆಂಗಳೂರಿನ ಕೆ.ಎಂ.ವಿ. ಪ್ರೋಜೆಕ್ಟ್ಸ್ ಲಿಮಿಟಿಡ್ ಕಂಪನಿಯು ಪಡೆದಿದ್ದು, ಮಳೆಗಾಲ ಸಹಿತ ೧೮ ತಿಂಗಳ ಒಳಗಾಗಿ ಕಾಮಗಾರಿ ಪೂರ್ಣಗೊಳಿಸಬೇಕು.  ಕಾಮಗಾರಿಯಲ್ಲಿ ಗುಣಮಟ್ಟವನ್ನು ಕಾಯ್ದುಕೊಳ್ಳುವಂತೆ ತಿಳಿಸಿದೆ.  ಶೈಕ್ಷಣಿಕವಾಗಿ ಹಿಂದುಳಿದಿರುವ ಈ ಭಾಗಕ್ಕೆ ವಸತಿ ಸಹಿತ ವಿಜ್ಞಾನ ಕಾಲೇಜು ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡುವ ಮೂಲಕ ಸರ್ಕಾರ ಈ ಭಾಗದ ಜನರ ಹಾಗೂ ಜನಪ್ರತಿನಿಧಿಗಳ ಬೇಡಿಕೆಗೆ ಮನ್ನಣೆ ನೀಡಿದಂತಾಗಿದೆ.  ಈ ಮೂಲಕ ಶಿಕ್ಷಣ ಕ್ಷೇತ್ರದ ಅಭಿವೃದ್ಧಿಗೆ ಸರ್ಕಾರ ಬದ್ಧವಾಗಿರುವುದನ್ನು ನಿರೂಪಿಸಿದೆ.  ಕಾಲೇಜು ಕಟ್ಟಡ ನಿರ್ಮಾಣಕ್ಕೆ ಅಗತ್ಯವಿರುವ ೫. ೧೨ ಕೋಟಿ ರೂ. ಅನುದಾನ ಬಿಡುಗಡೆಗೊಳಿಸಿದ್ದಕ್ಕಾಗಿ ಮುಖ್ಯಮಂತ್ರಿಗಳು ಹಾಗೂ ಸಮಾಜ ಕಲ್ಯಾಣ ಸಚಿವ ನಾರಾಯಣಸ್ವಾಮಿ ಹಾಗೂ ಉನ್ನತ ಅಧಿಕಾರಿಗಳಿಗೆ ಕೊಪ್ಪಳ ಶಾಸಕ ಸಂಗಣ್ಣ ಕರಡಿ ಅವರು ಅಭಿನಂದನೆಗಳನ್ನು ಸಲ್ಲಿಸಿದ್ದಾರೆ.
Please follow and like us:
error