ಮಲಿನ ಗಂಗೆಯೂ ಮತ್ತು ಮೋದಿಯೆಂಬ ಆಧುನಿಕ ಭಗೀರಥನೂ..–ಡಾ.ಎನ್. ಜಗದೀಶ್ ಕೊಪ್ಪ

  ಸೆಪ್ಟಂಬರ್ ಮೂರರಂದು ಗಂಗಾ ನದಿಯ ಶುದ್ಧೀ ಕರಣ ಯೋಜನೆಯ ನೀಲನಕ್ಷೆ ಮತ್ತು ರೂಪುರೇಷೆಗಳ ಕುರಿತಂತೆ 29 ಪುಟಗಳ ವರದಿ ರೂಪದ ಪ್ರಮಾಣ ಪತ್ರವನ್ನು ಸುಪ್ರೀಂಕೋರ್ಟಿಗೆ ಕೇಂದ್ರ ಸರಕಾರ ಸಲ್ಲಿಸಿತು. ಸರಕಾರದ ಪರವಾಗಿ ಅಭಿಯೋಜಕರು ಪ್ರಮಾಣ ಪತ್ರ ಸಲ್ಲಿಸಿದ ಸಂದರ್ಭದಲ್ಲಿ, 1986ರಿಂದ ಇಲ್ಲಿಯವರೆಗೆ ವ್ಯಯವಾಗಿರುವ ಹಾಗೂ ಗಂಗಾ ನದಿಯಲ್ಲಿ ಕೊಳೆಯಂತೆ ಕೊಚ್ಚಿ ಹೋಗಿರುವ 20 ಸಾವಿರ ಕೋಟಿ ರೂಪಾಯಿ ಬಗ್ಗೆ ಆತಂಕ ಮತ್ತು ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಮೂರ್ತಿಗಳಾದ ಥಾಕೂರ್ ಮತ್ತು ಭಾನುಂ ಅವರು,
 ‘‘ನಿಮ್ಮ ಈ ನೀಲ ನಕ್ಷೆ ಕಲಾವಿದನೊಬ್ಬನ ಕಲ್ಪನೆಯಂತಿದೆ, ವಾಸ್ತವಿಕ ಚಿತ್ರಣವಿಲ್ಲ’’ ಎಂದು ಟೀಕಿಸಿದರಲ್ಲದೆ, ‘‘ಇನ್ನೂ ಎರಡು ಶತಮಾನ ಕಳೆದರೂ ಗಂಗಾ ನದಿಯನ್ನು ಶುದ್ಧೀಕರಿಸಲು ನಿಮ್ಮಿಂದ ಸಾಧ್ಯವಿಲ್ಲ’’ ಎಂದು ಕೇಂದ್ರ ಸರಕಾರಕ್ಕೆ ಚಾಟಿ ಏಟು ಬೀಸಿದರು. ನ್ಯಾಯಮೂರ್ತಿಗಳ ಈ ಕಟು ಟೀಕೆಯ ಹಿಂದೆ, ದೇಶದ ಜಲಮೂಲಗಳು ಮತ್ತು ನದಿಗಳು ಕಲುಷಿತಗೊಂಡ ಬಗ್ಗೆ ಆತಂಕದ ಮತ್ತು ನೋವಿನ ಭಾವನೆಗಳಿದ್ದುದನ್ನು ನಾವು ತಳ್ಳಿಹಾಕುವಂತಿಲ್ಲ. ಇದೀಗ ಪ್ರಧಾನಿ ನರೇಂದ್ರ ಮೋದಿಯವರು ಗಂಗಾ ನದಿಯ ಪಾಪದ ಕೊಳೆ ತೊಳೆಯಲು ಮುಂದಾಗಿದ್ದಾರೆ. ಅವರ ಈ ಸಾಹಸ ನಿಜಕ್ಕೂ ಮೆಚ್ಚುವಂತಹದ್ದು. ಆದರೆ ಪ್ರಧಾನಿಯವರ ಮುಂದೆ ಬೆಟ್ಟದಷ್ಟು ಸವಾಲುಗಳಿವೆ. ‘ಅಭಿವೃದ್ಧಿ’ ಎಂಬ ಪದದ ವ್ಯಾಖ್ಯಾನ ಬದಲಾಗಿ ವಿಕೃತಗೊಂಡಿರುವ ಈ ಸಂದರ್ಭದಲ್ಲಿ ಪರಿಸರ ಕುರಿತು ಮಾತನಾಡುವುದು ಅಥವಾ ಬರೆಯುವುದು ಸಿನಿಕತನವೆಂಬಂತೆ ತೋರುತ್ತಿರುವ ಈ ದಿನಗಳಲ್ಲಿ ವಾಸ್ತವಿಕ ನೆಲೆಗಟ್ಟಿನಲ್ಲಿ ನಿಂತು ಮಾತನಾಡುವುದು ಅಥವಾ ಬರೆಯುವುದೂ ಪ್ರತಿಯೊಬ್ಬ ಪ್ರಜ್ಞಾವಂತ ನಾಗರಿಕನ ಕರ್ತವ್ಯ.
 ಇಪ್ಪತ್ತೊಂದನೆಯ ಶತಮಾನದ ಅತ್ಯಾಧುನಿಕ ಬದುಕಿನ ಈ ದಿನಗಳಲ್ಲಿ ಉಪಭೋಗದಲ್ಲಿ ಮುಳುಗಿ ಏಳುತ್ತಿರುವವರ ದೃಷ್ಟಿಕೋನದಲ್ಲಿ ನಿಸರ್ಗದ ಕೊಡುಗೆಗಳು ಇರುವುದು ನಮ್ಮ ವೈಯಕ್ತಿಕ ಉಪಭೋಗಕ್ಕೆ ಎಂಬಂತಾಗಿದೆ. ಅಭಿವೃದ್ಧಿಯ ಪರಿಕಲ್ಪನೆಯೇ ವಿಕಾರದ ಸ್ವರೂಪ ಪಡೆದಿರುವ ಈ ದಿನಗಳಲ್ಲಿ ವರ್ತಮಾನದ ಜಗತ್ತನ್ನು ನೋಡಲು ನಮಗಿರುವ ಎರಡು ಕಣ್ಣುಗಳಷ್ಟೇ ಸಾಲದು, ಹೃದಯದ ಒಳಗಣ್ಣನ್ನು ಸಹ ತೆರೆದು ನೋಡಬೇಕಾಗಿದೆ. ಅಕಸ್ಮಾತ್ ನಮ್ಮ ನಡುವಿನ ಈ ಜೀವನದಿಗಳಿಗೆ ಮಾತು ಅಥವಾ ಅಕ್ಷರ ಬಂದಿದ್ದರೆ, ಲಿಖಿತ ಇಲ್ಲವೆ ಮೌಖಿಕ ಪಠ್ಯದ ರೂಪದಲ್ಲಿ ಮನುಕುಲದ ಬೃಹತ್ ಹೀನ ಚರಿತ್ರೆಯೊಂದು ಈ ಜಗತ್ತಿನಲ್ಲಿ ಸೃಷ್ಟಿಯಾಗುತ್ತಿತ್ತು.
(Ganga Action Plan)   
ಮನುಷ್ಯನ ಏಳುಬೀಳುಗಳಿಗೆ, ಸಾಮ್ರಾಜ್ಯದ ಉದಯ ಮತ್ತು ಪತನಗಳಿಗೆ, ಅರಮನೆ ಮತ್ತು ಗುಡಿಸಲುಗಳ ದುಃಖ ದುಮ್ಮಾನಗಳಿಗೆ, ಜನಸಾಮಾನ್ಯರ ನಿಟ್ಟುಸಿರುಗಳಿಗೆ ಮೌನ ಸಾಕ್ಷಿಯಾಗಿ, ಶತಮಾನಗಳುದ್ದಕ್ಕೂ ತಣ್ಣಗೆ ಹರಿದ ನದಿಗಳ ಒಡಲೊಳಗೆ ಎಂತಹ ಚರಿತ್ರೆಗಳಿರಬಹುದು? ಒಮ್ಮೆ ಯೋಚಿಸಿನೋಡಿ. ಇಂತಹ ಬೃಹತ್ ಚರಿತ್ರೆಯನ್ನು ತನ್ನೊಡಲೊಳಗೆ ಪೋಷಿಸಿಕೊಂಡು ಬಂದಿರುವ ನಮ್ಮ ಗಂಗಾ ನದಿಯ ದುರಂತ ಕಥನ ಅಕ್ಷರ ಮತ್ತು ಮಾತಿಗೆ ಮೀರುವಂತಹದ್ದು. ಜಗತ್ತಿನ ಮಹಾ ನದಿಗಳಾದ ನೈಲ್ ಮತ್ತು ಅಮೆಜಾನ್ ನದಿಗಳ ಜೊತೆ ಪ್ರಖ್ಯಾತಿ ಹೊಂದಿರುವ ಗಂಗಾ ನದಿಗೆ ಅಂಟಿಕೊಂಡ ಪುರಾಣ ಕಥೆಗಳು, ಐತಿಹ್ಯಗಳು, ಧಾರ್ಮಿಕ ನಂಬಿಕೆಗಳು, ಅದರ ಆಳ, ಉದ್ದ, ವಿಸ್ತಾರ ಇವೆಲ್ಲವೂ ಶಾಪವಾಗಿ ಪರಿಣಮಿಸಿದವು.ಇತ್ತೀಚೆಗಿನ ದಿನಗಳಲ್ಲಿ ತನ್ನದಲ್ಲದ ತಪ್ಪಿಗೆ, ಧರ್ಮದ ಹೆಸರಿನಲ್ಲಿ, ನಂಬಿಕೆ ಮತ್ತು ಆಚರಣೆಗಳ ನೆಪದಲ್ಲಿ ನಿರಂತರ ಅತ್ಯಾಚಾರಕ್ಕೆ ಒಳಗಾದ ಮೂಕ ಹೆಣ್ಣಿನಂತೆ, ಕಲುಷಿತಗೊಂಡಿರುವ ಗಂಗೆ ಮತ್ತೆ ಸುದ್ದಿಯಲ್ಲಿದ್ದಾಳೆ. ವಾರಾಣಾಸಿ ಕ್ಷೇತ್ರದಿಂದ ಲೋಕ ಸಭೆಗೆ ಚುನಾಯಿತರಾಗಿ ಪ್ರಧಾನಿ ಗದ್ದುಗೆ ಏರಿರುವ ನರೇಂದ್ರ ಮೋದಿ, ಗಂಗೆಯನ್ನು ಶುದ್ಧೀಕರಿಸುವ ಯೋಜನೆಯನ್ನು ಕೈಗೆತ್ತಿಕೊಂಡು, ಹೊಸ ಹುರುಪಿನಿಂದ ಹೊರಟಿದ್ದಾರೆ. ಒಂದು ಕಾಲದಲ್ಲಿ ಪಾಪವಿನಾಶಿನಿ ಎಂದು ಹೆಸರಾಗಿದ್ದ ಗಂಗೆ ಇಂದು ತನ್ನ ಮೋಕ್ಷಕ್ಕಾಗಿ ಕಾಯುತ್ತಿದ್ದಾಳೆ. 
                1986ರಲ್ಲಿ ಅಂದಿನ ಪ್ರಧಾನಿ ರಾಜೀವಗಾಂಧಿಯವರ ಕಾಲದಲ್ಲಿ ಗಂಗಾ ನದಿಯ ಶುದ್ಧೀಕರಣ ಯೋಜನೆಯಾದ ‘ಗಂಗಾ ಕ್ರಿಯಾ ಯೋಜನೆ’ ಕಳೆದ 38 ವರ್ಷಗಳಿಂದ ಕುಂಟುತ್ತಾ ಸಾಗಿದ್ದು, ಇದೊಂದು ಆಳುವ ಸರ್ಕಾರಗಳ ಮತ್ತು ಜನಪ್ರತಿನಿಧಿಗಳು, ಗುತ್ತಿಗೆದಾರರು, ಅಧಿಕಾರಿಗಳ ಪಾಲಿಗೆ ಲಾಭದಾಯಕ ಉದ್ಯಮವಾದಂತಿದೆ. ಆಧುನಿಕ ಭಗೀರಥನಂತೆ ಗಂಗೆಯನ್ನು ಶುದ್ಧೀಕರಿಸಲು ಹೊರಟಿರುವ ಪ್ರಧಾನಿ ನರೇಂದ್ರ ಮೋದಿಯವರ ಆಶಯ ಮೆಚ್ಚಬಹುದಾದರೂ, ವಾಸ್ತವವಾಗಿ ಇದು ಸಾಧ್ಯವೆ? ಎಂಬ ಪ್ರಶ್ನೆ ಕಾಡುತ್ತಿದೆ. ಒಂದು ಕಡೆ ಅಭಿ ವೃದ್ಧಿಯ ಮಂತ್ರ ಜಪಿಸುತ್ತಾ, ಮತ್ತೊಂದೆಡೆ ಬಂಡವಾಳಶಾಹಿ ಜಗತ್ತಿಗೆ ಕೆಂಪುಗಂಬಳಿಯನ್ನು ಹಾಸುತ್ತಾ, ಪರಿಸರ ರಕ್ಷಣೆಯ ಮಾತನಾಡುತ್ತಿರುವುದು ದ್ವಂದ್ವ ನೀತಿಯಂತೆ ಕಾಣುತ್ತಿದೆ. ಏಕೆಂದರೆ, ಇಪ್ಪತ್ತನೆಯ ಶತಮಾನದ ಉತ್ತರಾರ್ಧದ ನಂತರ ಪರಿಸರ ಸ್ನೇಹಿ ಚಿಂತನೆಗಳು ಅಥವಾ ನಿಸರ್ಗಕ್ಕೆ ಎರವಾಗದಂತಹ ಅಭಿವೃದ್ಧಿಯ ಪರಿಕಲ್ಪನೆ ಮತ್ತು ಸಣ್ಣ ಕೈಗಾರಿಕೆಯ ಆಶಯಗಳು ಗಾಂಧೀಜಿ ಹಾಗೂ ಅವರ ಹಿಂಬಾಲಕರಾದ ಶೂ ಮಾಕರ್ ಮತ್ತು ಜೆ.ಸಿ. ಕುಮಾರಪ್ಪನವರ ಜೊತೆ ಮಣ್ಣಾಗಿವೆ. ಹಾಗಾಗಿ ಅಭಿವೃದ್ಧಿಯ ಮಂತ್ರ ಜಪಿಸುತ್ತಾ, ಸ್ಮಾರ್ಟ್ ಸಿಟಿಗಳೆಂಬ (ಅತ್ಯಾಧುನಿಕ ಸುಂದರ ನಗರ) ಕನಸು ಬಿತ್ತುತ್ತಾ, ‘‘ನೈಸರ್ಗಿಕ ಪರಿಸರವನ್ನು, ಜಲಮೂಲ ತಾಣಗಳನ್ನು ನನ್ನ ಸರಕಾರ ರಕ್ಷಿಸಲು ಸಿದ್ಧ’’ ಎನ್ನುವ ನರೇಂದ್ರ ಮೋದಿಯವರ ಮಾತುಗಳನ್ನು ನಾವು ಗುಮಾನಿಯಿಂದಲೇ ನೋಡಬೇಕಾಗುತ್ತದೆ.
ಸಮುದ್ರ ಮಟ್ಟದಿಂದ 12 ಸಾವಿರ ಎತ್ತರದ ಹಿಮಾಲಯ ತಪ್ಪಲಲ್ಲಿ ಹುಟ್ಟುವ ಈ ರಾಷ್ಟ್ರೀಯ ನದಿ, 255 ಕಿಲೋಮೀಟರ್ ಉದ್ದ ಕೆಳಭಾಗಕ್ಕೆ ದಕ್ಷಿಣಾಮುಖವಾಗಿ ಭಾಗೀರಥಿ ನದಿಯಾಗಿ ಹರಿದು, ಉತ್ತರಾಖಂಡದ ರುದ್ರಪ್ರಯಾಗದ ಸಮೀಪ ಅಲಕಾನಂದಾ ಮತ್ತೆ ಮಂದಾಕಿನಿ ನದಿಗಳನ್ನು ಕೂಡಿಕೊಂಡು ಗಂಗಾನದಿಯಾಗಿ ಹರಿಯುತ್ತದೆ. ನಂತರ ಅಲಹಾಬಾದ್ ನಗರದಲ್ಲಿ ಮತ್ತೊಂದು ಪ್ರಮುಖ ನದಿಯಾದ ಯಮುನೆಯನ್ನು ಸೇರಿಕೊಂಡು, 2500 ಕಿಲೋ ಮೀಟರ್ ಉದ್ದ ಹರಿಯುತ್ತಾ ಈ ದೇಶದ 42 ಕೋಟಿ ಜನರ ಪಾಲಿಗೆ ಜೀವನಾಡಿಯಾಗಿದೆ. ಪ್ರತಿ ದಿನ ಈ ನದಿಯಲ್ಲಿ ಒಂದು ಕೋಟಿ ಹಿಂದೂ ಭಕ್ತರು ಪವಿತ್ರ ಸ್ನಾನದ ಹೆಸರಿನಲ್ಲಿ ಮುಳುಗಿ ಏಳುತ್ತಿದ್ದಾರೆ. ತಾನು ಹರಿಯುವ ಐದು ರಾಜ್ಯಗಳಾದ ಉತ್ತರಾಖಂಡ, ಉತ್ತರಪ್ರದೇಶ, ಬಿಹಾರ, ಜಾರ್ಖಂಡ್, ಪಶ್ಚಿಮ ಬಂಗಾಳದ ಜನರ ನೀರಿನ ದಾಹ ತೀರಿಸಿ, ಅವರ ಕೃಷಿ ಭೂಮಿಗೆ ನೀರುಣಿಸಿ, ಅವರು ವಿಸರ್ಜಿಸಿದ ಮಲ, ಮೂತ್ರ ಮತ್ತು ಅಪಾಯಕಾರಿ ವಿಷಯುಕ್ತ ತ್ಯಾಜ್ಯಗಳನ್ನು ಹೊತ್ತು ಕೊಲ್ಕತ್ತ ನಗರದ ಬಳಿ ಹೂಗ್ಲಿ ನದಿಯಾಗಿ ಹೆಸರು ಬದಲಿಸಿಕೊಂಡು ಕಡಲು ಸೇರುವ ಗಂಗಾ ನದಿಯು ಈಗ ಭಾರತದ ಜನತೆಯ ಪಾಲಿಗೆ ಜೀವನದಿಯಾಗುವ ಬದಲು ವಿಷಕನ್ಯೆಯಾಗಿ ಪರಿವರ್ತನೆ ಹೊಂದಿದೆ.
 ಕಳೆದ 25 ವರ್ಷಗಳಲ್ಲಿ ನದಿಗೆ ಸೇರುತ್ತಿರುವ ತ್ಯಾಜ್ಯದ ಪ್ರಮಾಣ ಮೂರು ಸಾವಿರ ಪಟ್ಟು ಹೆಚ್ಚಾಗಿದೆ. ಈ ಕೆಳಗಿನ ಅಂಶಗಳು ನಮ್ಮನ್ನು ಬೆಚ್ಚಿ ಬೀಳಿಸುತ್ತದೆ. ಪ್ರತಿ ದಿನ ಉತ್ತರಾಖಂಡದ 14 ಮಹಾನ್ ನಗರಗಳ ಚರಂಡಿ ಅಥವಾ ಗಟಾರಗಳಿಂದ 440 ದಶಲಕ್ಷ ಲೀಟರ್ ಕೊಳಚೆ ನೀರು, 42 ಟನ್ ಕಸ ಹಾಗೂ ಉತ್ತರ ಪ್ರದೇಶದ 45 ನಗರಗಳ ಗಟಾರಗಳಿಂದ 3289 ದಶಲಕ್ಷ ಲೀಟರ್ ಕೊಳಚೆ ಮತ್ತು 761 ಟನ್ ಕಸ ಗಂಗೆಯ ಒಡಲು ಸೇರುತ್ತಿದೆ. ಅದೇ ರೀತಿ ಬಿಹಾರದಲ್ಲಿ 25 ಗಟಾರಗಳಿಂದ 579 ದಶಲಕ್ಷ ಲೀಟರ್ ಕೊಳಚೆ ಮತ್ತು 99 ಟನ್ ಕಸ ಮತ್ತು ಪಶ್ಚಿಮ ಬಂಗಾಳ ರಾಜ್ಯದ 54 ಗಟಾರಗಳಿಂದ 1779 ದಶಲಕ್ಷ ಲೀಟರ್ ಕೊಳಚೆ, 97 ಟನ್ ಕಸ ನದಿಗೆ ಸೇರುತ್ತಿದೆ. ಇದರಿಂದಾಗಿ ನದಿಯ ನೀರಿನಲ್ಲಿ ಆಮ್ಲಜನಕದ ಬಿಡು ಗಡೆಯ ಪ್ರಮಾಣ ಮೈನಸ್ ಆರಕ್ಕೆ ಕುಸಿದಿದೆ. ಗಂಗಾ ನದಿಯ ಒಡಲು ಸೇರುತ್ತಿರುವ ಕೊಳಚೆ ನೀರು ಮತ್ತು ವಿಷಯುಕ್ತ ವಸ್ತುಗಳಲ್ಲಿ ಜವಳಿ ಉದ್ಯಮದಿಂದ ಶೇಕಡ 2, ಚರ್ಮ ಹದ ಮಾಡುವ ಕೈಗಾರಿಕೆಗಳಿಂದ ಶೇಕಡ 5, ಸಕ್ಕರೆ ಕಾರ್ಖಾನೆಗಳಿಂದ ಶೇಕಡ 19, ರಸಾಯನಿಕ ಕಾರ್ಖಾನೆಗಳಿಂದ ಶೇಕಡ 20, ಮದ್ಯಸಾರ ತಯಾರಿಸುವ ಡಿಸ್ಟಲರಿಗಳಿಂದ ಶೇಕಡ 7ರಷ್ಟು, ಕಾಗದ ಕಾರ್ಖಾನೆಗಳಿಂದ ಶೇಕಡ 40ರಷ್ಟು, ಆಹಾರ ಮತ್ತು ತಂಪು ಪಾನಿಯ ಘಟಕಗಳಿಂದ ಶೇಕಡ 1ರಷ್ಟು ಮತ್ತು ಇತರೆ ಘಟಕಗಳ ಶೇಕಡ 6ರಷ್ಟು ಪಾಲು ಇದೆ ಎಂದು ವಿಜ್ಞಾನಿಗಳು ಅಧ್ಯಯನದಿಂದ ದೃಢಪಡಿಸಿದ್ದಾರೆ. ಹೀಗಾಗಿ ದಿನವೊಂದಕ್ಕೆ 138 ಮಹಾನ್ ಚರಂಡಿಯ ಕಾಲುವೆಗಳಿಂದ 6087 ದಶಲಕ್ಷ ಲೀಟರ್ ಕೊಳಚೆ ಮತ್ತು 999 ಟನ್ ಕಸ ಗಂಗಾ ನದಿಯ ಪಾಲಾಗುತ್ತಿದೆ ಎಂದು ಅಂದಾಜಿಸಲಾಗಿದೆ.
ನಮ್ಮನ್ನಾಳುವ ಸರಕಾರಗಳಿಗೆ ಕೈಗಾರಿಕಾ ನೀತಿಯಲ್ಲಿ ಕಡಿವಾಣವಿಲ್ಲದ ಅವಿವೇಕತನ ಮತ್ತು ಸಾಮಾಜಿಕ ಹಾಗೂ ಧಾರ್ಮಿಕ ನಂಬಿಕೆಗಳು ಗಂಗಾನದಿಯ ಪಾಲಿಗೆ ಶತ್ರುಗಳಾಗಿವೆ. ಅಕ್ರಮ ಸಂತಾನದಿಂದ ಹುಟ್ಟಿದ ಹಸುಗೂಸುಗಳು, ಸತ್ತು ಹೋದ ದನಕರುಗಳ ಕಳೇಬರಗಳು ಹಾಗೂ ಗಂಗಾ ನದಿಗೆ ಎಸೆದರೆ, ಸತ್ತವರು ಸ್ವರ್ಗ ಸೇರುತ್ತಾರೆ ಎಂಬ ಮೂಡ ನಂಬಿಕೆಗಳಿಂದ ನದಿಗೆ ಬಿಸಾಡಿದ ಹೆಣಗಳು ಇವೆಲ್ಲವನ್ನೂ ನೋಡಿದರೆ, ಪುಣ್ಯ ನದಿ ಎನಿಸಿಕೊಳ್ಳುವ, ಪಾಪನಾಶಿನಿ ಎನ್ನುವ ಗಂಗೆಯ ನೀರನ್ನು ಕೊಲ್ಕತ್ತ ನಗರದ ಬಳಿ ಕೈಯಿಂದ ಮುಟ್ಟಲು ಅಸಹ್ಯವಾಗುತ್ತದೆ. ರುದ್ರಪ್ರಯಾಗದ ಬಳಿ ಸ್ಫಟಿಕದ ನೀರಿನಂತೆ ಹರಿಯುವ ಗಂಗಾನದಿ, ಕೊಲ್ಕತ್ತ ನಗರದ ತಟದಲ್ಲಿ ಹೂಗ್ಲಿ ನದಿ ಹೆಸರಿನಲ್ಲಿ ಕಪ್ಪಗೆ ಹರಿಯುತ್ತದೆ. ಕೊಲ್ಕತ್ತದ ಹೌರ ರೈಲ್ವೆ ನಿಲ್ದಾಣದ ಮುಂಭಾಗದಲ್ಲಿ ಅಥವಾ ಬೇಲೂರು ಮಠದ ರಾಮಕೃಷ್ಣ ಆಶ್ರಮದ ಹಿಂದೆ ಹರಿಯುವ ಗಂಗಾ ನದಿಯ ನೀರು ನೋಡಿದಾಗ ಕಣ್ಣಲ್ಲಿ ನೀರು ಬರುತ್ತದೆ.
ಹಿಮಾಲಯದ ಯಮುನೋತ್ರಿಯಲ್ಲಿ ಹುಟ್ಟಿ, 1378 ಕಿಲೋಮೀಟರ್ ಉದ್ದ ಹರಿಯುವ ಯಮುನಾ ನದಿ, ದೆಹಲಿ ಮತ್ತು ಆಗ್ರಾ ನದಿಯ ಸಮಸ್ತ ಕೊಳಚೆ ಯನ್ನು ತಂದು ಅಲಹಾಬಾದಿನ ಸಂಗಮದ ಬಳಿ ಗಂಗೆಯೊಂದಿಗೆ ವಿಲೀನಗೊಳ್ಳುವುದರ ಮೂಲಕ ತನ್ನ ಪಾಲಿನ ವಿಷವನ್ನು ಗಂಗೆಗೆ ಧಾರೆಯೆರೆಯುತ್ತಿದೆ. ಉತ್ತರ ಪ್ರದೇಶದ ಪಿಬಿಟ್ ಬಳಿಯ ಗೋಮತಿ ತಾಲ್ (ಸರೋವರ) ನಲ್ಲಿ ಹುಟ್ಟುವ ಗೋಮತಿ ನದಿ 600 ಕಿ.ಮೀ.ದೂರ ಹರಿದು ಉತ್ತರ ಪ್ರದೇಶದ ರಾಜಧಾನಿ ಲಕ್ನೋ ನಗರ ಸೇರಿದಂತೆ, ಸುಲ್ತಾನ್ ಪುರ್, ಭಾನುಪುರ್ ಪಟ್ಟಣಗಳ ಕೊಳಚೆಯನ್ನು ತಂದು ಗಾಜಿಪುರ್ ಬಳಿ ಗಂಗೆಯನ್ನು ಸೇರುತ್ತದೆ.
ಜಾರ್ಖಂಡ್ ರಾಜ್ಯದ ಪಾಲಮು ಎಂಬಲ್ಲಿ ಹುಟ್ಟುವ ದಾಮೋದರ್ ನದಿ 600 ಕಿ.ಮೀ. ಹರಿದು, ಜಾರ್ಖಾಂಡ್ ರಾಜ್ಯದ ಕಬ್ಬಿಣ ಮತ್ತು ಉಕ್ಕಿನ ಕಾರ್ಖಾನೆಗಳು ಹೊರ ಹಾಕಿದ ಕೊಳಚೆಯನ್ನು ತಂದು ಪಶ್ಚಿಮ ಬಂಗಾಳದ ಹೂಗ್ಲಿ ಬಳಿ ಗಂಗೆಯೊಂದಿಗೆ ಕೂಡಿಕೊಳ್ಳುತ್ತದೆ. ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ನಲ್ಲಿ ಜನ್ಮ ತಾಳುವ ಮಹಾನಂದ ನದಿ 360 ಕಿ.ಮೀ. ಹರಿದು ಸಿಲು ಗುರಿ ನಗರ ಕೊಳಚೆ ಹೊತ್ತು ಬಾಂಗ್ಲಾದೇಶದ ಗಡಗಿರಿ ಎಂಬಲ್ಲಿ ಗಂಗಾನದಿಯನ್ನು ಸೇರಿಕೊಳ್ಳತ್ತದೆ. ಹಿಮಾಲಯದ ಕಾಲಾಪಾನಿ ಎಂಬಲ್ಲಿ ಹುಟ್ಟುವ ಗಾಗಾರ ನದಿ 323 ಕಿ.ಮೀ. ಹರಿದು ಬಿಹಾರದ ಡೋರಿಗಂಜ್ ಬಳಿ ಗಂಗಾ ನದಿಯನ್ನು ಸೇರಿದರೆ, ಬಿಹಾರದ ‘ದುಃಖದ ನದಿ’ ಎಂದು ಕರೆಯಲ್ಪಡುವ ಕೋಶಿ ನದಿ, ನೇಪಾಳ ಮತ್ತು ಭಾರತದ ಗಡಿಭಾಗದಲ್ಲಿ ಜನಿಸಿ, 729 ಕಿ.ಮೀ. ಹರಿದು ಗಂಗಾ ನದಿಯೊಂದಿಗೆ ವಿಲೀನಗೊಳ್ಳುತ್ತದೆ. ಈ ಎರಡು ನದಿಗಳಿಂದ ಗಂಗಾ ನದಿಗೆ ಕೊಳಚೆ ಮತ್ತು ಕಸ ಸೇರುತ್ತಿ ರುವ ಪ್ರಮಾಣದಲ್ಲಿ ಶೇಕಡ 16 ರಷ್ಟು ಕೊಡುಗೆ ಇದೆ. ಹೀಗೆ ಉಪ ನದಿಗಳ ಕೊಡುಗೆಯ ಜೊತೆಗೆ ವಿಷಕನ್ಯೆಯಾಗಿ ಹರಿ ಯುತ್ತಿರುವ ಗಂಗಾ ನದಿಯ ಶುದ್ಧೀಕರಣ ಕಾರ್ಯಯೋಜನೆ ನಿನ್ನೆ ಮೊನ್ನೆಯ ದಲ್ಲ. ಇದಕ್ಕೆ 27 ವರ್ಷಗಳ ಸುಧೀರ್ಘ ಇತಿಹಾಸವಿದೆ. 1985 ರಲ್ಲಿ ಅಂದಿನ ಪ್ರಧಾನಿ ರಾಜೀವ ಗಾಂಧಿಯವರು ಗಂಗಾ ಕ್ರಿಯಾ ಯೋಜನೆ (Ganga Action Plan) ಎಂಬ ಯೋಜನೆಯಡಿ ನದಿಯನ್ನು ಶುಚಿಗೊಳಿಸುವ ಕಾರ್ಯವನ್ನು ಕೈಗೆತ್ತಿಕೊಳ್ಳಲು 450 ಕೋಟಿ ರೂ. ಹಣ ನೀಡಿ ಹಸಿರು ನಿಶಾನೆ ತೋರಿಸಿದರು. ಅಂದಿನಿಂದ ಇಂದಿನವರೆಗೆ ಸುಮಾರು 20 ಸಾವಿರ ಕೋಟಿ ರೂಪಾಯಿಗಳನ್ನು ಗಂಗಾ ನದಿಯ ಶುದ್ಧೀಕರಣಕ್ಕಾಗಿ ವೆಚ್ಚ ಮಾಡಲಾಗಿದೆ. ಯೋಜನೆಯ ನೀಲ ನಕ್ಷೆ ತಯಾರಿಸಿ, ಸಲಹೆ ನೀಡುವ ಕಂಪನಿಗಳಿಗೆ 1,100 ಕೋಟಿ ರೂಪಾಯಿಗಳನ್ನು ವ್ಯಯ ಮಾಡಲಾಗಿದೆ.
ಗಂಗಾ ನದಿಯ ತಟದಲ್ಲಿರುವ ನಗರ ಮತ್ತು ಪಟ್ಟಣ ಗಳ ಕೊಳಚೆ ನೀರನ್ನು ಸಂಸ್ಕರಿಸಿ ನದಿಗೆ ಬಿಡುವುದು, ಕಾರ್ಖಾನೆಗಳ ತ್ಯಾಜ್ಯವನ್ನು ತಡೆಗಟ್ಟುವುದು, ಮತ್ತು ಎಲ್ಲಾ ಪಟ್ಟಣಗಳ, ನಗರಗಳ ಒಳಚರಂಡಿಗಳನ್ನು ದುರಸ್ತಿ ಪಡಿಸುವುದು, ಧಾರ್ಮಿಕ ಕ್ಷೇತ್ರಗಳಲ್ಲಿ ಭಕ್ತಾಧಿಗಳಿಂದ ಸೃಷ್ಟಿಯಾಗುವ ಕಸ ಮತ್ತು ಪ್ಲಾಸ್ಟಿಕ್ ಕೈಚೀಲಗಳನ್ನು ಸಂಗ್ರಹಿಸಿ ಸಂಸ್ಕರಿಸುವುದು ಹೀಗೆ ನೂರಾರು ಯೋಜನೆಗಳ ಕನಸುಗಳನ್ನು ಯೋಜನೆಯ ಸಂದರ್ಭದಲ್ಲಿ ಹರಿಯ ಬಿಡಲಾಯಿತು. ಆದರೆ, ಸರಕಾರಗಳ ನಿರ್ಲಕ್ಷ ಮತ್ತು ವಿದ್ಯುತ್ ಅಭಾವದಿಂದ ಬಹುತೇಕ ಸಂಸ್ಕರಣಾ ಘಟಕಗಳು ಸ್ಥಗಿತಗೊಂಡಿವೆ.
   ಹಿಂದೂ ಧರ್ಮದ ಭಕ್ತರ ಪಾಲಿಗೆ ಸ್ವರ್ಗಕ್ಕೆ ಇರುವ ಏಕೈಕ ಹೆಬ್ಬಾಗಿಲು ಎಂದು ನಂಬಿಕೆ ಪಾತ್ರವಾಗಿರುವ ವಾರಾಣಾಸಿಯಲ್ಲಿ ದಿನವೊಂದಕ್ಕೆ 350 ದಶಲಕ್ಷ ಕೊಳಚೆ ನೀರು ಉತ್ಪಾದನೆಯಾಗುತ್ತಿದೆ. ಸಂಸ್ಕರಿಸುವ ಸಾಮರ್ಥ್ಯ ಕೇವಲ 122 ದಶಲಕ್ಷ ಲೀಟರ್ ಮಾತ್ರ. ಉಳಿದ ನೀರು ನೇರವಾಗಿ ನದಿಯ ಒಡಲು ಸೇರು ತ್ತಿದೆ. ಎರಡನೆಯ ಗಂಗಾ ನದಿಯ ಶುದ್ಧೀಕರಣ ಯೋಜನೆ ಕುಂಟುತ್ತಾ ಸಾಗಿದ ಪರಿಣಾಮ, 2009ರಲ್ಲಿ ಪ್ರಧಾನಿ ಡಾ.ಮನಮೋಹನ್ ಸಿಂಗ್‌ರವರು ಗಂಗಾ ನದಿಯನ್ನು ರಾಷ್ಟ್ರೀಯ ನದಿ ಎಂದು ಘೋಷಿಸಿ, ರಾಷ್ಟ್ರೀಯ ನದಿ ರಕ್ಷಣಾ ಪ್ರಾಧಿಕಾರವನ್ನು ಸ್ಥಾಪಿಸಿದ್ದರು. ಈ ಮಂಡಳಿಯಲ್ಲಿ 24 ಮಂದಿ ತಜ್ಞರು ಸೇರಿದಂತೆ ಗಂಗಾ ನದಿ ಹರಿಯುವ ಐದು ರಾಜ್ಯಗಳ ಪ್ರಧಾನ ಕಾರ್ಯದರ್ಶಿಗಳು, ಕೇಂದ್ರ ನೀರಾವರಿ ಸಚಿವ ಮತ್ತು ಪರಿಸರ ಖಾತೆಯ ಸಚಿವರು ಸಹ ಸದಸ್ಯರಾಗಿರುತ್ತಾರೆ. 2011ರಲ್ಲಿ ನದಿ ಶುದ್ಧೀಕರಣಕ್ಕಾಗಿ 14 ಸಾವಿರ ಕೋಟಿ ರೂಪಾಯಿಗಳನ್ನು ಬಿಡುಗಡೆ ಮಾಡಲಾಗಿದೆ. ಇದೀಗ ವಿಶ್ವ ಬ್ಯಾಂಕ್ ನಿಂದ ಗಂಗಾ ನದಿಯ ಯೋಜನೆಗೆ ಒಂದು ಲಕ್ಷ ಕೋಟಿ ರೂಪಾಯಿಗಳ ಸಾಲದ ಒಡಂಬಡಿಕೆ ಏರ್ಪಟ್ಟಿದೆ. ಆದರೆ ನದಿಯ ಚಹರೆಯಾಗಲಿ, ಲಕ್ಷಣವಾಗಲಿ ಬದಲಾಗಲಿಲ್ಲ. ಬದಲಾಗುವುದು ನಮ್ಮ ರಾಜಕಾರಣಿಗಳಿಗೆ ಬೇಕಾಗಿಲ್ಲ. ಏಕೆಂದರೆ, ಜಗತ್ತಿನ ಪ್ರಮುಖ ಐದು ಮಲಿನ ನದಿಗಳಲ್ಲಿ ಒಂದಾಗಿರುವ ಗಂಗಾ ನದಿ ಸದಾ ಹಣದ ಹಾಲು ಕರೆಯುವ ಹಸು. ಭಾರತದ ನದಿಗಳಲ್ಲಿ ಹರಿಯುವ ಕೊಳಚೆ ಮತ್ತು ಕಸ ಕೂಡ ನಮ್ಮ ರಾಜಕಾರಣಿಗಳು, ಪಕ್ಷಗಳಿಗೆ ಲಾಭದಾಯಕ ದಂಧೆಯಾಗಿದೆ. ಒಂದು ಕ್ವಾರ್ಟರ್ ಅಗ್ಗದ ಸಾರಾಯಿಗೆ, ಒಂದು ದೊನ್ನೆ ಮಾಂಸಕ್ಕೆ, ಮೂರು ಕಾಸಿನ ಕಳಪೆ ಸೀರೆಗೆ, ಮತ್ತು ಐದು ನೂರು ಆರತಿ ತಟ್ಟೆಯ ಕಾಸಿಗೆ ನಮ್ಮ ಜನ ಚುನಾವಣೆಗಳಲ್ಲಿ ಮಾರಾಟವಾಗುತ್ತಿರುವಾಗ, ರಾಜಕಾರಣಿಗಳು ಚುನಾವಣೆಗೆ ಹಾಕಿದ ಬಂಡವಾಳವನ್ನು ಯೋಜನೆ ಮುಖಾಂತರ ಬಡ್ಡಿ ಸಮೇತ ಹಿಂದಕ್ಕೆ ಪಡೆಯುತ್ತಿದ್ದಾರೆ. ಗಂಗೆ ಮಾತ್ರ ಮೌನವಾಗಿ ಮಲಿನಗೊಂಡು ಹರಿಯುತ್ತಿದ್ದಾಳೆ., ಮುಂದೆಯೂ ಹರಿಯುತ್ತಾಳೆ.

courtesy : varthabharati

Please follow and like us:
error