fbpx

ಸಿನಿಮಾ ಯುವಜನರು ಹಾಳಾಗುತ್ತಾರೆ ಎನ್ನಲಾಗದು – ಕರುಗಲ್

ಕನ್ನಡ ಸಿನಿಮಾ ದಿನ ಕಾರ್ಯಕ್ರಮದಲ್ಲಿ ಉಪನ್ಯಾಸ : ನಗರಸಭೆ ಅಧ್ಯಕ್ಷ ಉಪಾಧ್ಯಕ್ಷರಿಗೆ ಸನ್ಮಾನ
ಕೊಪ್ಪಳ, ಮಾ. ೩. ಕನ್ನಡ ವಾಕ್ಚಿತ್ರಕ್ಕೆ ಇಂದು ೮೧ರ ಹರೆಯ. ೧೯೩೪ರ ಮಾರ್ಚ್ ೩ ರಂದು ಕನ್ನಡದ ಮೊದಲ ವಾಕ್ಚಿತ್ರ ಸತಿ ಸುಲೋಚನಾ ಬಿಡುಗಡೆಯಾಗಿತ್ತು. ಆ ಹಿನ್ನೆಲೆಯಲ್ಲಿ ಇಂದು ಸಿನಿಮಾ ದಿನ ಆಚರಿಸಲಾಗುತ್ತಿದೆ ಎಂದು ಉದಯವಾಣಿ ಜಿಲ್ಲಾ ವರದಿಗಾರ ಬಸವರಾಜ್ ಕರುಗಲ್ ಹೇಳಿದರು.
ಅವರು ನಗರದ ಸರಕಾರಿ ಪದವಿ ಕಾಲೇಜಿನಲ್ಲಿ ಇಂದು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಬೆಳ್ಳಿ ಮಂಡಲ ಮತ್ತು ಸ್ವರಭಾರತಿ ಗ್ರಾಮೀಣಾಭಿವೃದ್ಧಿ ಮತ್ತು ಸಾಂಸ್ಕೃತಿಕ ಸಂಸ್ಥೆ ಆಶ್ರಯದಲ್ಲಿ ಕನ್ನಡ ಸಿನಿಮಾ ದಿನ ಕಾರ್ಯಕ್ರಮದಲ್ಲಿ ಸಿನೆಮಾ ಮತ್ತು ಯುವಜನತೆ ಕುರಿತು ಉಪನ್ಯಾಸ ನೀಡಿ ಮಾತನಾಡಿದರು. 
  ಸಿನಿಮಾ ಎನ್ನುವುದು ಕೂಡ ಒಂದು ಮಾಧ್ಯಮ. ಅದರಿಂದ ಪ್ರಭಾವ, ಪರಿಣಾಮ ಖಂಡಿತ ಸಾಧ್ಯ. ಆದು ಮಕ್ಕಳ ಮೇಲಾಗಿರಬಹುದು, ಯುವಜನರ ಮೇಲಾಗಿರಬಹುದು, ಮಹಿಳೆಯರ ಮೇಲಾಗಿರಬಹುದು ಅಥವಾ ವಯೋವೃದ್ಧರ ಮೇಲೂ ಆಗಿರಬಹುದು. ಸಿನಿಮಾದಿಂದ ಯುವಜನರು ಕೆಟ್ಟರೋ? ಅಥವಾ ಯುವಜನರಿಂದ ಸಿನಿಮಾ ಕೆಟ್ಟಿತೋ ಗೊತ್ತಿಲ್ಲ. ಇವರೆಡೂ ಒಂದಕ್ಕೊಂದು ಪೂರಕ ಅಂತ ಭಾವಿಸ್ತಿನಿ ಎಂದ ಅವರು, ಸಾಮಾನ್ಯವಾಗಿ ಮಕ್ಕಳು ಸರಿಯಾಗಿ ಓದಿಕೊಳ್ಳದಿದ್ದರೆ, ಅಥವಾ ಪರೀಕ್ಷೆಯಲ್ಲಿ ಫೇಲಾದರೆ ಪೋಷಕರಿಂದ ಬರುವ ಮೊದಲೇ ದೂರು ಏನೆಂದರೆ “ಅಭ್ಯಾಸದ ಕಡೆಗೆ ಗಮನ ಕೊಡೋ ಮಗನೆ, ಅಥವಾ ಮಗಳೇ ಅಂದರೆ ದರ್ಶನ್ ಸಿನಿಮಾ ರೀಲೀಜಂತೆ, ಯಶ್ ಸಿನಿಮಾ ರೀಲೀಜಂತೆ ಅಂತ್ಹೇಳಿ ಗ್ಯಾಂಗ್‌ನ ಕಟ್ಟೊಂಡು ಕ್ಲಾಸ್ ಬಂಕ್ ಮಾಡಿ ಸಿನಿಮಾ ನೋಡೋದಕ್ಕೆ ಹೋದರೆ ಉದ್ಧಾರ ಆಗ್ತಾನಾ? ಅಥವಾ ಆಗ್ತಾಳ” ಇದು ಯುವಜನರ ಕಥೆ. 
ಸಿನಿಮಾ ಕಥೆಗೆ ಬರೋದಾದ್ರೆ ಚಲುವಿನ ಚಿತ್ತಾರ ತಗೊಳ್ಳಿ. ಆ ಸಿನಿಮಾ ಏನು ಕಾಲ್ಪನಿಕ ಕಥೆಯಲ್ಲ. ನೈಜ ಘಟನೆಯೊಂದನ್ನು ಆಧರಿಸಿ ಮಾಡಿದ ಸಿನಿಮಾ. ಇಲ್ಲಿ ಉದಾಹರಣೆ ಕೊಟ್ಟದ್ದು ಒಂದನ್ನು ಮಾತ್ರ. ಇದರ ಮೂಲ ತಾತ್ಪರ್ಯ ಇಷ್ಟೇ. ಸಿನಿಮಾ ಕೂಡಾ ಯುವಜನರ ಆಸೆ, ಆಕಾಂಕ್ಷೆ, ಬದುಕು, ಭವಿಷ್ಯ, ಬವಣೆಯನ್ನೇ ಹೇಳುತ್ತದೆ. ಅಫ್ ಕೋರ್ಸ್ ಈ ಮಾತು ಬಿಡುಗಡೆಯಾಗುವ ಎಲ್ಲ ಸಿನಿಮಾಗಳಿಗೂ ಅನ್ವಯವಾಗಲ್ಲ. ಹಾಗೆನೇ ಸಿನಿಮಾ ನೋಡೋದ್ರಿಂದಲೇ ಯುವಜನರು ಹಾಳಾಗ್ತಾರೆ ಅಂತ ಹೇಳೋಕೂ ಆಗಲ್ಲ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ನೌಕರರ ಸಂಘದ ಅಧ್ಯಕ್ಷ ನಾಗರಾಜ ಜುಮ್ಮನ್ನವರ ಸಿನಿಮಾಕ್ಕೂ ಒಂದು ದಿನ ಅಂತ ಮಾಡಿ ಜನರಲ್ಲಿ ಜಾಗೃತಿ ಮೂಡಿಸುತ್ತಿರುವದು ಶ್ಲಾಘನೀಯ, ಹಳೆ ಚಿತ್ರಗಳಂತೆ ಇಂದು ಸಿನಿಮಾಗಳು ಬರುತ್ತಿಲ್ಲ, ಯುವಕರಾಗಿದ್ದಾಗ ಸಿಕ್ಕಾಪಟ್ಟೆ ಚಿತ್ರಗಳನ್ನು ನೋಡಿದ ನಮಗೆ ಈಗ ನೋಡಲು ಸಾಧ್ಯವಾಗುತ್ತಿಲ್ಲ, ಸಿನಿಮಾ ಒಂದು ಪ್ರಭಾವಶಾಲಿ ಮಾಧ್ಯಮ ಎಂಬುದು ಮಾತ್ರ ಸತ್ಯ ಆದ್ದರಿಂದ ಅಲ್ಲಿ ಯುವಜನರ ಏಳ್ಗೆ ಬಗ್ಗೆ ಚಿಂತನೆಗಳು ಬರಬೇಕಿದೆ ಎಂದರು.
ನೂತನ ನಗರಸಭೆ ಅಧ್ಯಕ್ಷೆ ಬಸಮ್ಮ ಹಳ್ಳಿಗುಡಿ ಹಾಗೂ ಉಪಾಧ್ಯಕ್ಷ ಬಾಳಪ್ಪ ಬಾರಕೇರರನ್ನು ಸನ್ಮಾನಿಸಲಾಯಿತು. ಮುಖ್ಯ ಅತಿಥಿಗಳಾದ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕ ಸುರೇಶ ಸೊನ್ನದ, ಶಿವ-ಲಕ್ಷ್ಮೀ ಚಿತ್ರಮಂದಿರ ಮಾಲೀಕ ವಿರೇಶ ಮಹಾಂತಯ್ಯನಮಠ, ಚಲನಚಿತ್ರ ಕಲಾವಿದ ಬಸವರಾಜ ಕೊಪ್ಪಳ ಇತರರು ಮಾತನಾಡಿದರು. ಕಾರ್ಯಕ್ರಮದಲ್ಲಿ ಚಲನಚಿತ್ರ ಸಾಹಿತಿ ಡಾ. ಮಹಾಂತೇಶ ಮಲ್ಲನಗೌಡರ ಅಧ್ಯಕ್ಷತೆವಹಿಸಿ ಮಾತನಾಡುತ್ತ, ಕೊಪ್ಪಳದಲ್ಲಿ ಬೆಳ್ಳಿಮಂಡಲ ತುಂಬಾ ಕ್ರಿಯಾಶೀಲವಾಗಿ ಇಟ್ಟುಕೊಳ್ಳಲು ಗೊಂಡಬಾಳ ಸಫಲರಾಗಿದ್ದಾರೆ, ಬೆಂಗಳೂರಿನ ಗಾಂಧಿ ನಗರವನ್ನು ಬೇದಿಸಿ ಕೊಪ್ಪಳದ ಯುವಜನರು ಚಿತ್ರ ರಂಗದಲ್ಲಿ ಬೆಳೆಯಬೇಕು ಎಂದು ಆಶಿಸಿದರು.
ವಿಜಯಕುಮಾರ ಗೊಂಡಬಾಳ ಕನ್ನಡ ಗೀತೆ ಹಾಡಿದರು, ಪ್ರಕಾಶಗೌಡ ಪರ್ವತಗೌಡ್ರ ಸ್ವಾಗತಿಸಿದರು, ಬೆಳ್ಳಿ ಮಂಡಲ ಸಂಚಾಲಕ ಮಂಜುನಾಥ ಜಿ. ಗೊಂಡಬಾಳ ಕಾರ್ಯಕ್ರಮದ ಕುರಿತು ಪ್ರಾಸ್ತಾವಿಕವಾಗಿ ಮಾತನಾಡಿ ನಿರೂಪಿಸಿದರು ಕೊನೆಯಲ್ಲಿ ಕಾಲೇಜಿನ ದೈಹಿಕ ನಿರ್ದೇಶಕಿ ಶೋಭಾ ವಂದಿಸಿದರು.
Please follow and like us:
error

Leave a Reply

error: Content is protected !!