ಮಾಂತ್ರಿಕ ಮೋಡಿ: ನಿಧಿಯಾಸೆಗೆ ಬಲಿ : ಕಾತರಕಿಯ ಶರಣಬಸಪ್ಪ ಸಾವು

ಕೊಪ್ಪಳ ನ.೮ : ಆಧುನಿಕ ಯುಗದಲ್ಲೂ ಢೋಂಗಿ ಸ್ವಾಮಿಯ ‘ಮಾಂತ್ರಿಕ ಮೋಡಿ’ಗೆ ಮರುಳಾ ಗಿ ‘ನಿಧಿ’ ಹಿಂದೆ ಬಿದ್ದ ಸಹಕಾರಿ ಇಲಾಖೆ ನೌಕರನೊಬ್ಬ ಕೊನೆಗೂ ಪ್ರಾಣ ಕಳೆದುಕೊಂಡಿದ್ದು ವಿಧಿಯಾಟವೇ ಸರಿ.
ತಾಲೂಕಿನ ಕಾತರಕಿ ಗ್ರಾಮದ ಸಹಕಾರಿ ಇಲಾಖೆ ಉದ್ಯೋಗಿ ಶರಣಬಸಪ್ಪ ಚಂದ್ರಾಮಪ್ಪ ಕಣಗಲ್ (೪೫) ಎಂಬಾತನೇ ನಿಧಿ ಆಸೆ ತೋರಿಸಿದ ಢೋಂಗಿ ಸ್ವಾಮಿ ಬಲೆಗೆ ಬಿದ್ದು ಇಹಲೋಕ ತ್ಯಜಿಸಿದ್ದಾನೆ. ನಿಧಿ ಆಸೆ ಹುಟ್ಟಿಸಿ ದುಡ್ಡು ಪೀಕಿದ ಮಾಂತ್ರಿಕ ರಹೀಮ್ ಈಗ ಕಂಬಿ ಎಣಿಸುತ್ತಿ ದ್ದಾನೆ. ನಿಧಿ ಆಸೆಗೆ ಮಾಡಿದ ಸುಮಾರು ರು. ೬ ಲಕ್ಷ ಸಾಲ ತೀರಿಸುವ ದಾರಿ ಕಾಣದೆ ಚಿಂತಿತ ನಾಗಿ ಶರಣಬಸಪ್ಪ ಮಂಗಳವಾರ ಮೃತಪಟ್ಟಿದ್ದಾನೆ.
ಸಾಲ ತೀರಿಸಲಾಗದೆ ಹಾಗೂ ಮಾನಸಿಕ ವೇದನೆಯಿಂದ ವಿಷ ಸೇವಿಸಿ ಆತ್ಮಹತ್ಯೆ ಮಾಡಿ ಕೊಂಡಿರಬಹುದು ಇಲ್ಲವೇ ಹೃದಯಾಘಾತದಿಂದ ಮೃತಪಟ್ಟಿರಬಹುದು ಎಂದು ಶಂಕಿಸಲಾಗಿದೆ. ಮರಣೋತ್ತರ ಪರೀಕ್ಷೆ ನಡೆದಿದ್ದು ವರದಿ ಬಂದ ಬಳಿಕ ನಿಖರ ಕಾರಣ ಗೊತ್ತಾಗಲಿದೆ. ಕುಕನೂರು ಹಾಗೂ ಅಳವಂಡಿ ಪೊಲೀಸ್ ಠಾಣೆಯಲ್ಲಿ ಪ್ರತ್ಯೇಕ ಪ್ರಕರಣ ದಾಖಲಾಗಿವೆ.
ಏನಿದು ಘಟನೆ?: ಕಾತರಕಿಯಲ್ಲಿ ಸಹಕಾರಿ ಇಲಾಖೆಯ ಲೆಕ್ಕ ಪರಿಶೋಧಕನಾಗಿ ಶರಣಬಸಪ್ಪ ಕಾರ್ಯನಿರ್ವಹಿಸುತ್ತಿದ್ದ. ಸರ್ಕಾರಿ ನೌಕರಿಯ ಜತೆಗೆ ೪ ಎಕರೆ ಜಮೀನಿತ್ತು. ನೆಮ್ಮದಿಯ ಜೀವನ ಸಾಗಿಸುತ್ತಿರುವಾಗಲೇ ಆಚಾನಕ್ ಆಗಿ ಕೇರಳ ಮೂಲದ ಮಾಂತ್ರಿಕ ರಹೀಮ್‌ನ ಪರಿಚಯವಾ ಗಿದೆ.
ಇದೇ ಪರಿಚಯದಿಂದ ರಹೀಮ್ ‘ನಿಮ್ಮ ಹೊಲದಲ್ಲಿ ಅಪಾರ ಪ್ರಮಾಣದ ನಿಧಿ ಹಾಗೂ ಚಿನ್ನದ ನಿಕ್ಷೇಪ ಇದೆ. ಅದನ್ನು ನಾನು ತೆಗೆದು ಕೊಡುತ್ತೇನೆ’ ಎಂದು ನಂಬಿಸಿದ್ದಾನೆ. ನಿಧಿ ಎಂದ ತಕ್ಷಣ ಪ್ರಭಾವಿತನಾದ ಬಸವರಾಜ ಅದನ್ನು ತೆಗೆದುಕೊಡಿ. ಎಷ್ಟು ಖರ್ಚಾದರೂ ಪರವಾಗಿಲ್ಲ ಎಂದು ಕೋರಿದ್ದಾನೆ. ಕೋರಿಕೆಯಂತೆ ‘ಮಾಂತ್ರಿಕ’ ಕೆಲಸ ಶುರು ಮಾಡಿದ ರಹೀಮ್ ಕೆಲ ದಿನ ಪೂಜೆ ಮಾಡಿ ನಿಮ್ಮ ಹೊಲದಲ್ಲಿ ಸುಮಾರು ೨೦ ಕೆ.ಜಿ. ಚಿನ್ನ ಇದೆ.
ವಿಶೇಷ ಪೂಜೆ ಮಾಡಿದರೆ ಮಾತ್ರ ಅದನ್ನು ತೆಗೆಯಲು ಸಾಧ್ಯ ಎಂದು ನಂಬಿಸಿದ್ದಾನೆ. ಇದಕ್ಕೂ ಶರಣಬಸಪ್ಪ ಅಸ್ತು ಎಂದಿದ್ದಾನೆ. ಲಕ್ಷಾಂತರ ರು. ವೆಚ್ಚ ಮಾಡಿ ಪೂಜೆ ಮಾಡಿದ ಬಳಿಕ ರಹೀಮ್ ಹೊಲದಿಂದ ಒಂದು ಬಿಂದಿಗೆ ತಂದು ಕೊಟ್ಟಿದ್ದಾನೆ. ೨೦ ದಿನಗಳವರೆಗೆ ಮನೆಯಲ್ಲಿಟ್ಟು ಪತ್ನಿಯನ್ನು ವಿವಸ್ತ್ರಗೊಳಿಸಿ ಪೂಜೆ ಮಾಡುವಂತೆ ತಿಳಿಸಿದ್ದಾನೆ.
ವಿವಸ್ತ್ರ ಪೂಜೆ: ಮಾಂತ್ರಿಕನ ಅಣತಿಯಂತೆ ೨೦ ದಿನಗಳ ಪೂಜೆ ಮಾಡಿದ ಬಳಿಕ ಬಿಂದಿಗೆ ತೆಗೆದು ನೋಡಿದಾಗ ಏನೂ ಇಲ್ಲದ್ದನ್ನು ಕಂಡು ಕಂಗಾಲಾದ ಶರಣಬಸಪ್ಪ ಮಾಂತ್ರಿಕನನ್ನು ತರಾಟೆಗೆ ತೆಗೆದುಕೊಂಡಿದ್ದಾನೆ. ಆಗ ಮಾಂತ್ರಿಕ ರಹೀಮ್ ಈ ಪೂಜೆ ಸರಿ ಹೋಗುತ್ತಿಲ್ಲ. ನಿಧಿ ಸಿಗಬೇಕೆಂದರೆ ನಿನ್ನ ಪತ್ನಿಯನ್ನು ನಾನೇ ವಿವಸ್ತ್ರಗೊಳಿಸಿ ಪೂಜೆ ಮಾಡಬೇಕೆಂದು ಕ್ಯಾತೆ ತೆಗೆದಿದ್ದಾನೆ.
ಇದರಿಂದ ಕುಪಿತಗೊಂಡ ಶರಣಬಸಪ್ಪ ಮಾಂತ್ರಿಕನೊಂದಿಗೆ ಜಗಳ ಮಾಡಿದ್ದಾನೆ. ಇಷ್ಟಕ್ಕೆ ಸುಮ್ಮನಾಗದ ಮಾಂತ್ರಿಕ ರಹೀಮ್ ನೇರವಾಗಿ ಶರಣಬಸಪ್ಪ ಪತ್ನಿಗೆ ಕರೆ ಮಾಡಿ ಇದುವರೆಗೂ ತೆಗೆದುಕೊಂಡಿರುವ ಹಣ ವಾಪಸ್ ನೀಡುತ್ತೇನೆ. ಭಾನಾಪುರ ಕ್ರಾಸ್‌ಗೆ ಬರುವಂತೆ ಹೇಳಿದ್ದಾನೆ. ಆಗ ಮಾಂತ್ರಿಕ ರಹೀಮ್‌ನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ರು. ೬ ಲಕ್ಷ ಖರ್ಚು: ಇಷ್ಟೆಲ್ಲಾ ಪೂಜೆಗೆ ಶರಣಬಸಪ್ಪ ಬರೋಬ್ಬರಿ ರು. ೬ ಲಕ್ಷ ಖರ್ಚು ಮಾಡಿದ್ದ. ಇದಕ್ಕಾಗಿ ವಿವಿಧೆಡೆ ಸಾಲ ಮಾಡಿದ್ದರಿಂದ ಆಘಾತಕ್ಕೊಳಗಾಗಿದ್ದ. ಕಳೆದೊಂದು ವಾರದಿಂದ ಸರಿಯಾಗಿ ಊಟ ಮಾಡದೇ ಮಾನಸಿಕವಾಗಿ ನೊಂದಿದ್ದ ಎನ್ನಲಾಗಿದೆ. ಇಬ್ಬರು ಹೆಣ್ಣು ಮಕ್ಕಳು, ಒಬ್ಬ ಗಂಡು ಮಗ ಇರುವ ಕುಟುಂಬದಲ್ಲಿ ಈಗ ದುಃಖ ಮಡುಗಟ್ಟಿದೆ. ಪತಿಯ ದುರಾಸೆಯಿಂದ ಅನುಭವಿಸಬಾರದ ಹಿಂಸೆ ಅನುಭವಿಸಿದ ಪತ್ನಿ ಈಗ ಪತಿಯ ಅಗಲಿಕೆಯಿಂದ ನರಳುತ್ತಿದ್ದಾಳೆ. ಇದೇ ಅಲ್ಲವೇ ಆಸೆಯೇ ದುಃಖಕ್ಕೆ ಮೂಲ?

Leave a Reply