ಸಂಘಟನೆಗಳ ಮೂಲಕ ಅಭಿವೃದ್ದಿ ಸಾಧ್ಯ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ: ಸಂಘಟನೆಗಳು  ಇಂದಿನ ಸ್ಪರ್ಧಾತ್ಮಕ ದಿನಗಳಲ್ಲಿ ಬಹಳ ಮುಖ್ಯ . ಸಂಘಟನೆಗಳಿಂದ ಸಮಸ್ಯೆಗಳನ್ನು ಬಗೆಹರಿಸಲು ಸಾಧ್ಯ. ಈ ನಿಟ್ಟಿನಲ್ಲಿ ಕೊಪ್ಪಳ ತಾಲೂಕಿನ ಎಲ್ಲ ಫೋಟೋ ಮತ್ತು ವಿಡಿಯೋಗ್ರಾಫರ್‍ಸ್ ಗಳು ಸೇರಿಕೊಂಡು ಸಂಘಟಿತರಾಗಿ ಕಾರ್‍ಯಕ್ರಮವನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ. ವೃತ್ತಿ ಬಾಂಧವರ ಕಷ್ಟ ನಷ್ಟಗಳಿಗೆ ನೆರವಾಗುವುದು ಮತ್ತು  ಸಮಾಜಕ್ಕೆ ಉಪಯೋಗವಾಗುವಂತಹ ಕಾರ್‍ಯಕ್ರಮಗಳನ್ನು ಹಮ್ಮಿಕೊಳ್ಳಲು ಬಯಸುತ್ತಿರುವ  ಈ ಸಂಘಟನೆಗೆ ಮುಂದಿನ ದಿನಗಳಲ್ಲಿ ಅಗತ್ಯ ಸಹಾಯ,ಸಹಕಾರ ನೀಡುವೆ. ತಾಲೂಕಿನಲ್ಲಿ ಇಷ್ಟೊಂದು ಜನ ಛಾಯಾಗ್ರಾಹಕರು ಸೇರಿ ಇಂತಹ ವಿಶಿಷ್ಟದಿನ ಆಚರಿಸುತ್ತಿರುವುದು ಶ್ಲಾಘನೀಯ ” ಎಂದು ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು. ಅವರು ಕೊಪ್ಪಳದ ಸಿರಸಪ್ಪಯ್ಯನಮಠದಲ್ಲಿ ಕೊಪ್ಪಳ ತಾಲೂಕ ಫೋಟೋ ಮತ್ತು ವಿಡಿಯೋಗ್ರಾಫರ್‍ಸ್ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಛಾಯಾಗ್ರಹಣ ದಿನ ಕಾರ್‍ಯಕ್ರಮವನ್ನು ಕ್ಯಾಮೆರಾ ಕ್ಲಿಕ್ ಮಾಡುವುದರ ಮೂಲಕ ಉದ್ಘಾಟಿಸಿ  ಮಾತನಾಡುತ್ತಿದ್ದರು. 
ನಂತರ ಸಂಘದವತಿಯಿಂದ ನೂತನ ಶಾಸಕ ಕೆ.ರಾಘವೇಂದ್ರ ಹಿಟ್ನಾಳರಿಗೆ, ಹಿರಿಯ ಛಾಯಾಗ್ರಾಯಕ ಕಳಕಪ್ಪ ಜಾದವ ಹಾಗೂ ಕಲಾವಿದ ಕೆ.ಕೆ.ಮಕಾಳಿಯವರಿಗೆ,ರಾಮು ಅವರಿಗೆ ಆತ್ಮೀಯವಾಗಿ ಸನ್ಮಾನಿಸಲಾಯಿತು. 
ಸನ್ಮಾನ ಸ್ವೀಕರಿಸಿದ ಮಾತನಾಡಿದ ಹಿರಿಯ ಛಾಯಾಗ್ರಾಹಕ,ನಗರಾಭಿವೃದ್ದಿ ಪ್ರಾಧಿಕಾರದ ಮಾಜಿ ಅಧ್ಯಕ್ಷರಾದ ಕಳಕಪ್ಪ ಜಾದವ – ಕಳೆದ ೩ ದಶಕಗಳಿಂದ ನಾನೂ ಸಹ ಛಾಯಾಗ್ರಾಹಕನಾಗಿ ದುಡಿದಿದ್ದೇನೆ. ಆ ಸಮಯದಲ್ಲಿ ಫೋಟೋ ತೆಗೆಯಲು ಬಹಳ ಕಷ್ಪಪಡಬೇಕಾಗಿತ್ತು. ಇಷ್ಟೊಂದು ಸಂಖ್ಯೆಯಲ್ಲಿ ಛಾಯಾಗ್ರಾಹಕರು ಇರಲಿಲ್ಲ. ಈಗ ತಂತ್ರಜ್ಞಾನ ಬದಲಾಗಿದೆ. ಎಲ್ಲವೂ ಸರಳವಾಗಿದೆ.  ಸಂಘಟನೆಯ ಮೂಲಕ ಬಹಳಷ್ಟನ್ನು ಸಾಧಿಸಬಹುದು. ನೀವೂ ಈ ಕಲೆಯನ್ನು ಇನ್ನೊಬರಿಗೂ ಕಲಿಸಿ ಅವರ ಬದುಕನ್ನು ಕಟ್ಟಿಕೊಳ್ಳುವಲ್ಲಿ ನೆರವಾಗಿ. ಉತ್ತಮ ಫೋಟೋಗ್ರಾಫಿಯಿಂದ ಪ್ರಶಸ್ತಿ,ಸನ್ಮಾನಗಳು ಸಿಗುವಂತಾಗಲಿ ” ಎಂದು ಹಾರೈಸಿದರು. 
ಕಾರ್‍ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಅಮ್ಜದ್ ಪಟೇಲ್, ಅನಿಕೇತ್ ಅಂಗಡಿ, ಗಾಳೆಪ್ಪ ಪೂಜಾರ ಸೇರಿದಂತೆ ನಗರದ ಹಲವಾರು ಗಣ್ಯರು ಹಾಗೂ ನೂರಾರು ಛಾಯಾಗ್ರಾಹಕರು ಕಾರ್‍ಯಕ್ರಮದಲ್ಲಿ ಭಾಗವಹಿಸಿದ್ದರು.
ಸಂಘದ ಕಾರ್‍ಯದರ್ಶಿ ವಿಜಯ ವಸ್ತ್ರದ ಪ್ರಾಸ್ತಾವಿಕವಾಗಿ ಮಾತನಾಡಿದರು.  ಅತಿಥಿಗಳಾಗಿ ಆಗಮಿಸಿದ್ದ ಹಂಪಿಯ ರಾಮು ತಮ್ಮ ಅನುಭವವನ್ನು ಹಂಚಿಕೊಂಡರು. ಸಾನಿಧ್ಯ ವಹಿಸಿದ್ದ ಸಿರಪ್ಪಯನಮಠದ ಸಿರಸಪ್ಪಯ್ಯ ಮಹಾಸ್ವಾಮಿಗಳು  ಆಶೀರ್ವಚನ ನೀಡಿದರು.  ಉಪನ್ಯಾಸಕ ಬಸವಂತಯ್ಯ ಹಿರೇಮಠರಿಂದ ನಗೆಹಬ್ಬ ಕಾರ್‍ಯಕ್ರಮ ಹಮ್ಮಿಕೊಳ್ಳಲಾಗಿತ್ತು. 
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ಸಂಘದ ಅಧ್ಯಕ್ಷರಾದ ಗೋವಿಂದರಾವ್ ಪದಕಿ ವಹಿಸಿಕೊಂಡಿದ್ದರು.  ಪ್ರಾರ್ಥನೆಯನ್ನು ಲಚ್ಚಪ್ಪ ಹಳೆಪೇಟೆ, ಸ್ವಾಗತವನ್ನು ಸಿರಾಜ್ ಬಿಸರಳ್ಳಿ ಹಾಗೂ ಕಾರ್‍ಯಕ್ರಮದ ನಿರೂಪಣೆಯನ್ನು  ಗವಿಸಿದ್ದಪ್ಪ ಕರ್ಕಿಹಳ್ಳಿ ಮಾಡಿದರೆ ಬಸವರಾಜ ಕುಂಬಾರ ವಂದನಾರ್ಪಣೆ ಮಾಡಿದರು. 
ಫೋಟೋಗ್ರಾಫಿ ಎನ್ನುವುದು ನೆರಳು ಬೆಳಕಿನಾಟ- ಕೆ.ಕೆ.ಮಕಾಳಿ 
ಕೊಪ್ಪಳ : ಛಾಯಾಗ್ರಹಣ ಎನ್ನುವುದು ಒಂದು ತಪಸ್ಸಿನಂತೆ. ಉತ್ತಮವಾದ , ಕಲಾತ್ಮಕವಾದ  ಚಿತ್ರ ತೆಗೆಯುವುದಕ್ಕಾಗಿ ತಾಳ್ಮೆಯಿಂದ ಕಾಯಬೇಕಾಗುತ್ತದೆ. ಫೋಟೋಗ್ರಾಫಿ ಜಗತ್ತು ಬಹಳ ದೊಡ್ಡದು. ಕ್ಯಾಮೆರಾಗಳು ಮೆಡಿಕಲ್ ಮತ್ತು ಸೈಂಟಿಪಿಕ್ ವಲಯಗಳಲ್ಲಿ ಉಪಕರಣದಂತೆ ಬಳಕೆಯಾಗುತ್ತಿವೆ. ಅಕ್ಷರಗಳಿಗಿಂತ ಚಿತ್ರ ಹಾಗೂ ವಿಡಿಯೋ ಮಾಧ್ಯಮ ಪ್ರಭಾವಶಾಲಿ. ಜವಾಬ್ದಾರಿಯನ್ನು ಅರಿತುಕೊಂಡು ಚಿತ್ರಗಳನ್ನು ತೆಗೆಯಬೇಕು.  ಫೋಟೋಗ್ರಾಫಿಗೆ ಅಬ್ಜೆಕ್ಟ್ ಕಂಪೋಜಿಷನ್, ನೆರಳು ಬೆಳಕಿನ ವಿನ್ಯಾಸ ಅತೀ ಮುಖ್ಯ. ಛಾಯಾಗ್ರಾಹಕ ನೆರಳು ಬೆಳಕಿನ ಜೊತೆ ಆಟವಾಡುತ್ತಾನೆ ಎಂದು ಹಿರಿಯ ಕಲಾವಿದ ಕೆ.ಕೆ.ಮಕಾಳಿ ಹೇಳಿದರು. ಅವರು ಕೊಪ್ಪಳದ ಸಿರಸಪ್ಪಯ್ಯನಮಠದಲ್ಲಿ ಕೊಪ್ಪಳ ತಾಲೂಕ ಫೋಟೋ ಮತ್ತು ವಿಡಿಯೋಗ್ರಾಫರ್‍ಸ್ ಸಂಘದಿಂದ ಹಮ್ಮಿಕೊಳ್ಳಲಾಗಿದ್ದ ವಿಶ್ವ ಛಾಯಾಗ್ರಹಣ ದಿನ ಕಾರ್‍ಯಕ್ರಮದಲ್ಲಿ ಉಪನ್ಯಾಸಕರಾಗಿ ಭಾಗವಹಿಸಿ ಮಾತನಾಡಿದರು.

ಬೆಳಿಗ್ಗೆ ೯-೩೦ಕ್ಕೆ ಗವಿಮಠದಿಂದ ಬೈಕ್ ಜಾಥಾವನ್ನು ಹಮ್ಮಿಕೊಳ್ಳಲಾಗಿತ್ತು. ಬೈಕ್ ಜಾಥಾಕ್ಕೆ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಹಾಗೂ ಮಾಜಿ ಶಾಸಕ ಕರಡಿ ಸಂಗಣ್ಣ ಚಾಲನೆ ನೀಡಿದರು. ನಗರದ ವಿವಿದೆಡೆ ಸಂಚರಿಸಿದ ಜಾಥಾ ಸಿರಸಪ್ಪಯ್ಯನಮಠ ತಲುಪಿತು. 

Leave a Reply