ಶ್ರೀರಾಮುಲು ನಮ್ಮವರೇ-ಡಿ.ವಿ. ಸದಾನಂದ ಗೌಡ

ಬೆಂಗಳೂರು, ನ.14: ‘‘ಶ್ರೀರಾಮುಲು ನಮ್ಮವರೇ; ಆದರೆ ಬಿಜೆಪಿಯ ಅಧಿಕೃತ ಅಭ್ಯರ್ಥಿ ಗಾದಿ ಲಿಂಗಪ್ಪನವರನ್ನೇ ಗೆಲ್ಲಿಸುತ್ತೇವೆ’ ಇದು ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡರ ಹೊಸ ವರಸೆ.
‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ’ ಎಂದು ಹೇಳುತ್ತಲೆ ಬಂದಿದ್ದ ಮುಖ್ಯಮಂತ್ರಿ ಈಗ ಇದ್ದಕ್ಕಿದಂತೆ ವ್ಯಕ್ತಿ ಸ್ತುತಿ ಆರಂಭಿಸಿ ಶ್ರೀರಾಮುಲು ಬಗ್ಗೆ ಮೃದು ಧೋರಣೆ ವ್ಯಕ್ತಪಡಿಸಿದ್ದಾರೆ.
ಮಧುಮೇಹ ಜಾಗೃತಿಯ ಅಂಗವಾಗಿ ನಗರದ ಕಬ್ಬನ್‌ಪಾರ್ಕ್‌ನಲ್ಲಿ ಹಮ್ಮಿಕೊಂಡಿದ್ದ ಮ್ಯಾರಥಾನ್‌ಗೆ ಚಾಲನೆ ನೀಡಿದ ನಂತರ ಅವರು ಸುದ್ದಿಗಾರರೊಂದಿಗೆ ಮಾತನಾಡುತ್ತ ಈ ವಿಚಾರ ತಿಳಿಸಿದರು.
‘‘ಶ್ರೀರಾಮುಲು ನಮ್ಮವರೇ, ಪಕ್ಷದೊಂದಿಗಿನ ಅವರ ಸಂಬಂಧ ಹಲವು ವರ್ಷಗಳದ್ದು; ಅದನ್ನು ಇದ್ದಕ್ಕಿದ್ದಂತೆ ಕಡಿದುಕೊಳ್ಳಲು ಸಾಧ್ಯವೇ? ಶ್ರೀರಾಮುಲುಗೆ ಈ ಮಟ್ಟಿನ ವರ್ಚಸ್ಸು ಮತ್ತು ಬೆಳವಣಿಗೆ ಸಿಕ್ಕಿದ್ದು ಪಕ್ಷದಿಂದಲೇ. ಹಾಗಾಗಿ ಅವರು ಎಂದೆಂದಿಗೂ ನಮ್ಮವರೇ. ಅಂತಿಮ ದಿನದವರೆಗೂ ಅವರ ನಿರ್ಧಾರ ಕಾದು ನೋಡುತ್ತೇವೆ’’. ಇದು ಮುಖ್ಯಮಂತ್ರಿ ಸದಾನಂದ ಗೌಡ, ಬಿಜೆಪಿಗೆ ಸಡ್ಡು ಹೊಡೆದು ಪಕ್ಷೇ ತರ ಅಭ್ಯರ್ಥಿಯಾಗಿ ಬಳ್ಳಾರಿ ಗ್ರಾಮಾಂತರ ವಿಧಾನ ಸಭಾ ಕ್ಷೇತ್ರದ ಉಪ ಚುನಾವಣೆಗೆ ಸ್ಪರ್ಧಿಸಿರುವ ಶ್ರೀರಾಮುಲು ಬಗ್ಗೆ ಆಡಿದ ಮೃದು ಮಾತುಗಳು.
ಶ್ರೀರಾಮುಲು ನಮ್ಮವರೇ ಎಂದು ಹೇಳುತ್ತಲೇ, ‘ಪಕ್ಷಕ್ಕಿಂತ ಯಾರೂ ದೊಡ್ಡವರಲ್ಲ, ಬಳ್ಳಾರಿ ಉಪಚುನಾವಣೆಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯನ್ನೇ ಗೆಲ್ಲಿಸುತ್ತೇವೆ. ಇದಕ್ಕೆ ಪಕ್ಷದ ಎಲ್ಲ ನಾಯಕರು, ಸಚಿವ ಹಾಗೂ ಶಾಸಕರು ಬಹಿರಂಗ ಪ್ರಚಾರ ಕೈಗೊಳ್ಳಲಿದ್ದಾರೆ. ಈ ಬಗ್ಗೆ ಯಾವುದೇ ಸಂಶಯ ಬೇಡ ಎಂದು ಮುಖ್ಯಮಂತ್ರಿ ಸದಾನಂದಗೌಡ ದ್ವಂದ್ವ ಹೇಳಿಕೆ ನೀಡಿದರು

Leave a Reply