ಅಬುಧಾಬಿ ಕರ್ನಾಟಕ ಸಂಘ ಕರ್ನಾಟಕ ರಾಜ್ಯೋತ್ಸವ ಆಚರಣೆ

Karnataka Rajyotsava Celebration – 2012 by ABU DHABI KARNATAKA SANGHA

ಅಬುಧಾಬಿ: ಅರಬ್ ಸಂಯುಕ್ತ ಸಂಸ್ಥಾನದಲ್ಲಿ ಮಾತೃಸ್ಥಾನದಲ್ಲಿರುವ ಅಬುಧಾಬಿ ಕರ್ನಾಟಕ ಸಂಘ ಕರ್ನಾಟಕ ರಾಜ್ಯೋತ್ಸವ ಆಚರಣೆಯನ್ನು ಅದ್ದೂರಿಯಿಂದ ಆಚರಿಸಿ, ಕೊಲ್ಲಿ ರಾಷ್ಟ್ರದಲ್ಲಿ ಕನ್ನಡದ ಕಂಪನ್ನು ಬೀರಿದ್ದು ಕನ್ನಡಿಗರು ಸಂಭ್ರಮಿಸಿದರು.

2012 ನವಂಬರ್ 2 ನೇ ಶುಕ್ರವಾರ ಬೆಳಿಗ್ಗೆ 10.30 ಗಂಟೆಗೆ ಅಬುಧಾಬಿ ಇಂಡಿಯನ್ ಸೋಶಿಯಲ್ ಸೆಂಟರಿನ ಭವ್ಯ ಸಭಾಂಗಣ ಅಭಿಮಾನಿ ಕನ್ನಡಿಗರಿಂದ ಭರ್ತಿಯಾಗಿತ್ತು. ಸಂಪ್ರದಾಯ ಉಡುಗೆ ತೊಡುಗೆಗಳಿಂದ ಉಲ್ಲಾಸ ಭರಿತರಾದ ಕಾರ್ಯಕಾರಿ ಸಮಿತಿಯ ಸದಸ್ಯರು  ಆಹ್ವಾನಿತ ಅತಿಥಿಗಳನ್ನು ಬರಮಾಡಿಕೊಂಡರು.

ಯು.ಎ.ಇ. ಕನ್ನಡಿಗರ ಮಹಾಪೋಷಕರಾದ  ಡಾ. ಬಿ. ಆರ್. ಶೆಟ್ಟಿಯವರು ಮತ್ತು ಸಮಾರಂಭದ ಮುಖ್ಯ ಅತಿಥಿಗಳಾದ ಯು.ಎ.ಇ. ಗೆ ಭಾರತದ ರಾಯಬಾರಿಯಾಗಿರುವ ಕನ್ನಡಿಗ ಗೌರವಾನ್ವಿತ   ಎಂ. ಕೆ. ಲೋಕೇಶ್ ರವರು ಹಾಗೂ ವಿಶೇಷ ಕಾರ್ಯಕ್ರಮ ನೀಡಲು ಬೆಂಗಳೂರಿನಿಂದ ಆಗಮಿಸಿದ್ದ ಕಲಾವಿದೆ ಇಂದುಶ್ರೀ ಹಾಗೂ ಶ್ರೀಮತಿ ಮಂಜುಳ, ಅಧ್ಯಕ್ಷರಾದ ಸರ್ವೋತ್ತಮ ಶೆಟ್ಟಿ ಮತ್ತು ಕಾರ್ಯಕಾರಿ ಸಮಿತಿ, ಗಣ್ಯರ ಸಮ್ಮುಖದಲ್ಲಿ ಜ್ಯೋತಿ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.

ಮಂಗಳಾ ಶೆಟ್ಟಿಯವರ ಪ್ರಾಸ್ಥವಿಕ, ರಾಜ್ಯೋತ್ಸವ ಶುಭಾಶಯದೊಂದಿಗೆ ಪ್ರಾರಂಭವಾದ ಕಾರ್ಯಕ್ರಮ ದಿವ್ಯಾ ಶರ್ಮಾ ತಂಡದ ಪ್ರಾರ್ಥನೆ, ಗಾನ ನೃತ್ಯ ಕೌಸ್ಥುಭ ತಂಡದ ನೃತ್ಯ, ವೀಣಾ ಮಲ್ಯ ಮತ್ತು ಗಿರೀಶ್ ತಂಡದ ಡಾ. ರಾಜ್ ಕುಮಾರ್ ಒಂದು ಸಿಹಿ ನೆನಪು, ರೂಪಕ. ಡೊನಾಲ್ಡ್ ಪಿಂಟೊ ತಂಡದ ಎಂಥಾ ಸೌಂದರ್ಯ ನಾಡು ನಮ್ಮ ಕರುನಾಡು ನೃತ್ಯ. ನೃತ್ಯ ವಿಧೂಷಿ ರೋಹಿಣಿ ಅನಂತ್ ತಂಡದವರ ಕವಿ ಕಂಡ ಕನ್ನಡ ರೂಪಕ ಮನಸೆಳೆದ ವೈವಿಧ್ಯ ಸಾಂಸ್ಕೃತಿಕ ಕಾರ್ಯಕ್ರಮದ ಭಾಗವಾಗಿತ್ತು.

ಅಬುಧಾಬಿ ಕರ್ನಾಟಕ ಸಂಘದ ಪ್ರಥಮ “ದ.ರಾ.ಬೇಂದ್ರೆ ಪ್ರಶಸ್ತಿ” ಯನ್ನು ಯು.ಎ.ಇ. ಯಲ್ಲಿ ಮೂರು ದಶಕಗಳಿಂದ ಕನ್ನಡ ಭಾಷೆ, ಕಲೆ, ಸಂಸ್ಕೃತಿಯ ಸೇವೆ ಸಲ್ಲಿಸಿರುವ ದುಬಾಯಿ ಕರ್ನಾಟಕ ಸಂಘದ ಪೂರ್ವ ಅಧ್ಯಕ್ಷರು, ಪ್ರಸ್ತುತ ಗಲ್ಫ್ ಕನ್ನಡಿಗ ವೆಬ್ ಮಾಧ್ಯಮದ ಮುಖ್ಯ ಸಂಪಾದಕರಾದ   ಬಿ. ಜಿ. ಮೋಹನ್ ದಾಸ್ ರವರಿಗೆ ನೀಡಿ ಸನ್ಮಾನಿಸಿ ಗೌರವಿಸಲಾಯಿತು. ಗೌರವಾನ್ವಿತ  ಎಂ. ಕೆ. ಲೋಕೇಶ್ ಮತ್ತು ಡಾ. ಬಿ. ಆರ್. ಶೆಟ್ಟಿ ಹಾಗೂ ಶೇಖರ್ ಶೆಟ್ಟಿ ಸರ್ವೋತ್ತಮ ಶೆಟ್ಟಿಯವರು ಪ್ರಶಸ್ತಿ ಪ್ರಧಾನ ಪ್ರಕ್ರಿಯೇ ಯನ್ನು ನಡೆಸಿಕೊಟ್ಟರು.

ಬೆಂಗಳೂರಿನಿಂದ ವಿಶೇಷ ಅಹ್ವಾನಿತರಾಗಿ ಆಗಮಿಸಿದ ಇಂದುಶ್ರೀ ಯವರು ತಮ್ಮ ಕಲಾ ಕೌಶಲ್ಯಕ್ಕೆ ವಿಶ್ವಮಾನ್ಯತೆಯನ್ನು ಪಡೆದು ಅಂತರಾಷ್ಟೀಯ ಮಟ್ಟದಲ್ಲಿ ಹೆಸರು ಪಡೆದು, ಗಿನ್ನೆಸ್ ದಾಖಲೆಯನ್ನು ತನ್ನದಾಗಿಸಿಕೊಂಡ ಕನ್ನಡದ ಹೆಮ್ಮೆಯ ಯುವತಿ. ತನ್ನ ವಿಶೇಷ ಪ್ರತಿಬೆಯನ್ನು ಕೊಲ್ಲಿನಾಡಿನ ಪ್ರತಿಷ್ಠಿತ ವೇದಿಕೆ ಇಂಡಿಯಾ ಸೋಶಿಯಲ್ ಸೆಂಟರ್ ಸಭಾಂಗಣ ಮಾತನಾಡುವ ಬೊಂಬೆ ಡಿಂಕು ಸರ್ವರ ಮನ ಗೆದ್ದು ಅತ್ಯುತ್ತಮ ಸ್ಮರಣೀಯ ಕಾರ್ಯಕ್ರಮಕ್ಕೆ ಸಾಕ್ಷಿಯಾಯಿತು.ಶ್ರೀಮತಿ ಮಂಜುಳಾರವರ ( ಇಂದುಶ್ರೀ ಯವರ ತಾಯಿ) ಸುಮಧುರ ಕನ್ನಡ ಗೀತೆಗಳ ಗಾಯನ ಮೆಚ್ಚುಗೆಯನ್ನು ಪಡೆದ ಕಾರ್ಯಕ್ರಮವಾಗಿತ್ತು.

ಯು.ಎ.ಇ. ಯಲ್ಲಿ ನೆಲೆಸಿರುವ ಕನ್ನಡಿಗರು ಕರ್ನಾಟಕ ಪರ ಸಂಘಟನೆಗಳ ಮೂಲಕ ನಡೆಸಿದ ರಕ್ತದಾನ ಅಭಿಯಾನದ ಮೂರು ದಶಕಗಳ ದಾಖಲೆಯ ಬ್ರೋಶರ್ ಅಬುಧಾಬಿ ಕರ್ನಾಟಕ ಸಂಘದ ರಾಜ್ಯೋತ್ಸವ ಸಮಾರಂಭದ ಅಬುಧಾಬಿ ಇಂಡಿಯನ್ ಸೋಶಿಯಲ್ ಸೆಂಟರ್ ಭವ್ಯ ವೇದಿಕೆಯಲ್ಲಿ ಕನ್ನಡಿಗರಾದ ಯು.ಎ.ಇ.ಗೆ ಭಾರತೀಯ ರಾಯಭಾರಿಗಳಾದ  ಎಂ. ಕೆ. ಲೋಕೇಶ್ ರವರು, ಎನ್. ಎಂ. ಸಿ. ಹೆಲ್ತ್ ಕೇರ್ ಸಮೂಹ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಬಿ. ಆರ್. ಶೆಟ್ಟಿಯವರ ಸಮ್ಮುಖದಲ್ಲಿ ಅನಾವರಣ ಗೊಳಿಸಿದರು. ಯು. ಎ. ಇ. ಯ ಕರ್ನಾಟಕ ಪರ ಸಂಘಟನೆಗಳ ಮುಖ್ಯಸ್ಥರು ಹಾಗೂ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿ ಕನ್ನಡಿಗರು ಸಭಾಂಗಣದಲ್ಲಿ ಸಮಾವೇಶ ಗೊಂಡಿದ್ದರು.

ರಕ್ತದಾನ ಅಬಿಯಾನದ ಪೂರ್ಣ ಮಾಹಿತಿಯನ್ನು ಒಳಗೊಂಡಿರುವ ದಾಖಲೆಯನ್ನು (ಬ್ರೋಶರ್) ಡಾ. ಬಿ. ಆರ್ ಶೆಟ್ಟಿಯವರು ಯು.ಎ.ಇ. ನೆಲಸಿರುವ ಕರ್ನಾಟಕದವರು, ಭಾರತೀಯರ ಪರವಾಗಿ ಅಧಿಕೃತವಾಗಿ ಯು.ಎ.ಇ.ಗೆ ಭಾರತೀಯ ರಾಯಭಾರಿಯಾಗಿರುವ  ಎಂ. ಕೆ. ಲೋಕೇಶ್ ರವರಿಗೆ ನೀಡಿದರು. ಯು.ಎ.ಇ. ಯಲ್ಲಿರುವ ಕರ್ನಾಟಕ ಪರ ಸಂಘಟನೆಗಳ ಪರವಾಗಿ ಸರ್ವೋತ್ತಮ ಶೆಟ್ಟಿಯವರು ಬ್ರೋಶರ್ ಸ್ವೀಕರಿಸಿದರು.

ಯು.ಎ.ಇ. ಯ ವಿವಿಧ ಭಾಗಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಲ್ಲಿ ಹೆಚ್ಚಿನ ಅಂಕಗಳನ್ನು ಪಡೆದ ವಿದ್ಯಾರ್ಥಿಗಳನ್ನು ಪೊಷಕರ ಸಮ್ಮುಖದಲ್ಲಿ ಡಾ. ಬಿ. ಆರ್. ಶೆಟ್ಟಿಯವರು ಪಧಕ ನೀಡಿ ಗೌರವಿಸಿದರು.

ಈ ವರ್ಷವೂ ಯು.ಎ.ಇ. ಮಟ್ಟದಲ್ಲಿ ಜಾನಪದ ನೃತ್ಯ ಸ್ಪರ್ಧೆಯನ್ನು ಆಯೋಜಿಸಿದ್ದು, ವಿವಿಧ ಭಾಗಗಳಿಂದ ಏಳು ತಂಡಗಳು ಪೈಪೋಟಿ ನೀಡುವುದರ ಜೊತೆಗೆ ಆಕರ್ಷಕ ನೃತ್ಯ ಸಂಯೋಜನೆ ಮಾಡಿ ನೋಡುಗರ ಕನ್ನಡ ಜನಪದದ ಮೇಲಿನ ಅಭಿಮಾನವನ್ನು ಇಮ್ಮಡಿಗೊಳಿಸಿತ್ತು. ಕೆಂಪೆಗೌಡ ತಂಡ ಜಸ್ಮಿತಾ ವಿವೇಕ್ ನೃತ್ಯ ನಿರ್ದೇಶನದಲ್ಲಿ ಮೂಡಿಬಂದ ಸುಗ್ಗಿ ಕುಣಿತ ಪ್ರಥಮ ಬಹುಮಾನವನ್ನು ತನ್ನದಾಗಿಸಿಕೊಂಡಿತ್ತು.

ಸಂಗೊಳ್ಳಿ ರಾಯಣ್ಣ ತಂಡ ಸುಭಾಶ್ ಬಂಗೇರಾ ನಿರ್ದೇಶನದಲ್ಲಿ ವೀರಗಾಸೆ ನೃತ್ಯ ದ್ವಿತೀಯಾ ಸ್ಥಾನವನ್ನು ಪಡೆದರು. ರಾಣಿ ಚೆನ್ನಮ್ಮ ತಂಡ ಆಶಾ ನಾಯರ್ ನಿರ್ದೇಶನದಲ್ಲಿ ಜಕನಕ ತೈತಮ ನೃತ್ಯ ತೃತಿಯಾ ಸ್ಥಾನ ಪಡೆಯಿತು.ಒನಕೆ ಓಬವ್ವ ತಂಡ, ಮದಕರಿ ನಾಯಕ ತಂಡ, ಕೃಷ್ಣ ದೇವರಾಯ ತಂಡ, ಕುವೆಂಪು ತಂಡ ಸಣ್ಣ ಸಣ್ಣ ಮಕ್ಕಳಿಂದ ಯುವಕ, ಯುವತಿಯರವರೆಗೆ ನೃತ್ಯದಲ್ಲಿ ಭಾಗವಹಿಸಿ ಗಮನ ಸೆಳೆದರು.ನೃತ್ಯ ನಿರ್ದೇಶನ ವಿಭಾಗದಲ್ಲಿ ಆಶಾ ನಾಯರ್ ಪ್ರಥಮ ಸ್ಥಾನ, ಸುಭಾಶ್ ಬಂಗೆರಾ ದ್ವಿತೀಯಾ, ಜಸ್ಮಿತಾ ವಿವೇಕ್ ತೃತಿಯಾ ಸ್ಥಾನ ಪಡೆದುಕೊಂಡರು.

ತೀರ್ಪುಗಾರರಾಗಿ ರೋಹಿಣಿ ಅನಂತ್, ಸ್ವಪ್ನಾ ಕಿರಣ್, ಮಂಗಳಾ ಶೆಟ್ಟಿ, ದಿಲಿಪ್ ದೇವಾಡಿಗ ತಮ್ಮ ಜವಬ್ಧಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದರು. ಇವರಿಗೆ ಡಾ. ಚಂದ್ರಕುಮಾರಿ ಆರ್. ಶೆಟ್ಟಿಯವರು ಸ್ಮರಣಿಕೆ ನೀಡಿ ಗೌರವಿಸಿದರು. ಕೊನೆಯಲ್ಲಿ ಲಕ್ಕಿ ಡ್ರಾ ನಡೆಯಿತು. ಪ್ರಾಯೋಜಕರಲ್ಲಿ ಒರ್ವರಾದ ಜಯರಾಂ ರೈ ಯವರು ಉಡುಗೊರೆಯನ್ನು ವಿತರಿಸಿದರು.

ಡಾ. ಬಿ. ಆರ್. ಶೆಟ್ಟಿಯವರಿಂದ ಮೆಚ್ಚುಗೆ, ಸರ್ವರಿಗೂ ಶುಭವನ್ನು ಹಾರೈಸಿದರು. ತಮ್ಮದೆ ಆದ ಅತ್ಯುತ್ತಮ ಶೈಲಿಯಲ್ಲಿ ಕಾರ್ಯಕ್ರಮ ನಿರೂಪಣೆಯನ್ನು ಮಾಡಿದ ಮನೋಹರ್ ತೋನ್ಸೆಯವರು ವಂದಾನರ್ಪಣೆಯನ್ನು ಮಾಡಿದರು.

ಮಹಾಪೋಷಕರಾದ ಡಾ. ಬಿ. ಆರ್. ಶೆಟ್ಟಿಯವರು, ಅಧ್ಯಕ್ಷರಾದ  ಸರ್ವೋತ್ತಮ ಶೆಟ್ಟಿಯವರ ನಾಯಕತ್ವದಲ್ಲಿ ಕಾರ್ಯಕಾರಿ ಸಮಿತಿಯವರ ಪೂರ್ವಭಾವಿ ತಯಾರಿ, ಜವಬ್ಧಾರಿ ನಿರ್ವಹಣೆ ಕೊಲ್ಲಿ ನಾಡಿನಲ್ಲಿ ಅಚ್ಚ ಕನ್ನಡದ ಕಾರ್ಯಕ್ರಮ ಜನಮಾನಸದಲ್ಲಿ ಮೆಚ್ಚುಗೆಯನ್ನು ಪಡೆಯಿತು.

Please follow and like us:
error