ಸಂತೆಯೊಳಗೊಂದು ಮನೆಯ ಮಾಡಿ – ಕಥೆ

ಸಂತೆಯೊಳಗೊಂದು ಮನೆಯ ಮಾಡಿ

ಪ್ರಜಾಸಮರ ಪತ್ರಿಕೆಯಲ್ಲಿ ಪ್ರಕಟಿತ ಕತೆ

ಅಡ್ಡಾದಿಡ್ಡಿ ಬೆಳೆದು ನಿಂತಿರುವ ಗಿಡಗಳು, ರಸ್ತೆಯ ಎರಡೂ ಬದಿ ಬೆಳೆದು ನಿಂತಿರುವ ಬಳ್ಳಾರಿ ಜಾಲಿ, ರಸ್ತೆಯೆನ್ನುವುದು ಹೆಸರಿಗೆ ಮಾತ್ರ ಎನ್ನುವಂತಾಗಿದೆ. ದಿನಕ್ಕೆರಡು ಬಾರಿ ಬಂದು  ಹೋಗುವ ಬಸ್ಸುಗಳ ಟೈರ್ ಗುರುತು, ಬಸ್ಸಿಗೆ ಬಡಿದು ಬಡಿದು ಬಾಗಿರುವ  ಮುಳ್ಳು ಜಾಲಿ. ಮಳೆಯಲ್ಲಂತೂ ಪಕ್ಕಾ ಕೆಸರುಗದ್ದೆ, ನಮ್ಮೂರಿಗೂ ಪಕ್ಕದ ಹಳ್ಳಿಗೂ ಅದೊಂದೆ ರಸ್ತೆ . ಅಲ್ಲಿ ಹೋಗಿ ಬರುವವರು ಕಡಿಮೆ ಹಾಗಾಗಿ ಆ ರಸ್ತೆಯ ಬಗ್ಗೆ ತಲೆ ಕೆಡಿಸಿಕೊಳ್ಳುವವರು  ಯಾರೂ ಇಲ್ಲ. ಮೊಸರು, ಕಟ್ಟಿಗೆ ಮಾರಲು ಬರುವ ಹೆಂಗಸರು, ಕೂಲಿ ಕೆಲಸಕ್ಕಾಗಿ ಪಟ್ಟಣಕ್ಕೆ ಬರುವ  ಹೆಣ್ಣು-ಗಂಡು, ಮಕ್ಕಳು ಇವರು ಯಾವತ್ತೂ  ಪಟ್ಟಣಕ್ಕೆ ಬರಲು ಬಸ್ ಹತ್ತಿದವರಲ್ಲ.ಅಷ್ಟೇ ದುಡ್ಡಿನಲ್ಲಿ ಅವರ ಅವತ್ತಿನ ಖಚರ್ು ನಡೆದು ಹೋಗುತ್ತೆ. ಪಾಸ್ ಇರುವ ವಿದ್ಯಾಥರ್ಿಗಳು, ಆಸ್ಪತ್ರೆಗೆಬರುವ ರೋಗಿಗಳು, ನಡೆದಾಡುವದಕ್ಕೆ ಆಗದವರು, ಕಡಿಮೆ ರೇಟಿನಲ್ಲಿ ಸಿಗುತ್ತೆ ಎನ್ನುವ ಕಾರಣಕ್ಕೆ ಕಿರಾಣಿ ಸಾಮಾನಿಗಾಗಿ ನಮ್ಮೂರಿಗೆ ಬರುವವರಷ್ಟೇ ಆ ಬಸ್ಸಿನಲ್ಲಿ ಪ್ರಯಾಣಿಸುವವರು.
 ಅವರ್ಯಾರಿಗೂ ಈ ರಸ್ತೆಯ ಬಗ್ಗೆ ದೂರುಗಳಿಲ್ಲ. ಸರಕಾರಿ ಬಸ್ಸಿನಲ್ಲಿ ಪಯಣಿಸುವುದೇ ಒಂದು  ಹೆಮ್ಮೆ. ಯಾವ ವಾಹನಗಳೂ ಬಾರದ ಆ ಹಳ್ಳಿಗೆ ಇಷ್ಟು ದೊಡ್ಡ ಬಸ್ ಬರುತ್ತೆ ಎನ್ನುವುದೇ ದೊಡ್ಡ ಮಾತು. ಆ ಹಳ್ಳಿಯ ಜನ ತಮ್ಮ ಬೀಗರೊಡನೆ ಮಾತನಾಡುವಾಗ ತಪ್ಪದೇ ಆ ಬಸ್ಸಿನ ಬಗ್ಗೆ ಮಾತನಾಡುತ್ತಾರೆ. ಯಾಕೆಂದರೆ ಆ ಹಳ್ಳಿಯ ನಂತರದ ಇನ್ನೊಂದು ಹಳ್ಳಿಗೆ ಹೋಗಿ ಬಸ್ ವಾಪಸ್ ಬಂದು ಬಿಡುತ್ತೆ. ಅಡ್ಡ ರಸ್ತೆಯಲ್ಲಿರುವ ಇತರೆ ಹಳ್ಳಿಗಳಿಗೆ ಕಾಲುದಾರಿಗಳಷ್ಟೇ ಇರೋದು.ಅವರಿಗೆ ಇನ್ನೂ ಬಸ್ಸಿನ ಭಾಗ್ಯ ಸಿಕ್ಕಿಲ್ಲ. ಸಿಕ್ಕ ಸಿಕ್ಕ ಹಳ್ಳಿಗಳಿಗೆ ಬಸ್ ಬಿಟ್ಟು ಲಾಸ್ ಮಾಡಿಕೊಳ್ಳುವುದಕ್ಕೇನು ಸರಕಾರ ನಡೆಸುವವರು ಮೂರ್ಖರೇ? ರಸ್ತೆಯೇ ಇಲ್ಲದ ಊರಿಗೆ ಬಸ್ ಬೇರೆ ಕೇಡು!
 ನಮ್ಮೂರಿನಿಂದ ಆ ಹಳ್ಳಿಗೆ ಹೋಗುವ ರಸ್ತೆ ಶುರುವಾಗುವುದೇ ಊರ ಹೊರಗಿಂದ. ಊರ ಹೊರಗೇ ಈ ರಸ್ತೆಯ ಎರಡೂ ಬದಿ ಸ್ಮಶಾನಗಳಿವೆ. ಅದೋ ಅಲ್ಲಿ ಕಾಣುತ್ತಲ್ಲ ಹೆಣ ಸುಟ್ಟ ವಾಸನೆ ಬರ್ತಾ ಇದೆಯಲ್ಲ ಅದು ಹಿಂದೂಗಳ ಸ್ಮಶಾನ. ಹೌದು ಈ ಕಡೆ ಪಕ್ಕದಲಿರುವುದು ಸಾಬರ ಖಬರಸ್ತಾನ. ಮೊದಲು  ಊರಿಂದ ಬಹಳ ದೂರಕ್ಕೆ ಇದ್ದವು ಈ ಎರಡೂ ಸ್ಮಶಾನಗಳು ಈಗ ಊರು ಬೆಳಿತಾ ಬೆಳೀತಾ ಹತ್ತಿರಕ್ಕೆ ಬಂದು ಬಿಟ್ಟಿವೆ.
 ನಾನು ದಿನಾಲೂ ಇಲ್ಲಿಯವರೆಗೆ ಜಾಗಿಂಗ್ಗೆ ಬರುತ್ತಿದ್ದೆ. ಮೊದಮೊದಲು ಊರ ಹೊರಗೆ ಒಬ್ಬನೇ ಬೆಳಿಗ್ಗೆ ಜಾಗಿಂಗ್ ಮಾಡುತ್ತಿದ್ದೆ. ನಂತರ ನಾಲ್ಕಾರು ಗೆಳೆಯರು ಜೊತೆಯಾದರು. ಜೋರಾಗಿಓಡುತ್ತಾ ಬರ್ತಾ ಇದ್ದವರು, ಸ್ಮಶಾನದ ಹತ್ತಿರ ಬಂದ ತಕ್ಷಣ ಮೆಲ್ಲಗೆ ಸಾಗುತ್ತಿದ್ದೇವು. ನಾನು ಕೇಳಿದರೆ ಮಹೇಶ ಹೇಳ್ತಾ ಇದ್ದ ಸ್ಮಶಾನದಲ್ಲಿ ಮಲಗಿದವರಿಗೆ ಮುಂಜ್ ಮುಂಜಾನೆ ಡಿಸ್ಟರ್ಬ್ ಮಾಡಿದ್ರೆ ಬೇಜಾರಾಗಿಬಿಡುತ್ತೆ ಅದಕ್ಕೆ ಮೆಲ್ಲಗೆ ಓಡ್ತೀನಿ ಎಂದು ನಗಾಡಿದ್ದ. ಇನ್ನೂ ಮಬ್ಬಗತ್ತಲು ಇರುವಾಗಲೇ ನಮ್ಮ ಜಾಗಿಂಗ್ ಶುರುವಾಗಿರುತ್ತಿತ್ತು. ಮುಳ್ಳು ಜಾಲಿಯ ಪೊದೆಯಲ್ಲಿ ಮುಂಗಸಿ, ಹಾವುಗಳು ಸುಳಿದಾಡುವುದು ಕಾಣುತ್ತಿತ್ತು. ಒಮ್ಮೊಮ್ಮೆ ತಗ್ಗು ಬಿದ್ದ ಸಾಬರ ಗೋರಿಯ ಹತ್ತಿರ ಹೋಗಿ ನೋಡುವಾಸೆ ಎಲ್ಲರಿಗೆ ಆದರೆ ಅಂಜಿಕೆ. ಹೀಗೆ ಒಂದು ದಿನ ಬೇಗನೇ ಜಾಗಿಂಗ್ ಬಂದಿದ್ದೆ ಮಹೇಶ ಸಹ ಜೊತೆಯಲ್ಲಿದ್ದ. ಸ್ಮಶಾನ ಸಮೀಪಿಸಿದಂತೆ ವಿಲಕ್ಷಣ ಚರ್ಮ ಸುಟ್ಟ ವಾಸನೆ, ಕೂದಲು ಸುಟ್ಟವಾಸನೆ ಬರ್ತಾ ಇತ್ತು. ಮೆಲ್ಲನೆ ನಡಿಗೆ ಆರಂಭಿಸಿದ್ದೆವು. ಅತ್ತಿತ್ತ ನೋಡುತ್ತಿದ್ದ ಮಹೇಶ ಒಮ್ಮೇಲೆ ಚೀರಿದ. ಅರೆಬೆಂದ ಯುವತಿಯ ಶವ. ನಗ್ನವಾಗಿ ಬಿದ್ದಿತ್ತು. ಪೂರ್ಣವಾಗಿ ಸುಟ್ಟಿರಲಿಲ್ಲ. ಅಂದರೆ ರಾತ್ರಿ ಸುಡಲು ಬಂದವರು ಅರೆ ಬರೆಸುಟ್ಟಿದ್ದರು. ನಾಯಿ ನರಿಗಳು ಅದನ್ನು ಎಳೆದಾಡಿಕೊಂಡು ಬಂದು ರಸ್ತೆಯಂಚಿಗೆ ತಳ್ಳಿದ್ದವು. 20-25ರ ವಯಸ್ಸಿನ ಯುವತಿಯ ಶವವದು ನೋಡಲು ಭೀಕರವಾಗಿತ್ತು.  ದೇಹದ ಮೇಲೆ ಗಾಯದ ಗುರುತುಗಳು. ಚೀರಿದ ಮಹೇಶ ಹೆದರಿಕೆಯಿಂದ ಹಿಂದೆಓಡಿದ. ನಾನೂ ಅವನ ಜೊತೆ ಸೇರಿದೆ.
**
 ನಿನ್ನೆ ಯಾರೂ ಶವಸಂಸ್ಕಾರಕ್ಕೆ ಸ್ಮಶಾನಕ್ಕೆ ಬಂದಿರಲಿಲ್ಲ. ಮತ್ತೆ ಎಲ್ಲಿಂದ ಬಂತು ಈ ಹೆಣ್ಣಿನ ಶವ. ಪೋಲೀಸರು ಬಂದು  ಹೆಣ ಎತ್ತಿಕೊಂಡು ಹೋದರು.
ಮದ್ಹಾಹ್ನ ಹೊತ್ತಿನಲ್ಲಿ ಚಿಕನ್ ಅಮೀರ್ಸಾಬ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂಬ ಸುದ್ದಿ ಊರ ತುಂಬ ಹರಡಿತು. ಚಿಕನ್-ಮಟನ್ ಅಂಗಡಿ ಇಟ್ಟುಕೊಂಡಿದ್ದ  ಅಮೀರಸಾಬನಿಗೆ 2 ಹೆಂಡತಿಯರು. ಮೊದಲನೆಯವಳಿಂದ ಮಕ್ಕಳಾಗಲಿಲ್ಲ ಅಂತ ಕಳೆದ ಕೆಲವು ತಿಂಗಳುಗಳ ಹಿಂದಷ್ಟೇ ಅಮೀರಸಾಬ 2ನೇ ಮದುವೆಯಾದ. ವಯಸ್ಸು 50ರ ಸಮೀಪ ಇದ್ದರೇನಂತೆ ಒಳ್ಳೆಯ ವ್ಯಾಪಾರದಿಂದ ಊರಿನಲ್ಲಿ ಗಟ್ಟಿ ಕುಳ ಎಂಬ ಹೆಸರಿತ್ತು. 
ಅಮೀರಸಾಬ  5ಹೊತ್ತು ನಮಾಜು ಮಾಡುವ ನಮಾಜಿ ಆಗಿದ್ದ.  ಮಕ್ಕಳಿಲ್ಲ ಎಂಬ ಒಂದು ಸಂಕಟ ಬಿಟ್ಟರೆ ಖುಷಿಯಾಗಿ ಹಾಯಾಗಿದ್ದ. 2ನೇ ಮದುವೆಯ ಹುಚ್ಚು ಎಲ್ಲಿಂದ ಬಂತೋ ತಿಳಿಯದು. ತನಗೆ ಹೆಣ್ಣು ನೋಡುವಂತೆ  ಅವರಿವರಲ್ಲಿ ಹೇಳಿಟ್ಟಿದ್ದ. ಸ್ವಂತ ಮನೆ, ಊರ ಹೊರಗೆ ಹೊಲ, ಪ್ಲಾಟುಗಳು & ಉತ್ತಮ ವ್ಯಾಪಾರ ಇದ್ದ ಅಮೀರಸಾಬಗೆ ಹೆಣ್ಣು ಕೊಡುವವರು ಕಡಿಮೆಯೆ? 3 ತಿಂಗಳಲ್ಲಿ ಪಕ್ಕದೂರಿನ ಪಿರ್ದೋಸ್ಳನ್ನು ಮದುವೆ ಮಾಡಿಕೊಂಡು ಬಂದಿದ್ದ. ಅವನ ಮೊದಲ ಹೆಂಡತಿ  ರಮೀಜಾ ಮೊದ ಮೊದಲು ಇದಕ್ಕೆ ವಿರೋಧ ಮಾಡಿದ್ದಳು. ಯಾವಾಗ ತನ್ನ ಮಾತು ನಡೆಯುವುದಿಲ್ಲ ಎಂಬುದು ಅರಿವಾಯಿತೋ ಸುಮ್ಮನಾದಳು. ಪೀರಾಸಾಬಗೆ ನವ ಯೌವ್ವನವನ್ನೇ ತಂದಿದ್ದಳು ಪಿರ್ದೋಸ್. ಈಗೀಗ ಚಿಕನ್ ಅಮೀರಸಾಬನ ಅಂಗಡಿಗೆ ಹೋದ ಯಾವ ಬಿಕ್ಷುಕನೂ ಬರಿಗೈಯಲ್ಲಿ ಮರುಳುತ್ತಿರಲಿಲ್ಲ. ಅಮೀರಸಾಬನ ರಸಿಕತೆಯ ಮಾತುಗಳು ಮಾಕರ್ೆಟ್ನಲ್ಲಿ ನಗೆಯ ಅಲೆಯೆಬ್ಬಿಸುತ್ತಿದ್ದವು.
 ನಿನ್ನೆ ದಗರ್ಾಕ್ಕೆ ಹೋದವಳು ಮನೆಗೆ ಬಂದಿಲ್ಲ ಎಂದು ಅಮೀರಸಾಬ ಪೋಲೀಸ್ ಸ್ಟೇಷನ್ ಕಟ್ಟಿ ಹತ್ತುತ್ತಲೇ ಆ ಹೆಣ ಅವನ ಹೆಂಡತಿಯದೇ ಎನ್ನುವುದು ಖಾತ್ರಿಯಾಯಿತು. ನಿನ್ನೆ ಸಂಜಿಮುಂದ ದಗರ್ಾಕ್ಕೆ ಹೋಗಿ ಬರ್ತೀನಿ ಅಂತಾ ಹೋದವಳು, ಬರಲೇ ಇಲ್ಲ. ನಾನು ರಾತ್ರಿನೇ ಕಂಪ್ಲೇಟ್ ಕೊಡಬೇಕೆಂದಿದ್ದೆ ಆದರೆ ಬರಬಹುದು ಅಂತಾ ಸುಮ್ಮನಾಗಿದ್ದೆ ಎಂದ.
 ಪೋಲೀಸರಿಗೆ ಅನುಮಾನ ಬಂದು  ಏನಾದರೂ ಜಗಳ ಹಾಗಿತ್ತೋ ಎಂಗ ಅಂದಾಗ, ಗಂಡ ಹೆಂಡತಿ ಅಂದ ಮೇಲೆ ನೂರು ಮಾತು ಬರೊದು ಹೋಗೊದು ಇರೋದ ಆದರ ನನ್ನ ಹೆಂಡತಿಗೆ ಈ ಗತಿ ತಂದವರನ್ನ ಸುಮ್ಮನೆ ಬೀಡಬ್ಯಾಡ್ರೀ, ನನ್ನ  ಬಂಗಾರದ ಗಿಣಿಯಂತಹ ಹೆಂಡ್ತಿನ ಕೊಂದವರನ್ನ ಬಿಡಬ್ಯಾಡ್ರಿ ಎಂದು ಇನ್ಸ್ ಪೆಕ್ಟರ್ ಕಾಲಿಗೆ ಬಿದ್ದು ಗೋಳಾಡಿದ್ದ. ಪೋಸ್ಟಮಾರ್ಟಂ  ಅದೂ ಇದು ಹಾಗಿ ಹೋಯ್ತು ಊರಿನ  ಒಂದೆರೆಡು ಕುಳಗಳು ಇನ್ಸ್ಪೆಕ್ಟರ್ನ್ನ ಪ್ರೈವೇಟ್ ಆಗಿ ಭೇಟಿಯಾದರು. ಸಂಜೆ ಅನ್ನೊದರೊಳಗಾಗಿ ಅವಳ ಹೆಣ ದಫನ್ ಮಾಡಲಾಯಿತು. ಅಮೀರಸಾಬನ ದುರಾದೃಷ್ಟಕ್ಕೆ ಊರು ಮರುಗಿತು.
**
 ಮರುದಿನ ಮಹೇಶ ಜಾಗಿಂಗ್ಗೆ ಬರಲಿಲ್ಲ. ಜ್ವರ ಅಂತ ಮಲಗಿ ಬಿಟ್ಟಿದ್ದ ನಾನೂ ಆ ಕಡೆ ಜಾಗಿಂಗ್ಗೆ ಹೋಗಲಿಲ್ಲ. ಮೂರನೇ ದಿನ ನಾನೊಬ್ಬನೇ ಜಾಗಿಂಗ್ ಮಾಡ್ತಾ ಹೋದೆ ಮೊನ್ನೆ ತಾನೆ ಧಫನ್ ಆಗಿದ್ದ ಪಿರ್ದೋಸ್ ಸಮಾಧಿ ಮೇಲೆ ಹಾಕಿದ್ದ ಹೂಗಳು ಇನ್ನೂ ಬಾಡಿರಲಿಲ್ಲ. ದೊಡ್ಡ ದೊಡ್ಡ ಗುಲಾಬಿ ಹೂಗಳು  ಇನ್ನು ಕೆಂಪುತನ ತೋರುತ್ತಿದ್ದವು. ಸ್ಮಶಾನದೊಳಗೆ ಆಡು, ಕುರಿ ಹೋಗದಂತೆ ಬೇಲಿ ಕಟ್ಟಿದ್ದರು. ಸ್ಮಶಾನಕ್ಕೂ ಬೇಲಿನಾ? ಸತ್ತ ಮೇಲೂ ಬೇಲಿಯ  ಹಂಗಿನಲ್ಲಿ ಮಲಗಿದ್ದ ಆತ್ಮಗಳ ಬಗ್ಗೆ ನಗು ಬಂತು.  ಗೋರಿಯೊಳಗಿಂದ ಯಾವುದೋ ಆತ್ಮವೊಂದು ಮಗ್ಗಲು ಬದಲಿಸಿದಂತೆ ಸದ್ದಾಯಿತು. ನಿಲ್ಲುವ ದೈರ್ಯ ಸಾಲದೇ ಮನೆಗೆ ಓಡಿದೆ.
 ಮಧ್ಯಾಹ್ನವೇ ಸುದ್ದಿ ಬಂತು ಅಮೀರಸಾಬ ಆತ್ಮಹತ್ಯೆ ಮಾಡಿಕೊಂಡನಂತೆ. ಮನೆಯೊಳಗಿನ ಜಂತಿಗೆ ಹಗ್ಗ ಬಿಗಿದುಕೊಂಡು ಜೋತಾಡುತ್ತಿದ್ದ  ಅವನ  ಶರೀರವನ್ನು  ಕೆಳಗೆ ಇಳಿಸುವುದೊರಳಗಾಗಿ  ಎಲ್ಲರಿಗೂ ಸಾಕು ಸಾಕಾಯಿತು. ಒಳ್ಳೆಯ ಕಟ್ಟುಮಸ್ತಾದ ಆಳು. ಜಂತಿ ಮುರಿದುಕೊಂಡು ಬೀಳದೇ ಇದ್ದುದೆ ಹೆಚ್ಚು. ಹೆಂಡತಿ ಸತ್ತು ಮೂರು ದಿನ ಆಗಿಲ್ಲ ಅಷ್ಟರಲ್ಲೇ ಅಮೀರಸಾಬ ಆತ್ಮಹತ್ಯೆ ಮಾಡಿಕೊಂಡಿದ್ದ. ಸಣ್ಣ ಹೆಂಡತಿನ ಬಹಳ ಹಚ್ಚಿಕೊಂಡಿದ್ದ ಅದಕ್ಕ ತಡೀಲಾರದ ಜೀವಕಳ ಕೊಂಡಾನಂತ ನೆರೆದವರು ಹೇಳುತ್ತಿದ್ದದ್ದು ಕೇಳಿಸುತ್ತಿತ್ತು. ನಾನು ನೀನು ಅನ್ನೊದರೊಳಗೆ ಊರಿನ ಜನ ಸೇರಿದರು. ಮಸೀದಿಯಿಂದ ಜನಾಜಾದ ಡೋಲಿ ತರಲಾಯಿತು. ಊರಿನಲ್ಲಿ ಹೆಸರುವಾಸಿಯಾಗಿದ್ದ ಅಮೀರಸಾಬನಿಗೆ ಊರೆಲ್ಲ ನೆಂಟರು, ಜನ ಸೇರಿದರು. ನಾನೂ ಹೋಗಬೇಕಾಯಿತು. ಮೈ ತೊಳೆದ ನಂತರ ಹೆಣವನ್ನು ಡೋಲಿಯಲ್ಲಿ ಇಟ್ಟು, ಹೂವಿನ ಹಾರ, ಚದ್ದರ್ಗಳನ್ನು ಹಾಕಿದರು. ಖಬರಸ್ಥಾನದಲ್ಲಿ ಹೆಂಡತಿಯ ಪಕ್ಕದಲ್ಲೇ ಅಮೀರಸಾಬಗೆ ಗೋರಿ ತೋಡಲಾಗಿತ್ತು. ಹೆಣವನ್ನು ಇಳಿಸಿ, ಕೊನೆ ಸಾರಿ ಮುಖ ತೋರಿಸಿ ಮಣ್ಣು ಹಾಕಿದರು. ನಾನು ಖಬರ್ ಸ್ಥಾನದಲ್ಲಿ ಒಂದು ಕಡೆ ಕುಳಿತಿದ್ದೆ. ಸಾಲಾಗಿ ಮಲಗಿದ್ದ ಗೋರಿಗಳು. ತಮ್ಮ ಮೇಲೆ ಒಂದೊಂದು  ರೀತಿಯ ಶೃಂಗಾರ ಮಾಡಿಕೊಂಡಿದ್ದವು. ನೆಲದ ಒಡಲೊಳಗೆ  ಮೇಲು ಕೀಳೆನ್ನದೆ ಮಲಗಿದ ದೇಹಗಳಿಗೆ ಅವರವರ ಯೋಗ್ಯತೆಯಂತೆ ಮಣ್ಣಿನ ಮೇಲೆ ಬಂಗಾರದ ಗಿಲಿಟಿನ ಕಲ್ಲು, ಷಾಬಾದ್ ಕಲ್ಲು, ಚಪ್ಪಡಿ ಕಲ್ಲು, ಬರೀ ಮಣ್ಣು ಹೊರಿಸಲಾಗಿತ್ತು.
 ಒಬ್ಬೊಬ್ಬರದೇ ಹೆಸರು  ಓದುತ್ತಾ ಹೋದಂತೆ  ಅವರೆಲ್ಲ ಕಣ್ಮುಂದೆ ನಿಂತಂತಾಯಿತು, ಅದೋ ಅಲ್ಲಿ ನೋಡಿ ದೊಡ್ಡದಾಗಿ ಗೋರಿಕಟ್ಟಿಸಿಕೊಂಡು. ಯಾವುದೋ ಸಂತನ ಮಾದರಿಯಲ್ಲಿ  ಡಿಜೈನ್ ಮಾಡಿಸಿಕೊಂಡು ಮಲಗಿದ್ದಾನಲ್ಲ ಅವನು ಹಾಜಿ ಮೊಹ್ಮದ್ ಅಂತಾ ಊರಿನಲ್ಲಿ ಸಂತನ ಹಾಗೆ ಬಾಳಿದ. ತರಕಾರಿ ವ್ಯಾಪಾರ ಮಾಡಿಕೊಂಡೇ  ಉನ್ನತ ಸ್ಥಾನಕ್ಕೆ ಏರಿದ ತರಕಾರಿ ಮೊಹ್ಮದ್  ಸಾಯೋ ಮೊದಲು ಹಜ್ಗೆ ಹೋಗಿಬಂದ ನಂತರ ಹಾಜಿ ಮೊಹ್ಮದ್ ಆಗಿ ಬದಲಾಗಿದ್ದ.
 ಇಲ್ಲೇ ಅದರ ಪಕ್ಕದಲ್ಲೇ ಇದೆಯಲ್ಲ ಸಣ್ಣ ಗೋರಿ ಅದು ಪುಟ್ಟ ಮಗುವಿನದು. ಒಂದೇ ದಿನ ಬಾಳಿ, ಜೀವನದ ಜಂಜಡವೇ ಬೇಡ ಎಂದು ಹೋದ ಅದು ತನ್ನೊಂದಿಗೆ  ತಾಯಿಯ, ತಂದೆಯ  ವರ್ಷಗಳ ಕನಸನ್ನು ಕಿತ್ತುಕೊಂಡು ಹೋಗಿತ್ತು. ಗೆಳೆಯನ ಮಗು ಅದು, ಮೊದಲ ಮಗು. ಪುಟ್ಟ ಎಸಳಿನಂತಹ ತುಟಿಗಳು, ಹುಟ್ಟಿದ ಒಂದೇ ದಿನದಲ್ಲಿ ಮುಗುಳ್ನಗು ಬೀರುತ್ತಿದ್ದ ಮಗುವನ್ನು ಕೈಯಲ್ಲಿ  ಹಿಡಿದುಕೊಂಡು ಅದರ ಅಪ್ಪ ಹೇಳಿದ್ದ ನೋಡೋ ನನ್ನ ಮಗು ಹೇಗಿದೆ? ಸರಕಾರಿ ಆಸ್ಪತ್ರೆಯ ಪಲ್ಲಂಗದಲ್ಲಿ ಮಲಗಿದ್ದ ಮಗುವಿನ ತಾಯಿಯ ಪಕ್ಕದಲ್ಲಿ ಕುಳಿತಿದ್ದ ನನಗೆ ಆ ಪುಟ್ಟ ಮಗುವಿನ ನಗುವಲ್ಲಿ ಸ್ವರ್ಗ ಕಾಣುತ್ತಿದ್ದ ತಂದೆ ತಾಯಿಯ ದೃಶ್ಯ ಇಂದಿಗೂ ಮರೆಯಲಾಗಿಲ್ಲ. ನಗು ನಗುತ್ತಾ ಆಡುತ್ತಿದ್ದ ಮಗು ರಾತ್ರಿಯೊಳಗೆ ಉಸಿರುಗಟ್ಟಿಸಿಕೊಂಡು ಬಿಟ್ಟಿತ್ತು. ವೈದ್ಯರು ಬರುವುದರೊಳಗೆ ಮೂಗಿನಿಂದ ರಕ್ತ ತೊಟ್ಟಿಕ್ಕುತ್ತಿತ್ತು. ಪುಟ್ಟ ಗುಲಾಬಿ ಬಣ್ಣದ ಮಗುವಿಗೆ ಗುಲಾಬಿ ಹೂವಿನ ಹಾರ, ಚಾದರ್ನಲ್ಲಿ  ಇಟ್ಟುಕೊಂಡು ಖಬರಸ್ಥಾನಕ್ಕೆ ತಂದಿದ್ದರು.
 ಗೋರಿಯನ್ನು ಸರಿ ಮಾಡಿದ ನಂತರ ಮೌಲಾಸಾಬ ಸಾವು-ಬದುಕಿನಬಗ್ಗೆ ಮಾತನಾಡುತ್ತಿದ್ದ. ನಾವೆಲ್ಲರೂ ಒಂದು ದಿನ ಇಲ್ಲಿಗೆ ಬರಲೇಬೇಕು ಇದನ್ನು ನೆನಪು ಮಾಡಿಕೊಳ್ಳುತ್ತಾ ಚೆನ್ನಾಗಿ ಬಾಳಬೇಕು…
 ಶ್!ಸದ್ದು ಮಾಡಬೇಡಿ ಅಲ್ಲೇ ಪಕ್ಕದಲ್ಲಿ ಮೈಮೇಲೆ ಬಂಡೆ ಕಲ್ಲುಗಳನ್ನು ಹೇರಿಕೊಂಡು ಮಲಗಿದ್ದಾನಲ್ಲ ಅದು ಖಾದರ್ನದು. ಮೆಲ್ಲಗೆ ಬನ್ನಿಆವಾಜ್ ಮಾಡಬೇಡಿ. ಈ ಕಡೆ ಬಂದು ನೋಡಿ ಸರಿಯಾಗಿ ಕಾಣಿಸುತ್ತೆ. ಊರಿನಲ್ಲೆಲ್ಲ ರೌಡಿಯಂತೆ ಮೆರೆಯುತ್ತಿದ್ದ ಖಾದರ್ ಕುಡಿದನೆಂದರೆ ಮನುಷ್ಯನೇ ಅಲ್ಲ. ಸಣ್ಣ ಪುಟ್ಟ ಗೌಂಡಿ ಕೆಲಸ ಮಾಡಿಕೊಂಡಿದ್ದ ಖಾದರ್ ತನ್ನದಲ್ಲದ ತಪ್ಪಿಗೆ ಜೈಲಿಗೆ ಹೋಗಿ ಬಂದ. ನಂತರ ಅವನು ಕೆಲಸ ಮಾಡಬೇಕೆಂದರೂ ಕೆಲಸ ಸಿಗಲಿಲ್ಲ. ಕೆಲಸ ಸಿಕ್ಕಲೆಲ್ಲ ಹೊಡೆದಾಡ್ತಾ ಇದ್ದ. ಮನೆಯವರಿಗೆ ಬೇಡವಾಗಿದ್ದ ಖಾದರ್ಗೆ ಕೊನೆಗಾಲಕ್ಕೆ ಜೊತೆಯಾಗಿದ್ದು ಅವನ ನಾಯಿ ಮಾತ್ರ. ಅವನು ಸತ್ತಿದಾನೆ ಅಂದರೂ ಜನ ಅವನ ಹೆಣ ಸಮೀಪ ಬರಲಿಲ್ಲ. ಕೊನೆಗೆ ಜಮಾತ್ನ ಜನ ಸೇರಿಕೊಂಡು ಅವನ ಮಣ್ಣು ಮಾಡಿದರು.
 ಇಲ್ಲಿ ನೋಡಿ, ತಲೆ ಹತ್ತಿರ ಒಂದು, ಕಾಲ ಕಡೆ ಒಂದು ಕಲ್ಲು ಇಟ್ಟುಕೊಂಡು ಗೋರಿಯೊಳಗೆ ಮಲಗಿದ್ದಾನಲ್ಲ ಮೆಹಬೂಬ ಅಂತಾ. ಹೂವಿನ  ಅಂಗಡಿ ಇಟ್ಟುಕೊಂಡಿದ್ದ ಮೆಹಬೂಬನಿಗೆ ಇಬ್ಬರು ಮಕ್ಕಳು, ಹೆಂಡತಿ ತೀರಿಕೊಂಡರೂ 2ನೇ ಮದುವೆಯಾಗಿದ್ದಿಲ್ಲ. ಊರಲ್ಲಿ ನಡೆಯುವ ಯಾವುದೇ ಸಮಾರಂಭಕ್ಕೆ, ದೇವರ ಜಾತ್ರೆಗೆ, ಮೊಹರಂ ಡೋಲಿಗಳಿಗೆ ಇವನದೇ ಹೂವಿನ ಶೃಂಗಾರ. ಮಕ್ಕಳಿಗೆ ಓದಿಸಿ ದೊಡ್ಡ ವ್ಯಕ್ತಿಗಳನ್ನಾಗಿ ಮಾಡಬೇಕೆನ್ನುವ ಕನಸು ಕಾಣ್ತಿದ್ದ. ಮಕ್ಕಳಿಗೆ ವಿದ್ಯೆ ಹತ್ತಲಿಲ್ಲ.  ಅಂಗಡೀಲಿ ಕುರೋಕೆ ಶುರು ಮಾಡಿದರು. ವಯಸ್ಸಿಗೆ ಬಂದ ಮಕ್ಕಳು ನಮಾಜನ್ನಾದರೂ ಕಲಿಯಲಿ ಅಂತಾ ಮಸೀದಿ ಕಳಿಸುತ್ತಿದ್ದ. ಇಬ್ಬರೂ ತಪ್ಪದೇ ನಮಾಜ್ ಮಾಡುತ್ತಿದ್ದರು.
 ಒಂದು ದಿನ ದೊಡ್ಡವನು ಅಬ್ಬಾ ಮಸೀದಿಯವರೆಲ್ಲ ಸೇರಿಕೊಂಡು ಇಸ್ತೆಮಾಕ್ಕೆ ಹೊಂಟಾರ ನಾವೂ ಹೋಗ್ತೀವಿ ಅಂದಾಗ ಮೆಹಬೂಬ ಮಕ್ಕಳು ಹೀಗಾದರೂ ಒಳ್ಳೇ ದಾರಿ ಹತ್ತಲಿ ಅಂತ  ಖುಷಿಯಿಂದ ಕಳಿಸಿ ಕೊಟ್ಟಿದ್ದ. ಇಸ್ತೇಮಾಕ್ಕೆ  ಹೋದವರು ಎರಡು ತಿಂಗಳ ನಂತರ ವಾಪಸ್ಸಾದರು. ಸಣ್ಣ ಸಣ್ಣ ಗಡ್ಡ ಬೆಳೆಸಿದ್ದರು. ತಲೇಲಿ ಯಾವಾಗಲೂ ಟೋಪಿ ಹಾಕಿಕೊಂಡಿರುವುದನ್ನು ಕಲಿತಿದ್ದರು. ಧಾಮರ್ಿಕವಾಗಿರುವ ಮಕ್ಕಳನ್ನು ಕಂಡು ಮೆಹಬೂಬ ಸಂತಸಗೊಂಡ. ಆದರೆ ಅವನ ಸಂತಸ ಬಹಳ ದಿನ  ಉಳಿಯಲಿಲ್ಲ. ಮನೆಯಲ್ಲಿದ್ದ ಅಜ್ಜ ಅಜ್ಜಿಯರ, ತಾಯಿಯ ಫೋಟೋಗಳನ್ನ ಮಕ್ಕಳು ತೆಗೆದು ಟ್ರಂಕ್ನಲ್ಲಿಟ್ಟರು. ಮನೇಲಿ ಯಾವುದೇ ದೇವರ ಫೋಟೋಗಳನ್ನು ಇಡಗೊಡಲಿಲ್ಲ. ದಗರ್ಾಕ್ಕೆ ಹೋಗುತ್ತಿದ್ದ ಅಪ್ಪನ ಜೊತೆ ಜಗಳಕ್ಕೆ ನಿಂತ ಮಕ್ಕಳು ಹೀಗಿನಿಂದ ನೀನು ದಗರ್ಾಕ್ಕೆಲ್ಲ ಹೋಗಬಾರದು, ಮನೇಲಿ ಲೋಬಾನ ಹಾಕಬಾರದು, ದೇವರ ಫೋಟೋ ಇಡಬಾರದು, ಹೂವು ಹಾಕಬಾರದು ಅಂತಾ ಶುರು ಹಚ್ಚಿದರು. ಊರಿನಲ್ಲಿಯ ಎಲ್ಲ ದೇವರಿಗೆ ಹೂವು ಕೊಡುತ್ತಿದ್ದ ಮೆಹಬೂಬನಿಗೆ ತನ್ನ ಮನೆಯ ದೇವರ ಕೋಣೆಯಲ್ಲಿ ಹೂವು ಇಡಲಾರದಂಗಾಯ್ತು, ಅಷ್ಟಕ್ಕೆ ಸುಮ್ಮನಾಗದ  ಮಕ್ಕಳು ಸಂಬಂಧಿಕರ ಹೆಣದ ಡೋಲಿಗೆ ಹೂವಿನ ಚಾದರ್ ಹಾಕಲಿಕ್ಕೆ ಬಿಡುತ್ತಿರಲಿಲ್ಲ. ಹೂವಿನ ಹಾರ ಹಾಕಲೂ ಬಿಡುತ್ತಿರಲಿಲ್ಲ. ಮಕ್ಕಳ ಈ ವರ್ತನೆಗೆ ಮೆಹಬೂಬ ಬಹಾಳ ಬೇಜಾರು ಮಾಡಿಕೊಳ್ಳುತ್ತಿದ್ದ ಎಲ್ಲಿಂದಲೋ ಎನೋ ಕಲ್ತು ಬಂದು ಇದೆಲ್ಲ ಶುರು ಹಚ್ಚಬ್ಯಾಡ್ರಿ, ನಮ್ಮ ಹಳೆಯ ರಿವಾಜಿನಂತೆ ಇರೋಣ ಅನ್ನುತ್ತಿದ್ದರೆ, ಮಕ್ಕಳೂ ಮಾತ್ರ ಕೇಳುತ್ತಿರಲಿಲ್ಲ. ಕೊನೆಗೊಂದು ದಿನ ಸತ್ತ ಮೆಹಬೂಬನ ಡೋಲಿಗೆ ಮಕ್ಕಳು ಹೂವನ್ನು ಮುಟ್ಟಿಸಲಿಲ್ಲ. ಗೋರಿಯನ್ನು ಕಟ್ಟಿಸಲಿಲ್ಲ. ಕಾಲು ಮತ್ತು  ತಲೆಯ ಹತ್ತಿರ ಕಲ್ಲಿಟ್ಟರು. ಊರೆಲ್ಲಾ ಹೂವಿನಿಂದ ಮೆರೆಸುತ್ತಿದ್ದ ಮೆಹಬೂಬನಿಗೆ ಸತ್ತಮೇಲೆ ಮೊಳ ಹೂವು ಸಿಗಲಿಲ್ಲ. ಊರಿನ ಜನ ಮರುಗಿದರು.
 ಸ್ಮಶಾನದ ಪ್ರವೇಶ ಮಾಡುತ್ತಲೇ ಬರುವ ವೈರಾಗ್ಯವಿದೆಯೆಲ್ಲ ಅದು ಕ್ಷಣಿಕ ಮಾತ್ರವಂತೆ ನಿಜ. ದೇಹವನ್ನು ಗೋರಿಯಲ್ಲಿಡುವಾಗ ಜೀವನದ ಮೇಲೆ ಬೇಸರ ಬಂತು. ಯಾಕಾದರೂ  ಇಷ್ಟೊಂದು ಒದ್ದಾಡ್ತಿವೋ ನಾವೆಲ್ಲ ಅನಿಸುತ್ತಿತ್ತು. ಅಷ್ಟರಲ್ಲೇ ಪೋನ್ ವಟಗುಟ್ಟಿತು. ಎಲ್ಲಿದಿಯೋ ನಿನ್ನೇನೆ ದುಡ್ಡು ಕೊಡ್ತೀನಿ ಅಂದಿದ್ದಿ, ಬಡ್ಡಿನೂ ಕೊಟ್ಟಿಲ್ಲ ಅತ್ತ ಕಡೆಯ ಸಾಲ ಕೊಟ್ಟವನ ದ್ವನಿಗೆ ಸೀದಾ ಧರೆಗಿಳಿದು ಬಂದು ಹೇಳಿದೆ ಇಲ್ಲಾ  ನಾಳೆ ಕೊಡ್ತೀನಿ.
**
ಮರುದಿನ ಎಂದಿನಂತೆ ಜಾಗಿಂಗ್ ಬಂದೆ ಮಹೇಶ ಒಬ್ಬನೇ ಬಂದಿದ್ದ . ಓಡೋಡಿ ಬಂದು ಕುಳಿತೆ  ಒಮ್ಮೇಲೆ ತಲೆ ತಿರುಗಿದಂಗಾಗಿ ವಾಂತಿ ಮಾಡಿಕೊಂಡೆ. ಮಹೇಶ ಕೂಗಿದ ಏನಾಯ್ತೋ?
 ಇಲ್ಲ ನನ್ನದು ತಪ್ಪಾಯಿತು, ನನ್ನನ್ನ ಕ್ಷಮಿಸಿಬಿಡು ಚಿಕನ್ ಅಮೀರಸಾಬ ಗೋಗರೆಯುತ್ತಿದ್ದ. ಮುನಿಸಿಕೊಂಡು ಕುಳಿತಿದ್ದ ಅವನ ಹೆಂಡತಿ ತಲೆಯನ್ನು ಮೊಣಕಾಲಿನಲ್ಲಿ ಹುದುಗಿಸಿ ಅಳುತ್ತಿದ್ದಳು. ಅವಳು ನಗ್ನಳಾಗಿಯೇ ಕುಳಿತಿದ್ದಳು.
 ನಾನು ಮಾಡಿದ ತಪ್ಪಾದರೂ ಏನು? ಅವಳ ತಲೆ  ಎತ್ತಿ ಕೇಳಿದಳು. ಅವಳ ಕಣ್ಣುಗಳಲ್ಲಿ ಸಾಗರದಷ್ಟು ನೀರಿತ್ತು. ಏನೂ ಅರಿಯದ ಮುಗ್ದತೆಯಿತ್ತು. ಮತ್ತೇ ಕೇಳಿದಳು ನಾನು ಮಾಡಿದ್ದಾದರೂ ಏನು?
ಅಮೀರಸಾಬ ಹೇಳುತ್ತಿದ್ದ ‘ನನಗೆ ಅರಿಯದೇ ತಪ್ಪು ಮಾಡಿಬಿಟ್ಟೆ, ದಯವಿಟ್ಟು ನನ್ನನ್ನು ಕ್ಷಮಿಸು. ದುಡುಕಿನಲ್ಲಿ ನಿನ್ನ ಶೀಲದ ಬಗ್ಗೆ ಶಂಕೆ ಪಟ್ಟೆ. ನೀನು ಹೇಳಿದ್ದೆ ನಾನು ತಂದೆಯಾಗ್ತಾ ಇದೀನಾ ಅಂತ ಎಷ್ಟು ಖುಷಿಯಾಗಿದ್ದೆ ಗೊತ್ತಾ? ಅದೇ ಖುಷಿಯಲ್ಲಿ ಅಂಗಡಿಗೆ ಬಂದೆ. ರಮೀಜಾ ಮದ್ಯಾಹ್ನ ಅಂಗಡಿಗೆ ಬಂದವಳೇ ಕೇಳಿದಳು. ಆ ಮಗುವಿನ ಅಪ್ಪ ನೀನೇನಾ ಅಂತ, ಸಿಟ್ಟಿನಿಂದ ಕೆನ್ನೆಗೆ ಬಾರಿಸಿದೆ. ಕಣ್ಣೀರು ಸುರಿಸುತ್ತಲೇ ಹೇಳಿದಳು. ಬಹಳ ದಿನಗಳಿಂದ ಹೇಳಬಾರ್ದು ಅಂತ ಇದ್ದೆ. ಆದರೆ ನನ್ನ ಮಾತು ನೀವು ಕೇಳಲ್ಲ ಅಂತ ಸುಮ್ಮನಿದ್ದೆ. ಹಿಂದಿನ ಓಣಿಯ ಇಜಾಜ್ನಿಗೂ ಪಿರ್ದೋಸ್ಳಿಗೂ ಹಳೆಯ ಸಂಬಂದ ಇದೆ. ಅವನು ಅವಳು ಒಂದೇ ಶಾಲೇಲಿ ಒದ್ತಾ ಇದ್ರು ಅಂದ್ಳು. ಸಿಟ್ಟಿಗೆದ್ದ ನಾನು ಮನೆಗೆ ಬಂದ್ರೆ ನೀನು  ಮನೆಯ ಬಾಗಿಲಲ್ಲಿ ನಿಂತು ನಗುತ್ತಾ ಕೈಯಾಡಿಸುತ್ತಿದ್ದೆ. ಅತ್ತ ನೋಡಿದರೆ ನಿನ್ನ ಗೆಳೆಯ ಇಜಾಜ್ ಹೊರಟಿದ್ದ. ಮನೆಯೊಳಗೆ ಬಂದವನೇ ಕೂಗಿ ಕರೆದ, ಕೈಯಲ್ಲಿದ್ದ ಮಚ್ಚನ್ನು ನಿನಗೆ ಚುಚ್ಚಿದೆ, ಆವಾಗಲೂ ನೀ ಕೇಳ್ತಾ ಇದ್ದದ್ದು ಕಾಡ್ತಾ ಇತ್ತು.
 ನನ್ನ ತಪ್ಪಾದರು ಏನು?
 ನನ್ನ ಮಣ್ಣು ಮಾಡಿದ ನಂತರ ಇಜಾಜ್ ದಾರಿಯಲ್ಲಿ ಸಿಕ್ಕು ಹೇಳಿದ ಜೀಜಾಜಿ, ನನ್ನ ತಂಗಿ ನಿನ್ನೆ ತಾನೆ ಸಿಹಿ ಸುದ್ದಿ ಹೇಳಿ, ತನ್ನ ತವರು ಮನೆಯವರಿಗೆ ಹೇಳಿ ಬಾ ಎಂದು ಸಂತೋಷದಿಂದ ನಗು ನಗುತ್ತಾ ಕಳಿಸಿದ್ದಳು. ಇವತ್ತು ನೋಡಿದರೆ ಅವಳಿಲ್ಲ ಎಂದತ್ತ. ಅಲ್ಲಿಯ ತನಕ ನಿನ್ನ ಮೇಲೆ ಇದ್ದ ಸಿಟ್ಟು  ಇಳಿದಂತಾಯಿತು. ಮನೆಗೆ ಹೋದವನೆ ರಮೀಜಾಳ ಬಾಯಿ ಬಿಡಿಸಿದೆ. ಇಷ್ಟು ವರ್ಷ ಆದರೂ ನನ್ನಲ್ಲಿ  ಹುಟ್ಟದ ಜೀವ ಅವಳಲ್ಲಿ ಹುಟಿದ್ದಕ್ಕೆ  ಹೊಟ್ಟೆಕಿಚ್ಚುಪಟ್ಟು ಅವಳು ನಿನ್ನ ಬಗ್ಗೆ ಇಲ್ಲಸಲ್ಲದ್ದನ್ನ ಹೇಳಿದ್ದನ್ನ ಒಪ್ಪಿಕೊಂಡಳು.
 ಪ್ರೀತಿಯ ಅರಗಿಣಿಯಂತಿದ್ದ ನಿನ್ನನ್ನು  ಕೊಂದ ತಪ್ಪಿಗೆ ನಾನು ನೇಣುಹಾಕಿಕೊಂಡೆ…
 ನನಗೆ ಕ್ಷಮಿಸಿಬಿಡು ನನ್ನದು ತಪ್ಪಾಯಿತು ಗೊಗರೆಯುತ್ತಲೇ ಇದ್ದ.
 ಅವಳು ಕೇಳಿದಳು ನನ್ನ ಒಂದು ಮಾತು ಕೇಳಬಹುದಿತ್ತಲ್ಲನನ್ನ ತಪ್ಪಾದರೂ ಏನು? ನನ್ನನ್ನು ಯಾಕೆ ಕೊಂದಿ?… ಅವಳು ಕೇಳುತ್ತಲೇ ಇದ್ದಳು ಅವನು ಹೇಳುತ್ತಲೇ ಇದ್ದ..
 ಮಹೆಬೂಬ ತನ್ನ ಗೋರಿಯ ಮೇಲೆ ಖಬರಸ್ತಾನದ ಅಂಚಿನಲ್ಲಿ ಬೆಳೆದಿದ್ದ ಕಾಡು ಹೂಗಳನ್ನು ತಂದಿಡುತ್ತಿದ್ದ. ಗೋರಿಯ ಮೇಲೆಲ್ಲಾ ಹೂವಿನಿಂದ ಶೃಂಗಾರ ಮಾಡುತ್ತಿದ್ದ. ಅತ್ತ ಇತ್ತ ನೋಡುತ್ತ ಹೇಳುತ್ತಿದ್ದ. ಹೂವು ಇರೋದು ಪೂಜೆಗೆ, ಮುಡಿಯೋದಿಕ್ಕೆ.. ಶೃಂಗಾರಕ್ಕೆ, ಡೋಲಿಯ ಮೇಲೆ ಹಾಕುವದಕ್ಕೆ.
 ನಗುವಿನೊಂದಿಗೆ ಹುಟ್ಟಿ ನಗುವಿನೊಂದಿಗೆ ಸತ್ತ ಮಗು ತನ್ನ ಗುಲಾಬಿ ತುಟಿಗಳನ್ನು ತುಸುವೇ ತೆರೆದು ನಗುತ್ತಿತ್ತು. ಯಾವುದೇ ಭಾಷೆ ಅರಿಯದ ಅದು ನಗುತ್ತಲೇ ಇತ್ತು.
 ಖಾದರ್ ಗೋರಿಯ ಮೇಲೆ ಕುಳಿತು ತಾನೊಬ್ಬನೇ ವಟಗುಟ್ಟುತ್ತಿದ್ದ ಈ ಪ್ರಪಂಚಾನೇ ಹಿಂಗೆ. ಎಲ್ಲರೂ ಕಳ್ಳ ನನ್ಮಕ್ಳು. ನಾನು ಕದೀಲಿಲ್ಲ. ಅಂದರೆ ಸಾಕ್ಷಿ ಬೇಕಂತೆ ಇವರಿಗೆ. ಲಫಡಾ, ಲಫಂಗ ದುನಿಯಾ, ನಿಯತ್ತಿಲ್ಲದ ದುನಿಯಾ, ನನ್ನ ನಾಯಿಯಷ್ಟೂ  ನಿಯತ್ತಿಲ್ಲದ ಜನ.
 ಹಾಜಿ ಮೊಹ್ಮದ್ ತನ್ನ ಗೋರಿಯ ಮೇಲೆ ಕುಳಿತು ದೇವರ ದ್ಯಾನ ಮಾಡುತ್ತಿದ್ದ ಆಗಾಗ ಇಪ್ಪತ್ತು ರೂಪಾಯಿ ಕೆಜಿಗೆ ಎನ್ನುತ್ತಿದ್ದ
 ಖಬರಸ್ತಾನ ಎನ್ನುವುದು ಶಾಂತಿಯ ತಾಣವಲ್ಲ, ಗಜಿಬಿಜಿ ನಿಮ್ಮ ಮೀನಿನ ಸಂತೆಯಂತೆ.
 ಹಿಂದೂಗಳ ಸ್ಮಶಾನದಲ್ಲೂ  ಇದೇ  ಗಜಿಬಿಜಿ ನಿಮ್ಮ ವಾರದ ಸಂತೆಯಂತೆಯೇ
 ಅಯ್ಯೋ.. ನಿಮಗೆ ಹೇಳೋದೆ ಮರ್ತು ಬಿಟ್ಟಿದ್ದೆ. ಇದೆಲ್ಲಾ ನನಗೆ ಹೇಗೆ ಗೊತ್ತಾಯ್ತು ಅಂತಾನಾ. ಇಲ್ಲಿ ನೋಡಿ ಹೊಸ  ಪ್ರೇಷ್ ಗೋರಿಯೊಂದು ಕಾಣ್ತಾ ಇದೆಯಾ? ಇವತ್ತು ಬೆಳಿಗ್ಗೆ ತಾನೇ ತೋಡಿ, ಮುಚ್ಚಿರೋದು. ಹೂವಿನ ಪರಿಮಳ, ಅಗರಬತ್ತಿ ವಾಸನೆ ಇನ್ನೂ ಬರ್ತಾನೇ ಇದೆ. ಅದು ನನ್ನದೇ. ತಲೆ ಚಕ್ರ ಬಂದು ಬಿದ್ದೋನು ಒಂದು ವಾರ ಸಾವು ಬದುಕಿನೊಂದಿಗೆ ಒದ್ದಾಡಿದೆ. ಬ್ರೈನ್ ಟ್ಯೂಮರೋ ಎಂತದೋ ಅಂತೆ. ನಿನ್ನೆ ಸೋಲೊಪ್ಪಿಕೊಂಡುಬಿಟ್ಟೆ.
ಮೈಮೇಲೆ ಒಂದೇ ಸಮನೆ ಮಣ್ಣಿನ ವಜ್ಜೆ ತಡೆಯೋಕಾಗ್ಲಿಲ್ಲ. ಮೇಲ್ಬಂದೆ, ಈಗ ಪರವಾಗಿಲ್ಲ.
 ಕಥೆ ಬರೆಯೋದಿಕ್ಕೆ ಪ್ರಶಸ್ತವಾದ ಸ್ಥಳ. ಬರೀತಾ ಕೂತಿದೀನಿ, ಕಾಯ್ತಾ ಇರ್ತೀನಿ, ಬರ್ತೀರಾ ತಾನೇ?
Please follow and like us:
error