ವರಿಷ್ಠರ ಮೇಲೆ ಒತ್ತಡ ಹಾಕಲು ಯಡ್ಡಿ, ಶೆಟ್ಟರ್ ಇಂದು ದಿಲ್ಲಿಗೆ

ಶಾಸಕಾಂಗ ಸಭೆಗೆ ಮೂರು ದಿನಗಳ ಗಡುವು
*ತೀವ್ರಗೊಂಡ ಬಿ.ಎಸ್. ಯಡಿಯೂರಪ್ಪ ಬಣದ ಚಟುವಟಿಕೆ
*ಯಡ್ಡಿ, ಸಿ.ಎಂ. ಉದಾಸಿ ನಿವಾಸದಲ್ಲಿ ಬಿರುಸಿನ ಚರ್ಚೆ
ಬೆಂಗಳೂರು, ಜೂ.19:ಮುಖ್ಯಮಂತ್ರಿ  ಡಿ.ವಿ.ಸದಾನಂದ ಗೌಡ ಹಠಾವೋ ಕಾರ್ಯಕ್ಕೆ ಬಿಜೆಪಿಯೊಳಗೆಯೇ ಮತ್ತೆ ಚಾಲನೆ ದೊರಕಿದ್ದು,ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಬಣದಲ್ಲಿ ಈ ಸಂಬಂಧ ಬಿರುಸಿನ ಚಟುವಟಿಕೆಗಳು ನಡೆಯುತ್ತಿವೆ.ಸದಾನಂದ ಗೌಡರನ್ನು ಕೆಳಗಿಳಿಸಿ, ಪಂಚಾಯತ್‌ರಾಜ್ ಸಚಿವ, ವೀರಶೈವ ಮುಖಂಡ ಜಗದೀಶ್ ಶೆಟ್ಟರ್‌ಗೆ ಪಟ್ಟ ಕಟ್ಟಲು ಯಡಿಯೂರಪ್ಪ ಬಣದವರು ನಡೆಸುತ್ತಿರುವ ಹೋರಾಟ ಗರಿಗೆದರಿದ್ದು, ಇದರಿಂದ ಬಿಜೆಪಿಯೊಳಗಿನ ಆಂತರಿಕ ಬಿಕ್ಕಟ್ಟು ಮತ್ತಷ್ಟು ಭುಗಿಲೇಳುವ ಸಾಧ್ಯತೆ ನಿಚ್ಚಳವಾಗಿದೆ.ಶಾಸಕರ ಸಮಸ್ಯೆಯನ್ನು ಆಲಿಸಲು ಕಳೆದ ಎಂಟು ತಿಂಗಳುಗಳಿಂದ ಶಾಸಕಾಂಗ ಸಭೆ ಕರೆದಿಲ್ಲ.ಕೂಡಲೇ ಶಾಸಕಾಂಗ ಸಭೆ ಕರೆಯುವಂತೆ ಯಡಿಯೂರಪ್ಪ ಬಣದ ಮುಖಂಡರಾಗಿರುವ ಲೋಕೋಪಯೋಗಿ ಸಚಿವ ಸಿ.ಎಂ. ಉದಾಸಿ ಸದಾನಂದ ಗೌಡರಿಗೆ ಗುಡುವು ನೀಡಿದ್ದಾರೆ.
ಬೆಳಗ್ಗೆ ಉದಾಸಿಯವರ ನಿವಾಸದಲ್ಲಿ ಸಭೆ ಸೇರಿದ ಯಡಿಯೂರಪ್ಪ ಹಾಗೂ ಅವರ ಬಣದ ಸಚಿವರು ಮತ್ತು 40ಕ್ಕೂ ಹೆಚ್ಚು ಶಾಸಕರು,ನಾಯಕರು,ಸದಾನಂದ ಗೌಡ ಹಠಾವೋ ಕಾರ್ಯದ ಕುರಿತು ತೀವ್ರ ಚರ್ಚೆ ನಡೆಸಿದರು.ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿಯ ಹಲವು ಶಾಸಕರು, ತಮ್ಮ ಕ್ಷೇತ್ರದ ಅಭಿವೃದ್ಧಿ, ಸಮಸ್ಯೆಗಳ ಕುರಿತು ಚರ್ಚಿಸಲು ಅಪೇಕ್ಷೆ ವ್ಯಕ್ತಪಡಿಸಿದ್ದಾರೆ.
ಈ ಹಿನ್ನೆಲೆಯಲ್ಲಿ ಮುಂದಿನ ಮೂರು ದಿನಗಳೊಳಗೆ ಶಾಸಕಾಂಗ ಸಭೆ ಕರೆಯುವಂತೆ ಮುಖ್ಯಮಂತ್ರಿಗೆ ಪತ್ರ ಬರೆದು ಒತ್ತಾಯಿಸಿದ್ದೇವೆ ಎಂದರು.ವಿಧಾನ ಪರಿಷತ್ ಚುನಾವಣೆಗೂ ಮೊದಲು ಶಾಸಕಾಂಗ ಪಕ್ಷದ ಸಭೆ ಕರೆಯಿರಿ ಎಂದು ಒತ್ತಾಯಿಸಿದ್ದೆವು.ಆದರೆ ಚುನಾವಣೆಯ ಬಳಿಕ ಸಭೆ ಕರೆಯಲಾಗುವುದು ಎಂದು ಭರವಸೆ ನೀಡಿದ್ದರೂ, ಅದನ್ನು ಇನ್ನೂ ಸಿಎಂ ಮಾಡಿಲ್ಲ,ಅದಕ್ಕಾಗಿ ನಾವು ಒತ್ತಾಯಿಸುತ್ತಿದ್ದೇವೆ ಎಂದರು.ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ಶಾಸಕಾಂಗ ಸಭೆ ಕರೆಯುವಂತೆ ಒತ್ತಡ ಹೇರುವುದಕ್ಕಾಗಿ ವರಿಷ್ಠರನ್ನು ಭೇಟಿಯಾಗಿ ಇಂದು ಅಥವಾ ನಾಳೆ ದಿಲ್ಲಿಗೆ ತೆರಳಲಿದ್ದಾರೆ.
ಈ ಸಂಬಂಧ ಯಡಿಯೂರಪ್ಪರವರು ಶೆಟ್ಟರ್‌ರೊಂದಿಗೆ ಮಾತುಕತೆ ನಡೆಸಿ ತೀರ್ಮಾನ ಕೈಗೊಳ್ಳಲಿದ್ದಾರೆ ಎಂದರು.ಬಳಿಕ ಸಂಜೆಯ ವೇಳೆ ಮತ್ತೆ ಯಡಿಯೂರಪ್ಪರ ರೇಸ್‌ಕೋರ್ಸ್ ರಸ್ತೆಯಲ್ಲಿರುವ ನಿವಾಸದಲ್ಲಿ ಒಟ್ಟು ಸೇರಿದ ಬಿಎಸ್‌ವೈ ಬಣದ ನಾಯಕರು,ಶತಾಯಗತಾಯವಾಗಿ ಸದಾನಂದ ಗೌಡರನ್ನು ಈ ಬಾರಿ ಕೆಳಗಿಳಿಸಲೇ ಬೇಕು ಎಂಬುದಾಗಿ ಪಣ ತೊಟ್ಟಿದೆ. ಸಭೆ ಸೇರಿದ ನಾಯಕರು ಸದಾನಂದ ಗೌಡ ಕೂಡಲೇ ಶಾಸಕಾಂಗ ಸಭೆ ಕರೆಯಬೇಕು, ಜೊತೆಗೆ ಅವರನ್ನು ಸಿಎಂ ಗಾದಿಯಿಂದ ಕೆಳಗಿಳಿಸೇಕು ಎಂಬ ಗಡುವನ್ನು ನೀಡಿದ್ದಾರೆ.  
ಇದರಿಂದ ಬಿಜೆಪಿಯೊಳಗಿನ ಆಂತರಿಕ ಬಿಕ್ಕಟ್ಟು ಬಿಗಡಾಯಿಸುವ ಲಕ್ಷಣಗಳು ಸ್ಪಷ್ಟವಾಗಿದ್ದು, ಈ ಬಾರಿ ‘ಮಾಡು ಇಲ್ಲವೇ ಮಡಿ’ ಎಂಬ ನಿರ್ಧಾರಕ್ಕೆ ಬಿಎಸ್‌ವೈ ಬಣ ಬಂದಿರುವುದು ಸರಕಾರವನ್ನು ಮತ್ತಷ್ಟು ಇಕ್ಕಟ್ಟಿಗೆ ಸಿಲುಕಿಸಿದಂತಾಗಿದೆ. ಸದಾನಂದ ಗೌಡ ಸಿಎಂ ಆದ ಮೇಲೆ ಜೆಡಿಎಸ್‌ಗೆ ಸಹಕರಿಸುತ್ತಿದ್ದಾರೆ, ಜೊತೆಗೆ ಜೆಡಿಎಸ್‌ನ ನಾಯಕರೊಂದಿಗೆ ರಹಸ್ಯವಾಗಿ ಕೈಜೋಡಿಸಿದ್ದಾರೆ ಎಂಬ ಆರೋಪ ಬಿಎಸ್‌ವೈ ಬಣದ್ದು. ಜೊತೆಗೆ ಇತ್ತೀಚೆಗೆ ನಡೆದ ವಿಧಾನ ಪರಿಷತ್ ಚುನಾವಣೆಯಲ್ಲಿ ಅಡ್ಡ ಮತದಾನ ಕೂಡಾ ಸದಾನಂದ ಗೌಡರ ಬಣದವರೇ ಮಾಡಿದ್ದು, ಈ ಎಲ್ಲಾ ವಿಚಾರಗಳ ಕುರಿತು ಚರ್ಚಿಸುವುದಕ್ಕಾಗಿ ಕೂಡಲೇ ಶಾಸಕಾಂಗ ಸಭೆ ಕರೆಯುವಂತೆ ಸಹಿಸಂಗ್ರಹ ಕೂಡಾ ನಡೆಯುತ್ತಿದೆ.
ಯಡಿಯೂರಪ್ಪರ ರೇಸ್‌ಕೋರ್ಸ್ ರಸ್ತೆಯಲ್ಲಿ ನಡೆದ ಸಭೆಯಲ್ಲಿ ಸಚಿವರಾದ ಬಸವರಾಜ ಬೊಮ್ಮಾಯಿ, ಸೋಮಣ್ಣ, ಮುರುಗೇಶ್ ನಿರಾಣಿ, ಸಿ.ಎಂ.ಉದಾಸಿ,ಉಮೇಶ್ ಕತ್ತಿ, ರೇಣುಕಾಚಾರ್ಯ ಸೇರಿದಂತೆ ಹಲವರು ಭಾಗವಹಿಸಿದ್ದು, ಸದಾನಂದ ಗೌಡರ ತಲೆದಂಡಕ್ಕೆ ವೇದಿಕೆ ಸಿದ್ಧಪಡಿಸಿದ್ದಾರೆ.ಮುಖ್ಯಮಂತ್ರಿ ಸದಾನಂದ ಗೌಡ ಶಾಸಕಾಂಗ ಸಭೆ ಕರೆಯದಿದ್ದರೆ,ಪರ್ಯಾಯವಾಗಿ ಶಾಸಕಾಂಗಸಭೆ ಕರೆಯಲು ಬಿಎಸ್‌ವೈ ಬಣ ನಿರ್ಧರಿಸಿದ್ದು,ಡಿವಿಯನ್ನು ಕೆಳಗಿಳಿಸುವುದಕ್ಕಾಗಿ ತಮ್ಮಾಂದಿಗೆ ಹೆಚ್ಚಿನ ಸಚಿವ, ಶಾಸಕರಿದ್ದಾರೆ ಎಂದು ಘೋಷಿಸಿದೆ.
ಸದಾನಂದ ಗೌಡರ ತಲೆದಂಡ ಕೇಳಲು ಮಾಜಿ ಸಿಎಂ ಯಡಿಯೂರಪ್ಪ ಹಾಗೂ ಜಗದೀಶ್ ಶೆಟ್ಟರ್ ದಿಲ್ಲಿಗೆ ತೆರಳಿ, ವರಿಷ್ಠರ ಮುಂದೆ ತಮ್ಮ ಬೇಡಿಕೆ,ಸಿಎಂ ವಿರುದ್ಧ ದೂರು ನೀಡಲು ನಿರ್ಧರಿಸಿದೆನ್ನಲಾಗಿದೆ.ಪಕ್ಷದೊಳಗೆ ಮತ್ತೆ ಬಿಕ್ಕಟ್ಟು ಸೃಷ್ಟಿಯಾಗಿರುವುದರಿಂದ ಮುಖ್ಯಮಂತ್ರಿ ಸದಾನಂದ ಗೌಡ ಆತಂಕಕ್ಕೀಡಾಗಿದ್ದು, ಇಂದು ಕೈಗೊಳ್ಳಬೇಕಿದ್ದ ಬಿಜಾಪುರ ಪ್ರವಾಸವನ್ನು ಕೂಡಾ ರದ್ದುಗೊಳಿಸಿದ್ದಾರೆ.
ಸಿಎಂ ಗಾದಿ ನೀಡಿದರೆ ನಿಭಾಯಿಸುತ್ತೇನೆ
ಹುಬ್ಬಳ್ಳಿ,ಜೂ.19:ಹೈಕಮಾಂಡ್ ಮುಖ್ಯಮಂತ್ರಿ ಹುದ್ದೆ ಸೇರಿದಂತೆ ಯಾವುದೇ ಹುದ್ದೆಯನ್ನು ನೀಡಿದರೂ ಅದನ್ನು ನಿಭಾಯಿಸಲು ತಾನು ಸಿದ್ಧ ಎಂದು ಪಂಚಾಯತ್‌ರಾಜ್ ಸಚಿವ ಜಗದೀಶ್ ಶೆಟ್ಟರ್ ತಿಳಿಸಿದ್ದಾರೆ.ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹೈಕಮಾಂಡ್ ನೀಡುವ ಯಾವುದೇ ಹುದ್ದೆಯನ್ನು ಅಲಂಕರಿಸಲು ತಾನು ಸದಾ ಸಿದ್ಧನಾಗಿದ್ದೇನೆ ಎಂದರು.
Please follow and like us:
error