You are here
Home > Koppal News > ವಿಕೋಪಗಳಿಂದ ರಕ್ಷಣೆ : ಸಾರ್ವಜನಿಕರು ಜಾಗೃತಿ ಹೊಂದುವುದು ಅಗತ್ಯ- ಬಿ.ಎಸ್. ಪ್ರಕಾಶ್

ವಿಕೋಪಗಳಿಂದ ರಕ್ಷಣೆ : ಸಾರ್ವಜನಿಕರು ಜಾಗೃತಿ ಹೊಂದುವುದು ಅಗತ್ಯ- ಬಿ.ಎಸ್. ಪ್ರಕಾಶ್

ಕೊಪ್ಪಳ  ವಿಕೋಪಗಳಿಂದ ರಕ್ಷಣೆ ಪಡೆಯುವುದರ ಬಗ್ಗೆ ಸಾರ್ವಜನಿಕರು ಜಾಗೃತಿ ಹೊಂದುವುದು ಅಗತ್ಯವಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್ ಅವರು ಹೇಳಿದರು.
  ಕರ್ನಾಟಕ ರಾಜ್ಯ ಗೃಹರಕ್ಷಕದಳ, ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಇಲಾಖೆ, ಜಿಲ್ಲಾಡಾಳಿತ, ಪೊಲೀಸ್ ಇಲಾಖೆ, ಎನ್.ಸಿ.ಸಿ., ಎನ್.ಎಸ್.ಎಸ್., ಭಾರತ ಸೇವಾ ದಳ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಜಿಲ್ಲಾ ಪೊಲೀಸ್ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ರಾಷ್ಟ್ರೀಯ ವಿಪತ್ತು ನಿರ್ವಹಣಾ ದಿನಾಚರಣೆಯ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿದರು.
  ಪ್ರಕೃತಿ ವಿಕೋಪ ಹಾಗೂ ಮಾನವ ನಿರ್ಮಿತ ವಿಕೋಪಗಳಿಂದ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದರ ಜೊತೆಗೆ ಇತರರನ್ನೂ ರಕ್ಷಿಸಲು ಅನುಸರಿಸಬೇಕಾದ ಕ್ರಮಗಳು ಹಾಗೂ ವಹಿಸಬೇಕಾದ ಮುಂಜಾಗ್ರತಾ ಕ್ರಮಗಳ ಬಗ್ಗೆ ಸಾರ್ವಜನಿಕರು ಅರಿವು ಹೊಂದುವುದು ಅಗತ್ಯವಾಗಿದೆ ನಾಗರೀಕ ಸಮಾಜದ ದೈನಂದಿನ ಬದುಕಿನಲ್ಲಿ ನಾನಾ ರೀತಿಯಲ್ಲಿ ಸಂಭವಿಸುವ ಪ್ರಕೃತಿ ವಿಕೋಪಗಳಿಗೆ ಮಾನವನ ಸ್ವಾರ್ಥ ಹಾಗೂ ದುರುದ್ದೇಶಗಳೇ ಕಾರಣವಾಗಿವೆ.  ವಿಪತ್ತು ಎಂದರೆ ಅನಾಹುತ ಅಥವಾ ನಾನಾ ರೀತಿಯಲ್ಲಿ ಸಂಭವಿಸುವ ಅವಘಡಗಳು.  ಮಾನವನ ದೈನಂದಿನ ಬದುಕಿನಲ್ಲಿ ಉಂಟಾಗುವ ಹಲವು ಅವಘಡಗಳಿಂದ ಸಾಕಷ್ಟು ಪ್ರಮಾಣದಲ್ಲಿ ಜೀವಹಾನಿ ಮತ್ತು ಆಸ್ತಿ-ಪಾಸ್ತಿ ನಷ್ಟ ಹಾಗೂ ಮನುಷ್ಯನ ಜೀವನಕ್ಕೆ ದಕ್ಕೆ, ಅಡಚಣೆ ಉಂಟಾಗುತ್ತವೆ.  ವಿಶ್ವದಲ್ಲಿ ಪ್ರಕೃತಿ ವಿಕೋಪ ಮತ್ತು ಮಾನವ ನಿರ್ಮಿತ ಎಂಬ ಎರಡು ವಿಪತ್ತುಗಳು ಸಂಭವಿಸುತ್ತವೆ ಅವುಗಳಲ್ಲಿ ಪ್ರವಾಹ, ಭೂಕಂಪ, ಬಿರುಗಾಳಿ, ಅತಿವೃಷ್ಠಿ ಚಂಡಮಾರುತ, vಜ್ವಾಲಾಮುಖಿ ಸ್ಪೋಟ, ಭೂಕುಸಿತ, ಅನಾವೃಷ್ಠಿ ಇತ್ಯಾದಿ ಘಟಿಸುವ ಅವಘಡಗಳನ್ನು ಪ್ರಕೃತಿ ವಿಕೋಪ ಎಂತಲೂ, ಯುದ್ದಗಳು, ಭಯೋತ್ಪಾದನೆ, ಉಗ್ರವಾದಿ ಚಟುವಟಿಕೆಗಳು,  ಬಾಂಬ್‌ಸ್ಪೋಟ, ಬೆಂಕಿ ಅನಾಹುತ, ಕಟ್ಟಡ ಕುಸಿತ, ವಾಹನ ಅಪಘಾಡಗಳು, ಪರಮಾಣು, ಜೈವಿಕ ಹಾಗೂ ರಸಾಯನಿಕ ಅನಿಲಗಳಿಂದ ಹಾಗೂ ಇನ್ನಿತರೆ ಸಂಭವಿಸುವ ಅನಾಹುತಗಳು ಮಾನವ ನಿರ್ಮಿತ ವಿಪತ್ತುಗಳಾಗಿವೆ.  ಇಂತಹ ವಿಪತ್ತುಗಳನ್ನು ಸಮಯೋಚಿತವಾಗಿ ಹಾಗೂ ಸೂಕ್ಷ್ಮವಾಗಿ ನಿರ್ವಹಿಸಿದಲ್ಲಿ ಅವುಗಳಿಂದಾಗಬಹುದಾದ ಘೋರ ಪ್ರಮಾಣದ ಅನಾಹುತಗಳನ್ನು ತಪ್ಪಿಸಬಹುದು.  ಈ ನಿಟ್ಟಿನಲ್ಲಿ ಜನಸಾಮಾನ್ಯರು  ಈ ವಿಪತ್ತುಗಳ ರಕ್ಷಣೆ ಬಗ್ಗೆ ತಿಳುವಳಿಕೆ ಪಡದುಕೊಳ್ಳುವುದರಿಂದ ಮುಂದಾಗುವ ಅನಾಹುತಗಳನ್ನು ತಡೆಗಟ್ಟಬಹುದಾಗಿದೆ ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ನಾಗರೀಕರು ವಿಪತ್ತು ರಕ್ಷಣೆ ಹಾಗೂ ತಡೆಗಟ್ಟುವುದರ ಬಗ್ಗೆ ಅರಿವು ಪಡೆದುಕೊಳ್ಳಲು ಮುಂದಾಗಬೇಕಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ಪ್ರಕಾಶ್ ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಮಂಟೇಲಿಂಗಾಚಾರ್ ಅವರು ಮಾತನಾಡಿ, ಪ್ರಕೃತಿ ವಿಕೋಪಗಳು ಯಾವುದೇ ಶಾಪವಲ್ಲ, ಇದೊಂದು ಪ್ರಕೃತಿಯ ಕೋಪ, ಮಾನವ ತನ್ನ ಅವಶ್ಯಕತೆಗಾಗಿ ಪ್ರಕೃತಿಯನ್ನು ಮಾರ್ಪಡಿಸುವುದು, ನೈಸರ್ಗಿಕವಾಗಿ ದೊರೆಯುವ ಸಂಪತ್ತುಗಳನ್ನು ಲೂಟಿ ಮಾಡುವುದು, ಭಗ್ನಗೊಳಿಸುವುದು ಹಾಗೂ ಇನ್ನಿತರೆ ರೀತಿಯಲ್ಲಿ ಹಾಳು ಮಾಡುವುದು ಪ್ರಕೃತಿ ವಿಕೋಪಗಳಿಗೆ ಕಾರಣವಾಗಿದೆ.  ಈ ರಾಷ್ಟ್ರೀಯ ವಿಪತ್ತುಗಳ ರಕ್ಷಣೆ ಬಗ್ಗೆ ಶಾಲಾ ಮಕ್ಕಳಲ್ಲಿ ಅರಿವು ಮೂಡಿಸುವ ಕಾರ್ಯಕ್ರಮಗಳು ನಿರಂತರವಾಗಿ ನಡೆಯಬೇಕು ಎಂದರು.
  ಗೃಹರಕ್ಷಕ ದಳದ ಸುಧೀರಸಿಂಹ ಘೋರ್ಪಡೆ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು,  ಡಿವೈಎಸ್‌ಪಿ ವಿಜಯ ಡಂಬಳ, ಗೃಹರಕ್ಷಕ ದಳದ ಸೆಕೆಂಡ್ ಇನ್ ಕಮಾಂಡ್ ಜಲಾಲಸಾಬ ಹುಡೇದ್, ಜಿಲ್ಲಾ ಉದ್ಯೋಗ ವಿನಿಮಯ ಅಧಿಕಾರಿ ಬೀರನಾಯ್ಕ್ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.  ಎಸ್.ವಿ. ಮೇಳಿ ಸ್ವಾಗತಿಸಿದರು, ಅಗ್ನಿಶಾಮಕ ಅಧಿಕಾರಿ ಶಶಿಧರ ಮೂರ್ತಿ ವಂದಿಸಿದರು, ರಾಜೇಶೇಖರ ಪಾಟೀಲ್ ನಿರೂಪಿಸಿದರು.  ರಾಷ್ಟ್ರೀಯ ವಿಪತ್ತು ನಿರ್ವಹಣೆ ಕುರಿತಂತೆ ಶಾಲಾ ಮಕ್ಕಳಿಗೆ ಏರ್ಪಡಿಸಲಾಗಿದ್ದ ಚಿತ್ರಕಲಾ ಹಾಗೂ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಮಕ್ಕಳಿಗೆ ಬಹುಮಾನ ವಿತರಣೆ ಮಾಡಲಾಯಿತು.
ಸಮಾರಂಭದ ನಂತರ ಪೊಲೀಸ್ ಮೈದಾನದಲ್ಲಿ ಬಾಂಬ್‌ಸ್ಫೋಟ ಹಾಗೂ ಬೆಂಕಿಯಿಂದ ಆಗುವ ಅನಾಹುತದಿಂದ ಯಾವ ರೀತಿ ಮನುಷ್ಯನ ಪ್ರಾಣ ರಕ್ಷಣೆ ಮಾಡಬಹುದು ಹಾಗೂ ಸಮಯ ಪ್ರಜ್ಞೆಯಿಂದ ಆಗುವಂತ ಹೆಚ್ಚಿನ ಅಪಾಯಗಳು ಮತ್ತು ಜೀವಹಾನಿ ಹಾಗೂ ನಷ್ಟಗಳನ್ನು ತಡೆಗಟ್ಟಬಹುದು ಎಂಬುವುದರ ಬಗ್ಗೆ ಅಗ್ನಿಶಾಮಕ ಹಾಗೂ ಗೃಹರಕ್ಷಕದಳದವರು ಅಣಕು ಪ್ರದರ್ಶನ ಏರ್ಪಡಿಸಿ ಪ್ರಾತ್ಯಕ್ಷಿಕೆ ಮೂಲಕ ಶಾಲಾ ಮಕ್ಕಳಲ್ಲಿ ಹಾಗೂ ಸಾರ್ವಜನಿಕರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು. 

koppal sp

Leave a Reply

Top