ಉಣ್ಣುವ ಅನ್ನಕ್ಕೆ ಜಾತಿಭೇದ-ಪಂಕ್ತಿಭೇದ ಬೇಕೆ?

 -ಜ್ಯೋತಿ ಗುರುಪ್ರಸಾದ್
ಉಡುಪಿ ಕೃಷ್ಣಮಠ ಹಾಗೂ ಇತರ ದೇವಾಲಯಗಳಲ್ಲಿ ಪಂಕ್ತಿ ಭೇದದ ವಿರುದ್ಧ ರಾಜ್ಯದಲ್ಲಿ ನಡೆಯುತ್ತಿರುವ ಚಳವಳಿಯ ಅಲೆ ಅಗತ್ಯ ಪ್ರಜಾತಂತ್ರ ವಿಧಾನಕ್ಕಾಗಿ ಮನುಕುಲ ದಲ್ಲಿ ಎದ್ದಿರುವ ಹಕ್ಕಿನ ಹೋರಾಟದ ಸ್ವಾಗ ತಾರ್ಹ ಅಂಶವಾಗಿ ನನಗೆ ಕಾಣುತ್ತಿದೆ. ಬಸವಣ್ಣ ಹುಟ್ಟಿದ ನಾಡಿದು. ಆದರೆ ಆ ಅಂಥ ಸಮಾಜ ಸುಧಾರಕನ ಅಸ್ತಿತ್ವವನ್ನೇ ಮುಚ್ಚಿ ಹಾಕಲು ನಡೆಸಿರುವ ಹುನ್ನಾರದಂತೆ ಈ ಜಾತಿಭೇದದ- ಪಂಕ್ತಿಭೇದದ ಆಚರಣೆ ಭಕ್ತಿಪಂಥಕ್ಕೆ ಅವಮಾನ ಗೊಳಿಸುವ ಪರಂಪರೆಯಾಗಿ ಮುಂದುವರಿಯು ತ್ತಲೇ ಇರುವುದು ದುರ್ದೈವ. ಪುರೋಹಿತಶಾಹಿ ಭಾವದ ವೈಭವೀಕರಣ.
‘ಅನ್ನಸಂತರ್ಪಣೆ’ ಯನ್ನು ದೇವರಿಗೆ ಅರ್ಪಿಸುವ ಪ್ರಸಾದವೆಂದು ಕರೆದು ಅದನ್ನು ಭಕ್ತರಿಗೆಲ್ಲಾ ಸಮಾನವಾಗಿ ಹಂಚುವ
ಮನುಷ್ಯರನ್ನು ಸಮಾನವಾಗಿ ಕಾಣದ ಯಾವುದೇ ಊಟದ ಕೂಟ ಧಾರ್ಮಿಕ ಆಚರಣೆ ಆಗಲು ಸಾಧ್ಯವಿಲ್ಲ. ಅಧರ್ಮಕ್ಕೆ ಕಾರಣವಾಗುವ ದೇವರನ್ನು ದೂರವಿಟ್ಟ್ಟು ನಿಜವಾದ ದೇವರನ್ನು ಕಂಡುಕೊಳ್ಳುವ ಚಳವಳಿ ನಮ್ಮ ದೈನಂದಿನ ದಿನಚರಿಯಾಗಬೇಕಿದೆ.
ಒಂದು ಊಟ ಹಾಕುವ ವಿಧಾನ ವನ್ನು ನಾನು ಬಾಲ್ಯದಿಂದಲೂ ಅನುಮೋದಿ ಸುತ್ತಾ ಬಂದದ್ದು. ನನ್ನೂರು ಟಿ ನರಸೀಪುರದ ಗುಂಜಾನರಸಿಂಹಸ್ವಾಮಿ ದೇವಸ್ಥಾನದಲ್ಲಿ ನಾನು ಚಿಕ್ಕವಳಿರುವಾಗ ನನ್ನ ಅಜ್ಜನ ಅಣ್ಣ ದೊರೆಸ್ವಾಮಿ ಅಯ್ಯಂಗಾರ್ ಅವರು ಪೂಜೆ ಮಾಡುತ್ತಿದ್ದಾಗ ಪುಳಿಯೋಗರೆ ಪ್ರಸಾದ ವಿನಿಯೋಗ ನಡೆಯು ತ್ತಿತ್ತು. ಹೇಗೆಂದರೆ ದೇವರ ಉತ್ಸವ ಮುಗಿದು ದೇವಸ್ಥಾನದ ಪ್ರಾಕಾರದಲ್ಲಿ ಕುಳಿತ ಭಕ್ತವರ್ಗದವ ರಿಗೆಲ್ಲ ಸಮಾನವಾಗಿ ಒಂದೇ ಪ್ರಸಾದವನ್ನು ಎಲೆಯ ದೊನ್ನೆಯಲ್ಲಿ ಹಂಚುತ್ತಿದ್ದರು. ಆಗಾಗ ನಡೆಯುತ್ತಿದ್ದ ಇತರ ಸಂತರ್ಪಣೆಗಳೆಂದರೆ ಯಾರಾದರೂ ಭಕ್ತರು ಹರಸಿಕೊಂಡು ನಡೆಸುವ ಕಲ್ಯಾಣೋತ್ಸವ ಮುಂತಾದ ಅನ್ನಸಂತರ್ಪಣೆ ಗಳು. ಆಗ ಯಾರು ಬೇಕಾದರೂ ಆ ಉತ್ಸವದಲ್ಲಿ ಭಾಗವಹಿಸಿ ಪ್ರಾಕಾರದಲ್ಲಿ ಸಾಲಾಗಿ ಕುಳಿತು ಊಟ ಮಾಡಬಹುದಿತ್ತು. ಊಟ ಹಾಕುವುದಕ್ಕಾಗಿ ಬ್ರಾಹ್ಮಣರಿಗಾಗಿ ಇನ್ನೊಂದು ಪ್ರತ್ಯೇಕ ಪ್ರಾಕಾರವಿರಲಿಲ್ಲ. ಬಸವಣ್ಣನವರ ದಾಸೋಹ ಯುಗದ ಬಗ್ಗೆ ನಾನೀಗ ಪ್ರತ್ಯೇಕವಾಗಿ ಬರೆಯಬೇಕಿಲ್ಲ. ಹಸಿವು-ಬಡತನವನ್ನು ನೀಗಿಸುವ ಸಮಾಜ ಸುಧಾರಣೆಯ ಪರಮ ಮಾರ್ಗವಾಗಿ ಶಿವಶರಣ ರೆಲ್ಲ ಒಂದೇ ಎಂಬುದಾಗಿ ಸಮಾನತೆಯ ಮಂತ್ರವನ್ನು ಬರೀ ಬಾಯಿ ಮಾತಾಗಿಸದೆ ಕಟ್ಟು ನಿಟ್ಟಾಗಿ ಆಚರಣೆಗೆ ತಂದಿದ್ದೇ ವಚನ ಕಾಲದ ಬಸವ ಯುಗವಾಯಿತು. ಸಾಲಾಗಿ ಕುಳಿತು ಒಟ್ಟಾಗಿ ಒಂದೇ ರೀತಿಯ ಅವರಿಚ್ಚೆಯ ಊಟ ವನ್ನು ಮಾಡುವುದೆಂದರೆ celebration ; ಸೌಹಾರ್ದ ಎಲ್ಲ ಹೌತಣಕೂಟಕ್ಕೂ ಇದು ಅನ್ವಯಿಸುತ್ತದೆ. ಕಲ್ಲನಾಗರ ಕಂಡರೆ ಹಾಲನೆರೆವರಯ್ಯ
ದಿಟದ ನಾಗರ ಕಂಡರೆ ಕೊಲ್ಲು ಕೊಲ್ಲುರೆಂಬರಯ್ಯ
ಉಂಬ ಜಂಗಮ ಬಂದರೆ ನಡೀ ಎಂಬರು
ಉಣ್ಣದ ಲಿಂಗಕ್ಕೆ ಬೋನವ ಇಕ್ಕುವರಯ್ಯ
ಎಂಬ ರಚನಾತ್ಮಕ ವಚನವೂ ಕೂಡ ಬಸವಣ್ಣನವರಿಂದ ಹುಟ್ಟಿಕೊಂಡಿದ್ದು ಜಾತಿ ಭೇದದ-ಪಂಕ್ತಿಭೇದದ ಇಂಥ ದರಿದ್ರ ಮನ ಸ್ಥಿತಿಯ ಮನುಷ್ಯರಿದ್ದಾಗಲೇ ಅನಿಸುತ್ತದೆ. ಇಂತಹ ಭೇದಗಳು ನಡೆಯುವ ಸಂಕುಚಿತ ಮನೋಭಾವದ ಸ್ಥಳಗಳಿಗೆ ದೇವಸ್ಥಾನವೆಂದು ಕರೆದು ಕಾಲಿಡಲು ನನಗೆ ಮನಸ್ಸೇ ಬರುವುದಿಲ್ಲ. ಪಂಕ್ತಿ ವಂಚನೆ ಮಾಡುವ ಕುತ್ಸಿತ ಮನಸ್ಥಿತಿಯ ಸಾಲಿನಲ್ಲಿ ದೇವರಿರಲು ಸಾಧ್ಯವಿಲ್ಲ ಎಂಬ ಅರಿವು ಇಂದಿನ ಮಕ್ಕಳಿಗೆ ಮೂಡಬೇಕು. ಇದನ್ನೇ ನಾನು ಹೇಳಲು ಹೊರಟಿರುವುದು. ಸ್ವಾಭಿಮಾನ ತಿಳುವಳಿಕೆ ಇರುವ ಪ್ರಗತಿ ಪರ ಧೋರಣೆ ಇರುವ ಮಾನವೀಯ ಅಂತಃಕರಣದ ಸರಳತೆಯ ದಾರಿಯಲ್ಲಿ ನಡೆಯುವವರು ಯಾರೂ ಇಂತಹ ತಾರತಮ್ಯದ ವೌಢ್ಯ ನಡೆಯುವ ಸ್ಥಳಗಳನ್ನು ದೇವಸ್ತಾನಗಳೆಂದು ಕರೆದು ಪ್ರೋತ್ಸಾಹಿಸಲೇಬಾರದು.
ಎನ್ನ ಕಾಲೇ ಕಂಬ ದೇಹವೇ ದೇಗುಲ
ಶಿರವೇ ಹೊನ್ನ ಕಲಶವಯ್ಯ
ಎಂಬಂತಹ ವಚನದ ಕೃತಿ ಮಾತ್ರ ನಮ್ಮಂಥ ವರ ದೇವಸ್ಥಾನದ ತಾಣವಾಗಬೇಕು; ಭಕ್ತಿಯ ಅಳತೆಗೋಲಾಗಬೇಕು. ಇಂತಹ ಅನ್ಯಾಯದ ನಡವಳಿಕೆಗಳನ್ನು ದೂರವಿಡುವ ಪ್ರವೃತ್ತಿಗೆ ನಾಂದಿ ನಮ್ಮಿಂದಲೇ ಆಗಬೇಕು. ಆಗಲಾದರೂ ಭಾರತ ಸಂವಿಧಾನದ ಆಚರಣೆಗಳು ಅಮೆಂಡ್ ಮೆಂಟ್‌ಗಳು ನಿಜಾರ್ಥದಲ್ಲಿ ಗಂಭೀರವಾಗಿ ಜಾರಿಯಾಗಬಹುದು. ನಮಗೆ ಇಂತಹ ಅಭ್ಯಾ ಸವೇ ಈಗ ಪ್ರಾಕ್ಟಿಕಲ್ ಆಗಿ ಅಗತ್ಯವಿರುವುದು. ಇಲ್ಲದಿದ್ದರೆ ದೊಡ್ಡ ದೊಡ್ಡ ವಿದ್ವಾಂಸರ ಸಂಶೋ ಧನಾ ಪ್ರಬಂಧ -ಜಾತಿ ಹುಟ್ಟನ್ನು ಶೋಧಿಸಿ ಸಮಾನತೆಯ ಬಗ್ಗೆ ಬರೆದಿರುವ ಎಲ್ಲ ಗ್ರಂಥಗಳು ಧೂಳು ಹಿಡಿದು ಮೂಲೆ ಸೇರುವ ವ್ಯರ್ಥ ಪ್ರಯತ್ನಗಳಾಗಿ ಹೋಗುತ್ತವೆ. ಇವನಾರವ ಇವನಾರವ ಎಂದು ಎಣಿಸದಿರಯ್ಯ
ಇವ ನಮ್ಮವ ಇವ ನಮ್ಮವ ಎಂದು ಎಣಿಸಿರಯ್ಯ
ಎಂದು ಬಸವಣ್ಣನವರ ಕರುಳಿನ ಕರೆಯಂಥ ಅಂತಃಕರಣದಿಂದ ಹುಟ್ಟಿದ ನುಡಿ ಇಂದಿನ ಕೃಷ್ಣ ಮಠದ ಪೇಜಾವರ ಶ್ರೀಗಳಂಥ ಸ್ವಾಮಿಗಳಿಗೆ -ಹಿಂದೂ ಸಮಾಜೋತ್ಸವದ ಹರಿಕಾರರಿಗೆ ಜ್ಞಾನೋದಯ ತರದಿದ್ದರೆ ಶ್ರೀಕೃಷ್ಣನ ಭಗವದ್ಗೀತೆ ಯಾವ ಪರಿವರ್ತನೆ ತರಬಲ್ಲದು ಎಂಬುದಷ್ಟೇ ನನ್ನ ಪ್ರಶ್ನೆ. ಹಸಿದವರಿಗೆ ಊಟ ಬಡಿಸುವ ಒಂದು ಶುದ್ಧ ಸಂಪ್ರದಾಯದ ಸಂಸ್ಕೃತಿಯ ಕೊಂಡಿಯ ಬಗ್ಗೆ ನನ್ನ ಈ ಅಂಕಣದಲ್ಲಿ ಆಗಾಗ ಪ್ರತಿಪಾದಿಸುತ್ತಲೇ ಬಂದಿದ್ದೇನೆ. ಇದೀಗ ಬೇಡರ ಕಣ್ಣಪ್ಪ ಎಂಬ ಹಸಿವೆಯನ್ನು ತಾಳದ ಭಕ್ತನ ಸಾಹಸದ ಕಥೆಯೂ ಕೂಡ ಈ ಸಂದರ್ಭದಲ್ಲಿ ನೆನಪಾಗುತ್ತದೆ. ಭಕ್ತಿಯಂತೆ ಪೂಜೆಯಂತೆ ಒಂದೂ ಅರಿಯೆ ನಾ
ಪಾಪವಂತೆ ಪುಣ್ಯವಂತೆ ಕಾಣೆನಯ್ಯ ನಾ
ಶಿವಪ್ಪ ಕಾಯೋ ತಂದೆ ಮೂಲೋಕ ಸ್ವಾಮಿ ದೇವ
ಹಸಿವೆಯನ್ನು ತಾಳಲಾರೆ ಕಾಪಾಡೆಯಾ?
ಎಂದು ಬೇಡರ ಕಣ್ಣಪ್ಪ ಎಂಬ ಭಕ್ತಿ ಪ್ರಧಾನ ಹಳೆಯ ಕನ್ನಡ ಚಿತ್ರದಲ್ಲಿ ಕಣ್ಣಪ್ಪನ ಪಾತ್ರವಹಿಸಿ ಡಾ. ರಾಜ್ ಶಿವನಿಗೆರಗುವ -ಆನಂತರ ಕಣ್ಣಪ್ಪನಿಗೆ ಒದಗುವ ಬೇಟೆ -ಅವನಿಗೆ ಶಿವ ಪ್ರಸಾದವನ್ನು ಕರುಣಿಸುವ ಚಿತ್ರ ಇಂದಿನ ಯತಿವರ್ಯರಿಗೆ ಕಣ್ಣನ್ನು ತೆರೆಸುವ ಸರಳ ಸಾಂಸ್ಕೃತಿಕ ಕೊಂಡಿಯಾಗದಿದ್ದರೆ ಆ ಕನ್ನಡ ಚಿತ್ರರತ್ನಕ್ಕೆ ಸ್ವರ್ಣ ಕಮಲ ಪ್ರಶಸ್ತಿ ಬಂದಿರುವ ಘಟನೆ-ಡಾ. ರಾಜ್‌ರ ಅಮೋಘ ತನ್ಮಯ ಅಭಿನಯ ಇದೆಲ್ಲ ವ್ಯರ್ಥ ಎನಿಸದೆ ಬಿಡುವುದಿಲ್ಲವೇ. ಮನುಷ್ಯರನ್ನು ಸಮಾನವಾಗಿ ಕಾಣದ ಯಾವುದೇ ಊಟದ ಕೂಟ ಧಾರ್ಮಿಕ ಆಚರಣೆ ಆಗಲು ಸಾಧ್ಯವಿಲ್ಲ. ಅಧರ್ಮಕ್ಕೆ ಕಾರಣವಾಗುವ ದೇವರನ್ನು ದೂರವಿಟ್ಟ್ಟು ನಿಜವಾದ ದೇವರನ್ನು ಕಂಡುಕೊಳ್ಳುವ ಚಳವಳಿ ನಮ್ಮ ದೈನಂದಿನ ದಿನಚರಿಯಾಗಬೇಕಿದೆ. ಭಕ್ತ ಕನಕದಾಸರನ್ನು ಅವಮಾನಿಸಿ ದೇವಸ್ಥಾನದ ಹೊರಗೆ ನಿಲ್ಲಿಸಿದ ಕೃಷ್ಣ ಮಠದ ಘೋರ ಸಂಪ್ರದಾಯಕ್ಕೆ ಎಂದಿಗೂ ಮಣೆ ಹಾಕಬಾರದು.
ಕಲ್ಲಿನಲಿ ಹುಟ್ಟಿದ ಕಪ್ಪೆಗೆ ಆಹಾರ ತಂದಿತ್ತವರಾರು?
ತಲ್ಲಣಿಸದಿರು ಕಂಡ್ಯ ತಾಳು ಮನವೇ
ಎಲ್ಲರನು ಸಲಹುವನು ಇದಕ್ಕೆ ಸಂಶಯವಿಲ್ಲ.
ಹುಟ್ಟಿಸಿದ ದೇವ ತಾ ಹೊಣೆಗಾರನಾಗಿರಲು
ಗಟ್ಟಿಯಾಗಿ ಸಲಹುವನು ಇದಕೆ ಸಂಶಯವಿಲ್ಲ.
ಎಂದು ಭಕ್ತ ಕನಕದಾಸರು ನೋವಿನಿಂದ ಹಾಡಿದ್ದು ಕೃಷ್ಣ ಮಠದ ಪಂಕ್ತಿ ವಂಚನೆಯ ಇಂತಹ ಘೋರವಾದ ಅಮಾನವೀಯ ಸಂದರ್ಭದಲ್ಲೇ ಅನಿಸುತ್ತದೆ. ಆದರೆ ಪುರಂದರ ದಾಸರು ಕಂಡಿರುವ ಕೃಷ್ಣ ಜನರ ಕಷ್ಟವನ್ನು ಪರಿಹರಿಸುವವನು ಎಂಬ ಸಂಸ್ಕೃತಿಯ ಕೊಂಡಿ ನಮ್ಮಿಂದ ಮರೆಯಾಗದಿರಲಿ.
ಕೃಷ್ಣ ಎನಬಾರದೆ ಶ್ರೀ ಕೃಷ್ಣ ಎನಬಾರದೆ
ನರಜನ್ಮ ಬರುವಾಗ ನಾಲಿಗೆ ಇರುವಾಗ
ಕೃಷ್ಣಾ ಎನಬಾರದೆ ದೊಡ್ಡ ದಾರಿಯ ತುಳಿವಾಗ ಭಾರವ ಹೊರುವಾಗ
ಕೃಷ್ಣಾ ಎನಬಾರದೆ
ದುರಿತ ರಾಶಿಗಳ ತರಿದು ಬಿಸಾಡುತಲೊಮ್ಮೆ
ಕೃಷ್ಣಾ ಎನಬಾರದೆ
ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣಾ ಎನಬಾರದೆ?…
                                                                                                                          -ಜ್ಯೋತಿ ಗುರುಪ್ರಸಾದ್
Varthabharati
Please follow and like us:
error

Related posts

Leave a Comment