ಒತ್ತಡ ಹೇರುವ ತಂತ್ರಕ್ಕೆ ಕನ್ನಡ ಸಾಹಿತ್ಯ ಪರಿಷತ್ ಸೇತುವಾಗಬೇಕು : ಭೈರಪ್ಪ ಕರೆ

ಗಂಡುಗಲಿ ಕುಮಾರರಾಮ ವೇದಿಕೆ (ಗಂಗಾವತಿ): ಇಂಗ್ಲಿಷ್ ಮಾಧ್ಯಮ ಶಾಲೆಗಳು ದಂದೆಯಾಗಿ ಪರಿಣಮಿಸಿವೆ. ಈ ದಂದೆ ತಡೆಗೆ ಪೋಷಕರಲ್ಲಿ ತಿಳಿವಳಿಕೆ ಮೂಡಿಸುವುದರೊಂದಿಗೆ ಶಾಲಾ ಆಡಳಿತ ಮಂಡಳಿಗಳ ಮೇಲೆ ಒತ್ತಡ ಹೇರುವ ತಂತ್ರಕ್ಕೆ ಕನ್ನಡ ಸಾಹಿತ್ಯ ಪರಿಷತ್ ಸೇತುವಾಗಬೇಕು ಎಂದು `ಸರಸ್ವತಿ ಸಮ್ಮಾನ್` ಪುರಸ್ಕೃತ ಸಾಹಿತಿ ಡಾ.ಎಸ್.ಎಲ್. ಭೈರಪ್ಪ ಸೂಚಿಸಿದರು.
ಅಖಿಲ ಭಾರತ 78ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಂಗವಾಗಿ ಭಾನುವಾರ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ವಿಶೇಷ ಆಹ್ವಾನಿತರಾಗಿ ಭಾಗವಹಿಸಿ ಅವರು ಮಾತನಾಡಿದರು.
ಈ ದಂದೆ ನಡೆಸುವವರೆಗೆ ಮೊದಲು ಒಳ್ಳೆಯ ಮಾತುಗಳಲ್ಲಿ ತಿಳಿಸಿ ಹೇಳಬೇಕು. ಅದಕ್ಕೆ ಬಗ್ಗದಿದ್ದರೆ ಒತ್ತಡ ಹೇರಬೇಕು. ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯಲು ಮುಂದಾಗುವವರ ಮನೆ ಮುಂದೆ ಧರಣಿ ನಡೆಸಬೇಕು. ಸಾಧ್ಯವಾದರೆ ಅವರ ಮನೆಯೊಳಗೇ ಉಪವಾಸ ಕುಳಿತುಕೊಳ್ಳಬೇಕು. ಈ ಮೂಲಕ ಅವರು ನಾಚಿಕೆಪಡುವಂತೆ ಮಾಡಬೇಕು. ಇದಕ್ಕೆ ಚಲನಚಿತ್ರ ಕಲಾವಿದರು, ಗಾಯಕರಂಥ ಜನಾಕರ್ಷಕ ವ್ಯಕ್ತಿಗಳನ್ನೂ ಬಳಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.
ಇಂಗ್ಲಿಷ್ ಮಾಧ್ಯಮ ಶಾಲೆಗಳು ಕನ್ನಡಕ್ಕೆ ಮೊದಲ ಶತ್ರು. ಈ ಪಿಡುಗು ನಿವಾರಿಸಲು ಪರಿಷತ್ತು, ಕಾರ್ಯಾಗಾರಗಳನ್ನು ನಡೆಸಬೇಕು. ಕಾರ್ಯಕರ್ತರ ಪಡೆ ಅಣಿಗೊಳಿಸಬೇಕು. ಇಂಗ್ಲಿಷ್ ಮಾಧ್ಯಮ ಶಾಲೆ ತೆರೆಯುವ ಸುಳಿವು ದೊರೆತ ಕೂಡಲೇ ಪರಿಷತ್ತಿನ ತಾಲ್ಲೂಕು ಘಟಕಗಳು ಜಿಲ್ಲಾ ಹಂತಕ್ಕೆ, ಜಿಲ್ಲಾ ಘಟಕಗಳು ಕೇಂದ್ರ ಘಟಕಕ್ಕೆ ಮಾಹಿತಿ ರವಾನಿಸಬೇಕು. ಮಾಹಿತಿ ಮುಟ್ಟಿದ ಕೂಡಲೇ `ಸಾತ್ವಿಕ ಭಯ` ಹುಟ್ಟಿಸುವ ಕೆಲಸ ಆಗಬೇಕು ಎಂದರು.
ಬಹುರಾಷ್ಟ್ರೀಯ ಕಂಪೆನಿಗಳು ರೈತರಲ್ಲಿ ಭ್ರಮೆ ಮೂಡಿಸಿ ನಂತರ ಹೇಗೆ ಅವರನ್ನು ಶೋಷಣೆಗೆ ಒಳಪಡಿಸಿವೆಯೋ ಅದೇ ರೀತಿ ಇಂಗ್ಲಿಷ್ ಮಾಧ್ಯಮ ಶಾಲೆಗಳು ಪೋಷಕರನ್ನು ಭ್ರಮೆಗೆ ದೂಡಿವೆ. ಇದೂ ಒಂದು ರೀತಿ `ವಿದೇಶಿ ವ್ಯಾಪಾರ`ವೇ. ಹೊರಗಿನವರ ಬದಲು ಇಲ್ಲಿನವರೇ ದಂದೆ ನಡೆಸುತ್ತಿದ್ದಾರೆ. ಈ ಹಾವಳಿ ಹಳ್ಳಿ ಕಡೆಗೂ ನುಗ್ಗತೊಡಗಿದೆ ಎಂದು ಅವರು ಕಳವಳಪಟ್ಟರು.
ಇಂಗ್ಲಿಷ್ ಜ್ಞಾನ ಪ್ರತಿಯೊಬ್ಬರಿಗೂ ಬೇಕು. ಒಂದು ಭಾಷೆಯಾಗಿ ಅದನ್ನು ಚೆನ್ನಾಗಿ ಹೇಳಿಕೊಡುವ ವ್ಯವಸ್ಥೆ ಮಾಡಲಿ. ಬೇಕಾದರೆ ವಿಜ್ಞಾನ ಮತ್ತು ಸಮಾಜ ವಿಜ್ಞಾನ ಪಾಠಗಳನ್ನು ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲಿ ಪರಿಣಾಮಕಾರಿಯಾಗಿ ಹೇಳಿಕೊಡಲಿ. ಆದರೆ ಪರೀಕ್ಷೆ ಮಾತ್ರ ಕನ್ನಡದಲ್ಲೇ ಬರೆಯಬೇಕು ಎಂದು ಅವರು ಸೂಚಿಸಿದರು.
`ಪ್ರೌಢಶಾಲಾ ಹಂತದವರೆಗೂ ಶಿಕ್ಷಣ ಮಾತೃಭಾಷೆಯಲ್ಲೇ ಆಗಬೇಕು. ಇದರಿಂದ ಮಕ್ಕಳಲ್ಲಿ ತಾಯಿನುಡಿಯಲ್ಲಿ ಆಲೋಚಿಸುವ ಸಾಮರ್ಥ್ಯ ಬೆಳೆಯುತ್ತದೆ. ನಮಗೆ ಈಗಲೂ ಇಂಗ್ಲಿಷ್‌ನಲ್ಲಿ ಮಗ್ಗಿ ಹೇಳಲಾಗದು. ಮೊದಲು ಕನ್ನಡದಲ್ಲಿ ಗುಣಿಸಿ, ಭಾಗಿಸಿ ನಂತರ ಇಂಗ್ಲಿಷ್ ಮೂಲಕ ಹೇಳುತ್ತೇವೆ. ಅಂತಹ ವಾತಾವರಣ ಮಕ್ಕಳಿಗೆ ಕಲ್ಪಿಸಿಕೊಡಬೇಕು. ಮಕ್ಕಳು ಕನ್ನಡದಲ್ಲಿ ಭಾವಗೀತೆ ಹಾಡಲು, ಕತೆ ಬರೆಯಲು, ಚರ್ಚಿಸಲು ಸಾಧ್ಯವಾಗಬೇಕು ಎಂದರು. 
ಕನ್ನಡದ ಉಳಿವಿಗೆ ಹೋರಾಟ ಒಳಗಿನವರೊಂದಿಗೇ ನಡೆಸಬೇಕಾಗಿದೆ. ಅದು ಪೋಷಕರು ಇರಬಹುದು ಇಲ್ಲವೇ ಶಾಲಾ ಸಂಸ್ಥೆಗಳಾಗಿರಬಹುದು. ಇದರ ಅಗತ್ಯವನ್ನು ಮನವರಿಕೆ ಮಾಡಿಕೊಡಲು ಸಾಹಿತ್ಯ ಪರಿಷತ್ತು ಕ್ರಿಯಾಶೀಲವಾಗಿ ತೊಡಗಿಸಿಕೊಳ್ಳಬೇಕು ಎಂದು ಅವರು ಕೋರಿದರು.
ಕನ್ನಡ ಮಾಧ್ಯಮ ವಿದ್ಯಾರ್ಥಿಗಳಿಗೆ ವಿಶೇಷ ಪ್ರೋತ್ಸಾಹ ಧನ ನೀಡುವುದಾಗಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ. ಇದಕ್ಕೆ 3 ಕೋಟಿ ರೂಪಾಯಿ ಒದಗಿಸಲು ಸರ್ಕಾರ ಈಗಾಗಲೇ ಒಪ್ಪಿದೆ. ಕನ್ನಡ ಮಾಧ್ಯಮದಲ್ಲಿ ಓದುವ ಎಲ್ಲ ಮಕ್ಕಳಿಗೆ ತಿಂಗಳಿಗೆ 250 ರೂಪಾಯಿ ನೀಡಿದರೂ ಅದರಿಂದ ಸರ್ಕಾರಕ್ಕೆ ಹೆಚ್ಚಿನ ಹೊರೆಯೇನೂ ಆಗದು ಎಂದು ಡಾ.ಭೈರಪ್ಪ ಅಭಿಪ್ರಾಯಪಟ್ಟರು – ಪ್ರಜಾವಾಣಿ
Please follow and like us:
error