ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಧಾರವಾಡ ಹೈಕೋರ್ಟ ವ್ಯಾಪ್ತಿಯಲ್ಲಿರಲಿ- ಶಿವರಾಮಗೌಡ.


ಹೈಕೋರ್ಟ್ ಸ್ಥಾಪನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗದಿರಲಿ ಎನ್ನುವ ದೃಷ್ಟಿಯಿಂದ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಈಗ ಇರುವಂತೆ ಧಾರವಾಡ ಹೈಕೋರ್ಟ ವ್ಯಾಪ್ತಿಯಲ್ಲಿಯೇ ಮುಂದುವರಿಸಲು ಸರ್ವೋಚ್ಚ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿ ಎಚ್.ಎಲ್. ದತ್ತು, ಕೇಂದ್ರ ಕಾನೂನು ಸಚಿವರಾದ ಡಿ.ವಿ. ಸದಾನಂದಗೌಡ, ಕರ್ನಾಟಕ ಉಚ್ಚ ನ್ಯಾಯಾಲಯದ ಮುಖ್ಯ ನ್ಯಾಯಾಧೀಶರಾದ ಡಿ.ಎಚ್. ವಘೇಲಾ, ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾದ ಟಿ.ಬಿ. ಜಯಚಂದ್ರ ಅವರಿಗೆ ಮಾಜಿ ಸಂಸದರಾದ ಶಿವರಾಮಗೌಡರು ಪತ್ರ ಬರೆದು ಕೋರಿದ್ದಾರೆ. ಕೇಂದ್ರ ಕಾನೂನು ಸಚಿವರಾದ ಡಿ.ವಿ. ಸದಾನಂದಗೌಡ ಮತ್ತು ರಾಜ್ಯ ಕಾನೂನು ಸಚಿವರಾದ ಟಿ.ಬಿ. ಜಯಚಂದ್ರರೊಂದಿಗೆ ದೂರವಾಣಿ ಮೂಲಕ ಸಂಪರ್ಕಿಸಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಈಗಿರುವಂತೆಯೇ ಧಾರವಾಡ ಹೈಕೋರ್ಟ ವ್ಯಾಪ್ತಿಯಲ್ಲಿ ಮುಂದುವರೆಸಲು ಸಕಾರಣಗಳೊಂದಿಗೆ ಒತ್ತಾಯಿಸಿದ್ದಾರೆ. ಕಕ್ಷಿದಾರರಿಗೆ ಮತ್ತು ವಕೀಲರಿಗೆ ತ್ವರಿತ ವಿಲೇವಾರಿ, ನ್ಯಾಯಾಲಯ ಹತ್ತಿರ ಮತ್ತು ಅನುಕೂಲ ಕಲ್ಪಿಸುವ ದೃಷ್ಟಿಯ ಸಾರ್ಥಕತೆಯ ಉದ್ದೇಶದಿಂದ ಗುಲ್ಬರ್ಗಾ ಮತ್ತು ಧಾರವಾಡದಲ್ಲಿ ಹೈಕೋರ್ಟ ಸ್ಥಾಪಿಸಿರುವುದು ಸರಿಯಷ್ಟೇ. ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಗುಲ್ಬರ್ಗಾದ ಹೈಕೋರ್ಟ್ ವ್ಯಾಪ್ತಿಗೆ ಸೇರಿಸಿದರೆ, ವಕೀಲರು ಮತ್ತು ಕಕ್ಷಿದಾರರು ಗುಲ್ಬರ್ಗಾ ತಲುಪಲು ಒಂದು ದಿನ, ಕಲಾಪಕ್ಕೆ ಒಂದು ದಿನ ಹಾಗೂ ಊರಿಗೆ ಮರಳಲು ಒಂದು ದಿನ ಹೀಗೆ ಮೂರು ದಿನಗಳು ವ್ಯರ್ಥವಾಗುತ್ತವೆ ಹಾಗೂ ಸಾರಿಗೆ ಸೌಕರ್ಯವು ಅನುಕೂಲವಾಗಿರುವುದಿಲ್ಲ ಮತ್ತು ಇದರಿಂದ ಕಕ್ಷಿದಾರರು ಹಾಗೂ ವಕೀಲರಿಗೆ ಹಣ, ಸಮಯ ಪೋಲಾಗುವುದರೊಂದಿಗೆ ಅವರಿಗೆ ಅನುಕೂಲಕ್ಕಿಂತ ಅನಾನುಕೂಲವೇ ಹೆಚ್ಚು ಎಂದು ಮನಗಂಡು, ಸದರಿ ಜಿಲ್ಲೆಗಳು ಭೌಗೋಳಿಕವಾಗಿ ಧಾರವಾಡಕ್ಕೆ ಹತ್ತಿರವಾಗಿದ್ದು, ರಸ್ತೆ ಮತ್ತು ರೈಲು ಸಂಪರ್ಕವು ಅನುಕೂಲವಾಗಿರುವುದರಿಂದ, ವಕೀಲರು ಮತ್ತು ಕಕ್ಷಿದಾರರು ಧಾರವಾಡಕ್ಕೆ ಸುಲಭವಾಗಿ ಹೋಗಿ, ಅದೇ ದಿನ ಮರಳಲು ಅನುಕೂಲವಿದೆ ಎಂದು ಒಮ್ಮತದ ನಿರ್ಣಯದೊಂದಿಗೆ ಧಾರವಾಡ ಹೈಕೋರ್ಟಗೆ ಸೇರಿಸಲಾಗಿದೆ. ಈ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ಸಂಚಾರಿ ಪೀಠಗಳ ಸ್ಥಾಪನೆಗಾಗಿ ನಡೆದ ಹೋರಾಟದಲ್ಲಿ ಭಾಗಿಯಾಗಿ, ಉಭಯ ಪೀಠಗಳ ಸ್ಥಾಪನೆಯ ನಂತರ ದೆಹಲಿಯಲ್ಲಿ ಸುಪ್ರೀಂ ಕೋರ್ಟ ನ್ಯಾಯಾಧೀಶರನ್ನು ಭೇಟಿಮಾಡಿ ಭೌಗೋಳಿಕ ಹಿನ್ನೆಲೆ ಹಾಗೂ ಸಾರಿಗೆ ಸಂಪರ್ಕದ ಕುರಿತು ವಿವರಿಸಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಧಾರವಾಡ ಪೀಠದಲ್ಲಿಯೇ ಯಥಾವತ್ತಾಗಿ ಮುಂದುವರಿಸುವುದರ ಬಗ್ಗೆ ಸಂಪೂರ್ಣ ಮಾಹಿತಿ ಮತ್ತು ವಿವರಣೆಗಳನ್ನು ನೀಡಿ, ಅಂದು ಉದ್ಭವಿಸಿದ್ದ ಸಮಸ್ಯೆಯನ್ನು ಅಲ್ಲಿಗೇ ಕೈಬಿಡಲಾಗಿತ್ತು. ಇದೇ ವಿಷಯದ ಬಗ್ಗೆಯೂ ನಾನು ದಿನಾಂಕ: ೦೪.೧೦.೨೦೧೨ ರಂದು ಕರ್ನಾಟಕ ಹೈಕೋರ್ಟನ ಅಂದಿನ ಗೌರವಾನ್ವಿತ ಮುಖ್ಯ ನ್ಯಾಯಾಧೀಶರಾಗಿದ್ದ ಶ್ರೀ ವಿಕ್ರಂಜಿತ್ ಸೇನ್ ಕರ್ನಾಟಕ ಸರ್ಕಾರದ ಮುಖ್ಯಮಂತ್ರಿಗಳಾಗಿದ್ದ ಶ್ರೀ ಜಗದೀಶ ಶೆಟ್ಟರ್ ಹಾಗೂ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದ ಶ್ರೀ ಎಸ್. ಸುರೇಶ್ ಕುಮಾರ ಇವರಿಗೆ ಪತ್ರ  (ಪತ್ರ ಸಂ.: ಕೊಲೋಸ:ಸಂಚಾರಿ ಪೀಠ:೨೦೧೨:೩೭೨, ದಿನಾಂಕ: ೦೪.೧೦.೨೦೧೨) ಬರೆದು ಧಾರವಾಡ ಪೀಠದಲ್ಲಿಯೇ ಮುಂದುವರೆಸಲು ಕೋರಲಾಗಿತ್ತು. ಗುಲ್ಬರ್ಗಾ ವಕೀಲರ ಸಂಘದವರು, ಬುದ್ಧಿಜೀವಿಗಳು, ಪತ್ರಕರ್ತರು ಮತ್ತು ಆ ಭಾಗದ ಇತರರು ಸಂವಿಧಾನದ ೩೭೧ (ಜೆ) ಕಲಂ ತಿದ್ದುಪಡಿಯ ಅನುಕೂಲ ಸೇರಿದಂತೆ, ಅನೇಕ ಉದಾಹರಣೆಗಳನ್ನು ಪ್ರಸ್ತಾಪಿಸಿದ್ದಾರೆ. ನಾವು ಹೈದ್ರಾಬಾದ್ ಕರ್ನಾಟಕದ ಭಾಗವಾಗಿದ್ದರಿಂದ ಸವಲತ್ತು ಪಡೆದಿದ್ದು, ಕಕ್ಷಿದಾರರ ಹಾಗೂ ವಕೀಲರ ಅನುಕೂಲಕ್ಕಾಗಿ ಧಾರವಾಡ ಹೈಕೋರ್ಟ್ ವ್ಯಾಪ್ತಿಯಲ್ಲಿದ್ದೇವೆ. ಈಗ ಗುಲ್ಬರ್ಗಾ ಹೈಕೋರ್ಟ್ ವ್ಯಾಪ್ತಿಯಲ್ಲಿ ಬಿಜಾಪುರ ಜಿಲ್ಲೆಯು ಒಳಗೊಂಡಿಲ್ಲವೇ …? ಬಿಜಾಪುರವು ಹೈದ್ರಾಬಾದ್ ಕರ್ನಾಟಕ ಪ್ರದೇಶದ ವ್ಯಾಪ್ತಿಯಲ್ಲಿದೆಯೇ …? ಬಿಜಾಪುರ

ಜಿಲ್ಲೆಯು ಭೌಗೋಳಿಕವಾಗಿ ಗುಲ್ಬರ್ಗಾ ನಗರಕ್ಕೆ ಹತ್ತಿರ ಎನ್ನುವ ಹಿನ್ನಲೆಯಲ್ಲಿ ಅದನ್ನು ಗುಲ್ಬರ್ಗಾ ಹೈಕೋರ್ಟ್ ವ್ಯಾಪ್ತಿಯಲ್ಲಿ ಸೇರಿಸಿರುವಂತೆ, ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳು ಧಾರವಾಡ ವ್ಯಾಪ್ತಿಯಲ್ಲಿವೆ. ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಗುಲ್ಬರ್ಗಾ ಹೈಕೋರ್ಟಗೆ ಸೇರಿಸಬೇಕೆನ್ನುವ ಮತ್ತು ಬೇಡ ಎನ್ನುವ ಗೊಂದಲದ ವಿಷಯದ ಬಗ್ಗೆಯೇ ಈ ಭಾಗದ ಕೋರ್ಟಿನ ಕಲಾಪಗಳಿಗೆ ಪದೇ ಪದೇ ಬಹಿಷ್ಕಾರ ಮತ್ತು ಪ್ರತಿಭಟನೆಗಳಿಂದ ಅಡ್ಡಿಯುಂಟಾಗಿ ಕಕ್ಷಿದಾರರಿಗೆ ನ್ಯಾಯ ವಿಳಂಬವಾಗಿದ್ದು, ಕಕ್ಷಿದಾರರು ತಮ್ಮದಲ್ಲದ ತಪ್ಪಿಗೆ ವಿನಾಕಾರಣ ಪದೇಪದೇ ಕೋರ್ಟಿಗೆ ಅಲೆಯಬೇಕಾಗಿದೆ. ಈ ಮೇಲಿನ ಎಲ್ಲಾ ಕಾರಣಗಳನ್ನು ಆಧರಿಸಿ, ಪುನಃ ಈ ಸಮಸ್ಯೆ ಉದ್ಭವಿಸದ ರೀತಿ ಮತ್ತು ಹೈಕೋರ್ಟ್ ಸ್ಥಾಪನೆಯ ಮೂಲ ಉದ್ದೇಶಕ್ಕೆ ಧಕ್ಕೆಯಾಗದಿರಲಿ ಎನ್ನುವ ದೃಷ್ಟಿಯಿಂದ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಗಳನ್ನು ಈಗ ಇರುವಂತೆ ಧಾರವಾಡ ಹೈಕೋರ್ಟ ವ್ಯಾಪ್ತಿಯಲ್ಲಿಯೇ ಮುಂದುವರಿಸಲು ಮಾಜಿ ಸಂಸದರಾದ ಶಿವರಾಮಗೌಡರು ಒತ್ತಾಯಿಸಿದ್ದಾರೆ.

Please follow and like us:
error