ಶೇಮ್… ಶೇಮ್…: ಬೃಂದಾ; ವಿಠ್ಠಲ ಮಲೆಕುಡಿಯ ಮತ್ತು ಆತನ ತಂದೆಯ ಬಿಡುಗಡೆಗೆ ಆಗ್ರಹ

  ರಾಜ್ಯದ ಗಣಿ ಸಂಪತ್ತನ್ನು ಲೂಟಿ ಮಾಡಿರುವವರನ್ನು ಮುಟ್ಟಲಾಗದ ಸರಕಾರ, ಅಮಾಯಕ ವಿದ್ಯಾರ್ಥಿ ವಿಠ್ಠಲ್ ಮಲೆಕುಡಿಯನಿಗೆ ಕೋಳ ತೊಡಿಸಿ ಪರೀಕ್ಷೆಗೆ ಹಾಜರು ಪಡಿಸಿದ್ದು ಅತ್ಯಂತ ಅವಮಾನಕರ ಸಂಗತಿ. ರಾಜ್ಯ ಬಿಜೆಪಿ ಸರಕಾರಕ್ಕೆ ಶೇಮ್… ಶೇಮ್… ಎಂದು ಸಿಪಿಎಂ ಪಾಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಸೋಮವಾರ ನಗರದ ಪುರಭವನದ ಮುಂದೆ ವಿದ್ಯಾರ್ಥಿ ವಿಠ್ಠಲ್ ಮಲೆಕುಡಿಯ ಹಾಗೂ ಆತನ ತಂದೆ ನಿಂಗಣ್ಣ ಮಲೆಕುಡಿಯರ ಬಿಡುಗಡೆಗೆ ಆಗ್ರಹಿಸಿ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡುತ್ತಿದ್ದರು. ಯಾವುದೇ ತಪ್ಪು ಮಾಡದ ವಿದ್ಯಾರ್ಥಿಯೊಬ್ಬ ಪೊಲೀಸರ ಸಂಚಿಗೆ ಬಲಿಯಾಗಿ ತನ್ನ ಭವಿಷ್ಯ ಜೀವನದ ಪರೀಕ್ಷೆ ಬರೆಯಲು ಕೋರ್ಟ್‌ನ ಅನುಮತಿ ಕೇಳುವುದು ಅತ್ಯಂತ ದುಃಖಕರ ಸಂಗತಿ. ವಿಠ್ಠಲನಿಗೆ ಕೋಳ ತೊಡಿಸಿ ಪರಿಕ್ಷಾ ಕೊಠಡಿಗೆ ಕರೆತಂದದ್ದು ಮಾನವ ಹಕ್ಕುಗಳ ಉಲ್ಲಂಘನೆಯಾಗಿದೆ ಎಂದು ಬೃಂದಾ ಕಾರಟ್ ಕಿಡಿಕಾರಿದರು.
   
ಅರಣ್ಯ ಭೂಮಿಯ ಹಕ್ಕಿಗಾಗಿ ನಡೆಸುತ್ತಿರುವ ಹೋರಾಟದಿಂದಾಗಿ ವಿಠ್ಠಲ ಹಾಗೂ ಆತನ ತಂದೆ ಮೇಲೆ ನಕ್ಸಲೈಟ್ ಎಂಬ ಆರೋಪವನ್ನು ಹೊರಿಸಲಾಗಿದೆ. ಅರಣ್ಯದಲ್ಲಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಿ ಆನೆ ಕಾರಿಡಾರ್ ನಿರ್ಮಿಸಲು ಹೊರಟಿರುವ ಸರಕಾರ 2006ರ ಅರಣ್ಯ ಹಕ್ಕು ಕಾಯ್ದೆಯನ್ನು ಸಂಪೂರ್ಣವಾಗಿ ಉಲ್ಲಂಘಿಸಿದೆ. ಆನೆಗಳಿಗೆ ವಾಸ ಮಾಡಲು ಅವಕಾಶ ಕೊಡುವ ಸರಕಾರ ಜನರನ್ನು ಒಕ್ಕಲೆಬ್ಬಿಸುತ್ತಿರುವುದು ತೀರ ಅನ್ಯಾಯದ ಸಂಗತಿ.
ಇದನ್ನು ಸಿಪಿಎಂ ಪಕ್ಷ ಖಂಡಿಸುತ್ತದೆ ಎಂದು ಅವರು ತಿಳಿಸಿದರು. ಒಂದೆಡೆ ನಕ್ಸಲರ ಹಿಂಸೆ ಮತ್ತೊಂದೆಡೆ ಸರಕಾರದ ಹಿಂಸೆಗಳಿಂದ ಆದಿವಾಸಿಗಳು ತತ್ತರಿಸಿದ್ದು, ಆದಿವಾಸಿಗಳಿಗೆ ಸಂಪೂರ್ಣ ನ್ಯಾಯ ಸಿಗುವವರೆಗೆ ನಮ್ಮ ಹೋರಾಟ ಮುಂದುವರಿಯಲಿದ್ದು, ಕೂಡಲೇ ಸುಳ್ಳು ಆರೋಪಗಳ ಆಧಾರದ ಮೇಲೆ ನಕ್ಸಲ್ ನಿಗ್ರಹ ದಳದಿಂದ ಬಂದಿಸಲ್ಪಟ್ಟಿರುವ ವಿಠ್ಠಲ ಮಾತ್ತು ಆತನ ತಂದೆಯನ್ನು ಬಿಡುಗಡೆ ಮಾಡಬೇಕು ಎಂದು ಬೃಂದಾ ಕಾರಟ್ ಆಗ್ರಹಿಸಿದರು.
ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಕೇರಳದ ಸಂಸದ ರಾಜೇಶ್, ಅಪ್ರತಿಮ ದೇಶಪ್ರೇಮಿ ಭಗತ್ ಸಿಂಗ್‌ರ ಪುಸ್ತಕವನ್ನಿಟ್ಟುಕೊಳ್ಳುವುದೇ ದೊಡ್ಡ ಅಪರಾಧವಾಗುವುದಾದರೆ, ಇಡೀ ದೇಶವೇ ಬಂದಿಖಾನೆಯಾಗಿ ಮಾರ್ಪಾಟಾಗಬೇಕಾಗುತ್ತದೆ. ವಿಠ್ಠಲ ಮಲೆಕುಡಿಯನನ್ನು ಯಾವುದೇ ಸಕಾರಣಗಳಿಲ್ಲದೆ ಬಂಧಿಸಿರುವುದು ಪೊಲೀಸರ ಅಮಾನವೀಯ ಕೃತ್ಯ. ಬ್ರಿಟಿಷರ ಕಾಲದಲ್ಲಿದ್ದಂತಹ ದರ್ಪ, ದೌರ್ಜನ್ಯಗಳನ್ನು ರಾಜ್ಯ ಬಿಜೆಪಿ ಸರಕಾರ ನಡೆಸುತ್ತಿದ್ದು, ಇದು ಅತ್ಯಂತ ಖಂಡನೀಯ ಎಂದು ತಿಳಿಸಿದರು.
 ಇದೇ ವೇಳೆ ಮಾತನಾಡಿದ ಆದಿವಾಸಿ ಹಕ್ಕುಗಳ ರಾಷ್ಟ್ರೀಯ ವೇದಿಕೆ ಅಧ್ಯಕ್ಷ ಹಾಗೂ ಸಂಸದ ಬಾಜೂಬಾನ್ ರಿಯಾನ್, ದೇಶದಲ್ಲಿ 8 ಕೋಟಿಗೂ ಅಧಿಕ ಆದಿವಾಸಿಗಳಿದ್ದು, ಅರಣ್ಯದಲ್ಲಿ ವಾಸಿಸುವುದು ಹಾಗೂ ಅದರ ಉಪ ಉತ್ಪನ್ನಗಳನ್ನು ಮಾರಿ ಬದುಕುವುದು ಅವರ ಹಕ್ಕಾಗಿದೆ. ನಮಗೆ ಪ್ರಜಾಪ್ರಭುತ್ವದಲ್ಲಿ ಸಂಪೂರ್ಣ ನಂಬಿಕೆಯಿದ್ದು, ನಮ್ಮ ವಿರುದ್ಧ ನಡೆಯುತ್ತಿರುವ ದೌರ್ಜನ್ಯಗಳ ವಿರುದ್ಧ ನ್ಯಾಯ ಸಿಗುವವರೆಗೂ ಅಹಿಂಸಾತ್ಮಕ ಹೋರಾಟ ನಡೆಸುತ್ತೇವೆ ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಸಿಪಿಎಂ ರಾಜ್ಯ ಪ್ರಧಾನ ಕಾರ್ಯದರ್ಶಿ ಜಿ.ಎನ್.ನಾಗರಾಜ್, ಬಯ್ಯರೆಡ್ಡಿ, ಡಿಎಸ್‌ಎಸ್‌ನ ಮಾವಳ್ಳಿ ಶಂಕರ್, ಟಿಪ್ಪುಸುಲ್ತಾನ್ ಸಂಯುಕ್ತ ರಂಗದ ಸರದಾರ್ ಅಹ್ಮದ್ ಖುರೇಶಿ ಮತ್ತು ವಿಠ್ಠಲ್‌ನ ತಾಯಿ ಹೊನ್ನಮ್ಮ ಸೇರಿದಂತೆ ಡಿವೈಎಫ್‌ಐ, ಎಸ್‌ಎಫ್‌ಐ ಹಾಗೂ ಎಐಜೆಎಂಎಸ್‌ನ ಸದಸ್ಯರು ಪಾಲ್ಗೊಂಡಿದ್ದರು
Please follow and like us:
error