ಬಿಜೆಪಿಗೆ ಮರಳುವ ಮಾತೇ ಇಲ್ಲ: ಯಡಿಯೂರಪ್ಪ ಸ್ಪಷ್ಟನೆ

* ತನ್ನ ವಿರುದ್ಧ ಸಭೆ ನಡೆಸಿ; ಮಾಧ್ಯಮಗಳಲ್ಲಿ ನನ್ನ ಪರ ಹೇಳಿಕೆ
*ಬಿಜೆಪಿಯ ವಿರುದ್ಧ ಕಿಡಿಗಾರಿದ ಬಿಎಸ್‌ವೈ
ತುಮಕೂರು, ಅ. 28: ಒಳಗೆ ಯಡಿಯೂರಪ್ಪನನ್ನು ಹೇಗೆ ಹೊರದಬ್ಬಬೇಕು ಎಂದು ಮಾತುಕತೆ ನಡೆಸಿ ಹೊರಗೆ ಮಾಧ್ಯಮಗಳ ಮುಂದೆ ಯಡಿಯೂರಪ್ಪ ಬಿಜೆಪಿ ತೊರೆಯದಂತೆ ಮನವೊಲಿಸಲಿದ್ದೇವೆ ಎಂದು ಹೇಳಿಕೆ ನೀಡಿ ಹೊರಗೊಂದು, ಒಳಗೊಂದು ಮಾತನಾಡುವ ಬಿಜೆಪಿಯನ್ನು ಬಿಟ್ಟು ಬಹುದೂರ ಬಂದಿದ್ದು, ಮತ್ತೆ ಬಿಜೆಪಿಗೆ ಮರಳುವ ಪ್ರಶ್ನೆಯೇ ಇಲ್ಲವೆಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸ್ಪಷ್ಟಪಡಿಸಿದ್ದಾರೆ. ತುಮಕೂರಿನ ಸರಕಾರಿ ಜೂನಿಯರ್ ಕಾಲೇಜು ಮೈದಾನದಲ್ಲಿ ಹಮ್ಮಿಕೊಂಡಿದ್ದ ನೇಕಾರರ ಜಿಲ್ಲಾ ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ನಿತ್ಯವೂ ಭ್ರಷ್ಟ ಎಂದು ಜರಿದು, ಅಧಿಕಾರದಿಂದ ಇಳಿಸಿ ಅವಮಾನ ಮಾಡಿದ ಮನೆಯಲ್ಲಿ ಯಾವ ಮುಖ ಹೊತ್ತುಕೊಂಡು ಇರಲಿ. ನನ್ನಂಥವನಿಂದ ಅವಮಾನ ಸಹಿಸುವುದು ಸಾಧ್ಯವಿಲ್ಲ. ಮನೆಯಿಂದ ಎರಡೂ ಕಾಲುಗಳನ್ನು ಹೊರಗಿಟ್ಟು ದೂರ ಸಾಗಿಬಂದಿದ್ದೇನೆ.
ಹೀಗಾಗಿ ಮನೆಗೆ ಮತ್ತೆ ಹೋಗುವುದಿಲ್ಲ ಎಂದು ದೃಢಪಡಿಸಿದರು.ಮನೆಯಲ್ಲಿ ಕೆಲವರು ಚರ್ಚಿಸುವ ವಿಷಯವೇ ಬೇರೆ, ಮಾಧ್ಯಮಗಳ ಮುಂದೆ ಮಾತನಾಡುವುದೇ ಬೇರೆ. ಮನೆಯೊಳಗೆ ನನ್ನನ್ನು ಹೊರ ಹಾಕುವ ಬಗ್ಗೆ ಚರ್ಚಿಸಿದರೆ, ಮಾಧ್ಯಮಗಳಲ್ಲಿ ಯಡಿಯೂರಪ್ಪನವರನ್ನು ಉಳಿಸಿಕೊಳ್ಳುವ ಬಗ್ಗೆ ಹೇಳಿಕೆ ನೀಡುತ್ತಾರೆ. ಅವರ ಉದ್ದೇಶ ಏನೆಂಬುದು ತಿಳಿಯುವುದಿಲ್ಲವೇ? ಇದು ಅವರ ದ್ವಂದ್ವ ನೀತಿಯಲ್ಲವೇ ಎಂದು ಛೇಡಿಸಿದರು.ನಾನು ಚಕ್ರವ್ಯೆಹದಲ್ಲಿ ಸಿಲುಕಿದ್ದೇನೆ. ಅದರಿಂದ ನನಗೆ ಹೊರಬರಲು ಸಾಧ್ಯವಿಲ್ಲವೆಂದು ಕೆಲವರು ಅಂದುಕೊಂಡಿದ್ದಾರೆ. ಅಭಿಮನ್ಯುವಿಗೆ ಚಕ್ರವ್ಯೆಹ ಭೇದಿಸಿ ಒಳಗೆ ಹೋಗುವುದು ಗೊತ್ತಿತ್ತು. ಅರ್ಜುನನಿಗೆ ಒಳಗೆ ಹೋಗಿ ಹೊರ ಬರುವುದು ಗೊತ್ತಿತ್ತು.
ಹಾಗೆಯೇ ಈ ಯಡಿಯೂರಪ್ಪನಿಗೆ ಚಕ್ರವ್ಯೆಹದ ಒಳಗೆ ಹೋಗುವುದು ಗೊತ್ತು. ಹೊರ ಬರುವುದು ಗೊತ್ತು. ನಾನು ಅರ್ಜುನ ಇದ್ದ ಹಾಗೆ. ನನ್ನ ಬೆಂಬಲಕ್ಕೆ ಮೀರ್‌ಸಾದಿಕ್, ಮಲ್ಲಣ್ಣಶೆಟ್ಟಿಯವರಂತಹವರು ಬೇಡ. ಸಂಗೊಳ್ಳಿ ರಾಯಣ್ಣನಂತಹವರು ಬೇಕು. ನೀವು ಬೆಂಬಲಿಸಿದರೆ ಮುಂದಿನ ಆರು ತಿಂಗಳಲ್ಲಿ ವಿಧಾನಸೌಧದ 3ನೆ ಮಹಡಿಯಲ್ಲಿ ಕುಳಿತು ನಿಮ್ಮ ಬೇಡಿಕೆಗಳನ್ನು ಈಡೇರಿಸುತ್ತೇನೆ ಎಂದ ಆತ್ಮವಿಶ್ವಾಸದಿಂದ ನುಡಿದರು.
ನನ್ನ ಮೂರುವರೆ ವರ್ಷದ ಅಧಿಕಾರ ಅವಧಿಯಲ್ಲಿ ನೇಕಾರರು, ಹಿಂದುಳಿದವರು, ಅಲ್ಪಸಂಖ್ಯಾತರು, ದಲಿತರು ಸೇರಿ ಎಲ್ಲಾ ವರ್ಗದ ಅಭಿವೃದ್ಧಿಗೆ ಹಣ ಬಿಡುಗಡೆ ಮಾಡಿದ್ದೇನೆ. ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ 15ವರ್ಷದ ಅವಧಿಯಲ್ಲಿ ಮಾಡಿದ ಕೆಲಸವನ್ನು ಕೇವಲ ಮೂರುವರೆ ವರ್ಷದಲ್ಲೇ ಮಾಡಿದ್ದೇನೆ.ನಾನು ಅವಧಿ ಪೂರೈಸಿದ್ದರೆ ಇಡೀ ದೇಶದಲ್ಲೇ ನಂಬರ್ ಒನ್ ಮುಖ್ಯಮಂತ್ರಿಯಾಗುತ್ತಿದ್ದೆ. ಆದರೆ ಇದನ್ನು ಕೇಂದ್ರ ಮತ್ತು ರಾಜ್ಯ ನಾಯಕರು ಸಹಿಸಲಿಲ್ಲ ಎಂದು ಬಿಜೆಪಿಯನ್ನು ಪ್ರಸ್ತಾಪಿಸದೆ ಟೀಕಾಪ್ರಹಾರ ನಡೆಸಿದರು
Please follow and like us:
error