ಜಿ.ಪಂ.ಸಿಇಒ, ಡಿಎಸ್ ಬೇಜವಾಬ್ದಾರಿ ಆಡಳಿತ : ರಾಘು ಹಿಟ್ನಾಳ ಆರೋಪ

ಜಿ.ಪಂ.ಸಿಇಒ, ಡಿಎಸ್ ಬೇಜವಾಬ್ದಾರಿ ಆಡಳಿತ : ರಾಘು ಹಿಟ್ನಾಳ ಆರೋಪ
         ಕೊಪ್ಪಳ : ಕೊಪ್ಪಳ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಎಸ್.ರಾಜಾರಾಂ ಹಾಗೂ ಉಪ ಕಾರ್ಯದರ್ಶಿ ಮುಕ್ಕಣ್ಣ ಕರಿಗಾರ ಅವರು ಬೇಜವಾಬ್ದಾರಿ ಆಡಳಿತ ನಡೆಸುತ್ತಿರುವದರಿಂದ ಜಿಲ್ಲೆಯಲ್ಲಿ ಪ್ರಗತಿ ಕೆಲಸಗಳು ಕುಂಠಿತಗೊಂಡಿವೆ ಎಂದು ಕೊಪ್ಪಳ ಜಿಲ್ಲಾ ಪಂಚಾಯತ್ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಆರೋಪಿಸಿದರು.
          ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಶುಕ್ರವಾರ ಸುದ್ದಿಗೋಷ್ಠಿ ನಡೆಸಿ, ಈ  ವಿಷಯ ತಿಳಿಸಿದ ಅವರು, ಜಿ.ಪಂ.ನ ಈ ಇಬ್ಬರು ಅಧಿಕಾರಿಗಳು ಸರ್ವಾಧಿಕಾರಿಗಳಂತೆ ವರ್ತಿಸುತ್ತಿರುವುದು ಗಮನಕ್ಕೆ ಬಂದಿದೆ. ಅವರ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ನಮಗಿಲ್ಲ. ಹಾಗಾಗಿ ಮೇಲಾಧಿಕಾರಿಗಳಿಗೆ ಈ ಬಗ್ಗೆ ಮೌಖಿಕ ದೂರು ನೀಡಲಾಗಿದೆ ಎಂದರು.
          ತಾವು ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತಿರುವ ಮೊದಲ ದಿನದಿಂದಲೂ ಸಿಇಓ ಅವರಿಗೆ ಅನುದಾನ ಬಿಡುಗಡೆ ಮಾಡುವಂತೆ ಹೇಳುತ್ತಲೇ ಬರಲಾಗಿದೆ. ಹಲವು ಸಾಮಾನ್ಯ ಸಭೆಗಳಲ್ಲಿಯೂ ಈ ಕುರಿತು ಜಿ.ಪಂ.ನ ಎಲ್ಲ ಸದಸ್ಯರು ಗೊತ್ತುವಳಿ ಮಂಡಿಸಿ ವಿನಂತಿಸಿದರೂ ಅನುದಾನ ಬಿಡುಗಡೆ ಮಾಡುವಲ್ಲಿ ಅಧಿಕಾರಿಗಳು ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯಧೋರಣೆ ತಾಳುತ್ತಿರುವುದು ಖಂಡನೀಯ ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.
          ಹುದ್ದೆಯಲ್ಲಿ ಅಧ್ಯಕ್ಷರೇ ಸುಪ್ರಿಂ ಆದರೂ ಸಿಇಓ ವಿರುದ್ಧ ಕ್ರಮ ಕೈಗೊಳ್ಳುವ ಅಧಿಕಾರ ಪಂಚಾಯತ್ ರಾಜ್ ಕಾಯ್ದೆಯಲ್ಲಿಲ್ಲ. ನಾವು ಬೇಡ ಎಂದ ಕೆಲಸಗಳಿಗೆ ಸಹಿ ಮಾಡುವ ಕಡತವನ್ನು ರವಾನಿಸುವ ಅಧಿಕಾರಿಗಳು ತುರ್ತಾಗಿ ಆಗಬೇಕಿರುವ ಕೆಲಸದ ಕಡತಗಳನ್ನು ತಮ್ಮ ಟೇಬಲ್ ಮೇಲೆ ಇಟ್ಟುಕೊಂಡು ಸತಾಯಿಸುತ್ತಾರೆ. ಹಲವಾರು ಬಾರಿ ಎಚ್ಚರಿಸಿದರೂ ಪ್ರಯೋಜನವಾಗಿಲ್ಲ ಎಂದು ರಾಘವೇಂದ್ರ ಹಿಟ್ನಾಳ ಅಸಹಾಯಕತೆ ತೋರಿದರು.
        ಜನೇವರಿ ೯ ರಂದು ಜಿಲ್ಲಾ ಪಂಚಾಯತ್‌ನ ಸ್ಥಾಯಿ ಸಮಿತಿ ರಚನೆಯ ಸಭೆ ಇದೆ. ಆ ಸಭೆಯಲ್ಲಿ ವಿವಿಧ ಸ್ಥಾಯಿ ಸಮಿತಿಗಳನ್ನು ರಚನೆ ಮಾಡುವುದರ ಜೊತೆಗೆ ಜಿ.ಪಂ.ನ ಎಲ್ಲ ಸದಸ್ಯರು ಪಕ್ಷಬೇಧ ಮರೆತು ಜಿ.ಪಂ.ನ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಹಾಗೂ ಉಪಕಾರ್ಯದರ್ಶಿ ವಿರುದ್ಧ ಮೇಲಾಧಿಕಾರಿಗಳಿಗೆ ಲಿಖಿತ ದೂರು ನೀಡುವ ಕುರಿತು ನಿರ್ಣಯಿಸುತ್ತೇವೆ ಎಂದು ತಿಳಿಸಿದರು.
          ೨೦೧೨-೧೩ ನೇ ಸಾಲಿನ ಅಭಿವೃದ್ಧಿ ಕಾಮಗಾರಿಗಳು ಮಾರ್ಚ್ ಅಂತ್ಯಕ್ಕೆ ಆರಂಭಗೊಳ್ಳಬೇಕು. ಕೇವಲ ಇನ್ನೂ ಮೂರು ತಿಂಗಳು ಮಾತ್ರ ಬಾಕಿ ಉಳಿದಿದ್ದು ಇದುವರೆಗೂ ಬಹುತೇಕ ಅನುದಾನವೇ ಜಿಲ್ಲಾ ಪಂಚಾಯತ್‌ಗೆ ಬಂದಿಲ್ಲ. ಹೀಗಾದರೆ ಜಿಲ್ಲೆಯಲ್ಲಿ ಅಭಿವೃದ್ಧಿ ಕಾಮಗಾರಿಗಳು ನಡೆಯುವುದಾದರೂ ಹೇಗೆ ಎಂದು ಅವರು ಪ್ರಶ್ನಿಸಿದರು.
           
ಹುಷಾರಿಲ್ಲ ಅದಕ್ಕೆ ಕೆಂಪು ದೀಪ ಹಾಕಿಕೊಂಡಿದ್ದೇನೆ :
        ಜಿಲ್ಲಾ ಪಂಚಾಯತ್ ಅಧ್ಯಕ್ಷರು ತಮ್ಮ ವಾಹನಕ್ಕೆ ಕೆಂಪು ದೀಪ ಅಳವಡಿಸಿಕೊಳ್ಳುವಂತಿಲ್ಲ ಎಂಬ ಕಾನೂನಿದೆ. ಆದರೂ ನಿಮ್ಮ ವಾಹನಕ್ಕೆ ಕೆಂಪು ದೀಪ ಇದೆಯಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು ನನಗೆ ಮೈಯಲ್ಲಿ ಹುಷಾರಿರಲಿಲ್ಲ. ನಗರದಲ್ಲಿ ಸಂಚಾರ ದಟ್ಟಣೆ ಅಧಿಕವಾಗಿದೆಯಲ್ಲ. ಬೇಗನೇ ಹೋಗುವುದು ಕಷ್ಟ. ಹಾಗಾಗಿ ಕೆಂಪು ದೀಪ ಹಾಕಿಕೊಂಡಿದ್ದೇನೆ. ಸಾರಿಗೆ ಅಧಿಕಾರಿಗಳಿಗೆ ವೈದ್ಯಕೀಯ ದಾಖಲೆಗಳನ್ನು ನೀಡಿದ್ದೇನೆ. ಈಗಲೂ ನನಗೆ ಹುಷಾರಿಲ್ಲ ಎಂದರು.
   
ಅಭ್ಯರ್ಥಿ ನಾನಲ್ಲ :
         ಚುನಾವಣೆ ಸಮೀಪಿಸುತ್ತಿದೆ. ಕಾಂಗ್ರೆಸ್ ಅಭ್ಯರ್ಥಿಯಾಗಿ ನನ್ನನ್ನು ಬಿಂಬಿಸಲಾಗುತ್ತಿರುವುದು ಗಮನಕ್ಕೆ ಬಂದಿದೆ. ವಿಧಾನಸಭಾ ಚುನಾವಣೆ ಬಂದರೆ ನಾನು ಅಭ್ಯರ್ಥಿಯಲ್ಲ. ನನ್ನ ತಂದೆ ಕೆ.ಬಸವರಾಜ ಹಿಟ್ನಾಳ ಅವರು ಅಭ್ಯರ್ಥಿಯ ಆಕಾಂಕ್ಷಿಯಾಗಿದ್ದಾರೆ ಎಂದು ಅವರು ಸ್ಪಷ್ಟಪಡಿಸಿದರು.

Leave a Reply