ನ್ಯಾಯಸಮ್ಮತ ಚುನಾವಣೆಗೆ ತೀವ್ರ ನಿಗಾ ವಹಿಸಿ- ವೀಕ್ಷಕ ಪ್ರಭಾತ್ ಶಂಕರ್

  ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆ ನಡೆಸುವ ನಿಟ್ಟಿನಲ್ಲಿ ಮೈಕ್ರೋ ಅಬ್ಸರ್ವರ್‍ಸ್‌ಗಳು ಮತದಾನ ದಿನದಂದು ತೀವ್ರ ನಿಗಾ ವಹಿಸುವುದು ಅಗತ್ಯವಾಗಿದೆ ಎಂದು ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಪ್ರಭಾತ್ ಶಂಕರ್ ಅವರು ಹೇಳಿದರು.

  ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್‌ನಲ್ಲಿ ಚುನಾವಣೆ ಕಾರ್ಯಕ್ಕೆ ನೇಮಕಗೊಂಡಿರುವ ಮೈಕ್ರೋ ಅಬ್ಸರ್ವರ್‍ಸ್ ಗಳಿಗೆ ಭಾನುವಾರ ಏರ್ಪಡಿಸಿದ ತರಬೇತಿ ಕಾರ್ಯಾಗಾರದಲ್ಲಿ ತರಬೇತುದಾರರಾಗಿ ಭಾಗವಹಿಸಿ ಅವರು ಮಾತನಾಡಿದರು.
  ಮುಕ್ತ ಹಾಗೂ ನ್ಯಾಯ ಸಮ್ಮತ ಚುನಾವಣೆಗೆ ಚುನಾವಣಾ ಆಯೋಗ ಮೈಕ್ರೋ ಅಬ್ಸರ್ವರ್‍ಸ್ ನೇಮಕಕ್ಕೆ ಸೂಚನೆ ನೀಡಿದ್ದು, ಅದರಂತೆ ಕೊಪ್ಪಳ ಜಿಲ್ಲೆಯಲ್ಲಿಯೂ ಸಹ ಕೇಂದ್ರ ಸರ್ಕಾರಿ ನೌಕರರು, ರಾಷ್ಟ್ರೀಕೃತ ಬ್ಯಾಂಕ್‌ಗಳ ಒಟ್ಟು ೩೨೦ ನೌಕರರನ್ನು ಮೈಕ್ರೋ ಅಬ್ಸರ್ವರ್‌ಗಳಾಗಿ ನಿಯೋಜಿಸಲಾಗಿದೆ.  ಈ ಮೈಕ್ರೋ ಅಬ್ಸರ್ವರ್‍ಸ್‌ಗಳು ಚುನಾವಣಾ ಆಯೋಗ ನೇಮಿಸಿರುವ ವೀಕ್ಷಕರ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದ್ದು, ಮತಗಟ್ಟೆಯಲ್ಲಿ ನಡೆಯುವ ಮತದಾನ ಪ್ರಕ್ರಿಯೆಗಳ ಬಗ್ಗೆ ತೀವ್ರ ನಿಗಾ ವಹಿಸುವುದು ಇವರ ಕರ್ತವ್ಯವಾಗಿರುತ್ತದೆ.  ಅಲ್ಲದೆ ಮತದಾನ ಪ್ರಕ್ರಿಯೆ ಪ್ರಾರಂಭಕ್ಕೂ ಮುನ್ನ ಚುನಾವಣಾ ಏಜೆಂಟರುಗಳ ಸಮಕ್ಷಮ ನಡೆಯುವ ಅಣಕು ಮತದಾನ, ಏಜೆಂಟರುಗಳ ಹಾಜರಾತಿ, ಮತಗಟ್ಟೆಯಲ್ಲಿನ ವ್ಯವಸ್ಥೆ, ಸುಗಮ ಮತದಾನ ಪ್ರಕ್ರಿಯೆ, ಮತಗಟ್ಟೆ ಅಧಿಕಾರಿಗಳು ಹಾಗೂ ಸಹಾಯಕ ಮತಗಟ್ಟೆ ಅಧಿಕಾರಿಗಳ ಕರ್ತವ್ಯ ವೈಖರಿ, ಮತಗಟ್ಟೆಯ ಸುತ್ತಮುತ್ತಲಿನ ಕಾನೂನು ಸುವ್ಯವಸ್ಥೆಯ ಬಗ್ಗೆ ತೀವ್ರ ನಿಗಾ ವಹಿಸುವುದು ಸಹ ಮೈಕ್ರೋ ಅಬ್ಸರ್ವರ್‌ಗಳ ಕಾರ್ಯವಾಗಿದೆ.  ಮತಗಟ್ಟೆಯಲ್ಲಿ ಯಾವುದೇ ಅಕ್ರಮ ಹಾಗೂ ಸಂಶಯಾಸ್ಪದ ಚಟುವಟಿಕೆಗಳು ಕಂಡುಬಂದಲ್ಲಿ ಕೂಡಲೆ ಸಂಬಂಧಪಟ್ಟ ಕ್ಷೇತ್ರದ ಚುನಾವಣಾ ವೀಕ್ಷಕರಿಗೆ ಮತ್ತು ಸೆಕ್ಟರ್ ಅಧಿಕಾರಿಗಳಿಗೆ ಮಾಹಿತಿ ನೀಡಬೇಕು.  ಮತಗಟ್ಟೆಯ ಒಳಗಡೆ ಇನ್ನಿತರೆ ಯಾವುದೇ ಸಂಶಯಾಸ್ಪದ ಪ್ರಕರಣಗಳು ಕಂಡುಬಂದಲ್ಲಿ, ತಮ್ಮ ವರದಿಯನ್ನು ಲಿಖಿತವಾಗಿ ಡಿ-ಮಸ್ಟರಿಂಗ್ ಸಮಯದಲ್ಲಿ ಸಲ್ಲಿಸುವ ಅವಕಾಶ ಮೈಕ್ರೋ ಅಬ್ಸರ್ವರ್‍ಸ್‌ಗಳಿಗೆ ನೀಡಲಾಗಿದೆ.  ಒಟ್ಟಾರೆ ಜಿಲ್ಲೆಯಲ್ಲಿ ವಿಧಾನಸಭೆ ಚುನಾವಣೆಯನ್ನು ನಿಸ್ಪಕ್ಷಪಾತವಾತವಾಗಿ ನಡೆಸಲು ಎಲ್ಲ ಮೈಕ್ರೋ ಅಬ್ಸರ್ವರ್‍ಸ್‌ಗಳು ಪ್ರಾಮಾಣಿಕವಾಗಿ ಶ್ರಮಿಸುವಂತೆ ಗಂಗಾವತಿ ವಿಧಾನಸಭಾ ಕ್ಷೇತ್ರದ ಚುನಾವಣಾ ವೀಕ್ಷಕ ಪ್ರಭಾತ್ ಶಂಕರ್ ಅವರು ಮನವಿ ಮಾಡಿದರು.
  ತರಬೇತಿಯಲ್ಲಿ ಭಾಗವಹಿಸಿದ್ದ ಜಿಲ್ಲಾಧಿಕಾರಿ ತುಳಸಿ ಮದ್ದಿನೇನಿ ಅವರು ಮಾತನಾಡಿ, ಸುಗಮ ಚುನಾವಣೆಗೆ ಮೈಕ್ರೋ ಅಬ್ಸರ್ವರ್‍ಸ್‌ಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಮತದಾನ ಪ್ರಾರಂಭದ ಹಂತದಿಂದ ಮೊದಲುಗೊಂಡು, ಮುಕ್ತಾಯದ ಹಂತರ ಹಾಗೂ ಆಯಾ ಮತಗಟ್ಟೆಗೆ ಸಂಬಂಧಿತ ಮತಯಂತ್ರ ದಾಸ್ತಾನು ಕೊಠಡಿ ತಲುಪುವವರೆಗೂ, ಮೈಕ್ರೋ ಅಬ್ಸರ್ವರ್‌ಗಳು ತೀವ್ರ ನಿಗಾ ವಹಿಸಿ, ಎಲ್ಲವೂ ಸುಗಮವಾಗಿ ಜರುಗಿದ ಬಗ್ಗೆ ಖಾತ್ರಿಪಡಿಸಿಕೊಳ್ಳಬೇಕು ಎಂದರು.
   ಚುನಾವಣಾ ಪೊಲೀಸ್ ವೀಕ್ಷಕ ಎ. ಪಾರಿ, ಕೊಪ್ಪಳ ವಿಧಾನಸಭಾ ಚುನಾವಣಾ ವೀಕ್ಷಕಿ ನೀಲಂಗುಪ್ತಾ, ಕನಕಗಿರಿ ಕ್ಷೇತ್ರದ ಚುನಾವಣಾ ವೀಕ್ಷಕ ವಿ.ವಿ. ಶಾಜಿಮೋನ್, ಕುಷ್ಟಗಿ ಕ್ಷೇತ್ರ ಚುನಾವಣಾ ವೀಕ್ಷಕ ಎ.ಎಸ್.ಕೆ. ಸಿನ್ಹಾ, ಯಲಬುರ್ಗಾ ಕ್ಷೇತ್ರ ಚುನಾವಣಾ ವೀಕ್ಷಕ ಭರತ್‌ಲಾಲ್ ರಾಯ್, ಕುಷ್ಟಗಿ, ಕನಕಗಿರಿ ಮತ್ತು ಗಂಗಾವತಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೆಚ್ಚ ವೀಕ್ಷಕ ಸಂಜೀವ್ ಕೆ. ಸಿಂಗ್, ಕೊಪ್ಪಳ ಮತ್ತು ಯಲಬುರ್ಗಾ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವೆಚ್ಚ ವೀಕ್ಷಕ ಶಶಿಕಾಂತ್, ಅಪರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಅವರು ತರಬೇತಿ ಕಾರ್ಯಾಗಾರದಲ್ಲಿ ಉಪಸ್ಥಿತರಿದ್ದರು.  ಮೈಕ್ರೋ ಅಬ್ಸರ್ವರ್‍ಸ್‌ಗಳಾಗಿ ನೇಮಕಗೊಂಡಿರುವ ಜಿಲ್ಲೆಯಲ್ಲಿನ ಸರ್ಕಾರಿ ನೌಕರರು, ರಾಷ್ಟ್ರೀಕೃತ ಬ್ಯಾಂಕ್‌ಗಳ ನೌಕರರು ತರಬೇತಿಯಲ್ಲಿ ಭಾಗವಹಿಸಿದ್ದರು.  ಇದೇ ಸಂದರ್ಭದಲ್ಲಿ ವಿದ್ಯುನ್ಮಾನ ಮತಯಂತ್ರದ ನಿರ್ವಹಣೆ ಬಗ್ಗೆ ಮಾಸ್ಟರ್ ಟ್ರೇನರ್ ದಾನರೆಡ್ಡಿ ಅವರು ಮೈಕ್ರೋ ಅಬ್ಸರ್ವರ್‍ಸ್‌ಗಳಿಗೆ ಪ್ರಾತ್ಯಕ್ಷಿಕೆ ಮೂಲಕ ತರಬೇತಿ ನೀಡಿದರು.
Please follow and like us:
error

Related posts

Leave a Comment