You are here
Home > Koppal News > ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯ ವಾರ್ಷಿಕೋತ್ಸವ ದಿನಾಚರಣೆ

ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯ ವಾರ್ಷಿಕೋತ್ಸವ ದಿನಾಚರಣೆ

  ಶಿಕ್ಷಣದ ಗುಣಮಟ್ಟ ಕಾಪಾಡಿಕೊಳ್ಳುವಲ್ಲಿ ನಿಜವಾದ ಸವಾಲು ಇದೆ. ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಖಾಸಗಿ ಶಾಲೆಗಳ ಪಾತ್ರ ಮಹತ್ವದ್ದಾಗಿದೆ. ಖಾಸಗಿ ಶಾಲೆಗಳಿಗೆ ಸರಕಾರದಿಂದ ಇನ್ನಷ್ಟು ಸಹಕಾರ ಅಗತ್ಯವಾಗಿದೆ ಎಂದು ಕೊಪ್ಪಳ ಜಿಲ್ಲಾ ವಕೀಲರ ಪರಿಷತ್‌ನ ನೂತನ ಅಧ್ಯಕ್ಷ ರಾಘವೇಂದ್ರ ಪಾನಗಂಟಿ ಹೇಳಿದರು. ಅವರು ನಗರದ ಲಯನ್ಸ್ ಸ್ವಾಮಿ ವಿವೇಕಾನಂದ ಶಾಲೆಯಲ್ಲಿ ಆಯೋಜಿಸಲಾಗಿದ್ದ ೧೫೩ ನೇ ವಿವೇಕಾನಂದರ ಜನ್ಮದಿನಾಚರಣೆ ಮತ್ತು ೩೯ ನೇ ಶಾಲಾ ವಾರ್ಷಿಕೋತ್ಸವ ಸಮಾರಂಭದ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಈ ಮೇಲಿನಂತೆ ನುಡಿದರು.
ವಿವೇಕಾನಂದರದು ಪ್ರಜ್ವಲ, ತೇಜಸ್ಸುಮಯ ವ್ಯಕ್ತಿತ್ವ. ದೇಶದ ಗಟ್ಟಿತನದಲ್ಲಿ ಯುವಕರ ಪಾತ್ರವನ್ನು ವಿವೇಕಾನಂದರು ಅಂದೇ ಅರಿತಿದ್ದರು. ಭಾರತ ದೇಶದ ಅಭ್ಯುದಯಕ್ಕೆ ಅವರು ಕೊಟ್ಟ ಕೊಡುಗೆ ಅನನ್ಯವಾಗಿದೆ ಎಂದರು. ಕಳೆದ ೩೯ ವರ್ಷಗಳ ಸುದೀರ್ಘ ಅವಧಿಯಲ್ಲಿ ಕೊಪ್ಪಳದ ಸ್ವಾಮಿ ವಿವೇಕಾನಂದ ಶಾಲೆಯ ಶೈಕ್ಷಣಿಕ ಕೊಡುಗೆ ಮಹತ್ತರವಾಗಿದೆ, ಇಲ್ಲಿಯ ವಿದ್ಯಾರ್ಥಿಗಳು ದೇಶ, ಹೊರದೇಶಗಳಲ್ಲಿಯೂ ಜೀವನ ಕಂಡು ಕೊಂಡಿದ್ದಾರೆ ಎಂದು ನುಡಿದರು.
ಶಾಲಾ ಆಡಳಿತ ಮಂಡಳಿ ಅಧ್ಯಕ್ಷ ಲಯನ್ ವಿ.ಎಸ್. ಅಗಡಿ ಮತ್ತು ಉಪಾಧ್ಯಕ್ಷ ಲಯನ್ ಜವಾಹರಲಾಲ್ ಜೈನ್ ಮಾತನಾಡಿ ಶಾಲೆಯ ಏಳಿಗೆ ಮತ್ತು ವಿದ್ಯಾರ್ಥಿಗಳ ಕರ್ತವ್ಯಗಳನ್ನು ಸಭೆಗೆ ತಿಳಿಸಿದರು. ನೂತನವಾಗಿ ವಕೀಲರ ಪರಿಷತ್ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ರಾಘವೇಂದ್ರ ಪಾನಗಂಟಿ ಇವರಿಗೆ ಲಯನ್ಸ್ ಕ್ಲಬ್ ಮತ್ತು ಶಾಲೆಯ ವತಿಯಿಂದ ಸನ್ಮಾನಿಸಲಾಯಿತು. ಆರಂಭದಲ್ಲಿ ವಿವೇಕಾನಂದರ ಜೀವನ ಸಂದೇಶಗಳ ಕುರಿತಾಗಿ ಸಹ ಶಿಕ್ಷಕ ಸಮೀರ ಜೋಶಿ ಮಾತನಾಡಿದರು.
ಸ್ವಾಗತವನ್ನು ಶಾಲಾ ಪ್ರಾಚಾರ್ಯ ಎ. ಧನಂಜಯನ್ ನೆರವೇರಿಸಿದರು. ಚಂದನಾ, ಸುನಿಧಿ, ಶ್ವೇತಾ ಪ್ರಾರ್ಥಿಸಿದರೆ, ವಿದ್ಯಾರ್ಥಿಗಳಾದ ಮಧು, ನಾಸಿರಾ, ರೇಖಾ ಮತ್ತು ಶಿಕ್ಷಕ ಮಹೇಶ ಬಳ್ಳಾರಿ ಕಾರ್ಯಕ್ರಮ ನಿರೂಪಿಸಿದರು. ಶಾಲಾ ವಿದ್ಯಾರ್ಥಿ ಪ್ರತಿನಿಧಿಗಳಾದ ಕೀರ್ತಿ ಹಿರೇಮಠ, ಪರಿತಾ ಶರ್ಮಾ ಪ್ರಶಸ್ತಿ ವಿತರಣಾ ಕಾರ್ಯಕ್ರಮ ನೆರವೇರಿಸಿದರು. ಶಾಲಾ ವಿದ್ಯಾರ್ಥಿ ನಾಯಕ ಪ್ರಶಾಂತ ವಂದಿಸಿದರು.
ಇದೇ ಸಂದರ್ಭದಲ್ಲಿ ಎಸ್.ಎಸ್.ಎಲ್.ಸಿ., ಪಿಯುಸಿಯಲ್ಲಿ ಹೆಚ್ಚಿನ ಅಂಕ ಪಡೆದ ವಿದ್ಯಾರ್ಥಿಗಳಿಗೆ, ಸ್ಕೌಟ್ಸ್ ಮತ್ತು ಗೈಡ್ಸ್ ರಾಜ್ಯಪಾಲರ ಪ್ರಶಸ್ತಿ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ವೇದಿಕೆಯ ಮೇಲೆ ಅತಿಥಿಗಳಾದ ಪ್ರಹ್ಲಾದ್ ಅಗಳಿ, ಅಲೀಮುದ್ದೀನ್ ಸೇರಿದಂತೆ ಲಯನ್ಸ್ ಕ್ಲಬ್ ಅಧ್ಯಕ್ಷ ಲಯನ್ ಶ್ರೀನಿವಾಸ ಗುಪ್ತಾ, ಕಾರ್ಯದರ್ಶಿ ಲಯನ್ ಲಲಿತ್ ಜೈನ್, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಲಯನ್ ಬಸವರಾಜ ಬಳ್ಳೊಳ್ಳಿ, ಲಯನ್ ಶಾಂತಣ್ಣ ಮುದಗಲ್, ಲಯನ್ ಮಹೇಶ ಮಿಟ್ಟಲಕೋಡ, ಲಯನ್ ಮಲ್ಲಿಕಾರ್ಜುನ ಬಳ್ಳೊಳ್ಳಿ, ಲಯನ್ ಗುರುರಾಜ ಹಲಗೇರಿ, ಲಯನ್ ಅರವಿಂದ ಅಗಡಿ, ಲಯನ್ ಪಿ.ಕೆ. ವಾರದ, ಲಯನ್ ಚಂದ್ರಕಾಂತ ತಾಲೆಡಾ, ಲಯನ್ ನಂದಕೀಶೋರ ಸುರಾಣಾ, ಲಯನ್ ವೆಂಕಟೇಶ ಶ್ಯಾನಭಾಗ, ಪಾಲಕರ ಸಮಿತಿ ಸದಸ್ಯರಾದ ರಾಘವೇಂದ್ರ ಸ್ಕಂದ್, ಶಾಲಾ ಪ್ರಾಚಾರ್ಯ ಎ. ಧನಂಜಯನ್ ಉಪಸ್ಥಿತರಿದ್ದರು. ನಂತರ ಮಕ್ಕಳಿಂದ ಮನೋರಂಜನಾ ಕಾರ್ಯಕ್ರಮಗಳು ನಡೆದವು.
ಮುಂಜಾನೆಯ ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಅತಿ ಹೆಚ್ಚು ಅಂಕಗಳನ್ನು ಪಡೆದ ಎಲ್ಲ ತರಗತಿಗಳ ಮಕ್ಕಳಿಗೆ, ಒಂದು ದಿನವೂ ಗೈರು ಹಾಜರಾಗದೇ ೧೦೦% ಹಾಜರಾತಿ ಹೊಂದಿದ ೮೨ ಮಕ್ಕಳಿಗೆ ಪ್ರಶಸ್ತಿ ವಿತರಣೆ ಮಾಡಲಾಯಿತು. 

Leave a Reply

Top