ಸಾಹಿತ್ಯ ಸಮ್ಮೇಳನದಲ್ಲಿ ಟೀಕೆಗೊಳಗಾದ ಭೈರಪ್ಪ

ಎಸ್.ಎಲ್.ಭೈರಪ್ಪನವರ ಹಿಂದೂತ್ವದ, ಹಿಂದೂ ಧರ್ಮದ ಪರವಾದ ಪೂರ್ವಗ್ರಹಪೀಡಿತ ಚಿಂತನೆಗಳ ಕುರಿತು ಅವರ ಕವಲು, ಆವರಣ, ಯಾನ, ಅಂಚುಗಳಂತಹ ಮೂರನೆ ದರ್ಜೆಯ ಕಾದಂಬರಿಗಳಲ್ಲಿ ಅಡಕಗೊಂಡಿರುವ ಹಿಂದುತ್ವದ ಪ್ರತಿಪಾದನೆ, ಅನ್ಯಧರ್ಮದ ಕುರಿತಾದ ತೀವ್ರ ಅಸಹನೆ ಮತ್ತು ತಿರಸ್ಕಾರ, ಸನಾತನ ಧರ್ಮದ ಅಮಾನವೀಯ ತತ್ವಗಳು, ಆಧುನಿಕ ಮಹಿಳೆಯ ಕುರಿತಾದ ಕ್ರೌರ್ಯ ಮನಸ್ಥಿತಿಯ ಚಿಂತನೆಗಳ ಕುರಿತು ಮೊನ್ನೆ ಶ್ರವಣಬೆಳಗೊಳದಲ್ಲಿ ನಡೆದ ಸಾಹಿತ್ಯ ಸಮ್ಮೇಳನದಲ್ಲಿ ಹೋರಾಟಗಾರ್ತಿ, ಲೇಖಕಿಯರಾದ ಕೆ.ಎಸ್.ವಿಮಲಾ, ಕೆ.ಷರೀಫಾ, ಗೌರಿ ಲಂಕೇಶ್, ವಿನಯಾ, ಎಂ.ಎಸ್.ಆಶಾದೇವಿಯವರು ಪ್ರಬುದ್ಧವಾಗಿ ವಿಮರ್ಶಿಸಿ ಭೈರಪ್ಪನವರ ಕಾದಂಬರಿಗಳ ವಿಕೃತ ಮನಸ್ಥಿತಿಯ ಕುರಿತಾಗಿ ಅತ್ಯಂತ ಮಾನವೀಯ ನೆಲೆಯಲ್ಲಿ ವಿಶ್ಲೇಷಿಸುತ್ತ, ಅದು ಹೇಗೆ ಒಬ್ಬ ಜನಪ್ರಿಯ ಲೇಖಕ ಮಹಿಳೆಯರ ಕುರಿತು ಜೀವವಿರೋಧಿ ಧೋರಣೆಯಲ್ಲಿ ನಿರಂತರವಾಗಿ ಬರೆಯಲು ಸಾಧ್ಯ ಎಂದು ದಿಟ್ಟವಾಗಿ ಪ್ರಶ್ನಿಸಿದ್ದಾರೆ. ಇದನ್ನು ಜನಪ್ರಿಯತೆ ಎಂದು ಕರೆಯುವುದಾದರೆ ಅದು ಈ ನಾಡಿನ ದುರಂತವಷ್ಟೇ ಎಂದು ಭೈರಪ್ಪನವರ ಜನಪ್ರಿಯತೆಯ ಕುರಿತಾದ ಮಿಥ್ ಅನ್ನು ಸಾರ್ವಜನಿಕವಾಗಿ ಬಯಲುಗೊಳಿಸಿದ್ದಾರೆ.

ಕವಿ ಮಿಲ್ಟನ್ ಒಂದು ಕಡೆ ಜನಪ್ರಿಯತೆಯು ಪ್ರಾಣನಾಶಕ ಭೂಮಿಯ ಮೇಲೆ ಬೆಳೆಯುವ ಗಿಡವಲ್ಲ ಎಂದು ಬರೆಯುತ್ತಾನೆ. ಇದೇ ನೀತಿಯ ಆಧಾರದ ಮೇಲೆ ಭೈರಪ್ಪನವರ ಜನಪ್ರಿಯತೆ ಪ್ರಾಣನಾಶಕ ಭೂಮಿಯ ಮೇಲೆ ಬೆಳೆದಂತಹ ಗಿಡವೆಂದೇ ವಿಶ್ಲೇಷಿಸಬೇಕಾಗುತ್ತದೆ. ಅದನ್ನು ಮೇಲಿನ ನಮ್ಮ ಹೆಮ್ಮೆಯ ಲೇಖಕಿಯರು ತಮ್ಮ ಸ್ಪಷ್ಟ ಮಾತುಗಳಲ್ಲಿ ವಿವರಿಸುತ್ತ ಇನ್ನೊಬ್ಬರ ಜೀವ, ಮತ್ತೊಬ್ಬರ ಬದುಕಿನ ಕುರಿತಾಗಿ ಒಬ್ಬ ಜನಪ್ರಿಯ ಲೇಖಕ ಇಷ್ಟೊಂದು ನಿರ್ಲಕ್ಷದಿಂದ, ಸದಾ ದ್ವೇಷಿಸುವ ಮನಸ್ಥಿತಿಯಿಂದ ಬರೆಯಲು ಹೇಗೆ ಸಾಧ್ಯ ಎಂದು ಮಾರ್ಮಿಕವಾಗಿ ಪ್ರಶ್ನಿಸಿದ್ದಾರೆ.

ನಾವು ಏನನ್ನು ಆರಿಸಿಕೊಳ್ಳುತ್ತೇವೆಯೋ ಅದು ಸದಾಕಾಲವೂ ಉತ್ತಮ ತರಹದ್ದಾಗಿರಬೇಕಿರುತ್ತದೆ. ಈ ಉತ್ತಮತನವು ಎಲ್ಲಾ ಧರ್ಮ, ಜಾತಿಗಳ ಒಳಿತನ್ನು ಒಳಗೊಂಡಿರಬೇಕಾಗಿರುತ್ತದೆ. ಆದರೆ ಜನಪ್ರಿಯ ಲೇಖಕ ಭೈರಪ್ಪನವರ ಚಿಂತನೆಗಳಲ್ಲಿ ಈ ಒಳಗೊಳ್ಳುವಿಕೆಯ ಧೋರಣೆಗಳ ಯಾವ ಲಕ್ಷಣಗಳೂ ಇಲ್ಲ. ಸತ್ಯದ ವಿವಿಧ ಮುಖಗಳನ್ನು ಗ್ರಹಿಸಬೇಕಾದ ಲೇಖಕ ಅದನ್ನು ನಿರಾಕರಿಸಿ ಸುಳ್ಳುಗಳನ್ನು ಕಾದಂಬರಿಗಳನ್ನಾಗಿಸಿದರೆ ಪ್ರಜ್ಞಾವಂತರು ತೀಕ್ಷ್ಣವಾಗಿ ಅದನ್ನು ವಿಮರ್ಶಿಸಲೇಬೇಕಾಗುತ್ತದೆ. ಆದರೆ ಸುಳ್ಳುಗಳು ತಂದುಕೊಡುವ ಈ ಭೈರಪ್ಪನವರ ಮಾದರಿಯ ಜನಪ್ರಿಯತೆಗಳು ವ್ಯವಸ್ಥೆಯಲ್ಲಿ ನಿರ್ಲಜ್ಜತೆಯನ್ನು, ಪೂರ್ವಗ್ರಹಗಳನ್ನು, ಹಳಸಲು ವಾದಗಳನ್ನು, ಹಿಂಸಾತ್ಮಕ ವರ್ತನೆಗಳನ್ನು ಮಾತ್ರ ಹುಟ್ಟುಹಾಕಲು ಸಾಧ್ಯ. ಭೈರಪ್ಪನವರ ಮಾದರಿಯ ಈ ಹುಸಿ ಜನಪ್ರಿಯತೆಗಳು ಫೆನಟಿಸಂ ವ್ಯಕ್ತಿತ್ವದ ಲುಂಪೆನ್ ಮತಾಂಧರ ಕೈಯಲ್ಲಿ ಸಿಟ್ಟು, ದ್ವೇಷ, ಮತ್ಸರದ ಆಯುಧಗಳಾಗುತ್ತವೆ. ಆದರೆ ಭೈರಪ್ಪನವರಂತಹ ಹಿರಿಯ ಲೇಖಕರು ದಶಕಗಳ ಕಾಲ ಈ ನೆಲದಲ್ಲಿನ ರಕ್ತಪಾತಗಳು, ಮತೀಯ ದ್ವೇಷಗಳಿಂದ ಏನನ್ನೂ ಅರಿಯಲಿಲ್ಲವೇ ಎನ್ನುವ ಪ್ರಶ್ನೆಯೇ ಅಪ್ರಸ್ತುತ. ಏಕೆಂದರೆ ಲಂಕೇಶ್ ಮನುಷ್ಯ ಶತಮಾನಗಳು, ವರ್ಷಗಳು ಉರುಳಿದಂತೆ ಉತ್ತಮನಾಗುತ್ತಾನೆಯೇ? ಶಿಕ್ಷಣವಾಗಲಿ, ಕಷ್ಟಗಳಾಗಲಿ, ದುರಂತವಾಗಲಿ ಇವನಿಗೆ ಪಾಠ ಕಲಿಸುತ್ತವೆಯೇ? ಈ ಪ್ರಶ್ನೆಗೆ ನಮ್ಮ ಎದುರಿನ ವಾಸ್ತವ ಇಲ್ಲ ಎಂದು ಉತ್ತರಿಸುತ್ತದೆ ಎಂದು ಬರೆಯುತ್ತಾರೆ. ಇದು ಕಟುವಾಸ್ತವ. ಇಂದು ಭೈರಪ್ಪನವರಂತಹ ಒಬ್ಬ ಜೀವವಿರೋಧಿ ನೆಲೆಯ ಜನಪ್ರಿಯ ಲೇಖಕರ ಉದಾಹರಣೆ ನಮ್ಮ ಕಣ್ಣ ಮುಂದಿದೆ.
ಏಕೆಂದರೆ ಹಿಂದೂ ಧರ್ಮದ ಶಕ್ತಿಯ ಕುರಿತಾಗಿ ಮಾತನಾಡುವ ಭೈರಪ್ಪನವರು ಆ ಮೂಲಕ ನೇರವಾಗಿ ಪ್ರತಿಪಾದಿಸುತ್ತಿರುವುದು ಬ್ರಾಹ್ಮಣ್ಯದ ಪುನರುತ್ಥಾನವನ್ನು. ವೈದಿಕ ವ್ಯವಸ್ಥೆ ಅಪಾಯವಲ್ಲ ಎಂದೇ ಹೇಳುವ ಭೈರಪ್ಪನವರು ಒಬ್ಬ ತತ್ವಶಾಸ್ತ್ರದ ಮೇಷ್ಟ್ರು ಎನ್ನುವುದು ಇಂದಿಗೂ ಒಂದು ಚೋದ್ಯ. ಭೈರಪ್ಪನವರ ಭಾರತೀಯ ತತ್ವಮೀಮಾಂಸೆ ಅಂದರೆ ವೈದಿಕ ಮೀಮಾಂಸೆ. ಭೈರಪ್ಪನವರ ತತ್ವಶಾಸ್ತ್ರದ ಅನುಸಾರ ಮನುಷ್ಯನ ಅರಿವಿನ ಪ್ರಕ್ರಿಯೆ ಎಂದರೆ ಪೊಳ್ಳುತನದ, ಡಾಂಭಿಕತೆಯ ಧರ್ಮದ ಕಡೆಗೆ ಹಿಮ್ಮುಖವಾಗಿ ಶತಮಾನಗಳ ಹಿಂದಿನ ಕಾಲಕ್ಕೆ ಚಲಿಸುವುದು. ತಮ್ಮೆಳಗಿನ ಪ್ರತ್ಯೇಕತೆ, ತಾರತಮ್ಯದ ಲಕ್ಷಣಗಳನ್ನು ತಮ್ಮ ಕಾದಂಬರಿಗಳ ಮೂಲಕ ಸಮಾಜಕ್ಕೆ ಹಂಚುವುದು, ಪರಂಪರೆಯ ವೈಭವೀಕರಣವನ್ನು ಹೆಗಲಿಗೇರಿಸಿಕೊಂಡು ಶುಷ್ಕವಾದ, ಒಣಪಾಂಡಿತ್ಯದ ಪ್ರದರ್ಶನ ಸಹ ಭೈರಪ್ಪನವರ ತತ್ವಶಾಸ್ತ್ರದ ಲಕ್ಷಣಗಳಲ್ಲೊಂದು. ತಮ್ಮ ಬಹುಪಾಲು ಕಾದಂಬರಿಗಳಲ್ಲಿ ಹಿಂದುತ್ವದ ಪ್ರತಿಮೆಗಳನ್ನು ಕಟ್ಟುತ್ತಾ ಅದರ ಶ್ರೇಷ್ಠತೆಯನ್ನೇ ಧ್ಯಾನಿಸುವ, ಓದುಗರ ಮೇಲೆ ಬಲವಂತವಾಗಿ ಹೇರುವ ಭೈರಪ್ಪನವರು ಒಬ್ಬ ಜೀವವಿರೋಧಿ ಲೇಖಕ ಎನ್ನದೆ ವಿಧಿಯಿಲ್ಲ.
ಆದರೆ ಚಂದ್ರಕಾಂತ ಪೋಕಳೆಯವರು ಈ ಎಲ್ಲ ಸೂಕ್ಷ್ಮತೆಗಳನ್ನು ಗಾಳಿಗೆ ತೂರಿ ಭೈರಪ್ಪನವರು ಅದು ಹೇಗೆ ಜನಪ್ರಿಯ, ಅದು ಹೇಗೆ ರಾಷ್ಟ್ರೀಯ ಮಟ್ಟದಲ್ಲಿ ಭೈರಪ್ಪನವರು ಪ್ರಸಿದ್ಧಿಯಾಗಿದ್ದಾರೆ ಎಂದು ಬರೆದಿರುವ ಧೋರಣೆಯನ್ನು ನಾವಂತೂ ಒಪ್ಪಲು ಸಾಧ್ಯವಿಲ್ಲ. ಎಲ್ಲಿಯೂ ಚರ್ಚೆಗೆ ಆಸ್ಪದ ಕೊಡದಂತೆ ನಿರರ್ಗಳವಾಗಿ ವಿತಂಡವಾದವನ್ನು ಮಂಡಿಸಿರುವ ಪೋಕಳೆಯವರ ಈ ಅಭಿಪ್ರಾಯಗಳು ನಿಷ್ಠುರತೆ, ಪ್ರಾಮಾಣಿಕತೆಯ ಕೊರತೆಯನ್ನು ಎದುರಿಸುತ್ತಿವೆ (ಪ್ರಜಾವಾಣಿ ಸಂಗತ).
ಆದರೆ ಇವರಿಗಿಂತಲೂ ಅಸಹ್ಯವಾಗಿ ಕನ್ನಡಪ್ರಭ ಪತ್ರಿಕೆಯಲ್ಲಿ ಕಾರಿಕೊಂಡಿರುವ ಪ್ರತಾಪಸಿಂಹ ಎನ್ನುವ ಹಾಲಿ ಸಂಸದ ತನ್ನ ಲೇಖನದಲ್ಲಿ ಸೌಜನ್ಯ, ಕನಿಷ್ಠ ನೀತಿಸಂಹಿತೆಗಳನ್ನೂ ಪ್ರದರ್ಶಿಸದೆ ಕೀಳುಮಟ್ಟದಲ್ಲಿ ತನ್ನ ಅಸಹನೆಯನ್ನು ವ್ಯಕ್ತಪಡಿಸಿರುವುದು ತಿರಸ್ಕಾರಕ್ಕೆ ಮಾತ್ರ ಯೋಗ್ಯವಾಗಿದೆ. ಸಂವಾದ ನಡೆಸಲು ನಿರಾಕರಿಸುವ ಈ ಪ್ರತಾಪಸಿಂಹ ಶಬ್ದಗಳ ಮೂಲಕ ಸೃಷ್ಟಿಸುವ ಅಪಾಯಕಾರಿ, ದ್ವೇಷದ ಸಾಲುಗಳು ಮಾನವ ವಿರೋಧಿ ಧೋರಣೆಗಳಿಗೆ ಸಂಕೇತಗಳಾಗಿವೆ. ಕ್ಷುಲ್ಲಕವಾದ, ಅಸಭ್ಯ ಚಿಂತನೆಗಳ ಪ್ರತೀಕವಾದ ಈ ಮಾದರಿಯ ಲೇಖನಗಳು ಓದುಗರನ್ನು ಉನ್ಮಾದಗೊಳಿಸುವಲ್ಲಿ ಪ್ರಯತ್ನಿಸುತ್ತವೆಯಾದರೂ ಕಡೆಗೆ ದಯನೀಯವಾಗಿ ಸೋಲುತ್ತವೆ. ಹಿಂದೂ ಧರ್ಮದ ಪರಿಪಾಲನೆಯ ಶ್ರೇಷ್ಠತೆಯ ಕುರಿತಾಗಿ ಸಾರ್ವಜನಿಕವಾಗಿ ಅನೈತಿಕವಾಗಿ ಮಾತನಾಡುವ ಪ್ರತಾಪಸಿಂಹರಂತಹ ಸಂಸದರ ಅಪಾಯಕಾರಿ ನಿಲುವುಗಳು ಆಳದಲ್ಲಿ ಧಾರ್ಮಿಕ ಮೂಲಭೂತವಾದವನ್ನು ಅಡಗಿಸಿಕೊಂಡಿವೆ. ಸಾರ್ವಜನಿಕವಾಗಿ ಅತ್ಯಂತ ವಿರೂಪವಾಗಿ ಪ್ರಕಟಗೊಳ್ಳುವ ಈ ಸಿಂಹರಂತಹವರ ವರ್ತನೆಗಳು ಯಜಮಾನ್ಯ ಶಕ್ತಿಯನ್ನು ಹೇರಲು ಪ್ರಯತ್ನಿಸುತ್ತವೆ. ಮತೀಯ ಧೂರ್ತತನವನ್ನು ಹೊದ್ದುಕೊಂಡ ಈ ವಿಕೃತ ಸ್ವರೂಪದ ಚಿಂತನೆಗಳು ಸಾಮಾಜಿಕ ಮತ್ತು ಸಾಂಸ್ಕೃತಿಕ ಜೀವಂತಿಕೆಗೆ ಅಪಾಯಕಾರಿಯಾಗಿವೆ. ಬೇಜವಾಬ್ದಾರಿಯುತ ರಾಜಕಾರಣಿಯಾಗಿ ಹಿಂದೂಯಿಸಂನ ಹತಾರಗಳನ್ನು ಬಳಸಿಕೊಳ್ಳುವ ಪ್ರತಾಪಸಿಂಹರ ವರ್ತನೆಗಳು ಕೇವಲ ಬಾಲಿಶವಲ್ಲ ಎಂದು ನಾವು ಅರಿಯಬೇಕು. ಏಕೆಂದರೆ ಈ ವ್ಯಕ್ತಿ ಒಬ್ಬ ಸಂಸದ ಸಹ.
ಶ್ರವಣಬೆಳಗೊಳದಲ್ಲಿ ನಮ್ಮ ಹೋರಾಟಗಾರ್ತಿ, ಲೇಖಕಿಯರು ತಾವು ಸ್ವತಃ ನಡೆಯುವುದರ ಮೂಲಕ ಹೊಸ ದಾರಿಯನ್ನು ರೂಪಿಸಿದ್ದಾರೆ. ನನ್ನೊಳಗೆ ನಾ ತಿಳಿದುಕೊಳ್ಳಲು ನಿರಾಕರಿಸುವ ಭೈರಪ್ಪನವರಂತಹ ಜನಪ್ರಿಯ ಸಾಹಿತಿಗಳನ್ನು, ರಾಷ್ಟ್ರೀಯ ಪ್ರಾಧ್ಯಾಪಕರನ್ನು ಸತ್ಯದ, ಮಾನವೀಯ ನೆಲೆಯಲ್ಲಿ ಸಮರ್ಥವಾಗಿ ವಿಮರ್ಶಿಸಿದ್ದಾರೆ. ಇಲ್ಲಿನ ಮೂಢನಂಬಿಕೆಗಳನ್ನು, ಸ್ತ್ರೀ ವಿರೋಧಿ ಧೋರಣೆಗಳನ್ನು ಪ್ರತಿಪಾದಿಸುವ ಭೈರಪ್ಪನವರ ಚಿಂತನೆಗಳ ವಿರುದ್ಧ ನಿಷ್ಠುರವಾದ, ಸಕಾರಾತ್ಮಕವಾದ, ಮೌಲಿಕವಾದ ತಕರಾರುಗಳನ್ನು ಎತ್ತಿದ್ದಾರೆ. ಈ ಮೂಲಕ ಮುಂದಿನ ದಿನಗಳಲ್ಲಿ ಹೊಸ ಸಂವಾದಗಳಿಗೆ, ಚರ್ಚೆಗಳಿಗೆ ಕಿಟಿಕಿಯನ್ನು ತೆರದಿದ್ದಾರೆ. ಈ ನಮ್ಮ ಕಿರಗೂರಿನ ಗಯ್ಯಿಳಿಗಳಿಗೆ ಥ್ಯಾಂಕ್ಸ್.
varthabharati
Please follow and like us:
error