ದುಶ್ಚಟಗಳಿಂದ ದೂರವಿದ್ದು ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿ- ಕೃಷ್ಣ ಡಿ ಉದಪುಡಿ

ಯುವ ಪೀಳಿಗೆ ದುಶ್ಚಟಗಳಿಂದ ದೂರವಿದ್ದು, ಸೃಜನಾತ್ಮಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು  ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಯುವಜನರಿಗೆ ಕರೆ ನೀಡಿದರು.

  ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯು ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಬೆಂಗಳೂರು. ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ  ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಆವರಣದಲ್ಲಿ ಬುಧವಾರ ಏರ್ಪಡಿಸಲಾಗಿದ್ದ ‘ಮದ್ಯ, ಮಾದಕಗಳ  ದುಷ್ಪರಿಣಾಮಗಳು’ ಕುರಿತ ವಿಚಾರ ಸಂಕಿರಣ ಹಾಗೂ ವ್ಯಂಗ್ಯ ಚಿತ್ರ ಪ್ರದರ್ಶನದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
  ದುಶ್ಚಟಗಳು ಸಮಾಜದ ಶಾಂತಿಭಂಗ, ಅನಾರೋಗ್ಯಕ್ಕೆ ಕಾರಣವಾಗುವುದರಿಂದ, ಯುವಜನತೆ ಮಾದಕ ಲೋಕದಿಂದ ದೂರವಾಗಿ, ಸತ್ಸಂಗ ಕಾರ್ಯಗಳಲ್ಲಿ ಸಕ್ರಿಯರಾಗಬೇಕು. ಪಾಶ್ಚಿಮಾತ್ಯ ಜೀವನ ಶೈಲಿಯ ಅನುಕರಣೆ, ಆಧುನಿಕತೆಯಿಂದ ಯುವಜನತೆ ತಮ್ಮ ಭವ್ಯ ಭವಿಷ್ಯವನ್ನು ಹಾಳುಮಾಡಿಕೊಳ್ಳುತ್ತಿದೆ.  ಮಾಧ್ಯಮಗಳು ಯುವಜನತೆ ಪಾಶ್ಚಿಮಾತ್ಯ ಜೀವನ ಶೈಲಿ ಅನುಕರಣೆಗೆ ಪರೋಕ್ಷವಾಗಿ ಕಾರಣವಾಗುತ್ತಿವೆ.  ನಮ್ಮ ದೇಶ ಸುಸಂಸ್ಕøತ ಸನ್ನಡತೆಯ ಭವ್ಯ ಪರಂಪರೆಯನ್ನು ಹೊಂದಿದ್ದರೂ, ಯುವಜನತೆ ಮಾದಕ ಲೋಕದ ಸೆಳವಿಗೆ ಸಿಲುಕುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ.  ದುಶ್ಚಟಗಳು ವಯಕ್ತಿಕ ಜೀವನವನ್ನು ಹಾಳು ಮಾಡುವುದಲ್ಲದೆ, ಸುತ್ತಮುತ್ತಲ ಪರಿಸರ, ಸಾಮಾಜಿಕ ಶಾಂತಿಭಂಗಕ್ಕೆ ಕಾರಣವಾಗುತ್ತಿದೆ.  ಸಾಮಾನ್ಯವಾಗಿ ಅಪರಾಧ ಲೋಕದಲ್ಲಿ ಒಂದಲ್ಲ ಒಂದು ಬಗೆಯ ದುಶ್ಚಟಗಳಿಗೆ ಬಲಿಯಾದವರೇ ಇದ್ದಾರೆ.  ಮನುಷ್ಯ ಸಂಘಜೀವಿಯಾಗಿದ್ದು, ಏಕಾಂಗಿತನ ದುಶ್ಚಟಗಳಿಗೆ ಪ್ರಚೋದನೆ ನೀಡುವುದಲ್ಲದೆ, ಅನಾರೋಗ್ಯ ಸಮಾಜ ನಿರ್ಮಾಣಕ್ಕೆ ಕಾರಣೀಭೂತವಾಗಲಿದೆ.  ದುಶ್ಚಟಗಳಿಂದ ದೂರವಿರಬೇಕು ಎಂದರೆ, ಕ್ರೀಡೆಗಳಂತಹ ಉತ್ತಮ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು.  ಆಧುನಿಕ ಕಂಪ್ಯೂಟರ್ ಜಗತ್ತಿನಲ್ಲಿ ಮನುಷ್ಯನಿಗೆ ಶಾರೀರಕ ಶ್ರಮ ಕಡಿಮೆಯಾಗಿದ್ದು, ಆರೋಗ್ಯ ಪೂರ್ಣ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಿಕೆ ಅಗತ್ಯವಾಗಿದೆ.  ಶಾರೀರಕ ಸದೃಢತೆಯಿಂದ ಮಾನಸಿಕ ಸದೃಢತೆ ಸಾಧ್ಯ.  ಯುವಜನತೆ ಉತ್ತಮ ಹವ್ಯಾಸಗಳನ್ನು ತಮ್ಮ ಜೀವನ ಶೈಲಿಯಲ್ಲಿ ಅಳವಡಿಸಿಕೊಂಡು, ಆರೋಗ್ಯಪೂರ್ಣ ಸಮಾಜ ನಿರ್ಮಾಣಕ್ಕೆ ಮುಂದಾಗಬೇಕು.  ಮದ್ಯ-ಮಾದಕಗಳ ದುಷ್ಪರಿಣಾಮಗಳ ಬಗ್ಗೆ ಜಿಲ್ಲೆಯ ಪ್ರತಿಯೊಂದು ಕಾಲೇಜಿನಲ್ಲಿಯೂ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕಾರ್ಯಕ್ರಮಗಳನ್ನು ಆರೋಗ್ಯ ಇಲಾಖೆ ಮೂಲಕ ಹಮ್ಮಿಕೊಳ್ಳಲಾಗುವುದು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು ಹೇಳಿದರು.
  ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀಕಾಂತ್ ಬಾಸೂರ ಅವರು ಮಾತನಾಡಿ,   ಹವ್ಯಾಸಗಳನ್ನು ನಾವು ನಿಯಂತ್ರಿಸಬೇಕೆ ಹೊರತು ಅವು ನಮ್ಮನ್ನು ನಿಯಂತ್ರಿಸುವ ಸ್ಥಿತಿಯನ್ನು ನಾವು ನಿರ್ಮಿಸಿಕೊಳ್ಳಬಾರದು.  ಶಾರೀರಕ ಸದೃಢತೆಯಿಂದ ಮಾನಸಿಕ ಸದೃಢತೆ ಸಾಧ್ಯ.  ವಿದ್ಯಾರ್ಥಿಗಳು ಇಂತಹ ಕೆಟ್ಟ ಹವ್ಯಾಸಗಳಿಗೆ ಬಲಿಯಾದಂತೆ ನೋಡಿಕೊಳ್ಳುವುದಷ್ಟೇ ಅಲ್ಲ, ತಮ್ಮ ಕುಟುಂಬದ ಯಾರೇ ಸದಸ್ಯರು ದುಶ್ಚಟಗಳಿಗೆ ಒಳಗಾಗಿದ್ದಲ್ಲಿ, ಅಂತಹವರಿಗೆ ದುಷ್ಪರಿಣಾಮಗಳನ್ನು ತಿಳಿಸುವುದರ ಮೂಲಕ ಪರಿವರ್ತನೆಗೆ ಮುಂದಾಗಬೇಕು.  ಉತ್ತಮ ಸನ್ನಡತೆಯವರೊಂದಿಗೆ ಸಹವಾಸವನ್ನು ಬೆಳೆಸಿಕೊಳ್ಳಬೇಕು.  ಆಟ-ಪಾಠಗಳ ಕಡೆಗೆ ಹೆಚ್ಚು ಗಮನ ಕೇಂದ್ರೀಕರಿಸಬೇಕು ಎಂದು ಹೇಳಿದರು.
  ಮಾದಕ ಚಟುವಟಿಕೆಗಳಿಂದ ಉಂಟಾಗುವ ದುಷ್ಟಪರಿಣಾಮಗಳ ಬಗ್ಗೆ ವಿಶೇಷ ಉಪನ್ಯಾಸ ನೀಡಿದ ಕೊಪ್ಪಳದ ವೈದ್ಯ ಡಾ. ಕೆ.ಜಿ. ಕುಲಕರ್ಣಿ ಅವರು ಮಾತನಾಡಿ, ಆರೋಗ್ಯವಂತ ಸಮಾಜದಿಂದ ದೇಶದ ಅಭಿವೃದ್ಧಿ ಸಾಧ್ಯ, ದೈಹಿಕ, ಮಾನಸಿಕ, ಸಾಮಾಜಿಕ ಆರೋಗ್ಯವೇ ಪರಿಪೂರ್ಣ ಆರೋಗ್ಯವಾಗಿದೆ. ಸಮಾಜದಲ್ಲಿನ ಸದ್ಯದ ಪರಿಸ್ಥಿತಿಯಲ್ಲಿ ಆಧುನಿಕ ಜೀವನ ಶೈಲಿ ಮಾನಸಿಕ ಒತ್ತಡ, ಮಾನಸಿಕ ಸಮಸ್ಯೆಗೆ ಕಾರಣವಾಗುತ್ತಿದೆ.  ವಿದ್ಯಾರ್ಥಿಗಳು ಗುಟ್ಕಾ ಸೇವನೆಯಂತಹ ಕೆಟ್ಟ ಚಟಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದ್ದು, ಇದರಿಂದ ಕ್ಯಾನ್ಸರ್ ರೋಗ, ಹೃದಯ ಸಂಬಂಧಿ ರೋಗಗಳಿಗೆ ಒಳಗಾಗುತ್ತಿದ್ದಾರೆ ಎಂದರು.
  ಬಾಲಕರ ಸರ್ಕಾರಿ ಪ.ಪೂ. ಕಾಲೇಜು ಪ್ರಾಚಾರ್ಯರಾದ ಎಸ್.ಬಿ. ರಾಜೂರ ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು.  ಡಿ.ಇಡಿ. ಕಾಲೇಜಿನ ಪ್ರಾಚಾರ್ಯ ವಸಂತಯ್ಯ ಹಿರೇಮಠ, ವ್ಯಂಗ್ಯ ಚಿತ್ರಕಾರ ಬದರಿಪುರೋಹಿತ್ ವೇದಿಕೆಯ ಮೇಲೆ ಉಪಸ್ಥಿತರಿದ್ದರು.  ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಪ್ರಾಸ್ತಾವಿಕ ಭಾಷಣ ಮಾಡಿದರು.  ಉಪನ್ಯಾಸಕ ಮಲ್ಲಪ್ಪ ಸ್ವಾಗತಿಸಿದರು.  ಹೆಚ್.ಎಸ್. ಬಾರಕೇರ ನಿರೂಪಿಸಿದರು.  ಇದಕ್ಕೂ ಪೂರ್ವದಲ್ಲಿ ಮದ್ಯ-ಮಾದಕಗಳ ದುಷ್ಪರಿಣಾಮಗಳ ಬಗ್ಗೆ ಘೋಷಣೆಗಳೊಂದಿಗೆ ವಿದ್ಯಾರ್ಥಿಗಳು ನಗರದ ಪ್ರಮುಖ ಬೀದಿಗಳಲ್ಲಿ ಜನಜಾಗೃತಿ ಜಾಥಾ ನಡೆಸಿದರು.  ಕಾರ್ಯಕ್ರಮದ ಅಂಗವಾಗಿ ಏರ್ಪಡಿಸಲಾಗಿದ್ದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನವನ್ನು ಇದೇ ಸಂದರ್ಭದಲ್ಲಿ ವಿತರಿಸಲಾಯಿತು.
Please follow and like us:
error