ಕೊಪ್ಪಳ ನಗರಸಭೆಯಿಂದ ಮತದಾರರ ಜಾಗೃತಿಗೆ ವಿಶೇಷ ಕ್ರಮ

 ಕೊಪ್ಪಳ ನಗರದ ಮತದಾರರಲ್ಲಿ ಜಾಗೃತಿ ಮೂಡಿಸಿ ಅವರನ್ನು ಮತದಾನಕ್ಕೆ ಹುರಿದುಂಬಿಸಲು ನಗರಸಭೆಯ ವತಿಯಿಂದ ವಾಹನಗಳ ಮೂಲಕ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಗುರುವಾರದಿಂದ ಪ್ರಾರಂಭಿಸಿದೆ ಎಂದು ನಗರಸಭೆ ಪೌರಾಯುಕ್ತೆ ಬಿ.ಎಂ. ಅಶ್ವಿನಿ ಅವರು ಹೇಳಿದರು.
  ಮತದಾರರಲ್ಲಿ ಜಾಗೃತಿ ಮೂಡಿಸಲು ಸ್ವೀಪ್ ಕಾರ್ಯಕ್ರಮದಡಿ ನಗರಸಭೆ ಆವರಣದಲ್ಲಿ, ವಾಹನಗಳ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
  ಕೊಪ್ಪಳ ನಗರದ ಮತದಾರರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ, ನಗರಸಭೆಯು ವಿಶೇಷ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ನಗರಸಭೆಯ ಒಟ್ಟು ೦೪ ವಾಹನಗಳಲ್ಲಿ ಇದೀಗ ಹೊಸದಾಗಿ ಧ್ವನಿವರ್ಧಕ ವ್ಯವಸ್ಥೆಯನ್ನು ಅಳವಡಿಸಲಾಗಿದೆ.  ಈ ಧ್ವನಿವರ್ಧಕದ ಮೂಲಕ ಮತದಾರರ ಜಾಗೃತಿ ಗೀತೆಗಳು, ಮತದಾರರಲ್ಲಿ ಮತದಾನದ ಬಗ್ಗೆ ಅರಿವು ಮೂಡಿಸುವ ಸಂದೇಶಗಳನ್ನು ಬಿತ್ತರಿಸಲಾಗುವುದು.  ಈ ವಾಹನಗಳು ಪ್ರತಿದಿನ ಬೆಳಿಗ್ಗೆ ೬ ಗಂಟೆಯಿಂದ ಮಧ್ಯಾಹ್ನದವರೆಗೆ ನಗರದ ವಿವಿಧ ವಾರ್ಡುಗಳಲ್ಲಿ ಸಂಚರಿಸಿ, ಕಸ ಸಂಗ್ರಹಣೆಯ ಜೊತೆಗೆ, ಮತದಾರರಲ್ಲಿ ಜಾಗೃತಿ ಮೂಡಿಸುವ ಕಾರ್ಯ ಕೈಗೊಳ್ಳಲಿವೆ ಎಂದರು.
  ಸ್ವೀಪ್ ಕಾರ್ಯಕ್ರಮದ ಪ್ರಗತಿ ಪರಿಶೀಲನೆಗಾಗಿ ವೀಕ್ಷಕರಾಗಿ ಆಗಮಿಸಿರುವ ಗದಗ ಜಿಲ್ಲೆಯ ರಾಜೀವ್ ನಾಯಕ್ ಅವರು, ಮತದಾರರಲ್ಲಿ ಜಾಗೃತಿ ಮೂಡಿಸಲು ಕೊಪ್ಪಳ ಮತ್ತು ಗಂಗಾವತಿ ನಗರಸಭೆಯವರು ತಮ್ಮ ವಾಹನಗಳನ್ನು ಬಳಸಿಕೊಳ್ಳುವ ಯೋಜನೆ ರೂಪಿಸಿರುವುದು ಸ್ವಾಗತಾರ್ಹವಾಗಿದ್ದು, ಇದರಿಂದ, ನಗರ ಪ್ರದೇಶದಲ್ಲಿ ಉತ್ತಮ ಪರಿಣಾಮ ಬೀರುವ ವಿಶ್ವಾಸ ವ್ಯಕ್ತಪಡಿಸಿದರು.
  ಕೊಪ್ಪಳ ನಗರಸಭೆಯ ವಿವಿಧ ಸಿಬ್ಬಂದಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

Leave a Comment