You are here
Home > Koppal News > ಅಂದರ್ ಬಾಹರ್ ಚಿತ್ರ ವಿಮರ್ಶೆ

ಅಂದರ್ ಬಾಹರ್ ಚಿತ್ರ ವಿಮರ್ಶೆ

ಸೆಂಟಿಮೆಂಟ್ ಅಂದರ್, ರೌಡಿಸಂ ಬಾಹರ್

    ಪಕ್ಕಾ ಕಮರ್ಷಿಯಲ್ ಕ್ಯಾಲ್ಕುಲೇಷನ್‌ನ ಅಂದರ್ ಬಾಹರ್ ಸಿನಿಮಾದ ವಾಲ್ ಪೋಸ್ಟರ‍್ಸ್ ಮಾಸ್ ಅಡಿಯನ್ಸ್‌ಗಳನ್ನ ಕೈ ಬೀಸಿ ಕರೆಯುತ್ತವೆ. ಸಿನಿಮಾ ನೋಡಲು ಥೇಟರ್ ಅಂದರ್ ಆದ ಪಡ್ಡೆಗಳು ಇಂಟರ್‌ವೆಲ್ ಹೊತ್ತಿಗೆ ಬಾಹರ್ ಆಗಿ, “ಥತ್ತೇರಿ, ಪೋಸ್ಟರ್ ನೋಡಿ ಯಾಮಾರಿದೆ” ಎನ್ನುತ್ತಾರೆ. ಅದೇ ಫ್ಯಾಮಿಲಿ ಆಡಿಯನ್ಸ್  ಅಳುಕಿನಿಂದಲೇ ಒಳಹೋಗಿ, ಒಂದೊಳ್ಳೆ ಸಿನಿಮಾ ನೋಡಿದ ಖುಷಿಯಲ್ಲಿ ಹೊರಬರುತ್ತಾ, ಕಣ್ಣಂಚಲಿರುವ ಕಂಬನಿಯ ಹನಿಯನ್ನು ಒರೆಸಿಕೊಳ್ಳುತ್ತಾರೆ.
    ಈಚೆಗೆ ಬಂದಿರುವ ಕನ್ನಡ ಸಿನಿಮಾಗಳಲ್ಲಿ ನಾಯಕಿಯ ದುರಂತ ಆಂತ್ಯ ಸಾಮಾನ್ಯವಾಗಿವೆ. ಇಂಥ ಸಿನಿಮಾಗಳು ಗೆದ್ದಿವೆ. ಅಂದರ್ ಬಾಹರ್‌ನಲ್ಲೂ ನಾಯಕಿ ಕೊನೆಗೆ ಅಂತ್ಯವಾಗುತ್ತಾಳೆ. ಒಂದರ್ಥದಲ್ಲಿ ಅಂದರ್ ಬಾಹರ್ ಸಿನಿಮಾ ಹಾಲು-ಜೇನು ಸಿನಿಮಾದ ಲೇಟೇಸ್ಟ್ ವರ್ಶನ್ ಎಂಬಂತೆ ಭಾಸವಾಗುತ್ತದೆ. ಶಿವಣ್ಣ ಹಾಗೂ ಪಾರ್ವತಿ ಇಡೀ ಸಿನಿಮಾವನ್ನು ಆವರಿಸಿದ್ದಾರೆ. ಶಿವಣ್ಣನಿಗೆ ಸರಿಸಮವಾಗಿ ಪಾರ್ವತಿ ನಟಿಸಿ ಸಿನಿಮಾದಲ್ಲಿರುವ ಹೆಸರಿನ ಹಾಗೆ ಸುಹಾಸಿನಿಯವರನ್ನು ನೆನಪಿಸುತ್ತಾರೆ.
      ಶಿವಣ್ಣನ ಎನರ್ಜಿ ನೋಡಿ ಯೂತ್ಸ ನಿಜಕ್ಕೂ ನಾಚಬೇಕು, ಆಷ್ಟು ಸೊಗಸಾಗಿ ಫೈಟ್ ಮಾಡಿದ್ದಾರೆ. ರಂಗು ರಂಗಿನ ಹಾಡಿನಲ್ಲಿ ದಣಿವರಿಯದೇ ಕುಣಿದಿದ್ದಾರೆ. ಸೆಂಟಿಮೆಂಟ್ ಸೀನ್‌ಗಳಲ್ಲಿ ಮಾಗಿದ ಆಭಿನಯ ನೀಡುವ ಮೂಲಕ ಪಾತ್ರ ಯಾವುದೇ ಇರಲಿ ಲೀಲಾಜಾಲವಾಗಿ ನಟಿಸಬಲ್ಲೆ ಎಂಬುದನ್ನು ಸಾಬೀತುಪಡಿಸಿದ್ದಾರೆ.
       ಸೂರ್ಯ ಆಂಡರ್‌ವರ್ಲ್ಡ್‌ನ ದೊಡ್ಡ ಡಾನ್. ಸೂರ್ಯ ಕಾಲಿಟ್ಟರೆ ಭೂಗತ ಲೋಕದ ಮಿಕ್ಕ ದೊರೆಗಳಿಗೆ ಜಾಗವಿಲ್ಲ. ಆಪ್ಪಿ ತಪ್ಪಿ ಎದುರಾದರೆ ತರಗಲೆಗಳಂತೆ ಆಕಾಶದಲ್ಲಿ ಹಾರಾಡುವುದು ಶತಸಿದ್ಧ. ಫೈಟ್ ಮೂಲಕ ಭರ್ಜರಿ ಎಂಟ್ರಿ ಕೊಡುವ ಶಿವಣ್ಣ, ನೆಕ್ಸ್ಟ ಸೀನ್‌ನಲ್ಲಿ ನನ್ನ ವಂಶ ರಾಜಂದು, ನನ್ನ ಹೆಸರು ಮುತ್ತಿಂದು ಎಂದು ಹಾಡಿ ಕುಣಿಯುತ್ತಾರೆ. ಹಾಡು ಮುಗಿಯುತ್ತಿದ್ದಂತೆ ಗೆಳೆಯನ ಕೊಲೆ, ಕೊಂದವನ ವಿರುದ್ಧ ಶಿವಣ್ಣನ ಅಟ್ಯಾಕ್. ಬಳಿಕ ಪೋಲೀಸ್ ಚೇಸ್. ಇಲ್ಲಿಂದ ನಿಜವಾದ ಕತೆ ತೆರೆದುಕೊಳ್ಳುತ್ತದೆ.
       ಪೋಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಅಪಘಾತಕ್ಕೀಡಾಗುವ ಶಿವಣ್ಣನ ಕಾರು, ಕಾರಿನಲ್ಲಿ ಇದ್ದ ಗೆಳೆಯನ ಕಾಲು ಮುರಿತ, ಆಲ್ಲಿಗೂ ಬರುವ ಪೋಲೀಸರು, ಪೋಲೀಸ್ ಜೀಪನ್ನೇ ಎಸ್ಕೇಪ್ ಮಾಡಿ ಹತ್ತಿರದ ಹಾಸ್ಟಿಟಲ್‌ನಲ್ಲಿ ಗೆಳೆಯನ ಟ್ರಿಟ್‌ಮೆಂಟ್, ನಾಯಕಿಯ ಭೇಟಿ. ಅವಳ ನಗು, ಮುಗ್ದತೆ, ನಂಬಿಕೆ, ಪ್ರೀತಿ, ಗೌರವ, ಅತ್ಮವಿಶ್ವಾಸ, ಕೊನೆಗೆ ಇಬ್ಬರ ಮದುವೆ  ಹೀಗೆ ಕತೆ ಚಕಚಕನೆ ಸಾಗುತ್ತದೆ.
        ತಾನು ಮದುವೆಯಾಗುವ ಹುಡುಗ ಪೋಲೀಸ್ ಆಫೀಸರ್ ಅಗಿರಬೇಕು ಎಂಬ ನಾಯಕಿಯ ಅಸೆ ಗೊತ್ತಿದ್ದರೂ ಡಾನ್ ಸೂರ್ಯ ಅಕೆಯನ್ನು ತಾನು ಪೋಲೀಸ್ ಎಂದೇ ಬಿಂಬಿಸಿಕೊಳ್ಳುತ್ತಾನೆ. ಅಕೆ ಬಯಸಿದ ಎಲ್ಲ ಗುಣಗಳನ್ನು ಸಂಪಾದಿಸಲು ಬಾಡಿಗೆ ಅಪ್ಪ-ಅಮ್ಮ ಕೊನೆಗೆ ಸೂರ್ಯ ಸುಹಾಸಿನಿಯನ್ನೆ ಮದುವೆಯಾಗುತ್ತಾನೆ. ನಾಯಕಿಯ ಮೇಲೆ ಪ್ರೀತಿಯೇ ಇರದ ಸೂರ್ಯ, ಸ್ಯಾಕ್ರೋ ಡಿಸೀಜ್ ಇರುವ ಸುಹಾಸಿನಿಯ ನಂಬಿಕೆಯನ್ನು ನಿಜ ಮಾಡುವುದಕ್ಕಾಗಿ ಮದುವೆಯಾಗಿರುತ್ತಾನೆ. ಸುಹಾಸಿನಿಯ ನಂಬಿಕೆ ಏನು? ಸೂರ್ಯ ಸುಹಾಸಿನಿಯನ್ನು ನಿಜಕ್ಕೂ ಲವ್ ಮಾಡುತ್ತಿರಲಿಲ್ವಾ? ಬಾಡಿಗೆ ಅಪ್ಪ-ಅಮ್ಮನ ಸೆಂಟಿಮೆಂಟ್ ಏನು? ಎಂಬ ವಿಷಯಗಳನ್ನ ತಿಳಿದುಕೊಳ್ಳಲು ಒಂದ್ಸಲ ಥೇಟರ್‌ಗೆ ಹೋಗಲೇಬೇಕು.
       ಶ್ರೀನಾಥ್-ಆರುಂಧತಿನಾಗ್ ಜೋಡಿ ಉತ್ತರ ಕರ್ನಾಟಕದ ರಂಗಭೂಮಿ ಕಲಾವಿದರಾಗಿ ಸೊಗಸಾಗಿ ನಟಿಸಿದ್ದಾರೆ. ಚಶ್ವ ಎಂಬ ಹೊಸ ಖಳನಟ ಕನ್ನಡಕ್ಕೆ ಸಿಕ್ಕಿದ್ದಾನೆ. ಬೆಳೆಗರೆ ಹಾಗೂ ಶಂಕರ್‌ನಾಗ್‌ರನ್ನು ನೆನಪಿಸುವ ಚಶ್ವ, ಚಿತ್ರರಂಗದಲ್ಲಿ ಭವಿಷ್ಯವಿದೆ ಎಂಬುದನ್ನು ನಿರೂಪಿಸಿದ್ದಾರೆ. ಮಿಕ್ಕಂತೆ ರಘುರಾಂ, ಸೃಜನ್, ದೀಪು ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಶಶಿಕುಮಾರ್ ಪಾತ್ರ ಆಷ್ಟೊಂದು ಪರಿಣಾಮಕಾರಿಯಾಗಿ ಪೋಷಣೆಯಾಗಿಲ್ಲ.
     ನಿರ್ದೇಶಕ ಫಣೀಶ್ ಅರಂಭದಲ್ಲಿ ಭೂಗತ ಲೋಕವನ್ನು ವಿಜೃಂಭಿಸುವ ಮೂಲಕ ಭರವಸೆ ಮೂಡಿಸುತ್ತಾರೆ. ಕಥೆ ಸೆಂಟಿಮೆಂಟ್ ಟ್ರ್ಯಾಕ್‌ಗೆ ಬಂದೊಡನೆ ಅಂಡರ್‌ವರ್ಲ್ಡ್ ಶೇಡ್‌ನ್ನು ಕಡೆಗಣಿಸಿ ಮಾಸ್ ಅಡಿಯನ್ಸಗೆ ನಿರಾಸೆ ಮೂಡಿಸುತ್ತಾರೆ. ವಿಜಯ್ ಪ್ರಕಾಶ್ ಮೊದಲ ಬಾರಿಗೆ ನೀಡಿರುವ ಸಂಗೀತದಲ್ಲಿ ಎರಡು ಹಾಡುಗಳು ಕೇಳುವಂತಿವೆ. ಶೇಖರ್ ಚಂದ್ರು ಕ್ಯಾಮರಾ ವರ್ಕ್ ಬಗ್ಗೆ ಎರಡು ಮಾತಿಲ್ಲ. ಎಂ.ಎಸ್.ರಮೇಶ್ ಸಂಭಾಷಣೆ ಆರಂಭ ಮತ್ತು ಅಂತ್ಯದಲ್ಲಿ ಶಿಳ್ಳೆ ಗಿಟ್ಟಿಸುತ್ತದೆ. ಥ್ರಿಲ್ಲರ್ ಮಂಜು ಸಾಹಸ ಮೈ ನವಿರೇಳಿಸುತ್ತದೆ.
      ಯಾವುದೇ ಮುಜುಗರವಿಲ್ಲದೇ, ಕುಟುಂಬಸಮೇತ ಹೋಗಿ ನೋಡುವ ಸಿನಿಮಾ ಅಂದರ್ ಬಾಹರ್. ನೋಡಿ, ಕಣ್ಣಂಚಿನ ಹಾಗೆ ಮನಸೂ ಕೂಡಾ ಒದ್ದೆಯಾದರೆ ಫಣೀಶ್‌ಗೆ ಥ್ಯಾಂಕ್ಸ್ ಹೇಳಿ.
-ಚಿತ್ರಪ್ರಿಯ ಸಂಭ್ರಮ್.
ಪ್ರದರ್ಶನ : ಸ್ಟಾರ್ ಚಿತ್ರಮಂದಿರ, ಕೊಪ್ಪಳ.

Leave a Reply

Top