You are here
Home > Koppal News > ಕನಕಾಚಲಪತಿ ದೇವಸ್ಥಾನ : ಅಡುಗೆ ಕಾರ್ಯಕ್ಕೆ ತಾತ್ಕಾಲಿಕ ಶೆಡ್ ನಿರ್ಮಾಣ

ಕನಕಾಚಲಪತಿ ದೇವಸ್ಥಾನ : ಅಡುಗೆ ಕಾರ್ಯಕ್ಕೆ ತಾತ್ಕಾಲಿಕ ಶೆಡ್ ನಿರ್ಮಾಣ

ಕೊಪ್ಪಳ ಸೆ. ೨೭: ಕನಕಗಿರಿಯ ಶ್ರೀ ಕನಕಾಚಲಪತಿ ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅಡುಗೆ ಮಾಡಿಕೊಳ್ಳಲು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ಭಕ್ತರು ದೇವಸ್ಥಾನದ ಪವಿತ್ರತೆಗೆ ಭಂಗ ಬಾರದ ರೀತಿಯಲ್ಲಿ ಸ್ವಚ್ಛತೆಯನ್ನು ಕಾಯ್ದುಕೊಂಡು ಬರುವಂತೆ ಗಂಗಾವತಿ ತಹಸಿಲ್ದಾರರು ತಿಳಿಸಿದ್ದಾರೆ.
ದೇವಸ್ಥಾನಕ್ಕೆ ಆಗಮಿಸುವ ಭಕ್ತರಿಗೆ ಅಡುಗೆ ಮಾಡಿಕೊಳ್ಳಲು ತಾತ್ಕಾಲಿಕ ಶೆಡ್‌ಗಳನ್ನು ನಿರ್ಮಿಸಲಾಗಿದ್ದು, ಶೆಡ್ಡಿನಲ್ಲಿ ಪ್ರತಿ ಅಮವಾಸ್ಯೆ ಹಾಗೂ ವಿಶೇಷ ದಿನಗಳಲ್ಲಿ ಭಕ್ತರಿಗಾಗಿ ಉಚಿತವಾಗಿ ದಾಸೋಹ ಕಾರ್ಯವನ್ನು ನೆರವೇರಿಸುವ ಸಲುವಾಗಿ ತಾತ್ಕಾಲಿಕ ಶೆಡ್‌ನಲ್ಲಿ ಅಡುಗೆ ಮಾಡಲಾಗುತ್ತಿದೆ. ಆದರೆ ಬೇರೆ ಗ್ರಾಮಗಳಿಂದ ಬರುವ ಭಕ್ತರು ದೇವಸ್ಥಾನದ ಆವರಣದಲ್ಲಿ ಅಡುಗೆ ಮಾಡಿಕೊಳ್ಳುತ್ತಿದ್ದು, ಇದರಿಂದ ದೇವಸ್ಥಾನದ ಸ್ವಚ್ಛತೆಗೆ ಭಂಗ ಬರುವುದರಿಂದ ದೇವಸ್ಥಾನದ ಕಾಂಪೌಂಡ್ ಜಾಗೆಯಲ್ಲಿ ಇರುವ ತಾತ್ಕಾಲಿಕ ಶೆಡ್ಡಿನಲ್ಲಿ ಅಡುಗೆ ಮಾಡಿಕೊಳ್ಳುವಂತೆ ತಿಳಿಸಲಾಗಿದೆ. ದಾಸೋಹ ಭವನ ನಿರ್ಮಾಣ ಕಾರ್ಯವು ಅಪೂರ್ಣವಾಗಿದ್ದು, ದೇವಸ್ಥಾನದಲ್ಲಿನ ಕಬ್ಬಣ ಹಾಗೂ ಕಲ್ಲುಗಳನ್ನು ಬೇರೆಯವರು ತೆಗೆದುಕೊಂಡು ಹೋಗಬಾರದು ಎಂಬ ಕಾರಣಕ್ಕಾಗಿ ದಾಸೋಹ ಭವನ ಕಾರ್ಯ ಪ್ರಾರಂಭಿಸಲಾಗಿದೆ. ಆದರೆ ಉಳಿದ ಕೆಲಸಕ್ಕಾಗಿ ಪ್ರಸ್ತಾವನೆಯನ್ನು ಅನುಮೋದನೆಗಾಗಿ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಲಾಗಿದೆ. ದೇವಸ್ಥಾನದ ಖಾತೆಯಲ್ಲಿರುವ ಹಣವನ್ನು ನೇರವಾಗಿ ಜೀರ್ಣೋದ್ಧಾರ ಕಾರ್ಯಕ್ಕೆ ಬಳಸಿಕೊಳ್ಳಲು ಅವಕಾಶ ಇರುವುದಿಲ್ಲ. ದೇವಸ್ಥಾನದ ಆವರಣದಲ್ಲಿರುವ ಶೌಚಾಲಯ ಹಾಗೂ ಸ್ನಾನಗೃಹವನ್ನು ಪ್ರವಾಸೋದ್ಯಮ ಇಲಾಖೆಯವರು ನಿರ್ಮಿಸಿದ್ದು, ಅಂದಾಜು ಪತ್ರಿಕೆ ಹಾಗೂ ನಕ್ಷೆಯಂತೆ ಕಾಮಗಾರಿಯನ್ನು ಇವರು ಪೂರ್ಣಗೊಳಿಸಿರುವುದಿಲ್ಲ. ಅಲ್ಲದೆ ಈ ಕಟ್ಟಡದಲ್ಲಿ ನೀರಿನ ಅನುಕೂಲತೆ ಇಲ್ಲದ ಕಾರಣ ಶೌಚಾಲಯವನ್ನು ಪ್ರಾರಂಭಿಸಿರುವುದಿಲ್ಲ. ಅಲ್ಲದೆ ಶೌಚಾಲಯ ಕಟ್ಟಡವನ್ನು ದೇವಸ್ಥಾನದ ಸುಪರ್ದಿಗೆ ನೀಡಿರುವುದಿಲ್ಲ. ದೇವಸ್ಥಾನಕ್ಕೆ ಭಕ್ತರು ನೀಡಿದ ಕಬ್ಬಿಣದ ಬಾಗಿಲನ್ನು ಈಗಾಗಲೆ ದೇವಸ್ಥಾನಕ್ಕೆ ಜೋಡಣೆ ಮಾಡುವ ಕಾರ್ಯ ನಡೆದಿದ್ದು, ಪೂರ್ಣಗೊಳ್ಳುವ ಹಂತದಲ್ಲಿದೆ. ಸದ್ಭಕ್ತರು ದೇವಸ್ಥಾನದ ಆವರಣದಲ್ಲಿ ಸ್ವಚ್ಛತೆಗೆ ಆದ್ಯತೆ ನೀಡುವಂತೆ ಗಂಗಾವತಿ ತಹಸಿಲ್ದಾರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Top