ಸೇನಾಭರ್ತಿ ರ್‍ಯಾಲಿ : ತರಬೇತಿ ಪಡೆದು, ಭವಿಷ್ಯ ರೂಪಿಸಿಕೊಳ್ಳಿ- ಶಂಭುಲಿಂಗನಗೌಡ

  ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ಜಿಲ್ಲೆಯ ಅಭ್ಯರ್ಥಿಗಳಿಗೆ ನೀಡಲಾಗುತ್ತಿರುವ ತರಬೇತಿಯ ಸದುಪಯೋಗ ಪಡೆದು, ಹೆಚ್ಚಿನ ಅಭ್ಯರ್ಥಿಗಳು ಆಯ್ಕೆಯಾಗಿ ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳುವಂತೆ ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ಯುವಕರಿಗೆ ಕರೆನೀಡಿದರು.
  ಕೊಪ್ಪಳದಲ್ಲಿ ಫೆ. ೩ ರಿಂದ ನಡೆಯಲಿರುವ ಸೇನಾ ಭರ್ತಿ ರ್‍ಯಾಲಿಗಾಗಿ ಜಿಲ್ಲೆಯ ಅಭ್ಯರ್ಥಿಗಳಿಗೆ ಜಿಲ್ಲಾ ಕ್ರೀಡಾಂಗಣದಲ್ಲಿ ಪ್ರಾರಂಭಿಸಲಾದ ದೈಹಿಕ ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
  ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಬರುವ ಫೆ. ೩ ರಿಂದ ೧೦ ರವರೆಗೆ ವಿವಿಧ ಹುದ್ದೆಗಳ ನೇಮಕಾತಿಗಾಗಿ ಸೇನಾಭರ್ತಿ ರ್‍ಯಾಲಿ ನಡೆಯಲಿದ್ದು, ಈ ನೇಮಕಾತಿ ರ್‍ಯಾಲಿಯಲ್ಲಿ ಜಿಲ್ಲೆಯ ಹೆಚ್ಚಿನ ಸಂಖ್ಯೆಯ ಯುವಕರು ಆಯ್ಕೆಯಾಗಬೇಕು.  ಜಿಲ್ಲೆಯ ಅಭ್ಯರ್ಥಿಗಳಿಗೆ ದೈಹಿಕ ತರಬೇತಿ ನೀಡುವ ಸಲುವಾಗಿ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯು ಉದ್ಯೋಗ ವಿನಿಮಯ ಇಲಾಖೆ ಹಾಗೂ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಜ. ೨೭ ರಿಂದ ಫೆ. ೦೧ ರವರೆಗೆ ಜಿಲ್ಲಾ ಕ್ರೀಡಾಂಗಣದಲ್ಲಿ ದೈಹಿಕ ತರಬೇತಿ ಕಾರ್ಯಕ್ರಮ ಹಮ್ಮಿಕೊಂಡಿದೆ.  ಜಿಲ್ಲೆಯ ಅಭ್ಯರ್ಥಿಗಳು ಉತ್ತಮ ದೈಹಿಕ ಅರ್ಹತೆ ಹೊಂದಿದ್ದರೂ, ಸೂಕ್ತ ತರಬೇತಿ ಇಲ್ಲದಿದ್ದಲ್ಲಿ, ಸೇನಾ ಅಧಿಕಾರಿಗಳು ನಡೆಸುವ ದೈಹಿಕ ಸಾಮರ್ಥ್ಯ ಪರೀಕ್ಷೆಯಲ್ಲಿ ವಿಫಲರಾಗುವ ಸಾಧ್ಯತೆ ಇರುತ್ತದೆ.  ಇದಕ್ಕಾಗಿಯೇ ಜಿಲ್ಲೆಯ ಅಭ್ಯರ್ಥಿಗಳಿಗೆ ತರಬೇತಿ ನೀಡಿ, ಹೆಚ್ಚಿನ ಸಂಖ್ಯೆಯಲ್ಲಿ ಜಿಲ್ಲೆಯ ಅಭ್ಯರ್ಥಿಗಳು ಆಯ್ಕೆಯಾಗುವಂತೆ ಮಾಡುವುದು ಸರ್ಕಾರದ ಉದ್ದೇಶವಾಗಿದೆ.  ಜಿಲ್ಲೆಯ ಯುವಕರು ತರಬೇತಿಯ ಪ್ರಯೋಜನ ಪಡೆದುಕೊಂಡು, ತಮ್ಮ ಭವಿಷ್ಯ ರೂಪಿಸಿಕೊಳ್ಳುವಂತಾಗಬೇಕು ಎಂದು ಕರ್ನಾಟಕ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಶಂಭುಲಿಂಗನಗೌಡ ಹಲಗೇರಿ ಅವರು ತಿಳಿಸಿದರು.
  ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ. ಅವರು ಮಾತನಾಡಿ, ಸೇನಾ ಭರ್ತಿ ರ್‍ಯಾಲಿಗಾಗಿ ಸೇನಾ ನೇಮಕಾತಿ ಪ್ರಾಧಿಕಾರ ಈಗಾಗಲೆ ಹುದ್ದೆಗಳ ವಿವರ, ವಿದ್ಯಾರ್ಹತೆ, ವಯೋಮಿತಿ, ದೈಹಿಕ ಪರೀಕ್ಷೆಯ ವಿವರ, ರ್‍ಯಾಲಿಯಲ್ಲಿ ಪಾಲ್ಗೊಳ್ಳುವ ಅಭ್ಯರ್ಥಿಗಳು ಯಾವ್ಯಾವ ದಾಖಲಾತಿಗಳನ್ನು ತರಬೇಕು ಎಂಬುದರ ಬಗ್ಗೆ ಪ್ರಚುರಪಡಿಸಿದೆ.  ಇದಕ್ಕನುಗುಣವಾಗಿ ಅಭ್ಯರ್ಥಿಗಳು ಸೂಕ್ತ ದಾಖಲೆಗಳನ್ನು ಸಂಗ್ರಹಿಸಿಟ್ಟುಕೊಳ್ಳಬೇಕು.   ಸೇನಾಭರ್ತಿ ರ್‍ಯಾಲಿ ಕಾರ್ಯಕ್ರಮಗಳು ಈ ಹಿಂದೆ ಜಿಲ್ಲೆಯಲ್ಲಿ ನಡೆದ ಸಂದರ್ಭದಲ್ಲಿ, ಜಿಲ್ಲೆಯ ಅಭ್ಯರ್ಥಿಗಳಿಗೆ ತರಬೇತಿ ಹಾಗೂ ಆಯ್ಕೆ ವಿಧಾನದ ಮಾಹಿತಿಯ ಕೊರತೆಯ ಕಾರಣದಿಂದಾಗಿ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಯಾಗುವಲ್ಲಿ ವಿಫಲರಾಗಿದ್ದರು.  ಇದನ್ನು ನಿವಾರಿಸುವ ಉದ್ದೇಶದಿಂದ, ಜಿಲ್ಲೆಯ ಅಭ್ಯರ್ಥಿಗಳಿಗೆ ಸರ್ಕಾರ ಸದ್ಯ ಜ. ೨೭ ರಿಂದ ಜಿಲ್ಲಾ ಕ್ರೀಡಾಂಣದಲ್ಲಿ ತರಬೇತಿ ಶಿಬಿರ ಹಮ್ಮಿಕೊಂಡಿದೆ.  ಜಿಲ್ಲೆಯ ಅಭ್ಯರ್ಥಿಗಳು ಈ ತರಬೇತಿ ಶಿಬಿರದ ಸದುಪಯೋಗ ಪಡೆದುಕೊಳ್ಳಬೇಕು.  ಶಿಬಿರದಲ್ಲಿ ಭಾಗವಹಿಸಿರುವ ಅಭ್ಯರ್ಥಿಗಳು, ತಮ್ಮ ಸ್ನೇಹಿತರಿಗೂ ಮಾಹಿತಿ ನೀಡಿ, ತರಬೇತಿ ಪಡೆಯಲು ಪ್ರೇರೇಪಿಸಬೇಕು ಎಂದು ಕರೆನೀಡಿದರು.
  ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕ ಎಸ್. ತುಕ್ಕರ್ ಅವರು ಮಾತನಾಡಿ, ಸೇನಾಭರ್ತಿ ರ್‍ಯಾಲಿ ಕಾರ್ಯಕ್ರಮ ಬಹಳ ವರ್ಷಗಳ ತರುವಾಯ ಈ ಭಾಗದಲ್ಲಿ ನಡೆಯುತ್ತಿದ್ದು, ಈ ಭಾಗದ ಯುವಕರಿಗೆ ಸೇನೆಗೆ ಸೇರಿ ದೇಶಸೇವೆ ಮಾಡಿಕೊಳ್ಳಲು ಹಾಗೂ ತಮ್ಮ ಉತ್ತಮ ಭವಿಷ್ಯ ರೂಪಿಸಿಕೊಳ್ಳಲು ಸುಸಂದರ್ಭ ಒದಗಿ ಬಂದಿದೆ.  ಇಂತಹ ಅವಕಾಶವನ್ನು ಬಳಸಿಕೊಂಡು, ಹೆಚ್ಚಿನ ಯುವಕರು ಉದ್ಯೋಗ ಪಡೆಯಲು ಶ್ರಮಿಸುವಂತೆ ಮನವಿ ಮಾಡಿದರು.
  ಯುವಜನ ಸೇವಾ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕ ವಿ.ಎಲ್. ಘಾಡಿ, ಜಿಲ್ಲೆಯ ಅಭ್ಯರ್ಥಿಗಳಿಗೆ ತರಬೇತಿ ನೀಡುವ ಸಲುವಾಗಿ ನಿಯೋಜಿತವಾಗಿರುವ ದೈಹಿಕ ಶಿಕ್ಷಕರುಗಳಾದ ಎಂ.ಎಂ. ಮುಜಗೊಂಡ, ಹೆಚ್. ಪ್ರಾಣೇಶ್ ಅವರು ಶಿಬಿರ ಕುರಿತು ಮಾತನಾಡಿದರು.  ಲೋಕೋಪಯೋಗಿ ಇಲಾಖೆ ಕಾರ್ಯನಿರ್ವಾಹಕ ಅಭಿಯಂತರ ಲಷ್ಕರಿ ನಾಯಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.  ಜಿಲ್ಲಾ ಉದ್ಯೋಗಾಧಿಕಾರಿ ಬಿ.ಎಫ್. ಬೀರನಾಯ್ಕರ್ ಅವರು ಪ್ರಾರಂಭದಲ್ಲಿ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.  ಜಿಲ್ಲೆಯ ವಿವಿಧೆಡೆಗಳಿಂದ ಸುಮಾರು ೩೦ ಕ್ಕೂ ಹೆಚ್ಚು ಯುವಕರು ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದರು.  ತರಬೇತಿ ಕಾರ್ಯಕ್ರಮ ಫೆ. ೦೧ ರವರೆಗೂ ನಡೆಯಲಿದೆ.
Please follow and like us:
error

Related posts

Leave a Comment