You are here
Home > Koppal News > ಜಾಗತಿಕರಣಕ್ಕೆ ಬಲಿಯಾದ ನೀರು ನೀಡುವ ಸಂಸ್ಕೃತಿ- ಶರಣಪ್ಪ ಬಾಚಲಾಪುರ

ಜಾಗತಿಕರಣಕ್ಕೆ ಬಲಿಯಾದ ನೀರು ನೀಡುವ ಸಂಸ್ಕೃತಿ- ಶರಣಪ್ಪ ಬಾಚಲಾಪುರ

 ಬೇಡ ಬೇಡವೆಂದರೂ ಎಲ್ಲರು ಒಪ್ಪಿಕೊಂಡು ಅಪ್ಪಿಕೊಂಡಿರುವದು ಜಾಗತಿಕರಣವನ್ನು,  ೯೦ ದಶಕ ಮತ್ತು ಶತಮಾನದ ಆರಂಭದಲ್ಲಿ ತೀವ್ರ ಚರ್ಚೆಯಾಗಿ ಪರ ವಿರೋಧದ ನಡುವೆಯೆ ಭಾರತದಂಥ ಅಭಿವೃದ್ಧಿಶೀಲ ರಾಷ್ಟ್ರವು ಜಾಗತಿಕರಣವನ್ನು ಒಪ್ಪಿಕೊಂಡು ಬಹುತೇಕ ರಂಗದಲ್ಲಿ ಈಗ ಜಾಗತಿಕರಣವನ್ನು ನೋಡುತ್ತಿದ್ದೇವೆ. ಈ ಜಾಗತಿಕರಣವು ನಮ್ಮ ನಾಡಿನ ಕಲೆ ಸಂಸ್ಕೃತಿಯನ್ನು ಹೇಗೆ ನಾಶ ಮಾಡಿದೆ ಎಂಬುವದಕ್ಕೆ ಇಲ್ಲೊಂದು ಉದಾಹರಣೆ ಇದೆ.

ಹರನ ಜಡೆಯಿಂದ ಇಳಿದು ಬಾ ತಾಯಿ ಇಳಿದು ಬಾ ಎಂದು ಬೇಂದ್ರೆ ಹಾಡು ಜನಪ್ರಿಯವಾಗಿದೆ, ಶಿವನ ಮುಡಿಯಲ್ಲಿದ್ದ ಗಂಗೆಯನ್ನು ಭೂಮಿಗೆ ತಂದಿರುವ ಪೌರಾಣಿಕ ಹಿನ್ನೆಲೆ ನಮ್ಮ ದೇಶದಲ್ಲಿದೆ. ಹಿಮಾಲಯದಲ್ಲಿದ್ದ ಗಂಗೆಯನ್ನು ಶಿವ ತನ್ನ ತಲೆಯಲ್ಲಿಟ್ಟುಕೊಂಡಿದ್ದು ಈ ಗಂಗೆಯೂ ಭೂಮಿಗೆ ಬಂದು ಜೀವ ಜಲವಾಗಲಿ, ಆಯಿತು ಎಂಬುವದಕ್ಕೆ ವರಕವಿ ಬೇಂದ್ರೆ ಹೇಳಿದ್ದಾರೆ. ಗಂಗೆಯನ್ನು ದೇವರೆಂದು ಪೂಜಿಸುವ ನಾವು ಯಾವುದೇ ಕಾರ್ಯ ಮಾಡಿದರೂ ಮೊದಲು ಗಂಗೆಯ ಪೂಜೆಯನ್ನು ಮಾಡುತ್ತೇವೆ. ಗಂಗೆಗೆ ನಮ್ಮಲ್ಲಿ ಅಗ್ರ ಸ್ಥಾನವನ್ನು ನೀಡಿದ್ದೇವೆ, ಗಂಗೆಯನ್ನು ತಾಯಿ ಎಂದು ಪೂಜಿಸುವ ನಮ್ಮ ನಾಡಿನಲ್ಲಿ ಗಂಗೆ ಈಗ ಮಾರಾಟವಾಗುತ್ತಿದ್ದಾಳೆ ಎಂದರೆ ಎಂಥ ವಿಪರ್ಯಾಸ.
ಈ ಹಿಂದೆ ನಮ್ಮ ನೀರು ಕೇಳಿದರೆ ಪಾಯಸ ನೀಡುತ್ತಿದ್ದರು ಅಂಥ ಔದಾರ್ಯವನ್ನು ಕನ್ನಡ ನಾಡಿನ ಜನತೆ ಹೊಂದಿದ್ದರು ಎಂದು ನಮ್ಮ ಚಲನಚಿತ್ರಗಳ ಹಾಡಿನಲ್ಲಿ ಕೇಳುತ್ತೇವೆ. ಆದರೆ ಈಗ ಪಾಯಸವಲ್ಲ ಒಂದು ಗ್ಲಾಸ್ ನೀರು ಕೊಡಿ ಎಂದರೆ ಇಲ್ಲಾ ಎನ್ನುವಂಥ ಸ್ಥಿತಿಗೆ ಬಂದಿದ್ದೇವೆ. ಒಂದು ಗ್ಲಾಸ್ ನೀರಿಗೆ ಕನಿಷ್ಠ ೫ ರೂಪಾಯಿ ನೀಡಬೇಕಾದ ಅನಿವಾರ್ಯತೆ ಇಂದು ಉಂಟಾಗಿದ್ದು ಜೀವ ಜಲವನ್ನು ಸಹ ಖರೀದಿಸಲೇಬೇಕಾಗಿದೆ. ಇಲ್ಲದಿದ್ದರೆ ನಮಗೆ ನೀರು ಇಲ್ಲದೆ ದಾಹಕ್ಕೆ ಬಲಿಯಾಗಬೇಕಾಗಿದೆ. 
ನಮ್ಮೂರಲ್ಲಿ ಪ್ರತಿ ಸೋಮುವಾರ ಸಂತೆಯ ದಿನ ಈ ಸಂದರ್ಭಕ್ಕೆ ನಮ್ಮೂರಿನ ಸುತ್ತ ಮುತ್ತಲಿನ ಪ್ರದೇಶದ ಜನ ಬಂದು ಸಂತೆ ಮಾಡಿಕೊಂಡು ಹೋಗುತ್ತಿದ್ದರು. ಆಗ ಸಾರಿಗೆ ವ್ಯವಸ್ಥೆ ಅಷ್ಟಾಗಿ ಇಲ್ಲದ ಸಂದರ್ಭದಲ್ಲಿ ಕಾಲ್ನಡಗಿಯಲ್ಲಿ ಬರುವ ಜನಕ್ಕೆ ದಾರಿಯಲ್ಲಿ ಕಡು ದಾಹವಾಗುವದು ವಾಡಿಕೆ. ಇಂಥ ಸಂದರ್ಭದಲ್ಲಿ ದಾರಿಯ ಪಕ್ಕದಲ್ಲಿರುವ ಮನೆಗಳಲ್ಲಿ ಕೇಳಿ ನೀರು ಪಡೆದು ಕುಡಿದು ತಮ್ಮ ದಾಹ ತೀರಿಸಿಕೊಳ್ಳುವುದಲ್ಲದೆ ಈ ಸಂದರ್ಭದಲ್ಲಿ ತಮ್ಮೂರಿನ ಆಗು ಹೋಗುಗಳನ್ನು ಒಬ್ಬೊಬ್ಬರು ಮಾತನಾಡುತ್ತಿದ್ದರು. ಬೇರೆ ಊರಿನವರು ಬಂದರೆ ಅವರಿಗೆ ನೀರು ಸಿಗಲಿ ಎಂಬ ಕಾರಣಕ್ಕೆ ಮನೆಯ ಮುಂದೆ ಒಂದು ಕೊಡ ನೀರು ಅದಕ್ಕೆ ಒಂದು ಗ್ಲಾಸ್ ಇಟ್ಟು ಮನೆಯವರು ಇರಲಿ ಬಿಡಲಿ ದಾಹವಾದರು ನೀರು ಕುಡಿದ ದಾಹ ತೀರಿಸಿಕೊಳ್ಳುತ್ತಿದ್ದರು. ದಾಹ ತೀರಿಸಿಕೊಳ್ಳುವಾಗ ಅವರ ಜಾತಿ ಮತಕ್ಕಿಂತ ಹೆಚ್ಚಾಗಿ ಅವರಲ್ಲಿ ಮಾನವೀಯ ಸಂಬಂಧಗಳು ಬೆಳೆದಿರುತ್ತಿದ್ದವು. ಇದರಿಂದಾಗಿ ಅಂದು ಸುತ್ತಲಿನ ಪ್ರಪಂಚದ ವಿದ್ಯಾಮಾನಗಳು ತಿಳಿಯುತ್ತಿದ್ದವು ಆದರೆ ಇಂದು ನಮ್ಮ ಮನೆಯ ಪಕ್ಕದಲ್ಲಿದ್ದವರ ಯಾರು ಎಂಬುದನ್ನು ಸಹ ಗೊತ್ತಾಗದಷ್ಟು ನಮ್ಮ ನಮ್ಮಲ್ಲಿ ಗೋಡೆಗಳನ್ನು  ಬೆಳೆದುಕೊಂಡಿದೆ ಮತ್ತು ಸದಾ ಬಾಗಿಲುಗಳನ್ನು ಹಾಕಿಕೊಂಡು ಇರಬೇಕಾದ ಸ್ಥಿತಿ ಇದೆ.
ಉತ್ತರ ಕರ್ನಾಟಕದ ಬಹುತೇಕ ಕಡೆ ಇಂಥ ದೃಶ್ಯಗಳನ್ನು ನೋಡುತ್ತಿದ್ದವು, ಅದೇ ರೀತಿ ದಕ್ಷಿಣ ಕನ್ನಡದ ಕಡೆ ಅಲ್ಲಿ ಯಾರೆ ಅತಿಥಿಗಳು ಬಂದರೆ ಅವರಿಗೆ ಕುಡಿಯಲು ನೀರಿನ ಜೊತೆಗೆ ಬೆಲ್ಲವನ್ನು ನೀಡುತ್ತಿದ್ದರು ಎಂಬುವುದನ್ನು ಶಿವರಾಮ ಕಾರಂತ ಕಾದಂಬರಿ  ಸೇರಿದಂತೆ ಅನೇಕ ಮಲೆನಾಡಿನ ಸಾಹಿತ್ಯದಲ್ಲಿ ಓದಿದ್ದೇವೆ. ಅಲ್ಲಿಯೂ ಈಗ ಜೀವಜಲ ನೀಡಲು ಹಿಂದಿರುವ ಸಂಸ್ಕೃತಿ ದೂರವಾಗಿದೆ ಈಗ ಒಂದು ಗ್ಲಾಸ್ ನೀರು ನೀಡಿದರೆ ತಮ್ಮ ಕಿಸೆಯಲ್ಲಿಯ ರೊಕ್ಕ ಹೋಗುತ್ತದೆ ಎಂಬ ಭಾವನೆ ನಮ್ಮಲ್ಲಿದೆ. ಕಾರಣ ಇಂದು ನಾವು ಸಹ ಕುಡಿಯಲು ತರುವದು ದುಡ್ಡು ಕೊಟ್ಟು ಶುದ್ದ ನೀರು ಎಂಬ ಪಿಲ್ಟರ ನೀರನ್ನು. ಕೆಲವು ಕಡೆ ಈ ನೀರು ೨ ರೂಪಾಯಿಯಿಂದ ೫೦ ರೂಪಾಯಿಯವರೆಗೂ ಖರ್ಚು ಮಾಡಿ ತಂದ ನೀರನ್ನು ದಾನವಾಗಿ ನೀಡುವದಕ್ಕೆ ಜನತೆ ಹಿಂಜರಿಯುತ್ತಿದ್ದಾರೆ. ಎಲ್ಲಿ ಒಂದು ಗ್ಲಾಸ್ ನೀರು ಕೊಟ್ಟರೆ ಮತ್ತೆ ದುಡ್ಡು ಕೊಟ್ಟ ತರಬೇಕಲ್ಲ ಎಂಬ ಚಿಂತೆಯಿಂದ ನೀರು ಕೊಡಲು ಜನತೆ ಹಿಂಜರಿದಿದ್ದು ನೀರು ಕೇಳಿದರೆ ಇಲ್ಲ ಹೋಗು ಎಂದು ಹೇಳುವುದು ಸಾಮಾನ್ಯವಾಗಿದೆ.
ಇನ್ನು ಮೊದಲು ಹೊಟೆಲ್‌ಗಳಲ್ಲಿ ಕುಡಿಯಲು ನೀರು ಕೇಳಿದರೆ ಬೈಯ್ದು ಕೊಳ್ಳುತ್ತಾ ನೀರು ಕೊಡುತ್ತಿದ್ದರು ಅವರು ಬೈಯ್ದುಕೊಳ್ಳುತ್ತಾ ನೀರು ನೀಡುತ್ತಿರುವದಕ್ಕೆ ಕಾರಣ ಅವರು ಸಹ ದುಡ್ಡು ಕೊಟ್ಟು ನೀರು ತಂದಿರುತ್ತಿದ್ದರು ಅದೇ ಪರಿಸ್ಥಿತಿ ಇಂದು ಮನೆ ಮನೆಗಳಲ್ಲಿಯೂ ಇದೆ. ಇನ್ನು ಹೊಟೆಲ್‌ಗಳಲ್ಲಿ ಕುಡಿವ ನೀರು ಕೇಳದರೆ ಬೇಕೆಂದಲೆ ಉಪ್ಪು ನೀರು ನೀಡುತ್ತಿದ್ದು ಬೇರೆ ನೀರು ಕೇಳಿದರೆ ಇಲ್ಲ ಎಂದು ಹೇಳುತ್ತಾರೆ, ಅಷ್ಟಕ್ಕೂ ನಮಗೆ ಶುದ್ಧ ನೀರು ಬೇಕೆಂದರೆ ಮತ್ತೆ ದುಡ್ಡು ಕೊಟ್ಟು ಬಾಟಲಿಯ ನೀರು ಖರೀದಿಸಬೇಕು. ಹೊಟೆಲ್‌ಗಳಲ್ಲಿ ಬಾಟಲಿ ನೀರು ಖರೀದಿಸಲಿ ಎಂಬ ಕಾರಣಕ್ಕೆ ಉಪ್ಪು ನೀರು ನೀಡುತ್ತಿದ್ದಾರೆ. ಬಹುತೇಕರು ಇತ್ತೀಚಿಗೆ ಹೊಟೆಲ್‌ಗಳಲ್ಲಿ ಹೋಗಿ ಅಲ್ಲಿ ಕೊಡುವ ನೀರಿಗಿಂತ ಬಾಟಲಿ ನೀರು ಖರೀದಿಸಿ ಕುಡಿಯವದನ್ನು ಕಾಣುತ್ತೇವೆ. ಒಂದು ವೇಳೆ ನೀವು ಮನೆಯಿಂದ ಬಾಟಲಿಯನ್ನು ತೆಗೆದುಕೊಂಡು ಹೋಗಿದ್ದು ದಾರಿಯ ಮಧ್ಯೆ ಈ ಬಾಟಲಿಯ ನೀರು ಖಾಲಿಯಾಗಿ ಹೊಟೆಲ್‌ನಲ್ಲಿ ಚಹ ಕುಡಿದೊ ಇಲ್ಲವೆ ಟಿಫನ್ ಮಾಡಿ ಖಾಲಿಯಾಗಿರುವ ಬಾಟಲಿಯಲ್ಲಿ ನೀರು ತುಂಬಿಕೊಳ್ಳಲು ಹೋಗಿ ಹೊಟೆಲ್‌ನವರು ಅದಕ್ಕೆ ಅವಕಾಶ ನೀಡುವುದಿಲ್ಲ ಕಾರಣ ಅವರಿಗೆ ಲಾಭ ತರುವಂಥ ಬಾಟಲಿ ನೀರು ಮಾರಾಟವಾಗಬೇಕಾಗಿದೆ.
ಪ್ರಾಣವಿರುವ ಎಲ್ಲಾ ವಸ್ತುಗಳಿಗೆ ನೀರು ಅವಶ್ಯವಾಗಿ ಬೇಕಾಗಿದ್ದು ಮನುಷ್ಯನಿಗೆ ಗಾಳಿ ನೀರು ಅವಶ್ಯವಾಗಿ ಬೇಕು ಆದರೆ ಜೀವಜಲವಾಗಿರುವ ಗಂಗೆಯನ್ನು ಪಡೆಯಲು ಅಂದು ಭಗೀರಥ ಮಹರ್ಷಿ ತಪ್ಪಸ್ಸು ಮಾಡಿ ಭೂಮಿಗೆ ನೀರು ತಂದ ಎಂದು ಹೇಳುತ್ತಿದ್ದರೆ ಇಂದು ಭೂಮಿಯಲ್ಲಿರುವ ಗಂಗೆಯನ್ನು ಶುದ್ಧ ಮಾಡಿ ಕುಡಿಯಲು ಹರಸಾಹಸ ಪಡಬೇಕು ಅಲ್ಲದೆ ತಮ್ಮ ದುಡಿಮೆಯಲ್ಲಿ ಸ್ವಲ್ಪ ಭಾಗವನ್ನು ನೀರಿಗಾಗಿ ಖರ್ಚು ಮಾಡಬೇಕಾದ ಅನಿವಾರ್ಯತೆ ಇದೆ. ಖರ್ಚು ಮಾಡದೆ ನೀರು ಸಿಗುವ ಕಾಲ ಈಗಾಗಲೆ ಹೋಗಿದ್ದು ಮುಂದಿನ ದಿನಗಳಲ್ಲಿ ಶುದ್ದವಾದ ಗಂಗೆ ದೊರೆಯುವದು ಅಸಾಧ್ಯವೇನೊ ಎಂಬಂತೆ ಸ್ಥಿತಿ ಬರುತ್ತದೆ ಎನ್ನಲಾಗುತ್ತದೆ.
ಹಿಂದೆ ನಾವು ಚಿಕ್ಕವರು ಇದ್ದಾಗ ಮೊದಲು ಬಿಸ್ಲೇರಿ ನೀರು ಬಂತು ಆ ಸಂದರ್ಭದಲ್ಲಿ ಅಂದಿನ ಪತ್ರಿಕೆಗಳಲ್ಲಿ ಮುಂದಿನ ದಿನಗಳಲ್ಲಿ ಕುಡಿವ ನೀರು ಪ್ರತಿ ಲಿಟರ್‌ಗೆ ೪೦ ರೂಪಾಯಿಯಾಗುವ ಸಾಧ್ಯತೆ ಇದೆ ಎಂದು ಬರೆದಿದ್ದರು ಅಂದು ಓದಿದ ನಾವು ಇದು ಎಗ್ಜಾಗೆರೇಷನ್ ವರದಿ ಎಂದುಕೊಂಡವರೆ ಹೆಚ್ಚು ಆದರೆ ಇದೇ ವರದಿ ಕೇವಲ ೨೦ ವರ್ಷಗಳಲ್ಲಿ ಸತ್ಯವಾಗಿದೆ. ಅಂದು ಬೇರೆ ಊರಿಗೆ ಹೋಗುವಾಗ ನಮ್ಮ ಹಿರಿಯರು ಹೊಟ್ಟೆ ತುಂಬಾ ನೀರು ಕುಡಿ ಎಂದು ಹೇಳುತ್ತಿದ್ದರು ಯಾಕಂದರೆ ಅವರು ಪ್ರಯಾಣಿಸುವ ಬಸ್‌ಗಳಲ್ಲಿ ನೀರು ಸಿಗುತ್ತಿರಲಿಲ್ಲ. ಆದರೆ ಇಂದು ಜನತೆ ಯಾವುದೇ ಊರಿಗೆ ಹೋಗಲಿ ಅವರು ಕೈಯಲ್ಲಿ ಆಗ ತಾನೇ ಖರೀದಿಸಿ ನೀರಿನ ಬಾಟಲಿ ಇರುತ್ತದೆ. ಈ ಬಾಟಲಿಯ ನೀರು ಖಾಲಿಯಾಗುತ್ತಿದ್ದಂತೆ ಅದನ್ನು ನಾಶ ಮಾಡಿ ಎಂದು ಬಾಟಲಿಗಳ ಮೇಲೆ ಬರೆದಿರುತ್ತಾರೆ ಕಾರಣ ಬಾಟಲಿ ನೀರು ತಯಾರಕರಿಗೆ ಹೊಸ ಬಾಟಲಿಯಲ್ಲಿರುವ ನೀರನ್ನು ಜನತೆ ಖರೀದಿಸಬೇಕು.
ಬಹುತೇಕ ಕಡೆ ಇರುವ ನೀರನ್ನಲ್ಲಿ ಖನಿಜವನ್ನು ತೆಗೆದು ಶುದ್ಧ ನೀರು ಎಂದು ಮಾರಾಟ ಮಾಡಲಾಗುತ್ತದೆ. ಬೇಸಿಗೆ ಸಂದರ್ಭದಲ್ಲಂತೂ ನೀರು ಮಾರಾಟದ್ದು ದೊಡ್ಡ ಬಿಜಿನೆಸ್ ಆಗುತ್ತದೆ. ಅದಕ್ಕಾಗಿ ಐಎಸ್‌ಐ ಮಾರ್ಕು ಇರುವ ನೀರು ಕುಡಿಯಿರಿ ಎಂಬ ಸಂದೇಶವನ್ನು ಸಹ ಸರ್ಕಾರ ಪರೋಕ್ಷವಾಗಿ ನೀಡಿದೆ.
ಪ್ರಕೃತಿದತ್ತವಾಗಿ ದೊರೆಯುವ ನೀರು ಕುಡಿದು ದಷ್ಟಪುಷ್ಟವಾಗಿದ್ದ ನಮ್ಮ ಹಿರಿಯರ ಮುಂದೆ ಇಂದು ಫ್ಯೂರಿಫೈ ನೀರು ಎಂದು ಕುಡಿದು ಇಲ್ಲದ ರೋಗವನ್ನು ಅಂಟಿಸಿಕೊಳ್ಳುವದನ್ನು ನೋಡುತ್ತಿದ್ದೇವೆ. ಅಂದು ನಮ್ಮ ದೇಹ ಪರಿಸರದಲ್ಲಿರುವ ನೀರು ಕುಡಿದರೂ ಅದರಲ್ಲಿರುವ ರೋಗವಾಹಕಗಳನ್ನು ತಡೆಯುವ ಶಕ್ತಿ ಹೊಂದಿತ್ತು ಆದರೆ ಈಗ ಈ ದೇಹದಲ್ಲಿ ಎಲ್ಲವೂ ಹೈಬ್ರಿಡ್ ಇದರಿಂದಾಗಿ ನಾವು ಕುಡಿವ ನೀರನಲ್ಲಿ ಸ್ವಲ್ಪ ಪ್ರಮಾಣದ ಕಲ್ಮಶವಿದ್ದರೂ ನಮಗೆ ಆರೋಗ್ಯ ಕೆಡುತ್ತದೆ. ಅಂದು ನಮ್ಮ ಮಕ್ಕಳು ಮಳೆಯಲ್ಲಿ ನೆನೆದು ಕೆಸರಿನಲ್ಲಿ ಕುಣಿಯುತ್ತಿದ್ದರೂ ಅಷ್ಟಾಗಿ ತಲೆಕೆಡಿಸಿಕೊಳ್ಳದ ನಾವು ಇಂದು ನಮ್ಮ ಮಕ್ಕಳು ಎಲ್ಲಿ ಯಾವುದಾದರೂ ನೀರು ಕುಡಿದು ಆರೋಗ್ಯ ಕೆಡಿಸಿಕೊಳ್ಳುತ್ತಾರೆ ಎಂಬ ಚಿಂತೆಯಲ್ಲಿರುವದನ್ನು ಕಾಣುತ್ತೇವೆ. ಇದೆಲ್ಲವನ್ನು ನೋಡಿದರೆ ಜಾಗತಿಕರಣ ನಮ್ಮಲ್ಲಿ ಎಷ್ಟು ಪ್ರಮಾಣದ ಆಳದಲ್ಲಿ ಬೇರೂರಿದೆ ಎಂಬುವುದು ತಿಳಿಯಲಿದೆ.
                                   ಶರಣಪ್ಪ ಬಾಚಲಾಪುರ
                                     ಹನುಮಸಾಗರ
—————————————————

Leave a Reply

Top