ಹಜರತ್ ಗೌಸಲ್ ಆಜಂ ದಸ್ತಗೀರ್(ರ)ರವರ ಗ್ಯಾರವಿ ಹಬ್ಬ ಆಚರಣೆ

ಎಲ್ಲರೊಂದಿಗೆ ಕೋಮು ಸೌಹಾರ್ದತೆ ರಾಷ್ಟ್ರೀಯ ಭಾವೈಕ್ಯತೆಯೊಂದಿಗೆ ಜೀವನ ಸಾಗಿಸಬೇಕು. ಜನರಲ್ಲಿ ಭಯ ಉದ್ಬವಿಸುವುದು ಭಯೋತ್ಪಾದನೆಯಂತಹ ಕ್ರೂರ ಚಟುವಟಿಕೆ ನಡೆಸುವವರನ್ನು ನಮ್ಮ ಇಸ್ಲಾಂಧರ್ಮ ಸಹಿಸುವುದಿಲ್ಲ. ಅಂತಹವರನ್ನು  ಯಾವೊಬ್ಬ ವ್ಯಕ್ತಿಯು ಕ್ಷಮಿಸುವುದಿಲ್ಲ ಶಾಂತಿ ನೆಮ್ಮದಿಯ ಮತ್ತು ಸಹಬಾಳ್ವೆಯನ್ನು ಧರ್ಮ ಕಲಿಸುತ್ತದೆ. ನಮ್ಮ ಜೀವನ ಭಾವೈಕ್ಯತೆಯಿಂದ ನಡೆಸಬೇಕು ಅಂದಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ವಿಜಯಾಪುರದ ಮೌಲಾನಾ ಅಬೂಬಕರ ಅಶ್ರಫಿ ಹೇಳಿದರು.

ಅವರು ನಗರದ ಪಂಜುಂ ಪಲ್ಟನ್ ಮಸೀದಿ ಬಳಿ ನೌಜವಾನ ಕಮೀಟಿ, ಪಂಚಕಮೀಟಿ ವತಿಯಿಂದ ಗ್ಯಾರವಿ ಹಬ್ಬದ ಪ್ರಯುಕ್ತ ಏರ್ಪಡಿಸಿದ್ದ ಹಜರತ್ ಗೌಸಲ್ ಆಜಂ ದಸ್ತಗೀರ್(ರ)ರವರ ಜೀವನ ಚರಿತ್ರೆ ಕುರಿತು    ಏರ್ಪಡಿಸಿದ ಕಾರ್ಯಕ್ರಮದಲ್ಲಿ ಬಹಿರಂಗ ಸಾರ್ವಜನಿಕ ಸಭೆಯಲ್ಲಿ ವಿಶೇಷ ಆಮಂತ್ರಿತರಾಗಿ ಪಾಲ್ಗೊಂಡುಮಾತನಾಡುತ್ತಿದ್ದ ಅವರು, ಗೌಸೇಪಾಕ್ ರವರು ಹಾಕಿಕೊಟ್ಟಮಾರ್ಗದಲ್ಲಿ ನಾವು ನಡೆದರೆ ಜೀವನ ಸಾರ್ಥಕವಾಗುತ್ತದೆ ಎಂದರು.
   ಮುಂದುವರೆದು ಮಾತನಾಡಿದ ಅವರು, ಜನರಲ್ಲಿ ಭಯದ ವಾತಾವರಣ ನಿರ್ಮಿಸುವವರು ಅಮಾಯಕ ಜನರಿಗೆ ಅನಾವಶ್ಯಕ ಕಿರುಕುಳ ತೊಂದರೆ ಕೊಡುವವರು ನಮ್ಮ ಪ್ರವಾದಿ ಮಹ್ಮದ್ (ಸ) ಫೈಗಂಬರ ಹಾಗೂ ಗೌಸೇಪಕ್  ಅವರ ಅನುಯಾಯಿಗಳು ಆಗಲು ಸಾಧ್ಯವಿಲ್ಲ. ಅವರು ಶಾಂತಿ, ಸಹಬಾಳ್ವೆ, ಭಾವೈಕ್ಯತೆಯ ಜೀವನಕ್ಕೆ ಸಂದೇಶ ನೀಡಿದ್ದಾರೆ. ಅವರ ಈ ಗ್ಯಾರವಿ ಹಬ್ಬ ಅವರ ಅನುಯಾಯಿಗಳಿಗೆ ದಾರಿದೀಪವಾಗಲಿ ನಾವು ನಮ್ಮ ಈ ಹಬ್ಬವನ್ನು ಸಂಭ್ರಮದೊಂದಿಗೆ ಇತರ ಎಲ್ಲಾ ಬಾಂಧವರೊಂದಿಗೆ ಸೌಹಾರ್ದತೆಯುತವಾಗಿ ಆಚರಿಸಿಕೊಳ್ಳಬೇಕು. ಅಂದಾಗ ಮಾತ್ರ ಇಂತಹ ಹಬ್ಬಗಳಿಗೆ ನಿಜವಾದ ಅರ್ಥ ಬರುತ್ತದೆ ಎಂದು ವಿಜಯಾಪುರದ ಮೌಲಾನಾ  ಅಬೂಬಕರ್ ಅಶ್ರಫಿ ಹೇಳಿದರು. 
   ಕಾರ್ಯಕ್ರಮದಲ್ಲಿ  ಮೌಲಾನಾ ಅಲ್‌ಹಾಜ್ ಮಹಮ್ಮದ್ ಬಕ್ಷಿ ಸಾಹೇಬ್ ನಕ್ಷಬಂದಿ ಉಲ್ ಖಾದ್ರಿ ಹಾಗೂ ಕೌತಾಳಂ ದರ್ಗಾದ ಪೀಠಾಧಿಪತಿ ಖಾದರಲಿಂಗಬಾಬಾ ಜಗದ್‌ಗುರು ರವರು ಸಾನಿಧ್ಯ ವಹಿಸಿದ್ದರು.  ಮೌಲಾನಾ ಮುಫ್ತಿ ನಜೀರ ಅಹ್ಮದ್ ಖಾದ್ರಿ ತಸ್ಕೀನಿ ಮಾತನಾಡಿ, ಗೌಸೇಪಾಕ್ ಅವರ ಜೀವನ ಚರಿತ್ರೆ ಕುರಿತು ವಿವರಿಸಿದರು. ಜಿಲ್ಲಾ ವಕ್ಫ್ ಬೋರ್ಡ್ ಕಮೀಟಿ ಅಧ್ಯಕ್ಷ ಮಹ್ಮದ್ ಮುಸ್ತಫಾ ಕಮಾಲ್ ಖಾದ್ರಿ ತಸ್ಕೀನಿ. ಮೌಲಾನಾ ಹಾಫಿಜ್ ಮೊಹಿದ್ದೀನ್ ಖಾದ್ರಿ, ಮುಹಮ್ಮದ್ ಮಹೆಬೂಬ ಷಾ ಖಾದ್ರಿ ಚಿಷ್ತಿ, ಮಹ್ಮದ್ ನಾಸೀರ ಅಹ್ಮದ್ ತಸ್ಕೀನಿ ಸೇರಿದಂತೆ ಸಯ್ಯದ್ ಫೌಂಡೇಶನ್ ಅಧ್ಯಕ್ಷ ಕೆ.ಎಂ.ಸಯ್ಯದ್, ಪತ್ರಕರ್ತ ಎಂ.ಸಾದಿಕ್‌ಅಲಿ ಸೇರಿದಂತೆ  ಅನೇಕರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Please follow and like us:
error