ಗಡ್ಡಬಿಟ್ಟವರೆಲ್ಲಾ ಸಾಧು ಸಂತರಾಗಲು ಸಾಧ್ಯವಿಲ್ಲ-ಗೊಳಸಂಗಿ

ಕೊಪ್ಪಳ, ಫೆ. ೧೯. ಧರ್ಮ ಈ ದೇಶದಲ್ಲಿ ಅತ್ಯಂತ ಪ್ರಕರವಾಗಿದೆ, ದೇಶದ ಉದ್ದಗಲಕ್ಕೂ ಇರುವ ಸ್ವಾಮಿಗಳು, ಗಡ್ಡಬಿಟ್ಟವರೆಲ್ಲಾ ಸಾಧು ಸಂತರಾಗಲು ಸಾಧ್ಯವಿಲ್ಲ ಎಂದು ಹುಲಕೋಟಿಯ ಪ. ಪೂ. ಕಾಲೇಜಿನ ಉಪನ್ಯಾಸಕರು, ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯ ಅಧ್ಯಕ್ಷ ಡಾ|| ಅರ್ಜುನ ಗೊಳಸಂಗಿ ಅಭಿಪ್ರಾಯಪಟ್ಟರು.
ಅವರು ನಗರದ ಶ್ರೀ ಗವಿಸಿದ್ಧೇಶ್ವರ ಮಠದಲ್ಲಿ ನಡೆದ ೬೬ ನೇ ಬೆಳಕಿನೆಡೆಗೆ ಮಾಸಿಕ ಶಿವರಾತ್ರಿ ಅಮವಾಸ್ಯೆಯ ಬೆಳಕಿನೆಡೆಗೆ ಕಾರ್ಯಕ್ರಮ ಹಾಗೂ ಸಂಗೀತ ಕಾರ್ಯಕ್ರಮದ ಅಧ್ಯಕ್ಷತೆವಹಿಸಿಕೊಂಡು ಮಾತನಾಡಿದರು.
ದೇಶದಲ್ಲಿ ಮತ್ತೊಮ್ಮೆ ಬುದ್ಧ-ಬಸವ-ಅಂಬೇಡ್ಕರ ಹುಟ್ಟಿ ಬರಲು ಸಾಧ್ಯವಿಲ್ಲ, ಒಂದು ವೇಳೆ ಅಪ್ಪಿತಪ್ಪಿ ಬಂದರೆ ನಾವ್ಯಾರೂ ಅವರನ್ನು ಇಲ್ಲಿ ಬದುಕಲು ಬಿಡುವದಿಲ್ಲ ಅಂಥಹ ಹೀನಾಯ ಸ್ಥಿತಿಗೆ ನಾವು ತಲುಪಿದ್ದೇವೆ, ಶರಣರು ವಚನಗಳಲ್ಲಿ ಹೇಳಿರುವದನ್ನು ರಾಜಕೀಯ ಧುರೀಣರು, ಸ್ವಾಮಿಗಳು, ಭಾಷಣಕಾರರು ಮತ್ಯಾರಿಗೂ ವಾಸ್ತವದಲ್ಲಿ ಅನುಸರಿಸಲು ಸಾಧ್ಯವೇ ಇಲ್ಲ ಎಂಬುದನ್ನು ನಾವು ಅರಿತುಕೊಂಡು ನಡೆಯಬೇಕು.
ಅಂಬೇಡ್ಕರ ಅಂದು ಮನುಸ್ಮೃತಿಯನ್ನು ಸುಟ್ಟು ಹಾಕಿ ಶೋಷಿತರಿಗೆ ನಿಜವಾದ ಅರ್ಥವನ್ನು ತಿಳಿಸಲು ಪ್ರಯತ್ನಿಸಿದರು, ಬಸವಣ್ಣ ಇದ್ದ ಕಾಲ ಅತ್ಯಂತ ಕ್ಲಿಷ್ಟ ಮತ್ತು ಕಷ್ಟಕರ ಪರಿಸ್ಥಿತಿಯಲ್ಲಿಯೂ ಅಣ್ಣ ಬಸವಣ್ಣ ದಲಿತ, ಶೋಷಿತರ ರಕ್ಷಣೆಗೆ ಸಾಮಾಜಿಕ ನ್ಯಾಯ ಕೊಡಿಸಲು ನಿಂತರು, ಅದರಂತೆ ಬರೆದರು ಅದರಂತೆ ಬಾಳಿದರು, ಬಸವಣ್ಣನಿಗೆ ಬಸವಣ್ಣನೆ ಸಾಟಿ, ಅವರ ಮಾತು ಮತ್ತು ಕೃತಿ ಎರಡೂ ಮಾಣಿಕ್ಯ. ಐಎಎಸ್ ಅಧಿಕಾರಿ ಶಿವರಾಂರ ಪತ್ನಿಗೂ ದೇವಸ್ಥಾನದ ಒಳಗಡೆ ಪ್ರವೇಶ್ ನಿರಾಕರಿಸಿದ ಪುರೋಹಿತಶ್ಯಾಹಿ ವ್ಯವಸ್ಥೆಯನ್ನು ನಾವು ಧಿಕ್ಕರಿಸಲೇಬೇಕು ಎಂದರು. ಮೈಸೂರಿನಲ್ಲಿ ಭಗವದ್ಗೀತೆ ವಿರುದ್ಧ ಮಾತನಾಡಿದ ನಾಲ್ಕು ಜನ ಸಾಹಿತಿಗಳ ಮೇಲೆ ಕೇಸ್ ಹಾಕುತ್ತಾರೆ, ಆದರೆ ಅದೇ ಭಗವದ್ಗೀತೆಯನ್ನು ದೇಶದ ಶ್ರೇಷ್ಟ ಕೃತಿ ಎಂದು ಹೇಳಿದವರ, ಅದನ್ನು ಶ್ರೇಷ್ಟ ಕೃತಿ ಮಾಡಲು ಹೊರಟವರ ಬಗ್ಗೆ ಯಾರು ಮಾತನಾಡುವದಿಲ್ಲವೆಂಬುದು ಈ ದೇಶದ ಘೋರ ದುರಂತವೆಂದರು.
ಮುಖ್ಯ ಅತಿಥಿಗಳಾಗಿ ಪಾಲ್ಗೊಂಡ ಸಿಂಧನೂರ ತಾಲೂಕ ಶರಣ ಸಾಹಿತ್ಯ ಪರಿಷತ್ತಿನ ಗೋವಿಂದರಾಜ ಬಾರಕೇರ ಮಾತನಾಡಿದ ಅವರು, ದೇಶದಲ್ಲಿ ಧರ್ಮ ಸಹಿಷ್ಣುತಗೆ ಶರಣರು ಹಾಕಿಕೊಟ್ಟ ಮಾರ್ಗದಲ್ಲಿ ನಡೆಯಬೇಕಿದೆ. ಕೋಮು ಸಾಮರಸ್ಯ ದೇಶಕ್ಕೆ ಅತ್ಯಂತ ಅವಶ್ಯಕವಾಗಿದೆ ಮಠದ ಅಂಗಳದಲ್ಲಿ ನಡೆಯು ಇಂಥಹ ಕಾರ್ಯಕ್ರಮಗಳಲ್ಲಿ ಜನರನ್ನು ಎಚ್ಚರಿಸುವ ಕೆಲಸವಾಗಬೇಕು, ಸೂಕ್ಷ್ಮ ಸಂವೇದನೆಯ ಮಠದ ಶ್ರೀಗಳ ಯೋಚನೆ ಮೆಚ್ಚುವಂಥಹದು ಎಂದರು.
ಗವಿಮಠದ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು, ಉಪನ್ಯಾಸಕರಾದ ಡಾ|| ಪ್ರಕಾಶ ಬಳ್ಳಾರಿ, ಡಾ|| ಸಿದ್ಧಲಿಂಗಪ್ಪ ಕೊಟ್ನೆಕಲ್ ನೂರಾರು ಭಕ್ತರು ಪಾಲ್ಗೊಂಡಿದ್ದರು.
ಮೋರನಾಳ ಗ್ರಾಮದ ಕೇಶಪ್ಪ ಶಿಳ್ಳಿಕ್ಯಾತರ ತೊಗಲು ಗೊಂಬೆ ಆಟ ಪ್ರದರ್ಶನ ಮಾಡಿದರು. ಜನರಿಗೆ ನಾಟಿ ವೈದ್ಯ ಪದ್ಧತಿ ಮೂಲಕ ಸಮಾಜ ಸೇವೆಯನ್ನು ಮಾಡುತ್ತಿರುವ ನರೇಂದ್ರ ಗುಡದೂರ, ಕಾರ್ಯಕ್ರಮದ ಭಕ್ತಿ ಸೇವೆಗೈದ ಕೊಪ್ಪಳದ ಯುವ ಉದ್ಯಮಿ, ವಿಶ್ವ ಆಫ್‌ಸೆಟ್ ಪ್ರಿಂಟರ‍್ಸ್‌ನ ಮಂಜುನಾಥ ಜಿ. ಗೊಂಡಬಾಳರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಶಕುಂತಲಾ ಬೆನ್ನಾಳ ಪ್ರಾರ್ಥಿಸಿದರು, ಉಪನ್ಯಾಸಕ ಶರಣಬಸಪ್ಪ ಬಿಳಿಯೆಲೆ ನಿರೂಪಿಸಿದರು. 
Please follow and like us:
error