You are here
Home > Koppal News > ಹೆಚ್ಚಿನ ಬಡ್ಡಿ ದರ ವಸೂಲಿ ಮಾಡುವವರ ಪರವಾನಿಗೆ ರದ್ದು – ಡಾ. ಜಿ. ಉಮೇಶ್ ಎಚ್ಚರಿಕೆ.

ಹೆಚ್ಚಿನ ಬಡ್ಡಿ ದರ ವಸೂಲಿ ಮಾಡುವವರ ಪರವಾನಿಗೆ ರದ್ದು – ಡಾ. ಜಿ. ಉಮೇಶ್ ಎಚ್ಚರಿಕೆ.

ಕೊಪ್ಪಳ, ಜು.೧೬ ಸರ್ಕಾರ ನಿಗದಿಪಡಿಸಿರುವ ಬಡ್ಡಿ ದರಕ್ಕಿಂತ ಹೆಚ್ಚಿನ ಬಡ್ಡಿ ದರ ವಸೂಲಿ ಮಾಡುವಂತಹ ಕೊಪ್ಪಳ ಜಿಲ್ಲೆಯ ಎಲ್ಲಾ ಲೇವಾದೇವಿ, ಗಿರವಿ ಹಾಗೂ ಹಣಕಾಸು ಸಂಸ್ಥೆಗಳ ಪರವಾನಿಗೆಯನ್ನು ರದ್ದುಪಡಿಸಿ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಕೊಪ್ಪಳ ಜಿಲ್ಲಾ ಲೇವಾದೇವಿ ನಿಬಂಧಕ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕ ಡಾ. ಜಿ. ಉಮೇಶ ಎಚ್ಚರಿಕೆ ನೀಡಿದ್ದಾರೆ.
     ಕೊಪ್ಪಳ ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲಾ ಲೇವಾದೇವಿ, ಗಿರವಿ ಹಾಗೂ ಹಣಕಾಸು ಸಂಸ್ಥೆಗಳು ಗ್ರಾಹಕರಿಗೆ ನೀಡುವ ಸಾಲದ ಮೇಲೆ ಭದ್ರತೆ ಇರುವ ಸಾಲಗಳಿಗೆ ಸಾಲಿಯಾನ ಶೇ.೧೪ ಹಾಗೂ ಭದ್ರತೆ ಇಲ್ಲದೆ ಇರುವ ಸಾಲಗಳಿಗೆ ಸಾಲಿಯಾನ ಶೇಕಡಾ.೧೬ ದರದಂತೆ ಮಾತ್ರ ಬಡ್ಡಿ ಪಡೆಯಬೇಕು. ಈ ದರಕ್ಕಿಂತ ಹೆಚ್ಚಾಗಿ ಬಡ್ಡಿ ವಸೂಲಿ ಮಾಡಿದಲ್ಲಿ ಅಂತವರ ಪರವಾನಿಗೆಯನ್ನು ರದ್ದುಪಡಿಸಲಾಗುವುದು. ಅಲ್ಲದೆ, ಅವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು. ಲೇವಾದೇವಿ ಸಂಸ್ಥೆಗಳು, ವ್ಯವಹಾರ ಮಾಡುವ ಸಂಸ್ಥೆಗಳಲ್ಲಿ ತಾವು ಪಡೆಯುವ ಬಡ್ಡಿ ದರವನ್ನು ಕಡ್ಡಾಯವಾಗಿ ಪ್ರದರ್ಶಿಸಬೇಕು ಹಾಗೂ ಪಾನ್ ಟಿಕೆಟ್‌ನ್ನು ಕನ್ನಡದಲ್ಲಿ ಮುದ್ರಿಸಿ ನಿರ್ವಹಿಸಬೇಕು. ಯಾವುದೇ ವ್ಯಕ್ತಿ ಅಥವಾ ಸಂಸ್ಥೆಯು ಪರವಾನಿಗೆ ಪಡೆಯದೇ ಅಕ್ರಮವಾಗಿ ಲೇವಾದೇವಿ ವ್ಯವಹಾರ ನಡೆಸುತ್ತಿರುವುದು ಕಂಡುಬಂದಲ್ಲಿ ಅಂತಹವರ ವಿರುದ್ಧವೂ ಸಹ ಲೇವಾದೇವಿ ಕಾಯ್ದೆಯಡಿ ಕ್ರಮ ಕೈಗೊಳ್ಳುವುದರ ಜೊತೆಗೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
     ನಿಗದಿತ ದರಕ್ಕಿಂದ ಹೆಚ್ಚಿನ ಬಡ್ಡಿದರ ವಸೂಲಿ ಮಾಡುವಂತಹ ಪ್ರಕರಣಗಳು ಕಂಡುಬಂದಲ್ಲಿ ಸಾರ್ವಜನಿಕರು ಸಹಕಾರ ಸಂಘಗಳ ಉಪನಿಬಂಧಕರ ಕಛೇರಿ, ಕೊಪ್ಪಳ ಜಿಲ್ಲೆ, ಕೊಪ್ಪಳ ದೂ: ೦೮೫೩೯-೨೨೧೧೦೯ ಅಥವಾ ಸಹಕಾರ ಸಂಘಗಳ ಸಹಾಯಕ ನಿಬಂಧಕರು, ಕೊಪ್ಪಳ ಉಪ ವಿಭಾಗ, ಕೊಪ್ಪಳ ದೂ: ೦೮೫೩೯-೨೨೧೬೦೧ ಇವರಲ್ಲಿ ದೂರು ನೀಡಬಹುದಾಗಿದೆ ಎಂದು ಕೊಪ್ಪಳ ಜಿಲ್ಲಾ ಲೇವಾದೇವಿ ನಿಬಂಧಕ ಹಾಗೂ ಸಹಕಾರ ಸಂಘಗಳ ಉಪ ನಿಬಂಧಕ ಡಾ. ಜಿ ಉಮೇಶ ತಿಳಿಸಿದ್ದಾರೆ.  
ಸ್ವಚ್ಛ ಭಾರತ ಅಭಿಯಾನದಲ್ಲಿ ಕೊಪ್ಪಳ ಜಿಲ್ಲೆಯ ಯಶೋಗಾಥೆ ಜು. ೧೭ ರಂದು ಚಂದನದಲ್ಲಿ ಪ್ರಸಾರ
ಕೊಪ್ಪಳ ಜು. ೧೬ ಸ್ವಚ್ಛ ಗ್ರಾಮ-ಸ್ವಚ್ಛ ಭಾರತ ನಿರ್ಮಾಣದ ನಿಟ್ಟಿನಲ್ಲಿ ಸ್ವಚ್ಛ ಭಾರತ ಅಭಿಯಾನದಡಿ ಕೊಪ್ಪಳ ಜಿಲ್ಲೆ ಸಾಧಿಸಿರುವ ಪ್ರಗತಿಯ ಯಶೋಗಾಥೆ ಕುರಿತ ಕಾರ್ಯಕ್ರಮ ಜು. ೧೭ ರಂದು ಸಂಜೆ ೬ ಗಂಟೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.
     ವಯಕ್ತಿಕ ಶೌಚಾಲಯ ನಿರ್ಮಾಣ, ತಿಪ್ಪೆ ಗುಂಡಿಗಳ ನಿರ್ವಹಣೆ ಹಾಗೂ ಸ್ವಚ್ಛತೆ ಕುರಿತ ಹಲವು ಕಾರ್ಯಕ್ರಮಗಳಲ್ಲಿ ಕೊಪ್ಪಳ ಜಿಲ್ಲೆ ರಾಜ್ಯದಲ್ಲಿಯೇ ಉಳಿದೆಲ್ಲ ಜಿಲ್ಲೆಗಳಿಗಿಂತ ಉತ್ತಮ ಸಾಧನೆ ತೋರಿದ್ದು, ಈ ಯಶೋಗಾಥೆ ಕುರಿತು ಕಳೆದ ತಿಂಗಳು ದೂರದರ್ಶನ ಚಂದನ ವಾಹಿನಿಯ ತಂಡ ಜಿಲ್ಲೆಯಲ್ಲಿ ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಗ್ರಾಮಗಳಲ್ಲಿ ಸಂಚರಿಸಿ, ಚಿತ್ರೀಕರಣ ನಡೆಸಿತ್ತು.  ಈ ಕುರಿತ ಕಾರ್ಯಕ್ರಮ ಜು. ೧೭ ರಂದು ಸಂಜೆ ೬ ಗಂಟೆಗೆ ದೂರದರ್ಶನ ಚಂದನ ವಾಹಿನಿಯಲ್ಲಿ ಪ್ರಸಾರವಾಗಲಿದೆ.  ಸಾರ್ವಜನಿಕರು ಈ ಕಾರ್ಯಕ್ರಮವನ್ನು ವೀಕ್ಷಿಸಿ, ಜಿಲ್ಲೆಯನ್ನು ಸಂಪೂರ್ಣ ಬಯಲು ಬಹಿರ್ದೆಸೆ ಮುಕ್ತ ಜಿಲ್ಲೆಯನ್ನಾಗಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ನಡೆಸುವಂತೆ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿವಾಹಕ ಅಧಿಕಾರಿ ಕೃಷ್ಣ ಉದಪುಡಿ ಅವರು ಮನವಿ ಮಾಡಿಕೊಂಡಿದ್ದಾರೆ.

Leave a Reply

Top