fbpx

ಸಾಮಾಜಿಕ ಅಸಮತೋಲನ ನಿವಾರಣೆಗೆ ಸಮೀಕ್ಷೆ ಸಹಕಾರಿ

ಭಾರತ ದೇಶ ವಿವಿಧತೆಯಲ್ಲಿ ಏಕತೆಯನ್ನು ಹೊಂದಿರುವ, ಹಲವು ಭಾಷೆ, ಸಂಸ್ಕೃತಿಗಳನ್ನು ಒಂದಕ್ಕೊಂದು ಪೂರಕವಾಗಿ ಬೆಸೆದಿರುವ ರಾಷ್ಟ್ರವಾಗಿದೆ. ಭಾರತ ಮಾತೆಯ ಹೆಮ್ಮೆಯ ಪುತ್ರಿಯಾಗಿರುವ ಕರ್ನಾಟಕ ರಾಜ್ಯವೂ ಸಹ ವಿವಿಧ ಸಂಸ್ಕೃತಿ, ಭಾಷೆ, ಪ್ರಾದೇಶಿಕವಾಗಿ ವೈವಿಧ್ಯತೆಯನ್ನು ಹೊಂದಿದೆ.  ಈ ರಾಜ್ಯದಲ್ಲಿ ಹಲವಾರು ಭಾಷೆಗಳನ್ನಾಡುವವರು, ವಿವಿಧ ಜಾತಿ, ಧರ್ಮದವರು ನೆಮ್ಮದಿಯಿಂದ ನೆಲೆಸಿದ್ದಾರೆ.

  ಎಲ್ಲ ಜಾತಿ, ಜನಾಂಗದವರಿಗೆ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ನಮ್ಮ ರಾಜ್ಯ ನಿಜಕ್ಕೂ ಅದ್ಭುತ ಸಾಧನೆಯನ್ನೇ ತೋರಿದೆ.  ರಾಜ್ಯದಲ್ಲಿ ನೆಲೆಕಂಡಿರುವ ಹಲವಾರು ವರ್ಗದವರ, ನಾನಾ ಭಾಷಿಕರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿಗಳ ಬಗ್ಗೆ ಸಮಗ್ರ, ನೈಜ ಹಾಗೂ ನಿಖರ ಮಾಹಿತಿಯನ್ನು ಸಂಗ್ರಹಿಸಲು ಇದೀಗ ರಾಜ್ಯ ಸರ್ಕಾರ ಮುಂದಾಗಿರುವುದು ನಿಜಕ್ಕೂ ಸ್ವಾಗತಾರ್ಹ ಬೆಳವಣಿಗೆಯಾಗಿದೆ.  ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಈ ಕಾರ್ಯವನ್ನು ಕೈಗೆತ್ತಿಕೊಂಡಿದ್ದು, ೮೪ ವರ್ಷಗಳ ನಂತರ ಇದೇ ಮೊದಲ ಬಾರಿಗೆ ಏ. ೧೧ ರಿಂದ ೩೦ ರವರೆಗೆ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿಗಳ ಸಮೀಕ್ಷೆ ನಡೆಯಲಿದೆ.
ಸಮೀಕ್ಷೆ ಏಕೆ ಬೇಕು ? : ಭಾರತ ದೇಶದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಜಾತಿವಾರು ಜನಗಣತಿ ೧೮೭೨ ರಲ್ಲಿ ನಡೆದಿದೆ.  ಅಲ್ಲದೆ ೧೮೮೧ ರಲ್ಲಿ ಸಮೀಕ್ಷೆ ಅತ್ಯಂತ ವೈಜ್ಞಾನಿಕವಾಗಿ ಜರುಗಿದೆ.  ಆಗಿನಿಂದ ೧೯೩೧ ರವರೆಗೂ ಇದೇ ರೀತಿ ಗಣತಿ ಕಾರ್ಯ ನಡೆದಿದೆ.  ೧೯೩೧ ರ ನಂತರ ಇದುವರೆಗೂ ಹಿಂದುಳಿದ ವರ್ಗವಾರು, ಜಾತಿವಾರು ಸಮೀಕ್ಷಾ ಕಾರ್ಯ ವೈಜ್ಞಾನಿಕವಾಗಿ ರಾಷ್ಟ್ರ ಅಥವಾ ರಾಜ್ಯ ಮಟ್ಟದಲ್ಲಿ ನಡೆದಿಲ್ಲ.  ಇದರಿಂದಾಗಿ ಯಾವುದೇ ಹಿಂದುಳಿದ ವರ್ಗಗಳ ಸಂಖ್ಯೆ ಹಾಗೂ ಸ್ಥಿತಿ-ಗತಿಗಳು ಅಂದಾಜು ಆಧಾರದಲ್ಲಿಯೇ ಮಾಡಲಾಗುತ್ತಿದೆ.  ನಮ್ಮ ದೇಶದಲ್ಲಿ ಜಾತಿ ವ್ಯವಸ್ಥೆ ವಾಸ್ತವಿಕ ಮತ್ತು ಬಹಳಷ್ಟು ಸಂಕೀರ್ಣವಾಗಿದೆ.  ಪ್ರಜಾಪ್ರಭುತ್ವ ಆಧಾರಿತ ನಮ್ಮ ಸಂವಿಧಾನವು ಸಮಾಜದಲ್ಲಿ ಜಾತಿ, ವರ್ಗಗಳ ಮಧ್ಯೆ ಸಮಾನತೆಯನ್ನು ಸಾರುತ್ತದೆ.  ಈ ನಿಟ್ಟಿನಲ್ಲಿ ಎಲ್ಲ ಸಮಾಜದ ಹಿತಕಾಯಲು ಪೂರಕವಾದ ಯೋಜನೆಗಳ ಮೂಲಕ ಅಭಿವೃದ್ಧಿ ಪಡಿಸಲು ಸರ್ಕಾರ ಶ್ರಮಿಸುತ್ತಿದೆ.  ಈ ಅಭಿವೃದ್ಧಿ ಯೋಜನೆಗಳು ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ತಲುಪಿಸಬೇಕಾಗಿದೆ.  ಆದರೆ ಯೋಜನೆಗಳನ್ನು ತಲುಪಿಸಿ ಎಲ್ಲರಿಗೂ ಸಾಮಾಜಿಕ ನ್ಯಾಯ ಒದಗಿಸುವ ನಿಟ್ಟಿನಲ್ಲಿ ಎಲ್ಲ ಸಮಾಜ, ಜಾತಿ, ವರ್ಗದವರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳನ್ನು ನಿಖರ ಮತ್ತು ವೈಜ್ಞಾನಿಕವಾಗಿ ಅರಿಯಲು ಇಂತಹ ಸಮೀಕ್ಷೆಗಳು ಅತ್ಯಂತ ಅವಶ್ಯವಾಗಿದೆ.  ಸರ್ವೋಚ್ಛ ನ್ಯಾಯಾಲಯದಲ್ಲಿ ಮೀಸಲಾತಿಗೆ ಸಂಬಂಧಿಸಿದ ಪ್ರಕರಣಗಳ ವಿಚಾರಣೆ ನಡೆದಾಗಲೆಲ್ಲ, ಮೀಸಲಾತಿ ನೀಡಬೇಕಾಗಿರುವುದೇನೋ ಸರಿ, ಆದರೆ ಯಾವ ಆಧಾರದಲ್ಲಿ ಮೀಸಲಾತಿಯನ್ನು ನಿಗದಿಪಡಿಸುತ್ತೀರಿ ಎಂಬ ನ್ಯಾಯಾಲಯದ ಪ್ರಶ್ನೆಗಳಿಗೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸಮರ್ಪಕ ಉತ್ತರ ನೀಡಲು ತಡವರಿಸಿರುವ ಸಾಧ್ಯತೆಗಳೇ ಹೆಚ್ಚು.  ನ್ಯಾಯಾಲಯಕ್ಕೆ ಮನವರಿಕೆ ಮಾಡಿಕೊಡಲು ಸೂಕ್ತ ಆಧಾರಗಳು ಬೇಕಲ್ಲವೆ ? ಇದೇ ರೀತಿ ಶಿಕ್ಷಣ, ಉದ್ಯೋಗ, ಅಭಿವೃದ್ಧಿಪರ ಯೋಜನೆಗಳಿಗೆ ಮೀಸಲಾತಿಯನ್ನು ನೀಡಿ ಸಾಮಾಜಿಕ ನ್ಯಾಯ ಒದಗಿಸಬೇಕಲ್ಲವೆ ?  ಇದು ಸಾಧ್ಯವಾಗಬೇಕೆಂದರೆ, ಎಲ್ಲರ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸ್ಥಿತಿ-ಗತಿಯನ್ನು ಅರಿಯಬೇಕಿದೆ.  
ಸಮೀಕ್ಷೆ ನಡೆದು ಬಂದ ದಾರಿ : ವಿಭಿನ್ನ ಸ್ಥಳಗಳಲ್ಲಿ ವಾಸವಾಗಿರುವ ಅಥವಾ ವಿಭಿನ್ನ ವೃತ್ತಿಗಳಲ್ಲಿ ತೊಡಗಿರುವ ವ್ಯಕ್ತಿಗಳು ಹಾಗೂ ಜನ ಸಮೂಹಗಳಿಗೆ ಆರ್ಥಿಕ ಅಸಮಾನತೆಯನ್ನು ಕಡಿಮೆ ಮಾಡಲು ಮತ್ತು ಸ್ಥಾನಮಾನ ಸೌಲಭ್ಯ ಹಾಗೂ ಅವಕಾಶಗಳಲ್ಲಿ ತಾರತಮ್ಯವನ್ನು ತೊಡೆದು ಹಾಕಲು, ಕಾರ್ಯಕ್ರಮ ರೂಪಿಸುವುದಕ್ಕಾಗಿ ಸಾಮಾಜಿಕ ಸ್ಥಿತಗತಿಗಳ ಅಧ್ಯಯನ ಮಾಡಬೇಕಿದೆ.  ಸ್ವಾತಂತ್ರ್ಯ ಪೂರ್ವದಲ್ಲಿಯೇ ಮೈಸೂರು ಸಂಸ್ಥಾನದಲ್ಲಿ ಹಿಂದುಳಿದ ವರ್ಗಗಳಿಗೆ ಸಾರ್ವಜನಿಕ ಸೇವೆಯಲ್ಲಿ ಸಮಾನ ಅವಕಾಶ ಕಲ್ಪಿಸುವ ಸಾಮಾಜಿಕ ನ್ಯಾಯದ ಪರಿಕಲ್ಪನೆ ಚಿಂತನೆಯಿಂದ ೧೯೧೮ ರಲ್ಲಿಯೇ ಮಿಲ್ಲರ‍್ಸ್ ಸಮಿತಿಯನ್ನು ನೇಮಕ ಮಾಡಲಾಯಿತು.  ೧೯೬೦ ರಲ್ಲಿ ಡಾ. ಆರ್. ನಾಗನಗೌಡ ಅವರ ನೇತೃತ್ವದ ಮೈಸೂರು ಹಿಂದುಳಿದ ವರ್ಗಗಳ ಕಮಿಟಿ ರಚನೆಯಾಗಿತ್ತು.  ತದನಂತರ ಕರ್ನಾಟಕ ಸರ್ಕಾರವು ಸಾಮಾಜಿಕ ಮತ್ತು ಶೈಕ್ಷಣಿಕವಾಗಿ ಹಿಂದುಳಿದ ವರ್ಗಗಳ ಸ್ಥಿತಿ-ಗತಿಗಳು ಮತ್ತು ಸಮಸ್ಯೆಗಳನ್ನು ಅಧ್ಯಯನ ಮಾಡುವ ಸಲುವಾಗಿ ಎಲ್.ಜಿ. ಹಾವನೂರು (೧೯೭೨-೭೫), ಟಿ. ವೆಂಕಟಸ್ವಾಮಿ (೧೯೮೩-೮೬), ಜಸ್ಟೀಸ್ ಓ. ಚಿನ್ನಪ್ಪರೆಡ್ಡಿ (೧೯೮೮-೯೦), ಕುದೂರು ನಾರಾಯಣ ರೈ (೧೯೯೪-೯೫), ಪ್ರೊ. ರವಿವರ್ಮ ಕುಮಾರ್ (೧೯೯೭-೨೦೦೦), ಎಸ್. ಮುನಿರಾಜು (೨೦೦೧-೦೩), ಎಸ್. ಸಿದ್ದಗಂಗಯ್ಯ (೨೦೦೩-೦೬), ಡಾ. ಸಿ.ಎಸ್. ದ್ವಾರಕಾನಾಥ್ (೨೦೦೭-೧೦), ಎನ್. ಶಂಕ್ರಪ್ಪ (೨೦೧೧-೧೩) ಇವರುಗಳ ಅಧ್ಯಕ್ಷತೆಯಲ್ಲಿ ಆಯೋಗ ರಚಿಸಲಾಗಿದೆ.  ಸದ್ಯ ಹೆಚ್. ಕಾಂತರಾಜ್ ಅವರು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸುತ್ತದ್ದು, ಮಹತ್ವಕಾಂಕ್ಷಿ ಸಮೀಕ್ಷೆಗೆ ಮುಂದಡಿ ಇಟ್ಟಿದ್ದಾರೆ.  ಹಿಂದುಳಿದ ವರ್ಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಿತಿಗತಿಗಳ ಬಗ್ಗೆ ವೈಜ್ಞಾನಿಕ ಮತ್ತು ವಾಸ್ತವಿಕತೆಯ ಮಾಹಿತಿ ಪಡೆದುಕೊಂಡು, ಅವರ ಏಳಿಗೆಗಾಗಿ ಕಾರ್ಯಕ್ರಮ ರೂಪಿಸುವ ಕುರಿತು ಸರ್ಕಾರಕ್ಕೆ ಶಿಫಾರಸು ಮಾಡುವ ಕಾರ್ಯ ಆಯೋಗ ನಿರ್ವಹಿಸುತ್ತದೆ.  ೧೯೩೧ ರ ಜನಗಣತಿ ನಂತರ ನಡೆಸಿರುವ ಯಾವುದೇ ಜನಗಣತಿಯ ದಾಖಲೆಗಳಿಂದ ಜಾತಿ ಅಥವಾ ಸಮುದಾಯವಾರು ಜನಸಂಖ್ಯೆಯ ಅಂಕಿ-ಅಂಶಗಳು ಖಚಿತವಾಗಿ ದೊರೆಯುತ್ತಿಲ್ಲ.  ಇದರಿಂದಾಗಿ ಸಾಮಾಜಿಕ ನ್ಯಾಯ ತತ್ವದ ಆಧಾರದ ಮೇಲೆ ಸೌಲಭ್ಯಗಳನ್ನು ಒದಗಿಸುವುದು ಸರ್ಕಾರಗಳಿಗೆ ಕಷ್ಟಕರವಾಗಿದೆ.  ಎಲ್ಲ ಸಮುದಾಯಗಳ ಈಗಿನ ಸ್ಥಿತಿಗತಿಗಳಿಗೆ ಸಂಬಂಧಿಸಿದಂತೆ ವೈಜ್ಞಾನಿಕವಾದ ವಿಶ್ಲೇಷಣೆ ನಡೆಸುವುದು, ಜನಸಂಖ್ಯೆಯ ಪ್ರಮಾಣವನ್ನು ತಿಳಿಯುವುದು ಮತ್ತು ಗಣತಿಯಲ್ಲಿ ಹೊರಹೊಮ್ಮುವ ಅಂಶಗಳ ಆಧಾರದಲ್ಲಿ, ಅಂತಹ ಸಮುದಾಯಗಳ ಸಾಮಾಜಿಕ ಮತ್ತು ಶೈಕ್ಷಣಿಕ ಸ್ಥಾನಮಾನವನ್ನು ಅಧ್ಯಯನ ಮಾಡಿ, ಅವರ ಏಳಿಗೆಗೆ ಕಾರ್ಯಕ್ರಮಗಳನ್ನು ರೂಪಿಸಬೇಕಾಗಿರುತ್ತದೆ.  ಈ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಎಲ್ಲ ಜಾತಿ, ಜನಾಂಗಗಳ ಸಾಮಾಜಿಕ ಮತ್ತು ಶೈಕ್ಷಣಿಕ ಮನೆ ಮನೆ ಸಮೀಕ್ಷೆಯನ್ನು ಏ. ೧೧ ರಿಂದ ೩೦ ರವರೆಗೆ ನಡೆಸಲು ಆಯೋಗ ಮತ್ತು ಸರ್ಕಾರ ನಿರ್ಧರಿಸಿದೆ.
  ಇದೇ ಏಪ್ರಿಲ್ ೧೧ ರಿಂದ ಸಮೀಕ್ಷೆಗಾಗಿ ಮನೆ, ಮನೆಗೆ ಬರುವ ಗಣತಿದಾರರಿಗೆ ಸಾರ್ವಜನಿಕರು ತಮ್ಮ ಸ್ಥಿತಿಗತಿಗಳ ಬಗ್ಗೆ ಆಯಾ ಕುಟುಂಬದ ಮುಖ್ಯಸ್ಥರು, ವಾಸ್ತವಿಕ, ನಿಖರವಾದ ಮತ್ತು ನೈಜ ಮಾಹಿತಿ ನೀಡಿ ಸಹಕರಿಸಬೇಕಿದೆ.  ಆಧಾರ್ ಕಾರ್ಡ್ ದಾಖಲೆ ಹಾಗೂ ಮತದಾರರ ಗುರುತಿನ ಚೀಟಿ ದಾಖಲೆಯನ್ನು ಸಿದ್ಧವಾಗಿಟ್ಟುಕೊಂಡು, ಗಣತಿದಾರರು ಕೇಳುವ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡಿ ಸಹಕರಿಸಬೇಕು ಎನ್ನುತ್ತಾರೆ ಕೊಪ್ಪಳ ಜಿಲ್ಲಾಧಿಕಾರಿ ಆರ್.ಆರ್. ಜನ್ನು ಮತ್ತು ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ ಡಿ ಉದಪುಡಿ ಅವರು.
                                                                       – ತುಕಾರಾಂರಾವ್ ಬಿ.ವಿ.
                                                                          ಜಿಲ್ಲಾ ವಾರ್ತಾಧಿಕಾರಿ,
                                                                                ಕೊಪ್ಪಳ
Please follow and like us:
error

Leave a Reply

error: Content is protected !!