ಮುಂಗಾರು ಮಳೆ ಕೊರತೆ : ಶೇ. ೩೭ ರಷ್ಟು ಮಾತ್ರ ಬಿತ್ತನೆ

 ಕೊಪ್ಪಳ ಜಿಲ್ಲೆಯಲ್ಲಿ ಜುಲೈ ತಿಂಗಳಿನಲ್ಲಿಯೂ ಮುಂಗಾರು ಮಳೆಯ ಕೊರತೆ ಕಂಡುಬಂದಿದ್ದು, ಆದರೆ ಅಲ್ಪ-ಸ್ವಲ್ಪ ಮಳೆಯಿಂದಾಗಿ ರೈತರು ಉತ್ತಮ ಮಳೆಯ ಭರವಸೆಯಿಂದ ಬಿತ್ತನೆ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದಾರೆ.  ಜುಲೈ ಅಂತ್ಯದ ವೇಳೆಗೆ ಜಿಲ್ಲೆಯಲ್ಲಿ ಕೇವಲ ಶೇ. ೩೭ ರಷ್ಟು ಮಾತ್ರ ಬಿತ್ತನೆಯಾಗಿದೆ. 
  ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ ಜಿಲ್ಲೆಯಲ್ಲಿ ಒಟ್ಟು ೨೫೨೫೦೦ ಹೆಕ್ಟೇರ್ ಸಾಗುವಳಿ ಕ್ಷೇತ್ರವಿದ್ದು, ಆ ಪೈಕಿ ೧೮೧೪೫೦ ಹೆ. ಖುಷ್ಕಿ, ೩೮೮೫೦ ಹೆ., ೩೮೮೫೦ ಹೆ. ತುಂಗಭದ್ರಾ ಅಚ್ಚುಕಟ್ಟು ಪ್ರದೇಶದ ನೀರಾವರಿ ಹಾಗೂ ೩೨೨೦೦ ಹೆ. ಇತರೆ ಸಾಗುವಳಿ ಕ್ಷೇತ್ರವಿದೆ.  ಕಳೆದ ವರ್ಷ ಇದೇ ಅವಧಿಗೆ ೯೪ ಮಿ.ಮೀ. ಮಳೆಯಾಗಿದ್ದರೆ, ಈ ಬಾರಿ ೪೮. ೮ ಮಿ.ಮೀ.   ಮಳೆಯಾಗಿದೆ.    ಜಿಲ್ಲೆಯ ೨೫೨೫೦೦ ಹೆಕ್ಟೇರ್ ಬಿತ್ತನೆ ಪ್ರದೇಶದ ಪೈಕಿ ೯೪೪೫೯ ಹೆ. ನಲ್ಲಿ ಬಿತ್ತನೆಯಾಗಿದ್ದು ಶೇ. ೩೭ ರಷ್ಟು ಬಿತ್ತನೆಯಾದಂತಾಗಿದೆ.
ಮಳೆ : ಜಿಲ್ಲೆಯಲ್ಲಿ ಈ ವರ್ಷದಲ್ಲಿ ವಾಡಿಕೆಯ ೨೨೨ ಮಿ.ಮೀ. ಮಳೆಯ ಬದಲಿಗೆ ೧೧೩. ೬೫ ಮಿ.ಮೀ. ಮಳೆಯಾಗಿದ್ದು, ೧೦೮. ೩೫ ಮಿ.ಮೀ. ಮಳೆಯ ಕೊರತೆಯಾಗಿದೆ.  ಇದೇ ವರ್ಷದ ಮೇ, ಜೂನ್ ಮತ್ತು ಜುಲೈ ತಿಂಗಳಿನಲ್ಲಿ ಕ್ರಮವಾಗಿ ೧೦. ೨, ೧೫. ೪ ಮತ್ತು ೪೮. ೮ ಮಿ.ಮೀ. ಸರಾಸರಿ ಮಳೆ ಬಿದ್ದಿದೆ.  ಈ ವರ್ಷ ಕೊಪ್ಪಳ ತಾಲೂಕಿನಲ್ಲಿ ೧೪೪. ೮ ಮಿ.ಮೀ., ಕುಷ್ಟಗಿ- ೧೦೪. ೯. , ಯಲಬುರ್ಗಾ- ೧೧೮ ಹಾಗೂ ಗಂಗಾವತಿ ತಾಲೂಕಿನಲ್ಲಿ ೮೬. ೯ ಮಿ.ಮೀ. ಮಳೆಯಾಗಿದೆ.  
ಬಿತ್ತನೆ : ಜಿಲ್ಲೆಯಲ್ಲಿ ಜುಲೈ ತಿಂಗಳ ಎರಡನೆ ವಾರದಲ್ಲಿ ಬಿದ್ದ ಮಳೆಯಿಂದ ಉತ್ತೇಜಿತರಾದ ರೈತರು ಕೃಷಿ ಚಟುವಟಿಕೆಯನ್ನು ಉತ್ತಮ ಬೆಳೆ ನಿರೀಕ್ಷೆಯಲ್ಲಿ ಪ್ರಾರಂಭಿಸಿದ್ದರು, ಆದರೆ ವಾಡಿಕೆ ಮಳೆಗಿಂತ ಕಡಿಮೆ ಮಳೆಯಾದ ಕಾರಣ  ಕೃಷಿ ಚಟುವಟಿಕೆ ಕುಂಠಿತಗೊಂಡಿದೆ.  ಜಿಲ್ಲೆಯಲ್ಲಿ ಮುಂಗಾರು ಹಂಗಾಮಿನಲ್ಲಿ ಒಟ್ಟು ೨೫೨೫೦೦ ಹೆಕ್ಟೇರ್ ಬಿತ್ತನೆ ಗುರಿ ಹೊಂದಲಾಗಿದ್ದು, ಈವರೆಗೆ  ೯೪೪೫೯ ಹೆ. ನಲ್ಲಿ ಬಿತ್ತನೆಯಾಗಿದೆ.  ಇದರಿಂದಾಗಿ ಒಟ್ಟು ಶೇ. ೩೭ ರಷ್ಟು ಬಿತ್ತನೆಯಾದಂತಾಗಿದೆ. ಕೊಪ್ಪಳ ತಾಲೂಕಿನಲ್ಲಿ ೬೪೬೦೦ ಹೆ. ಗುರಿಯ ಬದಲಿಗೆ ೩೧೯೨೪ ಹೆ. (ಶೇ. ೪೯), ಕುಷ್ಟಗಿ- ೬೮೨೫೦ ಹೆ. ಗುರಿಯ ಎದುರು ೨೬೬೭೪ ಹೆ. (ಶೇ. ೩೯), ಯಲಬುರ್ಗಾ- ೫೫೫೨೦ ಹೆ. ಗುರಿಯ ಬದಲಿಗೆ ೨೨೭೮೭ ಹೆ.(ಶೇ. ೪೧), ಹಾಗೂ ಗಂಗಾವತಿ ತಾಲೂಕಿನಲ್ಲಿ ೬೪೧೩೦ ಹೆ. ಗುರಿಯ ಬದಲಿಗೆ ೧೩೦೭೪ ಹೆ. (ಶೇ. ೨೦) ನಷ್ಟು ಬಿತ್ತನೆ ಕಾರ್ಯ ಪೂರ್ಣಗೊಂಡಿದೆ.   
  ಏಕದಳ ಬೆಳೆಗಳ ಬಿತ್ತನೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ೧೪೦೬೦೦ ಹೆಕ್ಟೇರ್ ಗುರಿಯ ಬದಲಿಗೆ ೬೮೦೦೩ ಹೆ. ಬಿತ್ತನೆಯಾಗಿದೆ.  ಆ ಪೈಕಿ ಕೊಪ್ಪಳ ತಾಲೂಕಿನಲ್ಲಿ ೨೨೯೯೨ ಹೆ., ಕುಷ್ಟಗಿ- ೧೭೫೭೧ ಹೆ., ಯಲಬುರ್ಗಾ- ೧೭೧೪೬ಹೆ., ಹಾಗೂ ಗಂಗಾವತಿ- ೧೦೨೯೪ ಹೆ., ಬಿತ್ತನೆಯಾಗಿದೆ.  ದ್ವಿದಳ ಬೆಳೆಗಳಿಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ೩೮೨೦೦ ಹೆ. ಬಿತ್ತನೆಯ ಗುರಿ ಹೊಂದಿದ್ದು, ೬೯೨೫ ಹೆ. ಬಿತ್ತನೆಯಾಗಿದೆ.  ಆ ಪೈಕಿ ಕೊಪ್ಪಳ ತಾಲೂಕಿಲ್ಲಿ ೧೪೮೫ ಹೆ., ಕುಷ್ಟಗಿ- ೪೦೬೦ ಹೆ., ಯಲಬುರ್ಗಾ- ೯೪೮ ಹೆ., ಹಾಗೂ ಗಂಗಾವತಿ ತಾಲೂಕಿನಲ್ಲಿ ೪೩೨ ಹೆ. ಬಿತ್ತನೆಯಾಗಿದೆ.  ಎಣ್ಣೆಕಾಳು ಬೆಳೆಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ೭೧೦೦೦ ಹೆ. ಬಿತ್ತನೆ ಗುರಿಯ ಬದಲಿಗೆ ಕೇವಲ ೧೩೫೪೧ ಹೆ. ಬಿತ್ತನೆಯಾಗಿದೆ.  ಆ ಪೈಕಿ ಕೊಪ್ಪಳ ತಾಲೂಕಿನಲ್ಲಿ ೪೬೧೪ ಹೆ., ಕುಷ್ಟಗಿ- ೪೩೨೫ ಹೆ., ಯಲಬುರ್ಗಾ- ೩೦೨೮ ಹೆ., ಹಾಗೂ ಗಂಗಾವತಿ ತಾಲೂಕಿಲ್ಲಿ ೧೫೭೪ ಹೆ., ಬಿತ್ತನೆಯಾಗಿದೆ.  ಅದೇ ರೀತಿ ವಾಣಿಜ್ಯ ಬೆಳೆಗೆ ಸಂಬಂಧಿಸಿದಂತೆ ಒಟ್ಟು ೨೨೦೦ ಹೆ. ಗುರಿಯ ಬದಲಿಗೆ ೫೯೮೨ ಹೆ. ಗುರಿ ಮೀರಿ ಬಿತ್ತನೆಯಾಗಿದ್ದು, ಆ ಪೈಕಿ ಕೊಪ್ಪಳ- ೨೮೨೫ ಹೆ., ಕುಷ್ಟಗಿ- ೭೧೮ ಹೆ., ಯಲಬುರ್ಗಾ- ೧೬೬೫ ಹೆ., ಹಾಗೂ ಗಂಗಾವತಿ ತಾಲೂಕಿನಲ್ಲಿ ೭೭೪ ಹೆ.  ಬಿತ್ತನೆಯಾಗಿದೆ.  
  ಮುಂಬರುವ ದಿನಗಳಲ್ಲಿ ಜಿಲ್ಲೆಯಲ್ಲಿ ಇನ್ನೂ ಉತ್ತಮ ಮಳೆಯಾಗುವ ಆಶಾಭಾವನೆಯನ್ನು ರೈತರು ಹೊಂದಿದ್ದು, ಮಳೆರಾಯ ಕೃಪೆ ತೋರಿದಲ್ಲಿ, ರೈತರು ಸಕ್ರಿಯವಾಗಿ ಕೃಷಿ ಚಟುವಟಿಕೆಗಳಲ್ಲಿ ತೊಡಗಲಿದ್ದಾರೆ.  ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ರಸಗೊಬ್ಬರ ಹಾಗೂ ಬಿತ್ತನೆ ಬೀಜದ ಯಾವುದೇ ಕೊರತೆಯಿಲ್ಲ ಎಂದು ಕೃಷಿ ಇಲಾಖೆ ತಿಳಿಸಿದೆ.
Please follow and like us:
error