ದುಷ್ಕೃತ್ಯಗಳಿಂದ ಹೆಣ್ಣು ಮಕ್ಕಳನ್ನು ರಕ್ಷಿಸುವುದು ಅತ್ಯವಶ್ಯಕ : ಬಿ.ದಶರಥ

ಕೊಪ್ಪಳ, ಜು.೨೩ ಸಮಾಜದಲ್ಲಿ ನಡೆಯುತ್ತಿರುವ ದುಷ್ಕೃತ್ಯಗಳನ್ನು ಗಮನಿಸಿದಾಗ ಪ್ರಸ್ತುತ ದಿನಮಾನಗಳಲ್ಲಿ ಹೆಣ್ಣು ಮಕ್ಕಳನ್ನು ರಕ್ಷಿಸುವುದು ಅತ್ಯವಶ್ಯಕವಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಬಿ.ದಶರಥ ಅಭಿಪ್ರಾಯಪಟ್ಟರು.
     ಕೊಪ್ಪಳ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಜಿಲ್ಲಾ ನ್ಯಾಯವಾದಿಗಳ ಸಂಘ ಮತ್ತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿಲ್ಲಾ ಕೋರ್ಟ್ ಆವರಣದಲ್ಲಿರುವ ಸಾಕ್ಷಿದಾರರ ಮೊಗಸಾಲೆಯಲ್ಲಿ ಗುರುವಾರ ಏರ್ಪಡಿಸಲಾಗಿದ್ದ ಹೆಣ್ಣು ಮಗು ರಕ್ಷಿಸಿ, ಭ್ರೂಣ ಹತ್ಯೆ ತಡೆಯಿರಿ ಎಂಬ ಕಾನೂನು ಅರಿವು ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
       ಸಮಾಜದಲ್ಲಿನ ಮೌಢ್ಯತೆ ಹಾಗೂ ಮೂಢನಂಬಿಕೆಗಳಿಂದಾಗಿ ಕೆಲವು ಜನಾಂಗಗಳಲ್ಲಿ ಹೆಣ್ಣು ಮಕ್ಕಳನ್ನು ಅಮಾನುಷವಾಗಿ ಕೊಲ್ಲಲಾಗುತ್ತಿದೆ.  ಅರಬ್ ರಾಷ್ಟ್ರಗಳಲ್ಲಿ ಭಾರತೀಯ ಮೂಲದ ಹೆಣ್ಣು ಮಕ್ಕಳನ್ನು ಒಂಟೆಯ ಹೊಟ್ಟೆಗೆ ಕಟ್ಟಿ, ಒಂಟೆ ಓಟದ ಸ್ಪರ್ಧೆಗಳನ್ನು ಏರ್ಪಡಿಸಲಾಗುತ್ತದೆ. ಇಂತಹ ದುಷ್ಕೃತ್ಯಗಳನ್ನು ನೋಡಿದಾಗ ಜಾಗತಿಕ ಮಟ್ಟದಲ್ಲಿಯೂ ಇಂದಿನ ದಿನಮಾನಗಳಲ್ಲಿ ಹೆಣ್ಣು ಮಕ್ಕಳನ್ನು ರಕ್ಷಿಸುವ ಅವಶ್ಯಕತೆ ಇದೆ ಎಂದು ಯಾರಿಗೂ ಅನಿಸದೇ ಇರದು. ಈ ನಿಟ್ಟಿನಲ್ಲಿ   ಪ್ರಸಕ್ತ ತಿಂಗಳು ಹೆಣ್ಣು ಮಗು ರಕ್ಷಿಸಿ, ಭ್ರೂಣ ಹತ್ಯೆ ತಡೆಯಿರಿ ಎಂಬ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.  ಈ ಹಿಂದೆ ದೇಶದ ದೊಡ್ಡ ದೊಡ್ಡ ನಗರ ಪ್ರದೇಶಗಳಲ್ಲಿ ರಾತ್ರಿ ವೇಳೆ ಮಹಿಳೆಯರು ಓಡಾಡುವುದು ದುಸ್ಥರವಾಗಿತ್ತು. ಆದರೆ ಇಂದು ಅಂತಹ ಪರಿಸ್ಥಿತಿ ಇಲ್ಲದಿರುವುದು ಸಮಾಧಾನಕರ. ಐ.ಟಿ, ಬಿ.ಟಿ ಯಂತಹ ಬೃಹತ್ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸುವ ಮಹಿಳೆಯರು ಅಪರಾತ್ರಿಯಲ್ಲಿ ಕೂಡಾ ನಿರಾಳವಾಗಿ ಓಡಾಡುತ್ತಿದ್ದಾರೆ. ಅಲ್ಲದೇ ಇಂದು ಎಲ್ಲ ರಂಗಗಳಲ್ಲಿಯೂ ಸಾಧನೆ ಮಾಡಿರುವ ಮಹಿಳೆಯರು, ಕೂಲಿಯಿಂದ ಹಿಡಿದು ವಿಮಾನ ಚಾಲನೆಯವರೆಗೆ ಎಲ್ಲ ರಂಗಗಳಲ್ಲಿಯೂ ಪುರುಷರಿಗೆ ಸರಿಸಮಾನರಾಗಿ ಗುರುತಿಸಿಕೊಂಡಿದ್ದಾರೆ. ಆದರೂ ಕೂಡಾ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆಯಂತಹ ಕೃತ್ಯಗಳು ನಡೆಯುತ್ತಿರುವುದು ವಿಪರ್ಯಾಸ. ಆದ್ದರಿಂದ ನಾವೆಲ್ಲರೂ ಜಾಗೃತಿ ಕಾರ್ಯಕ್ರಮಗಳ ಮೂಲಕ ಹೆಣ್ಣು ಭ್ರೂಣ ಹತ್ಯೆ ತಡೆಯುವಲ್ಲಿ ಕೈಜೋಡಿಸೋಣ ಎಂದು ಬಿ. ದಶರಥ್ ಅವರು ಕರೆ ನೀಡಿದರು.
     ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕಿ ಡಿ.ಪಿ.ವಸಂತ ಪ್ರೇಮಾ, ಸಮಾಜದಲ್ಲಿ ಲಿಂಗಾನುಪಾತ ಕುಸಿಯಲು ಹೆಣ್ಣು ಭ್ರೂಣ ಹತ್ಯೆ ಪ್ರಮುಖ ಕಾರಣವಾಗಿದೆ. ೧೦೦೦ ಪುರುಷರಿಗೆ ೯೮೩ ಮಹಿಳಾ ಲಿಂಗಾನುಪಾತ ಹೊಂದಿರುವ ಕೊಪ್ಪಳ ಜಿಲ್ಲೆಯು ಕೂಡಾ ಇದಕ್ಕೆ ಹೊರತಾಗಿಲ್ಲ. ತಿರಸ್ಕೃತ ಮಕ್ಕಳಲ್ಲಿಯೂ ಸಹ ಲಿಂಗಾನುಪಾತ ಅಸ್ವಸ್ಥವಾಗಿದೆ. ಜಿಲ್ಲೆಯಲ್ಲಿ ಈಗಾಗಲೇ ರಕ್ಷಿಸಲಾಗಿರುವ ೨೦ ತಿರಸ್ಕೃತ ಮಕ್ಕಳಲ್ಲಿ ೦೯ ಗಂಡು ಮಕ್ಕಳಿದ್ದರೆ. ೧೧ ಹೆಣ್ಣು ಮಕ್ಕಳಿವೆ. ಸರ್ಕಾರ ಹೆಣ್ಣು ಭ್ರೂಣ ಹತ್ಯೆ ತೊಲಗಿಸಲು ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದರೂ ಕೂಡಾ ದೇಶದಲ್ಲಿ ಹೆಣ್ಣು ಭ್ರೂಣ ಹತ್ಯೆ ನಡೆಯುತ್ತಿದೆ. ಅಲ್ಲದೇ, ಹೆಣ್ಣು ಅಬಲೆ ಎಂದು ಭಾವಿಸಿ, ಸಮಾಜದಿಂದ ಆಕೆಯನ್ನು ತಿರಸ್ಕರಿಸುತ್ತಿರುವುದು ಹೆಚ್ಚುತ್ತಿದೆ.  ಹೆಣ್ಣುಮಕ್ಕಳು ದೈಹಿಕ ದಬ್ಬಾಳಿಕೆಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಕರಾಟೆಯಂತಹ ಆತ್ಮ ರಕ್ಷಣೆ ಕಲೆಯನ್ನು ಕಲಿತುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು, ಒಂದು ಗಂಡಿಗಿಂತ ಒಂದು ಹೆಣ್ಣು ವಿದ್ಯಾವಂತೆಯಾದರೆ ಸಮಾಜದಲ್ಲಿ ದ್ವಿಗುಣ ಬದಲಾವಣೆ ಕಾಣುವುದರಲ್ಲಿ ಎರಡು ಮಾತಿಲ್ಲ ಎಂದು ಹೇಳಿದರು.
     ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಕಿರಿಯ ಸಿವಿಲ್ ನ್ಯಾಯಾಧೀಶೆ ಕವಿತಾ ಶಿವರಾಯ ಉಂಡೋಡಿ ಮಾತನಾಡಿ, ಭಾರತ ಈಗಲೂ ಪುರುಷ ಪ್ರಧಾನ ರಾಷ್ಟ್ರವಾಗಿರುವುದರಿಂದ ದೇಶದಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ಇಳಿಮುಖಗೊಂಡಿದೆ. ಗರ್ಭದಲ್ಲಿನ ಮಗುವಿನ ಆರೋಗ್ಯ ಪರೀಕ್ಷಿಸುವ ದೃಷ್ಠಿಯಿಂದ ಸ್ಕ್ಯಾನಿಂಗ್ ಯಂತ್ರವನ್ನು ಕಂಡು

ಹಿಡಿಯಲಾಯಿತು. ಆದರೆ ಇಂದು ಯಂತ್ರವನ್ನು ಲಿಂಗಪತ್ತೆ ಮಾಡಲು ಉಪಯೋಗಿಸುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಈ ನಿಟ್ಟಿನಲ್ಲಿ  ಸರ್ಕಾರ ಸ್ಕ್ಯಾನಿಂಗ್ ಪ್ರಕ್ರಿಯೆಗೆ ಹಲವಾರು ಕಾನೂನು ಕ್ರಮಗಳನ್ನು ಕೈಗೊಂಡಿದೆ. ಭ್ರೂಣ ಪತ್ತೆಗಾಗಿ ಸ್ಕ್ಯಾನಿಂಗ್ ಮಾಡಿಸಿದ್ದು ಸಾಬೀತಾದಲ್ಲಿ ಕಾನೂನು ಪ್ರಕಾರ ೫ ವರ್ಷ ಜೈಲು ಶಿಕ್ಷೆ ಹಾಗೂ ೫೦ ಸಾವಿರ ರೂ.ಗಳವರೆಗೆ ದಂಡ ವಿಧಿಸಲಾಗುತ್ತದೆ ಎಂದರು.
     ಕಾರ್ಯಕ್ರಮದಲ್ಲಿ ಜಿಲ್ಲಾ ಸರ್ಕಾರಿ ವಕೀಲ ಬಿ.ಶರಣಪ್ಪ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಆರ್.ಬಿ.ಪಾನಘಂಟಿ, ಕಾರ್ಯದರ್ಶಿ ರಾಜಶೇಖರ ಮಾಲೀಪಾಟೀಲ್, ಯುನಿಸೆಫ್‌ನ ತರಬೇತಿ ಸಂಯೋಜಕ ಹರೀಶ ಜೋಗಿ, ವಕೀಲ ಭೀಮಸೇನ್ ಜೋಶಿ ಸೇರಿದಂತೆ ಹಲವಾರು  ಉಪಸ್ಥಿತರಿದ್ದರು.

Related posts

Leave a Comment