ಗೊಂದಲ-ದೂರುಗಳಿಗೆ ಅವಕಾಶವಿಲ್ಲದಂತೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಸಿ- ಆರ್. ರಾಮಚಂದ್ರನ್.

ಕೊಪ್ಪಳ ಮಾ. ೦೪ (ಕ.ವಾ ಜಿಲ್ಲೆಯಲ್ಲಿ ಮಾ. ೩೦ ರಿಂದ ಏ. ೧೩ ರವರೆಗೆ ನಡೆಯಲಿರುವ ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಗೊಂದಲ ಹಾಗೂ ದೂರುಗಳಿಗೆ ಅವಕಾಶವಿಲ್ಲದಂತೆ ಪರೀಕ್ಷೆಯ ಪಾವಿತ್ರ್ಯತೆಯನ್ನು ಕಾಯ್ದುಕೊಳ್ಳಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್  ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.
      ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆ ಸಿದ್ಧತೆ ಕುರಿತಂತೆ ಜಿಲ್ಲಾ ಪಂಚಾಯತಿ ಸಭಾಂಗಣದಲ್ಲಿ ಶುಕ್ರವಾರದಂದು ಏರ್ಪಡಿಸಲಾಗಿದ್ದ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
     ಎಸ್‌ಎಸ್‌ಎಲ್‌ಸಿ ವಾರ್ಷಿಕ ಪರೀಕ್ಷೆಯನ್ನು ಸುಗಮ, ನ್ಯಾಯಸಮ್ಮತ ಹಾಗೂ ಸಮರ್ಪಕವಾಗಿ ಕೈಗೊಳ್ಳಲು ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಈ ಬಾರಿ ಒಟ್ಟು ೧೯೦೪೫ ವಿದ್ಯಾರ್ಥಿಗಳು   ಪರೀಕ್ಷೆಗೆ ಹಾಜರಾಗಲಿದ್ದು, ಇದಕ್ಕಾಗಿ ಒಟ್ಟು ೬೪ ಪರೀಕ್ಷಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ.  ಕೊಪ್ಪಳ ತಾಲೂಕಿನಲ್ಲಿ ೨೨, ಯಲಬುರ್ಗಾ- ೧೨, ಗಂಗಾವತಿ- ೨೧, ಹಾಗೂ ಕುಷ್ಟಗಿ ತಾಲೂಕಿನಲ್ಲಿ ೦೯ ಪರೀಕ್ಷಾ ಕೇಂದ್ರಗಳಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆ ನಡೆಯಲಿದೆ.  ಪರೀಕ್ಷೆಯು ಸಮರ್ಪಕವಾಗಿ ನಡೆಸಲು ಈಗಿನಿಂದಲೇ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಬೇಕು.  ಪ್ರಶ್ನೆಪತ್ರಿಕೆಗಳ ಸುರಕ್ಷತೆ ಬಗ್ಗೆ ಅಧಿಕಾರಿಗಳು ಪರೀಕ್ಷಾ ಮಂಡಳಿಯ ನಿರ್ದೇಶನಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.  ವಿದ್ಯಾರ್ಥಿಗಳಿಗೆ ಪರೀಕ್ಷೆ ಬರೆಯಲು ಸೂಕ್ತ ಆಸನ, ಗಾಳಿ, ಬೆಳಕು ಹಾಗೂ ಕುಡಿಯುವ ನೀರಿನ ಸಮರ್ಪಕ ವ್ಯವಸ್ಥೆ ಇರಬೇಕು.  ಪರೀಕ್ಷಾ ದಿನಗಳಂದು, ಯಾವುದೇ ಪರೀಕ್ಷಾ ಕೇಂದ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ, ಮೊದಲು ಶೌಚಾಲಯ ಹಾಗೂ ಮೂತ್ರಾಲಯಗಳ ಸ್ವಚ್ಛತೆಯನ್ನು ಪರಿಶೀಲಿಸಿ, ನಂತರವೇ ಪರೀಕ್ಷಾ ಕೊಠಡಿಗಳ ಪರಿಶೀಲನೆ ನಡೆಸುತ್ತೇನೆ.  ಇದನ್ನು ಗಮನದಲ್ಲಿಟ್ಟುಕೊಂಡು ಎಲ್ಲ ಪರೀಕ್ಷಾ ಕೇಂದ್ರಗಳಲ್ಲಿ ಕಡ್ಡಾಯವಾಗಿ ಶೌಚಾಲಯ ಹಾಗೂ ಮೂತ್ರಾಲಯಗಳು ಸಮರ್ಪಕವಾಗಿ ಮತ್ತು ಸ್ವಚ್ಛವಾಗಿದ್ದು, ಬಳಕೆಗೆ ಯೋಗ್ಯವಿರುವಂತೆ ನೋಡಿಕೊಳ್ಳುವ ಹೊಣೆಗಾರಿಕೆ ಆಯಾ ಶಾಲೆಗಳ ಮುಖ್ಯಸ್ಥರ ಮೇಲಿದೆ.  ವಿದ್ಯಾರ್ಥಿಗಳಿಗೆ ಯಾವುದೇ ಆರೋಗ್ಯ ತೊಂದರೆ ಕಂಡುಬಂದಲ್ಲಿ, ಪ್ರಥಮ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಪ್ರತಿ ಪರೀಕ್ಷಾ ಕೇಂದ್ರಕ್ಕೆ ಔಷಧಿ ಕಿಟ್ ಸಹಿತ ಆರೋಗ್ಯ ಸಹಾಯಕರನ್ನು ನಿಯೋಜಿಸಲು ಆರೋಗ್ಯ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ.
     ಎಸ್‌ಎಸ್‌ಎಲ್‌ಸಿ ಪರೀಕ್ಷೆಯು ಪ್ರತಿಯೊಬ್ಬ ವಿದ್ಯಾರ್ಥಿಯ ಶೈಕ್ಷಣಿಕ ಜೀವನದ ಪ್ರಮುಖ ಘಟ್ಟವಾಗಿರುವುದರಿಂದ, ಪರೀಕ್ಷೆಗೆ ಬರುವ ವಿದ್ಯಾರ್ಥಿಗಳಿಗೆ ಸೂಕ್ತ ತಿಳುವಳಿಕೆ ನೀಡಿ, ಪರೀಕ್ಷಾ ಭಯವನ್ನು ಹೋಗಲಾಡಿಸುವುದರ ಜೊತೆಗೆ ಆತ್ಮಸ್ಥೈರ್ಯ ತುಂಬುವಂತಹ ಕಾರ್ಯವಾಗಬೇಕು.  ಪರೀಕ್ಷೆ ಸಂದರ್ಭದಲ್ಲಿ ಯಾವುದೇ ಪರೀಕ್ಷಾ ಕೇಂದ್ರಗಳಲ್ಲಿ ನಕಲು ಪ್ರಕರಣಗಳು ಜರುಗದಂತೆ ಸೂಕ್ತ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಆರ್. ರಾಮಚಂದ್ರನ್ ಅವರು ಸೂಚನೆ ನೀಡಿದರು.
     ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಎ. ಶ್ಯಾಮಸುಂದರ್ ಅವರು ಮಾತನಾಡಿ, ಪರೀಕ್ಷಾ ಕೇಂದ್ರದ ಒಳಗೆ ಪರೀಕ್ಷಾ ಕೇಂದ್ರದ ಅಧೀಕ್ಷಕರನ್ನು ಹೊರತುಪಡಿಸಿ, ಕೊಠಡಿ ಮೇಲ್ವಿಚಾರಕರು, ಇತರೆ ಸಿಬ್ಬಂದಿ ಹಾಗೂ ಯಾವುದೇ ವಿದ್ಯಾರ್ಥಿ ಮೊಬೈಲ್‌ನೊಂದಿಗೆ ಪ್ರೇವೇಶಿಸುವಂತಿಲ್ಲ.  ಮೊಬೈಲ್ ಇಲ್ಲದಿರುವುದನ್ನು ಖಚಿತಪಡಿಸಿದ ನಂತರವೇ ಪರೀಕ್ಷಾ ಕೇಂದ್ರ ಪ್ರವೇಶಕ್ಕೆ ಅವಕಾಶ ನೀಡಬೇಕು.  ಈ ಬಾರಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಗೆ ೧೭೨೫೯- ರೆಗ್ಯುಲರ್ ವಿದ್ಯಾರ್ಥಿಗಳು, ೧೩೬೫- ಪುನರಾವರ್ತಿತ ವಿದ್ಯಾರ್ಥಿಗಳು ಹಾಗೂ ೪೨೧- ಬಾಹ್ಯ ವಿದ್ಯಾರ್ಥಿಗಳು ಸೇರಿದಂತೆ ಒಟ್ಟು ೧೯೦೪೫ ವಿದ್ಯಾರ್ಥಿಗಳು ಪರೀಕ್ಷೆ ಬರೆಯಲಿದ್ದಾರೆ.  ಇದರಲ್ಲಿ ೧೦೨೦೪- ಬಾಲಕರು, ೮೮೪೧- ಬಾಲಕಿಯರಿದ್ದಾರೆ.  ಗಂಗಾವತಿ ತಾಲೂಕಿನಲ್ಲಿ ೬೩೩೫, ಕೊಪ್ಪಳ-೫೬೦೭, ಕುಷ್ಟಗಿ-೩೪೨೮ ಮತ್ತು ಯಲಬುರ್ಗಾ ತಾಲೂಕಿನಲ್ಲಿ ೩೬೭೫ ವಿದ್ಯಾರ್ಥಿಗಳು ಪರೀಕ್ಷೆ ಬರೆಯುವರು.  ಜಿಲ್ಲೆಯ ಒಟ್ಟು ೬೪ ಪರೀಕ್ಷಾ ಕೇಂದ್ರಗಳ ಪೈಕಿ ಕೊಪ್ಪಳದ ಸ್ವಾಮಿ ವಿವೇಕಾನಂದ ಆಂಗ್ಲ ಮಾಧ್ಯಮಿಕ ಪ್ರೌಢಶಾಲೆ ಹಾಗೂ ಭಾಗ್ಯನಗರದ ಸರ್ಕಾರಿ ಪದವಿಪೂರ್ವ ಕಾಲೇಜು (ಪ್ರೌಢಶಾಲಾ ವಿಭಾಗ) ಸೂಕ್ಷ್ಮ ಪರೀಕ್ಷಾ ಕೇಂದ್ರಗಳೆಂದು ಗುರುತಿಸಲಾಗಿದೆ.  ೬೪ ಕೇಂದ್ರಗಳ ಪೈಕಿ ೫೫ ಕೇಂದ್ರಗಳಿಗೆ ಸಿಸಿ ಟಿ.ವಿ. ಕ್ಯಾಮೆರಾ ಅಳವಡಿಸಲಾಗಿದ್ದು, ಉಳಿದ ಕೇಂದ್ರಗಳಿಗೆ ಸಿಸಿ ಟಿವಿ ಕ್ಯಾಮೆರಾ ಅಳವಡಿಸಲು ಕೂಡಲೆ ಕ್ರಮ ಕೈಗೊಳ್ಳಬೇಕು. ಪ್ರಶ್ನೆಪತ್ರಿಕೆ ಹಾಗೂ ಉತ್ತರ ಪತ್ರಿಕೆಗಳ ರವಾನೆಗಾಗಿ ಒಟ್ಟು ೨೨ ಮಾರ್ಗಗಳನ್ನು ನಿಗದಿ ಮಾಡಲಾಗಿದ್ದು, ಎಲ್ಲ ಮಾರ್ಗಗಳಿಗೆ ಪ್ರತ್ಯೇಕ ವಾಹನ ಬಳಸಲಾಗುವುದು.  ಮಾಧ್ಯಮದವರು ಪರೀಕ್ಷೆ ಪ್ರಾರಂಭಕ್ಕೂ ಮೊದಲು ಅಲ್ಲಿನ ವ್ಯವಸ್ಥೆಯ ಬಗ್ಗೆ ವಿಡಿಯೋ ಅಥವಾ ಫೋಟೋ ಪಡೆಯಲು ಮಾತ್ರ ಅವಕಾಶ ನೀಡಬಹುದು.  ಪರೀಕ್ಷೆ ಪ್ರಾರಂಭದ ನಂತರ ಮಾಧ್ಯಮದವರ ಪ್ರವೇಶಕ್ಕೆ ಅವಕಾಶವಿಲ್ಲ.  ಪರೀಕ್ಷೆಯನ್ನು ಸುಗಮವಾಗಿ ನಡೆಸಲು, ಪರೀಕ್ಷಾ ಕೇಂದ್ರದ ಸುತ್ತ ೨೦೦ ಮೀ. ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳ್ಳಲಿದೆ.  ಅಲ್ಲದೆ ಸೂಕ್ತ ಪೊಲೀಸ್ ಬಂದೋಬಸ್ತ್‌ಗೆ ಕ್ರಮ ಕೈಗೊಳ್ಳಲಾಗುವುದು.  ಈ ಬಾರಿ ಪರೀಕ್ಷಾ ಅಕ್ರಮ ತಡೆಗಟ್ಟುವ ನಿಟ್ಟಿನಲ್ಲಿ ಇತರೆ ಇಲಾಖೆಗಳ ಜಿಲ್ಲಾ ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ಜಿಲ್ಲಾ ಜಾಗೃತ ದಳ, ತಾಲೂಕು ಮಟ್ಟದ ಅಧಿಕಾರಿಗಳ ನೇತೃತ್ವದಲ್ಲಿ ತಾಲೂಕು ಮಟ್ಟದ ಜಾಗೃತ ದಳ ನೇಮಕ ಮಾಡಲಾಗುವುದು.  ಅಲ್ಲದೆ ಇತರೆ ಇಲಾಖೆಯ ಅಧಿಕಾರಿಗಳನ್ನು ಪ್ರತಿ ಪರೀಕ್ಷಾ ಕೇಂದ್ರದ ಸ್ಥಾನಿಕ ಜಾಗೃತ ದಳದ ಸದಸ್ಯರನ್ನಾಗಿ ಜಿಲ್ಲಾಧಿಕಾರಿಗಳು ನೇಮಿಸುವರು.  ಪರೀಕ್ಷೆಯಲ್ಲಿ ಯಾವುದೇ ಅಕ್ರಮ ಅಥವಾ ನಕಲಿಗೆ ಅವಕಾಶ ನೀಡದಂತೆ ಸುಗಮ ಹಾಗೂ ನ್ಯಾಯಸಮ್ಮತವಾಗಿ ಪರೀಕ್ಷೆ ನಡೆಸಲು ಅಧಿಕಾರಿಗಳು ಕ್ರಮ ಕೈಗೊಳ್ಳಬೇಕು ಎಂದರು.  ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಜಿಲ್ಲಾ ನೋಡಲ್ ಅಧಿಕಾರಿ ರಾಹತ್ ನವಾಜ್ ಖಾನಂ ಅವರು ಪರೀಕ್ಷೆ ನಿರ್ವಹಣೆಗೆ ಪರೀಕ್ಷಾ ಮಂಡಳಿ ಸೂಚಿಸಿರುವ ನಿರ್ದೇಶನಗಳನ್ನು ಸಭೆಯಲ್ಲಿ ವಿವರಿಸಿದರು.
     ಸಭೆಯಲ್ಲಿ ಜಿಲ್ಲೆಯ ಎಲ್ಲ ಕ್ಷೇತ್ರ ಶಿಕ್ಷಣಾಧಿಕಾರಿಗಳು, ಪರೀಕ್ಷಾ ಕೇಂದ್ರಗಳ ಅಧೀಕ್ಷಕರು, ಪೊಲೀಸ್ ಇಲಾಖೆಯಿಂದ ಪಿಐ ಉಜ್ಜೇನಕೊಪ್ಪ, ಮುಂತಾದವರು ಉಪಸ್ಥಿತರಿದ್ದರು.

Please follow and like us:
error