ಶೇಖಣ್ಣಾಚಾರ್ಯರವರು ದೈವತ್ವಪಡೆದ ಮಹಾಪುರುಷ ಕರಿಬಸವ ಶ್ರೀಗಳು

ಕೊಪ್ಪಳ, ಡಿ. ೨೬.   ಶೇಖಣ್ಣಾಚಾರ್ಯರವರು ಆಂಜನೇಯನ ಪರಮಭಕ್ತರಾಗಿ ಬಹುಜನರ ಕಷ್ಟಗಳಿಗೆ ಸ್ಪಂದಿಸುತ್ತ, ಕಾಯಕದೊಂದಿಗೆ ಸಾಧನೆ ಮಾಡಿದ, ದೈವತ್ವಪಡೆದ ಮಹಾಪುರುಷ ಎಂದು ಕುಷ್ಟಗಿ ಮದ್ದಾನಿ ಹಿರೇಮಠದ ಪರಮಪೂಜ್ಯ ಶ್ರೀ ೧೦೮ ಷ.ಬ್ರ. ಶ್ರೀ ಕರಿಬಸವ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.

ಅವರು ಕೊಪ್ಪಳದ ಶ್ರೀ ಸಹಸ್ರಾಂಜನೇಯ ದೇವಸ್ಥಾನ ಟ್ರಸ್ಟ್ ವತಿಯಿಂದ  ಶೇಖಣ್ಣಾಚಾರ್ಯರವರ ೫ನೇ ಪುಣ್ಯ ಸ್ಮರಣೆ ಹಾಗೂ ಶ್ರೀ ಹನುಮಾನ್ ಚಾಲೀಸ (ಕನ್ನಡ-ಇಂಗ್ಲೀಷ) ಕಿರುಕೃತಿ ಬಡುಗಡೆ ಕಾರ್ಯಕ್ರಮದ ಸಾನಿಧ್ಯವಹಿಸಿ ಮಾತನಾಡುತ್ತಿದ್ದರು. ಆಂಜನೇಯ ಸ್ವಾಮಿ ಅತ್ಯಂತ ಇಷ್ಟದ ದೈವಸ್ವರೂಪಿಯಶದವನು, ಆತನನ್ನು ನಂಬಿದವರಿಗೆ ಸುಖ ಖಂಡಿತ ದೊರೆಯುತ್ತದೆ. ಇಂತಹ ಮಾರುತಿರಾಯನ ಅಪರೂಪದ ದೇವಸ್ಥಾನ ಕೊಪ್ಪಳದಲ್ಲಿ ನಿರ್ಮಾಣವಾಗುತ್ತಿರುವದು ಸಂತಸದ ಸಂಗತಿ, ಜೊತೆಗೆ ಒಂದು ದಿನ ಉಪವಾಸ ಮಾಡುವ ನೆಪದಲ್ಲಿ ಇಪ್ಪತ್ತುಸಾರಿ ಉಣ್ಣುವ ಜನರ ಮದ್ಯೆ ಪ್ರಕಾಶ ಶಿಲ್ಪಿ ಪ್ರತಿನಿತ್ಯ ಮಾರುತಿ ಒಂದು ಮೂರ್ತಿಕೆತ್ತಿ ಪೂಜೆ ಮಾಡಿ ಪ್ರಸಾದ ಸ್ವೀಕರಿಸುವ ಸಂಕಲ್ಪ ಅಪರೂಪದ್ದು ಎಂದು ಬಣ್ಣಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಮಾಜಿ ಎಂ.ಎಲ್.ಸಿ. ಕರಿಯಣ್ಣ ಸಂಗಟಿ ಶ್ರೀ ಶೇಖರಪ್ಪಜ್ಜನ ಭಕ್ತರಲ್ಲಿ ತಾವೂ ಒಬ್ಬರು, ಅವರ ಬಗ್ಗೆ ಎಷ್ಟು ವರ್ಣಿಸಿದರೂ ಕಡಿಮೆ, ಆತನ ಆಶೀರ್ವಾದದಿಂದ ನಮ್ಮ ಕುಟುಂಬ ಚನ್ನಾಗಿದೆ, ಅವರ ಕಾಲವಾದ ನಂತರ ಅವರ ಸ್ಥಾನವನ್ನು ಸಮರ್ಥವಾಗಿ ತುಂಬಿಕೊಟ್ಟಿರುವ ಪ್ರಕಾಶರವರು ಕೈಗೊಂಡಿರುವ ದೇವಸ್ಥಾನದ ನಿರ್ಮಾಣಕ್ಕೆ ೨೫ ಲಕ್ಷ ಸಹಾಯವನ್ನು ಘೋಷಿಸಿದರು. ಶ್ರೀ ಹನುಮಾನ್ ಚಾಲೀಸ (ಕನ್ನಡ ಮತ್ತು ಇಂಗ್ಲೀಷ) ಕಿರು ಕೃತಿಯನ್ನು ವಿನೂತನ ಶಿಕ್ಷಣ ಸೇವಾ ಸಂಸ್ಥೆ, ಅಳವಂಡಿಯ ಅದ್ಯಕ್ಷ ಸಿದ್ದಲಿಂಗಯ್ಯ ಹಿರೇಮಠ ರವರು ಬಿಡುಗಡೆಗೊಳಿಸಿ ಮಾತನಾಡುತ್ತ, ವಿಶ್ವದಲ್ಲೇ ವಿನೂತನ ರೀತಿಯ ದೇವಸ್ಥಾನ ನಿರ್ಮಾಣದ ಸಂಕಲ್ಪ, ಶ್ರೀ ಆಂಜನೇಯಸ್ವಾಮಿಯ ಆಶೀರ್ವಾದದಿಂದ ಟ್ರಸ್ಟ್ ಪ್ರತಿವರ್ಷ ಮಾಡುತ್ತಿರುವ ಕಾರ್ಯ ಅಭೂತಪೂರ್ವವಾದದ್ದು, ಎಲ್ಲರ ಸಹಾಯದಿಂದ ಇಲ್ಲಿ ಅದ್ಭುತವಾದ ಕಾರ್ಯ ಯಶಸ್ವಿಯಾಗಲಿ, ತಮ್ಮ ಸಹಾಯ ಸಹಕಾರವೂ ಇರುತ್ತದೆ ಜೊತೆಗೆ ಹನುಮಾನ ಚಾಲೀಸವನ್ನು ಇಂಗ್ಲೀಷ ಮತ್ತು ಕನ್ನಡದಲ್ಲಿ ಮಾಡಿದ ಮಂಜುನಾಥ ಗೊಂಡಬಾಳ ಸೇವೆ ಸಾರ್ಥಕವಾದದ್ದು ಎಂದರು. ಕಾರ್ಯಕ್ರಮದ ದಿವ್ಯಸಾನಿಧ್ಯವನ್ನು ವಹಿಸಿದ್ದ ಪರಮಪೂಜ್ಯ ಶ್ರೀ ಮ. ನಿ. ಪ್ರ. ಸ್ವ. ಅಭಿನವ ಶ್ರೀ ಗವಿಸಿಧ್ಧೇಶ್ವರ ಮಹಾಸ್ವಾಮಿಗಳು ದೇವಸ್ಥಾನ ಮಾದರಿಯನ್ನು ಅನಾವರಣಗೊಳಿಸಿ ಮಾತನಾಡಿದರು. ದೇವಸ್ಥಾನ ನಿರ್ಮಾಣದ ಸಂತಸದ ಹಾಗೂ ಬಹಳ ದೊಡ್ಡ ಯೋಜನೆಯಾಗಿದ್ದು ಅದಕ್ಕೆ ಸಮರ್ಥವಾದ ಇಂಜಿನಿಯರ್ ರನ್ನು ಕರೆಯಿಸಿ ನಿರ್ಮಾಣ ಮಾಡುವಂತೆ ಸಲಹೆಕೊಟ್ಟರು. ಅದೇ ರೀತಿ ಮತ್ತೋರ್ವ ಪರಮಪೂಜ್ಯ ಶ್ರೀ ಜಗನ್ನಾಥ ಮಹಾಸ್ವಾಮಿಗಳು ಶ್ರೀ ಮಳೇರಾಜೇಂದ್ರಸ್ವಾಮಿಮಠ ಮುರನಾಳ, ಶಾಖಾಮಠ ಹಿರೇಮುಚ್ಚಳಗುಡ್ಡರವರು ಮಾತನಾಡುತ್ತ, ಹನುಮಪ್ಪನಿಲ್ಲದ ಊರೇ ಇಲ್ಲ ಅಥವಾ ಹನುಮಪ್ಪನ ಗುಡಿ ಇಲ್ಲದ ಊರು ಊರೇ ಅಲ್ಲ ಎಂದು ವ್ಯಾಖ್ಯಾನಿಸಿದರು, ಅಲ್ಲದೇ ಕೆಲವೇ ಭಕ್ತರು ಸೇರಿ ಪ್ರತಿವರ್ಷ ಒಳ್ಳೆಯ ಕಾರ್ಯಕ್ರಮ ಮಾಡುತ್ತಿದ್ದಾರೆಂದರು. ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ನಗರಸಭೆ ಅಧ್ಯಕ್ಷ ಸುರೇಶ ದೇಸಾಯಿ ಮಾತನಾಡುತ್ತ ನಿತ್ಯ ಹನುಮಾನ್ ಚಾಲೀಸವನ್ನು ಓದುವದರಿಂದ ದಿನಪೂರ್ತಿ ಸಂತಸದಿಂದ ಇರಬಹುದು ಎಂದರು. ಸ್ಥಾಯಿ ಸಮಿತಿ ಅಧ್ಯಕ್ಷ ಸಿದ್ದು ಮ್ಯಾಗೇರಿ, ಟ್ರಸ್ಟ್ ಪ್ರಧಾನ ಕಾರ್ಯದರ್ಶಿ ಅಶೋಕ ಬಜಾರಮಠ ವೇದಿಕೆಯಲ್ಲಿದ್ದರು. ಶ್ರೀ ಗವಿಸಿದ್ಧೇಶ್ವರ ಅರ್ಬನ್ ಬ್ಯಾಂಕ್ ಮ್ಯಾನೇಜರ್ ಶಂಕರಗೌಡ್ರ ಹಿರೇಗೌಡ್ರ ಸ್ವಾಗತಿಸಿ ಪ್ರಾಸ್ತಾವಿಕ ಮಾತನಾಡಿದರು, ವಿಜಯಕುಮಾರ ಗೊಂಡಬಾಳ ಪ್ರಾರ್ಥಿಸಿದರು ಮತ್ತು ಮಂಜುನಾಥ ಜಿ. ಗೊಂಡಬಾಳ ನಿರೂಪಿಸಿದರು ಪ್ರಹ್ಲಾದ ಮುಧೋಳ ವಂದಿಸಿದರು.
ಕಾರ್ಯಕ್ರಮ : ಸುಮಾರು ಎರಡು ದಶಕಕ್ಕೂ ಅಧಿಕ ಕಾಲ ಸಾವಿರಾರು ಜನರ ಸಂಕಷ್ಟಗಳಿಗೆ ಸ್ಪಂದಿಸುತ್ತ ತಮ್ಮ ಕಾಯಕದೊಂದಿಗೆ ಶ್ರೀ ಆಂಜನೇಯನ ಪರಮ ಭಕ್ತರಾಗಿ ಸಾವಿರಾರು ಜನರಿಗೆ ಅಜ್ಜನಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ ಶ್ರೀ ಶೇಖಣ್ಣಾಚಾರ್ಯ ಶಿಲ್ಪಿಯವರ ೫ ನೇ ಪುಣ್ಯಸ್ಮರಣೆ ನಿಮಿತ್ಯ ಅವರ ಗದ್ದುಗೆಗೆ ಪೂಜೆ, ಪಂಚಾಮೃತಾಭಿಷೇಕ ಸಲ್ಲಿಸಿದರು
Please follow and like us:
error