ಕೊಪ್ಪಳ ಜಿಲ್ಲಾ ೫ ನೆಯ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಎಂ.ಎಸ್.ಸವದತ್ತಿ

ಆಯ್ಕೆ 
ಕೊಪ್ಪಳ :- ಮೇ ತಿಂಗಳಲ್ಲಿ ನಡೆಯಲಿರುವ ಕೊಪ್ಪಳ ಜಿಲ್ಲಾ ೫ ನೆಯ ಚುಟುಕು ಸಾಹಿತ್ಯ ಸಮ್ಮೇಳನದ ಅಧ್ಯಕ್ಷರನ್ನಾಗಿ ಕೊಪ್ಪಳದ ಶ್ರೀ ಗವಿಸಿದ್ಧೇಶ್ವರ ಪ್ರೌಢಶಾಲೆಯ ನಿವೃತ್ತ ಮುಖ್ಯೋಪಾಧ್ಯಾಯರು ಹಾಗೂ ಹಿರಿಯ ಸಾಹಿತಿಗಳಾದ ಎಂ.ಎಸ್.ಸವದತ್ತಿಯವರನ್ನು ಆಯ್ಕೆ ಮಾಡಲಾಗಿದೆ ಎಂದು ಕೊಪ್ಪಳ ಜಿಲ್ಲಾ ಚುಟುಕು ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
ಅಪ್ಪಟ ಕನ್ನಡಿಗರು, ಸಹೃದಯಿ ಶಿಕ್ಷಕರು, ಕೊಪ್ಪಳಕ್ಕೆ ಬಂದ ಮೊದಲ ಕನ್ನಡ ಮೇಷ್ಟ್ರು, ಆಶುಕವಿಗಳು, ಭಾವ ಜೀವಿಗಳು, ಅಖಂಡ ರಾಯಚೂರ ಜಿಲ್ಲೆಯಲ್ಲಿಯೇ ಕನ್ನಡ ಸಾಹಿತ್ಯ ಪರಿಷತ್ತಿನ ಮೊದಲ ಸದಸ್ಯರಾದ ಎಂ.ಎಸ್.ಸವದತ್ತಿಯವರ  ‘ಹಾಡು-ಪಾಡು’ ಕವನ ಸಂಕಲನ ಪ್ರಕಟವಾಗಿದೆ. ‘ಸಹೃದಯಿ’ ಎಂಬ ಇವರ ಅಭಿನಂದನಾ ಗ್ರಂಥ ಪ್ರಕಟವಾಗಿದೆ. 
ನಾಲ್ಕು ದಶಕಗಳ ಕಾಲ ಶಿಕ್ಷಕರಾಗಿ ಸಮರ್ಪಣಾ ಭಾವದಿಂದ ತಮ್ಮ ವೃತ್ತಿಯನ್ನು ನಿರ್ವಹಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಪ್ರೇರಕ ಶಕ್ತಿಯಾಗಿ ಅವರ ಹೃದಯಾಂತರ್ಯದಲ್ಲಿ ಗಟ್ಟಿಯಾಗಿ ನೆಲೆನಿಂತು ವೃತ್ತಿಯ ಜೊತೆ ಜೊತೆಗೆ  ಸಾಹಿತ್ಯ ಸೇವೆ ಮಾಡಿದ್ದಾರೆ. ಇವರಲ್ಲಿ ಅಧ್ಯಯನ ಮಾಡುವ ಹಲವಾರು ಶಿಷ್ಯರು ಸಾಹಿತಿಗಳಾಗಿದ್ದಾರೆ. 
೧೯೯೩ ಫೆಬ್ರುವರಿ ೫,೬ ಮತ್ತು ೭ ರಂದು ಕೊಪ್ಪಳದಲ್ಲಿ ನಡೆದ ಅಖಿಲ ಭಾರತ ೬೨ ನೆಯ ಕನ್ನಡ ಸಾಹಿತ್ಯ ಸಮ್ಮೇಳನ ನಡೆದ ಸಂದರ್ಭದಲ್ಲಿ ರಾಯಚೂರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯದರ್ಶಿಯಾಗಿ ಹಾಗೂ ಸಮ್ಮೇಳನದ ಸ್ವಾಗತ ಸಮಿತಿಯ ಕಾರ್ಯದರ್ಶಿಯಾಗಿ ಕನ್ನಡ ತಾಯಿಯ ಸೇವೆ ಸಲ್ಲಿಸಿದ್ದಾರೆ. 
ಒಟ್ಟಾರೆಯಾಗಿ ಬಹುಮಖ ಪ್ರತಿಭೆಯ ಇವರ ವ್ಯಕ್ತಿತ್ವವನ್ನು ಪರಿಗಣಿಸಿ ಇವರನ್ನು ಸಮ್ಮೇಳನದ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿದೆ ಎಂದು ಹನುಮಂತಪ್ಪ ಅಂಡಗಿ ಚಿಲವಾಡಗಿ ತಿಳಿಸಿದ್ದಾರೆ. 
Please follow and like us:
error