ಬೆಳ್ಳನೆಯ ಮಂಡಾಳು (ಮಂಡಕ್ಕಿ) ಉತ್ಪಾದಕರ ಬದುಕು ಅಕ್ಷರಶಃ ಕರ್ರಗಾಗಿಯೇ ಇದೆ.

photo by Gururaj Dambal

ನಗರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಮಂಡಾಳು ಉತ್ಪಾದಿಸಿ ಮಾರಾಟ ಮಾಡುವ ಇವರ ಬದುಕಿನತ್ತ `ಪ್ರಜಾವಾಣಿ’ಯ ನೋಟ ಹೀಗಿದೆ.

ಕೊಪ್ಪಳದ ವಾರ್ಡ್ -19ರ ಹಟಗಾರ ಓಣಿ, ಸರ್ದಾರ್ ಓಣಿ, ತಾಲ್ಲೂಕಿನ ಚಿಲವಾಡಗಿಯಲ್ಲಿ ಮಂಡಾಳು ತಯಾರಿಕೆ ಪ್ರಮುಖ ಕಸುಬು. ಒಂದಿಷ್ಟು ಖಾಲಿ ಜಾಗದಲ್ಲಿ ಬಟ್ಟಿಗಳನ್ನು ಸ್ಥಾಪಿಸಿದ್ದಾರೆ.

ತಯಾರಿಕೆ ಹೇಗೆ?: ಮಂಡಾಳಿಗೆ 1010 ತಳಿಯ ಬತ್ತ ಬೇಕು. ಸ್ಥಳೀಯ ಮಾರುಕಟ್ಟೆಯಿಂದ ಬತ್ತ (ನೆಲ್ಲು) ತರುತ್ತಾರೆ. ಪ್ರತಿ 75 ಕೆಜಿಗೆ 1,460 ದರವಿದೆ. ಅದನ್ನು ಬ್ಯಾರೆಲ್‌ಗೆ ಸುರಿದು ಚೆನ್ನಾಗಿ ಬೇಯಿಸಿ ಪಕ್ಕದಲ್ಲಿಯೇ ಇರುವ ಪುಟ್ಟ ರೈಸ್‌ಮಿಲ್ ಘಟಕದ ಡ್ರೈಯರ್‌ನಲ್ಲಿ ಒಣಗಿಸಿ ಬೇಕಾದ ಅಕ್ಕಿ ಸಿದ್ಧಪಡಿಸುತ್ತಾರೆ. ಅರೆಬೆಂದ ಅಕ್ಕಿಯನ್ನು ಚೆನ್ನಾಗಿ ಒಣಗಿಸುತ್ತಾರೆ. ಅಕ್ಕಿ ಈಗ ಮಂಡಾಳು ಆಗಲು ಸಿದ್ಧ.

ಪುಟ್ಟ ಪ್ಲೇಟ್‌ನಲ್ಲಿ ಒಂದಿಷ್ಟು ಅಕ್ಕಿ ತೆಗೆದು ಅದಕ್ಕೆ ಉಪ್ಪು ನೀರು ಚಿಮುಕಿಸಿ ಬಟ್ಟಿಗೆ ಹಾಕುತ್ತಾರೆ. ಧಗಧಗ ಉರಿಯುತ್ತಿರುವ ಕುಲುಮೆಯ ಮೇಲೆ ಬಾಣಲೆ, ಅದರಲ್ಲಿ ಶುದ್ಧ ಕಪ್ಪುಮಣ್ಣು ಇರುತ್ತದೆ.

ಬಿಸಿ ಬಾಣಲೆಯಲ್ಲಿ ಮಣ್ಣಿನೊಡನೆ ಬೆರೆತ ಹಸಿ ಅಕ್ಕಿಯನ್ನು ಕೆಲ ಕ್ಷಣ ಒಂದೇ ಸಮನೆ ತಿರುವಲಾಗುತ್ತದೆ. ಚಟಪಟ ಸದ್ದು ಬರುತ್ತಿದ್ದಂತೆಯೇ ತಕ್ಷಣವೇ ಇನ್ನೊಂದು ಸೋಸುವ ಪಾತ್ರೆಯನ್ನು ಬಟ್ಟಿಯೊಳಗೆ ಹಾಕಿ ಸಿದ್ಧಗೊಂಡ ಮಲ್ಲಿಗೆಯಂಥ ಮಂಡಾಳನ್ನು ಹೊರ ತೆಗೆಯುತ್ತಾರೆ. ಮಣ್ಣು ಮತ್ತೆ ಬಾಣಲೆಗೆ ಬೀಳುತ್ತದೆ. ಹೀಗೆ ದಿನವಿಡೀ ಮಂಡಾಳು ಹುರಿದಾಗ ದೊಡ್ಡ ರಾಶಿಯೇ ನಿರ್ಮಾಣವಾಗುತ್ತದೆ.

ಸರಾಸರಿ ಒಂದು ಸಾಮಾನ್ಯ ಬಟ್ಟಿಯಲ್ಲಿ 225 ಕೆಜಿ ಅಕ್ಕಿಯ ಮಂಡಾಳು ತಯಾರಿಸಬಹುದು ಎನ್ನುತ್ತಾರೆ ಬಟ್ಟಿಯೊಂದರ ಮಾಲೀಕ ಬಾಷು ಸಾಬ್ ಗೊಂಡಬಾಳ್. ಇಲ್ಲಿ ಸುಮಾರು 24 ಕುಟುಂಬಗಳು ಇದೇ ಕಾಯಕವನ್ನು ನೆಚ್ಚಿಕೊಂಡಿವೆ.
ನಿರಂತರ ಬೆಂಕಿಯ ಉರಿ, ಆವರಿಸುವ ಮಸಿ ಕಣಗಳು, ಕಪ್ಪಾಗಿರುವ ಮುಖಗಳು, ಮಂಜಾಗಿರುವ ಕಣ್ಣು, ಅತಂತ್ರ ನೆಲೆ ಒಟ್ಟಿನ್ಲ್ಲಲಿ ಇವರ ಬದುಕು ಮಂಡಾಳಿನಷ್ಟು ಸವಿಯಾಗಿಲ್ಲ.

ಇವರು ಮುಸ್ಲಿಂ ಸಮುದಾಯದ ಮಂದಿ. ಮಂಡಾಳು ಹುರಿಯುತ್ತಲೇ ಬದುಕು ಕಟ್ಟಿಕೊಂಡಿದ್ದಾರೆ. ಕುಟುಂಬ ಪೋಷಣೆಗಾಗಿ ಇವರ ಮಕ್ಕಳೂ ಶಾಲೆಬಿಟ್ಟು ಇದೇ ಕಸುಬಿಗೆ ಕೈಜೋಡಿಸಿದ್ದಾರೆ. ಹೆಣ್ಣುಮಕ್ಕಳನ್ನು ಹೆತ್ತವರು ಪ್ರಾಥಮಿಕ/ ಪ್ರೌಢಶಿಕ್ಷಣದಿಂದ ಮುಂದೆ ಓದಲು ಬಿಟ್ಟಿಲ್ಲ. ಅವರ ಕನಸು ಬಟ್ಟಿಯಿಂದ ಹೊರಡುವ ಕರಿ ಹೊಗೆಯ ಜತೆ ಸೇರಿ ಕಮರುತ್ತಿದೆ. ಸೋಫಿಯಾರಂಥ ಒಂದೆರಡು ಮಂದಿಯನ್ನು ಬಿಟ್ಟರೆ ಉಳಿದವರೆಲ್ಲ ಶಾಲೆಗೆ ಶರಣು ಹೊಡೆದವರೇ.

ಇವರಿಗೇನು ಬೇಕು?: ಕಾಯಂ ನೆಲೆ. ಪರಿಸರಸ್ನೇಹಿ ವ್ಯವಸ್ಥೆ. ಪ್ರದೇಶಕ್ಕೆ ರಸ್ತೆ, ಕುಡಿಯುವ ನೀರು, ಚರಂಡಿ ಸೇರಿದಂತೆ ಮೂಲಸೌಲಭ್ಯ ಅಭಿವೃದ್ಧಿ. ಆರೋಗ್ಯ ರಕ್ಷಣೆಗಾಗಿ ಘಟಕಗಳನ್ನು ಸಂಪೂರ್ಣ ಯಾಂತ್ರಿಕಗೊಳಿಸಲು ತಾಂತ್ರಿಕ ಮತ್ತು ಆರ್ಥಿಕ ನೆರವು. ಸದ್ಯ ಸ್ಥಳೀಯವಾಗಿಯೇ ಮಾರಾಟವಾಗುವ ಮಂಡಾಳಿಗೆ ಸ್ಪರ್ಧಾತ್ಮಕ ದರದ ಮಾರುಕಟ್ಟೆ. ಬಲವಂತವಾಗಿ ಸ್ಥಳ ಬಾಡಿಗೆ ವಸೂಲಿಗೆ ಕಡಿವಾಣ ಹಾಕಬೇಕಿದೆ.

ಕಡ್ಡಾಯ ಶಿಕ್ಷಣ: ಮಂಡಾಳು ಬಟ್ಟಿ ಕಾರ್ಮಿಕರ ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರೇ ಮುಂದಾಗುತ್ತಿಲ್ಲ. ಇದು ಸಲ್ಲದು. ಶಿಕ್ಷಣ ಇಲಾಖೆ, ಸರ್ಕಾರೇತರ ಸಂಘಟನೆಗಳು ಇಲ್ಲಿನ ಮಕ್ಕಳನ್ನು ಗುರುತಿಸಿ ಕೊನೇ ಪಕ್ಷ ಅನೌಪಚಾರಿಕ ಶಿಕ್ಷಣದ ವ್ಯವಸ್ಥೆಯನ್ನಾದರೂ ಮಾಡಬೇಕು. ಇಲ್ಲಿ ಸಮುದಾಯ ಜಾಗೃತಿ ಮೂಡಿಸಬೇಕಾದ ಅಗತ್ಯವಿದೆ ಎಂದು ನಗರದ ಗೋವಿಂದರಾವ್ ಹೇಳುತ್ತಾರೆ.

ಓದುವ ಆಸೆ
ನನಗೆ ಓದಬೇಕು. ಒಳ್ಳೆಯ ಕೆಲಸ ಮಾಡಬೇಕು ಎಂಬ ಆಸೆಯಿದೆ. ಅಪ್ಪ ಅಮ್ಮ ಬೇಡವೆಂದರೂ ಮುಂದೆ ಖಂಡಿತ ಓದುತ್ತೇನೆ. ಒಳ್ಳೆಯ ಬದುಕು ಕಟ್ಟಿಕೊಳ್ಳುತ್ತೇನೆ. ಅದುವರೆಗೆ ಬಟ್ಟಿಯಲ್ಲಿ ಹೆತ್ತವರ ಜತೆ ಕೈಜೋಡಿಸಲೇಬೇಕು.
-ಸೋಫಿಯಾ, 8ನೇ ತರಗತಿ

ದ್ವಿತೀಯ ಪಿಯು ಓದಿದ್ದೇನೆ. ಮುಂದೆಯೂ ಓದಬೇಕು ಎಂಬ ಆಸೆ ಇತ್ತು. ಆದರೆ, ಏನು ಮಾಡಲಿ (ನಿಟ್ಟುಸಿರು)?… ನೆಲ್ಲು ಚೆನ್ನಾಗಿದ್ದರೆ ಒಳ್ಳೆಯ ಉತ್ಪಾದನೆ ಬರುತ್ತದೆ. ಗಂಡ ಹೆಂಡತಿ ಇಬ್ಬರೂ ದುಡಿಯುವುದರಿಂದ ಕೂಲಿಯ ವೆಚ್ಚ ಸ್ವಲ್ಪ ಉಳಿಯುತ್ತದೆ.
-ಹಜರತ್‌ಬಿ

ಇದೇ ನಮ್ಮ ಜೀವನ
ಇನ್ನೊಬ್ಬರ ಮನೆಯಲ್ಲಿ ದುಡಿಯುವುದಕ್ಕಿಂತ ಇದೇ ಲೇಸು. ದಿನಕ್ಕೆ 20 ಚೀಲ ಮಂಡಾಳು ಮಾಡುತ್ತೇವೆ. ಕೂಲಿ ವೆಚ್ಚ ಸೇರಿ ದಿನಕ್ಕೆ ಒಂದು ಸಾವಿರ ರೂಪಾಯಿ ಖರ್ಚಾಗುತ್ತದೆ. ಹೀಗೆ ಸಾಗಿದೆ ನಮ್ಮ ಜೀವನ.
-ಮರ್ದಾನ್ ಸಾಬ್ ಗೊಂಡಬಾಳ್

ಈಡೇರದ ಭರವಸೆ
ನಮಗೆ ನಿವೇಶನ ಒದಗಿಸುವುದಾಗಿ ಹಿಂದಿನ ಶಾಸಕರು ಭರವಸೆ ನೀಡಿದ್ದರು. ಅವರೂ ಮಾಡಿಲ್ಲ. ಈಗಿನವರೂ ಆಸಕ್ತಿ ತೋರಿಲ್ಲ. ಖಾಸಗಿ ಸ್ಥಳದಲ್ಲಿ ಅವರು ಕೇಳಿದ ಬಾಡಿಗೆ ಕೊಟ್ಟು ಬಟ್ಟಿ ಸ್ಥಾಪಿಸಿದ್ದೇವೆ. ಮಳೆಗಾಲದಲ್ಲಿ ನಮ್ಮ ಪರಿಸ್ಥಿತಿ ಕೇಳುವುದೇ ಬೇಡ. 50 ವರ್ಷದಿಂದ ಈ ಕಾಯಕ ಮಾಡುತ್ತಿದ್ದೇವೆ. ಆದರೇನು ಮಾಡುವುದು? ನಮ್ಮ ಬದುಕು ಹೀಗೇ ಇದೆ.
-ಬಾಷು ಸಾಬ್, ಗೊಂಡಬಾಳ

ಸಿಗದ ಆರ್ಥಿಕ ನೆರವು
ನಮಗೆ ಯಾವ ಆರ್ಥಿಕ ನೆರವೂ ಸಿಕ್ಕಿಲ್ಲ. ಸದ್ಯ ಸ್ವಸಹಾಯ ಸಂಘ ಮಾಡಿಕೊಂಡಿದ್ದೇವೆ. ವಿದೇಶಿ ಸಂಸ್ಥೆಯೊಂದು ನಮ್ಮ ಸಂಘಗಳಿಗೆ ಸಾಲ ನೀಡುತ್ತಿದೆ. ಇತ್ತೀಚೆಗೆ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಸ್ವಸಹಾಯ ಸಂಘದಲ್ಲಿ ಸೇರಿದ್ದೇವೆ. ಸ್ವಸಹಾಯ ಸಂಘಗಳ ಮೂಲಕ ರೂ 50ರಿದ 75 ಸಾವಿರದವರೆಗೆ ಸಾಲ ಸಿಗುತ್ತದೆ. ಅದರಿಂದ ನಾವು ಬತ್ತ ಖರೀದಿಸುತ್ತೇವೆ. ಬಟ್ಟಿಗೆ ಬೇಕಾದ ಸಾಮಗ್ರಿ ಖರೀದಿಸುತ್ತೇವೆ. ಸುಲಭ ಕಂತುಗಳು ಇರುವುದರಿಂದ ನಿರ್ವಹಣೆ ಸುಲಭ.
-ಮರ್ದಾನ್ ಬೀಬಿ

ಪ್ರಜಾವಾಣಿ ವಾರ್ತೆ/ಶರತ್ ಹೆಗ್ಡೆ

Please follow and like us:
error

Related posts

Leave a Comment