ಕನ್ನಡಕ್ಕೆ ಮೊದಲ ಸರಸ್ವತಿ ಸಮ್ಮಾನ: `ಮಂದ್ರ’ದ ಭೈರಪ್ಪಗೆ ಪ್ರಶಸ್ತಿ ಪ್ರದಾನ

ನವದೆಹಲಿ: ಕರ್ನಾಟಕದ ಹೆಸರಾಂತ ಬರಹಗಾರ ಎಸ್. ಎಲ್. ಭೈರಪ್ಪ ಅವರಿಗೆ ಕೆ. ಕೆ. ಬಿರ್ಲಾ ಪ್ರತಿಷ್ಠಾನದ ಪ್ರತಿಷ್ಠಿತ `ಸರಸ್ವತಿ ಸಮ್ಮಾನ್` ಪ್ರಶಸ್ತಿಯನ್ನು ಬುಧವಾರ ಸಂಜೆ ಪ್ರದಾನ ಮಾಡಲಾಯಿತು.
ಸಾಹಿತ್ಯಾಸಕ್ತರು ಮತ್ತು ಭೈರಪ್ಪನವರ ಅಭಿಮಾನಿಗಳು ಪಾಲ್ಗೊಂಡಿದ್ದ ಸಮಾರಂಭದಲ್ಲಿ `ಭಾರತೀಯ ಸಾಂಸ್ಕೃತಿಕ ಸಂಬಂಧಗಳ ಪರಿಷತ್` ಅಧ್ಯಕ್ಷ ಡಾ. ಕರಣ್ ಸಿಂಗ್ ಪ್ರಶಸ್ತಿ ಪ್ರದಾನ ಮಾಡಿದರು. ಭೈರಪ್ಪನವರ `ಮಂದ್ರ` ಕಾದಂಬರಿಯನ್ನು ಪ್ರತಿಷ್ಠಾನದ 2010ನೇ ಸಾಲಿನ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ. ಈ ಪ್ರಶಸ್ತಿ ಫಲಕ ಹಾಗೂ 7.5 ಲಕ್ಷ ರೂಪಾಯಿ ನಗದು ಒಳ ಗೊಂಡಿದೆ.
`ಎಷ್ಟೊಂದು ಕಷ್ಟ-ಸಂಕಷ್ಟಗಳ ನಡುವೆ ಭೈರಪ್ಪ ದೊಡ್ಡ ಸಾಧನೆ ಮಾಡಿದ್ದಾರೆ. ಕೌಟುಂಬಿಕ ಸಮಸ್ಯೆಗಳನ್ನು ಲೆಕ್ಕಿಸದೆ ಸಾಹಿತ್ಯದ ಉತ್ತುಂಗ ಏರಿದ್ದಾರೆ. ಶಿಕ್ಷಣ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿ ದ್ದಾರೆ. ನಮ್ಮ ಯುವ ಪೀಳಿಗೆಗೆ ಇವರು ಮಾದರಿ` ಎಂದು ಕರಣ್‌ಸಿಂಗ್ ಮುಕ್ತ ಕಂಠದಿಂದ ಕೊಂಡಾಡಿದರು.
`ಸಾಹಿತಿಗಳು ಮತ್ತು ಬರಹಗಾರರನ್ನು ಸನ್ಮಾನಿಸುವುದು ನಮ್ಮ ಪ್ರಾಚೀನ ಪರಂಪರೆ. ರಾಜ- ಮಹಾರಾಜರ ಕಾಲದಿಂದಲೂ ಸಾಹಿತಿಗಳನ್ನು ಗುರುತಿಸಿ, ಗೌರವಿಸುವ ಸಂಪ್ರದಾಯ ನಡೆದು ಬಂದಿದೆ. ಆಧುನೀಕತೆ- ಜಾಗತೀಕರಣದ ಪ್ರಭಾವದ ನಡುವೆಯೂ ಸಾಹಿತ್ಯದ ಮಹತ್ವ ಉಳಿದು ಕೊಂಡು ಬಂದಿದೆ. ನಮ್ಮ ಮೌಲ್ಯಗಳು, ವಿಚಾರಗಳನ್ನು ಯುವ ಪೀಳಿಗೆಗೆ ತಲುಪಿಸುತ್ತಿದೆ` ಎಂದು ಶ್ಲಾಘಿ ಸಿದರು.
`ದೇಶದ 25 ಭಾಷೆಗಳಲ್ಲಿ ಸಾಹಿತ್ಯ ಸೃಷ್ಟಿಯಾಗುತ್ತಿದೆ. ಬೇರಾವ ದೇಶದಲ್ಲೂ ಇಷ್ಟೊಂದು ಭಾಷೆಯಲ್ಲಿ ಸಾಹಿತ್ಯ ಕೃಷಿ ನಡೆಯುತ್ತಿಲ್ಲ. ಬಹುಮುಖಿ ಆಗಿರುವ ನಮ್ಮ ಸಾಹಿತ್ಯ ಹಲವು ಆಯಾಮಗಳನ್ನು ಹೊಂದಿದೆ. ಇದು ನಿಜಕ್ಕೂ ಅದ್ಭುತ ಮತ್ತು ಆಶ್ಚರ್ಯ` ಎಂದು ಕರಣ್ ಸಿಂಗ್ ವಿಶ್ಲೇಷಿಸಿದರು.
ಬಿರ್ಲಾ ಪ್ರತಿಷ್ಠಾನ ವಿವಿಧ ಭಾಷೆಗಳ ಉತ್ಕೃಷ್ಠ ಸಾಹಿತಿಗಳನ್ನು ಗುರುತಿಸುವ ಕೆಲಸ ಮಾಡು ತ್ತಿದೆ. ಖ್ಯಾತ ಬರಹಗಾರ ಭೈರಪ್ಪ ಅವರನ್ನು ಗುರುತಿಸಿ ಗೌರವಿಸುತ್ತಿರುವುದು ಹೆಮ್ಮೆಯ ವಿಷಯ ಎಂದರು.
ಪ್ರಶಸ್ತಿ ಸ್ವೀಕರಿಸಿದ ಭೈರಪ್ಪ, `ನನ್ನ ಮೊದಲ ಆಸಕ್ತಿ ಸಂಗೀತ. ಅನಂತರದ ಆಸಕ್ತಿ ಸಾಹಿತ್ಯ. ಇದರ ಪರಿಣಾಮವೇ `ಮಂದ್ರ` ಕಾದಂಬರಿ. ಸರಸ್ವತಿ ಸಮ್ಮಾನಕ್ಕೆ ಇದೇ ಕಾದಂಬರಿಯನ್ನು ಆರಿಸಿರುವುದು ಸಂತಸ ತಂದಿದೆ. ಒಬ್ಬ ಸಂಗೀತಗಾರ, ಅವನ ಸುತ್ತಮುತ್ತಲ ಘಟನೆ- ಪಾತ್ರಗಳ ಮೂಲಕ ಕಲೆಗೂ ಜೀವನದ ಇತರ ಮೌಲ್ಯಗಳಿಗೂ ಇರುವ ಸಂಬಂಧವನ್ನು ಈ ಕಾದಂಬರಿಯಲ್ಲಿ ಅನ್ವೇಷಿಸಿದ್ದೇನೆ. ಇಡೀ ಕಾದಂಬರಿಯಲ್ಲಿ ಸಂಗೀತದ್ದೇ ಮುಖ್ಯ ಪಾತ್ರ` ಎಂದು ವಿವರಿಸಿದರು.
ಸರಸ್ವತಿ ಸಮ್ಮಾನ್ ಆಯ್ಕೆ ಸಮಿತಿ ಅಧ್ಯಕ್ಷ ನ್ಯಾ.ಜಿ.ಬಿ. ಪಟ್ನಾಯಕ್, ಭೈರಪ್ಪನವರ ವ್ಯಕ್ತಿತ್ವ ಮತ್ತು ಸಾಧನೆ ಕುರಿತು ಪ್ರಸ್ತಾಪಿಸಿದರು. ಕೆ.ಕೆ. ಬಿರ್ಲಾ ಪ್ರತಿಷ್ಠಾನದ ಅಧ್ಯಕ್ಷೆ ಶೋಭನಾ ಭಾರ್ತಿಯಾ ಅತ್ಯುತ್ತಮ ಸಾಹಿತಿಗಳು- ಬರಹಗಾರರನ್ನು ಗುರುತಿಸಿ ಗೌರವಿಸುವುದು ಪ್ರತಿಷ್ಠಾನ ದ ಉದ್ದೇಶ ಎಂದು ತಿಳಿಸಿದರು. ಪ್ರತಿಷ್ಠಾನದ ನಿರ್ದೇಶಕ ಎನ್.ಕೆ. ಭಟ್ಟಾಚಾರ್ಜಿ, ಪ್ರಿಯವ್ರತ್ ಭಾರ್ತಿಯಾ ವೇದಿಕೆಯಲ್ಲಿದ್ದರು.
Please follow and like us:
error

Related posts

Leave a Comment